ಬೆಂಗಳೂರು: ರಾಜ್ಯದಲ್ಲಿ ನಾಳೆ(ಫೆಬ್ರವರಿ 16)ಯಿಂದ ಪಿಯು ಹಾಗೂ ಪದವಿ ಕಾಲೇಜುಗಳು ಪುನರಾರಂಭವಾಗುತ್ತಿವೆ. ಹೈಕೋರ್ಟ್ ಆದೇಶ ಪಾಲಿಸಿ ಕಾಲೇಜು ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗಿನ ಸಭೆ ಬಳಿಕ ಶಿಕ್ಷಣ ಸಚಿವ ನಾಗೇಶ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಸೋಮವಾರದಂದು ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಪಿಯು ಹಾಗೂ ಪದವಿ ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಂಡಿತು. ಮೂರು ದಿನಗಳ ರಜೆಯ ಬಳಿಕ ಸೋಮವಾರದಿಂದ ಫ್ರೌಢಶಾಲಾ ತರಗತಿಗಳನ್ನು ಪುನಾರಾರಂಭ ಮಾಡಲಾಗಿತ್ತು. ಮುಂದುವರಿದು ಈಗ ಪಿಯು ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿಗಳು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಹಿಜಾಬ್ ವಿವಾದ ಸಂಬಂಧಿಸಿದಂತೆ ಕರ್ನಾಟಕದ ಜಿಲ್ಲಾಡಳಿತಗಳು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಪ್ರಕರಣವು ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ.
ಪೋಷಕರು ಮತ್ತು ಮಕ್ಕಳು ಆತಂಕಪಡುವ ಅಗತ್ಯವಿಲ್ಲ. ಶಾಲಾ ಕಾಲೇಜುಗಳ ಆರಂಭಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪೋಲಿಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಲಿದೆ. ಶಾಲಾ ಕಾಲೇಜುಗಳ ಜತೆಗೆ ಪೋಲಿಸ್ ಇಲಾಖೆ ಇರಲಿದೆ. ಹೈಕೋರ್ಟ್ ಮಧ್ಯಂತರ ಆದೇಶ ಯಾರು ಉಲ್ಲಂಘನೆ ಮಾಡುವಂತಿಲ್ಲ, ಸಮವಸ್ತ್ರ ಧರಿಸಿ ಶಾಲಾ ಕಾಲೇಜುಗಳಿಗೆ ಹಾಜರಾಗಬೇಕು ಎಂದು ಗೃಹಸಚಿವ ಆರಗ ಜ್ಙಾನೇಂದ್ರ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಯಾವುದೇ ಆತಂಕ ಅಥವಾ ಅಭದ್ರತೆಯ ಭಯವಿಲ್ಲದೆ ಕಾಲೇಜುಗಳಿಗೆ ಬಂದು ಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ವಿದ್ಯಾರ್ಥಿಗಳನ್ನು ಮನವಿ ಮಾಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಉನ್ನತ ಶಿಕ್ಷಣ ಡಾ. ಅಶ್ವತ್ಥ್ ನಾರಾಯಣ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಸಭೆ ನಡೆಸಲಾಗಿದೆ.