‘ಡಬಲ್ ಇಂಜಿನ್’ ಬದಲು ’ಡಬಲ್ ಇಂಡಿಯ’ ಸೃಷ್ಟಿಯ ವಿರುದ್ಧ ಎಐಕೆಎಸ್ -ಎಐಎಡಬ್ಲ್ಯುಯು ಕರೆ
ಕೇಂದ್ರಸರಕಾರವು ಪ್ರಧಾನ ಮಂತ್ರಿಗಳು ಹೇಳುವ ಡಬಲ್ ಇಂಜಿನ್ ಸರ್ಕಾರದ ಬದಲು ಡಬಲ್ ಇಂಡಿಯಾವನ್ನೇ ರಚಿಸಲು ಕಟಿಬದ್ಧವಾದಂತಿದೆ. ಅಂದರೆ ಒಂದೆಡೆ ಶ್ರೀಮಂತ ಕಾರ್ಪೊರೇಟ್ ಶಕ್ತಿಗಳ ಭಾರತ ಮತ್ತು ಇನ್ನೊಂದೆಡೆ ಬಡ ರೈತರು ಮತ್ತು ಕಾರ್ಮಿಕರ ಭಾರತ. ಬಿಜೆಪಿ ನೀತಿಗಳು ಜನರ ಅಭಿವೃದ್ಧಿಗಾಗಿ ಅಲ್ಲ ಕಾರ್ಪೊರೇಟ್ ಶಕ್ತಿಗಳ ಅಭಿವೃದ್ಧಿಗಾಗಿ ಟೊಂಕ ಕಟ್ಟಿವೆ. ಈ ಫೆಬ್ರುವರಿ 1ರಂದು ಅದು ಪ್ರಸ್ತುತ ಪಡಿಸಿದ ಬಜೆಟಿನಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ, ಈ ಕ್ರೂರ ರೈತ-ವಿರೋಧಿ, ಕಾರ್ಮಿಕ ವಿರೋಧಿ ಕೇಂದ್ರ ಬಜೆಟನ್ನು ಪ್ರತಿಭಟಿಸಲು 2023 ರ ಫೆಬ್ರವರಿ 9 ಅನ್ನು ಕರಾಳ ದಿನವನ್ನಾಗಿ ಆಚರಿಸಲು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಅಖಿಲಭಾರತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯುಯು) ಭಾರತದಾದ್ಯಂತ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಕರೆ ನೀಡಿವೆ. ಬಜೆಟ್ ಪ್ರತಿಗಳ ದಹನ, ಪ್ರತಿಕೃತಿ ದಹನ, ಪ್ರತಿಭಟನೆ, ಸಂಜೆ ಧರಣಿ ಮತ್ತು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಮೂಲಕ ಪ್ರತಿಭಟನಾ ದಿನಾಚರಣೆ ನಡೆಸಲಾಗುತ್ತದೆ ಎಂದು ಫೆಬ್ರುವರಿ 4ರಂದು ಈ ಸಂಘಟನೆಗಳ ಮುಖಂಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಕೇಂದ್ರ ಬಜೆಟ್ 2023-24 ದೇಶದ ಬಡ ಜನರ ಮೇಲೆ ವಿಶೇಷವಾಗಿ ರೈತರು ಮತ್ತು ಕಾರ್ಮಿಕ ವರ್ಗ ಮತ್ತು ಸಣ್ಣ ಉತ್ಪಾದಕರ ಮೇಲೆ ಅವಿರತ ದಾಳಿಯಾಗಿದೆ. ಉತ್ಪಾದಕ ವರ್ಗಗಳಿಗೆ ಆದಾಯ ಮತ್ತು ಉದ್ಯೋಗವನ್ನು ಹೆಚ್ಚಿಸಲು ಮತ್ತು ಆ ಮೂಲಕ ಜನರ ಖರೀದಿ ಸಾಮರ್ಥ್ಯವನ್ನು ವಿಸ್ತರಿಸುವುದನ್ನು ಖಚಿತಪಡಿಸಲು ಅಗತ್ಯವಿರುವ ಸಾಮಾಜಿಕ ವಲಯದ ವೆಚ್ಚವನ್ನು ಸಾಮಾಜಿಕ ವಾಸ್ತವತೆಯ ಯಾವುದೇ ಅರಿವಿಲ್ಲದೆ ಕಡಿತಗೊಳಿಸಲಾಗಿದೆ. ನರೇಂದ್ರ ಮೋದಿಯವರ 8 ವರ್ಷಗಳ ಆಡಳಿತದಲ್ಲಿ, ಜಾಗತಿಕ ಬಡತನ ಸೂಚ್ಯಂಕದಲ್ಲಿ ಭಾರತದ ಸ್ಥಾನವು 55 ನೇ ಸ್ಥಾನದಿಂದ 107 ನೇ ಸ್ಥಾನಕ್ಕೆ ಕುಸಿದಿದೆ.
ಮನರೇಗ, ಆಹಾರ ಸಬ್ಸಿಡಿ, ರಸಗೊಬ್ಬರ ಸಬ್ಸಿಡಿ, ವಿಮೆ, ನೀರಾವರಿ, ಕೃಷಿ, ಕಾರ್ಮಿಕ ಮತ್ತು ಇತರ ಎಲ್ಲಾ ಸಾಮಾಜಿಕ ಕ್ಷೇತ್ರಗಳಿಗೆ ಹಂಚಿಕೆಯಲ್ಲಿ ವ್ಯಾಪಕ ಕಡಿತಗಳನ್ನು ತಾವು ಬಲವಾಗಿ ಪ್ರತಿಭಟಿಸುವುದಾಗಿ ಈ ಸಂಘಟನೆಗಳ ಜಂಟಿ ಪತ್ರಿಕಾ ಹೇಳಿಕೆ ತಿಳಿಸುತ್ತದೆ. 2023 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ತನ್ನ ಸ್ವಂತ ಭರವಸೆಗೆ ಪ್ರಧಾನಿಗಳು ನಗ್ನ ವಿಶ್ವಾಸಘಾತ ಎಸಗಿದ್ದಾರೆ. ಭಾರತದ 81 ಕೋಟಿ ಜನರಿಗೆ 2 ಮತ್ತು 3 ರೂಪಾಯಿಗಳ ಸಬ್ಸಿಡಿ ದರದಲ್ಲಿ ಅಕ್ಕಿ ಮತ್ತು ಗೋಧಿಯನ್ನು ನಿರಾಕರಿಸಲಾಗಿದೆ. ಕಾನೂನುಬದ್ಧವಾಗಿ ಖಾತರಿಪಡಿಸಿದ ಸಿ2+ 50% ಸೂತ್ರದಂತೆ ಕನಿಷ್ಟ ಬೆಂಬಲ ಬೆಲೆ(ಎಂಎಸ್‍ಪಿ) ಮತ್ತು ಬಡ ಮತ್ತು ಮಧ್ಯಮ ರೈತ ಮತ್ತು ಕೃಷಿ ಕಾರ್ಮಿಕರ ಸಮಗ್ರ ಸಾಲ ಮನ್ನಾ ಮಾಡಲು ಬಜೆಟ್‌ನಲ್ಲಿ ಯಾವುದೇ ಕ್ರಮಗಳಿಲ್ಲ. ಮನರೇಗ ಅಡಿಯಲ್ಲಿ ಕನಿಷ್ಠ 600 ರೂ.ದಿನಗೂಲಿಯಲ್ಲಿ 200 ಕೆಲಸದ ದಿನಗಳನ್ನು ನೀಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಲಾಗಿದೆ.
ಇದನ್ನು ಓದಿ: ಕಲ್ಯಾಣ-ಪ್ರಭುತ್ವದ ಕ್ರಮಗಳು ʻʻಜನರಂಜನೆʼʼಗಾಗಿ ಎಂದು ಹೀನಾಯಗೊಳಿಸುವ ನವ-ಉದಾರವಾದ
ನವ-ಉದಾರವಾದಿ ನೀತಿಗಳು ಪ್ರಪಂಚದಾದ್ಯಂತ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ಸಂಭವಿಸುವಂತೆ ಮಾಡಿವೆ. 2023ರಲ್ಲಿ ವಿಶ್ವ ಆರ್ಥಿಕತೆಯು ಮತ್ತಷ್ಟು ನಿಧಾನಗೊಳ್ಳಲಿದೆ ಎಂದು ಐಎಂಎಫ್ ಗಮನಿಸಿದೆ. ಭಾರತದ ಜನರ ಮೇಲೆ ವಿಶ್ವ ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಬೀರಲಿರುವ ಪರಿಣಾಮವನ್ನು ಕೇಂದ್ರ ಬಜೆಟ್ ಪರಿಗಣನೆಗೆ ತಗೊಂಡಿಲ್ಲ, ಆದ್ದರಿಂದ ಭಾರತದ ಅರ್ಥ ವ್ಯವಸ್ಥೆಯನ್ನು ರಕ್ಷಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಅದು ವಿಫಲವಾಗಿದೆ.
ಮತ್ತೊಂದೆಡೆ, ಶ್ರೀಮಂತ ವರ್ಗಗಳಿಗೆ ತೆರಿಗೆ ವಿನಾಯಿತಿಗಳನ್ನು ನೀಡಲಾಗಿದೆ ಮತ್ತು ಸಾರ್ವಜನಿಕ ಆಸ್ತಿಗಳ ಖಾಸಗೀಕರಣ ಮತ್ತು ಸಾಲ ಸೌಲಭ್ಯದ ಮೂಲಕ ಭಾರಿ ಲಾಭ ಗಳಿಸಲು ಹೆಚ್ಚಿನ ಮಾರ್ಗಗಳನ್ನು ಒದಗಿಸಲಾಗಿದೆ. ಕೃಷಿ ಸಾಲದ ಸಿಂಹಪಾಲು ಕೃಷಿ-ವ್ಯಾಪಾರಿಗಳಿಗೆ ಹೋಗುತ್ತದೆ. ಆಕ್ಸ್‌ಫ್ಯಾಮ್ ವರದಿಗಳ ಪ್ರಕಾರ ಜನಸಂಖ್ಯೆಯ ಅಗ್ರ 10% ಮಂದಿ ಭಾರತದಲ್ಲಿ 74% ಸಂಪತ್ತನ್ನು ಹೊಂದಿದ್ದಾರೆ, ಆದರೆ ಭಾರತದಲ್ಲಿ ತೆರಿಗೆಯ ದರವು ಈಗಾಗಲೇ ಹೆಚ್ಚಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವು ಅವರಿಗೆ ತೆರಿಗೆ ವಿಧಿಸಲು ಸಿದ್ಧವಾಗಿಲ್ಲ.
ಇದನ್ನು ಓದಿ: ಭಾರತದ ಸೂಪರ್ ಶ್ರೀಮಂತರ ಸೂಪರ್ ಸಮೃದ್ಧಿ ಮತ್ತು ಆಘಾತಕಾರಿ ಅಸಮಾನತೆಯ ಕತೆ
ಭಾರತದಲ್ಲಿ ಕಾರ್ಪೊರೇಟ್ ತೆರಿಗೆ ದರಗಳು ಹೆಚ್ಚಿವೆ ಎಂಬುದು ಸುಳ್ಳು. ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಾರ್ಪೊರೇಟ್ ತೆರಿಗೆ ಮತ್ತು ಸಂಪತ್ತು ತೆರಿಗೆಗಳು ಕ್ರಮವಾಗಿ 15%-22% ಮತ್ತು 30% ವ್ಯಾಪ್ತಿಯಲ್ಲಿವೆ. ಇಟಲಿಯಲ್ಲಿ ಈ ತೆರಿಗೆ ದರಗಳು 23%-27% ಮತ್ತು 47%, ಜಪಾನ್‌ನಲ್ಲಿ 15%-29.74% ಮತ್ತು 55%, ಕ್ಯೂಬಾದಲ್ಲಿ 15%-30% ಮತ್ತು 50% ಮತ್ತು ಚೀನಾದಲ್ಲಿ ಕ್ರಮವಾಗಿ 0%-25% ಮತ್ತು 45%. ಬಿಜೆಪಿ ನೇತೃತ್ವದ ಮೋದಿ ಸರ್ಕಾರವು ಶ್ರೀಮಂತರ ಮೇಲೆ ತೆರಿಗೆ ವಿಧಿಸಲು ಸಿದ್ಧವಿಲ್ಲ , ಬದಲಿಗೆ ಕನಿಷ್ಠ ಕೂಲಿ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ನಿರಾಕರಿಸುವ ಮೂಲಕ ರೈತರು ದಿವಾಳಿಯಾಗುವ, ತಮ್ಮ ಶ್ರಮವನ್ನು ಮಾರಿ ಬದುಕಬೇಕಾದ ಮಟ್ಟಕ್ಕೆ ಇಳಿಸುವ ಕ್ರೂರ ಪ್ರಕ್ರಿಯೆಗೆ ಅನುಕೂಲ ಕಲ್ಪಿಸಿಕೊಡುತ್ತಿದೆ. ಹೀಗಾಗಿ, ಪ್ರಧಾನ ಮಂತ್ರಿಗಳು ಡಬಲ್ ಇಂಜಿನ್ ಎಂದುಹೇಳಿಕೊಮಡಿರುವ ಸರ್ಕಾರವು ಡಬಲ್ ಇಂಡಿಯಾವನ್ನು ರಚಿಸಲು ಕಟಿಬದ್ಧವಾದಂತಿದೆ. ಅಂದರೆ ಒಂದೆಡೆ ಶ್ರೀಮಂತ ಕಾರ್ಪೊರೇಟ್ ಶಕ್ತಿಗಳ ಭಾರತ ಮತ್ತು ಇನ್ನೊಂದೆಡೆ ಬಡ ರೈತರು ಮತ್ತು ಕಾರ್ಮಿಕರ ಭಾರತ. ಬಿಜೆಪಿ ನೀತಿಗಳು ಜನರ ಅಭಿವೃದ್ಧಿಗಾಗಿ ಅಲ್ಲ ಕಾರ್ಪೊರೇಟ್ ಶಕ್ತಿಗಳ ಅಭಿವೃದ್ಧಿಗಾಗಿ ಟೊಂಕ ಕಟ್ಟಿವೆ.
ಆದ್ದರಿಂದ, ಈ ಕ್ರೂರ ರೈತ-ವಿರೋಧಿ, ಕಾರ್ಮಿಕ ವಿರೋಧಿ ಕೇಂದ್ರ ಬಜೆಟನ್ನು ಪ್ರತಿಭಟಿಸಲು 2023 ರ ಫೆಬ್ರವರಿ 9 ಅನ್ನು ಕರಾಳ ದಿನವನ್ನಾಗಿ ಆಚರಿಸಲು ಎಐಕೆಎಸ್ ಮತ್ತು ಎಐಎಡಬ್ಲ್ಯುಯು ಭಾರತದಾದ್ಯಂತ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಕರೆ ನೀಡಿವೆ. ಅಂದು ಬಜೆಟ್ ಪ್ರತಿಗಳ ದಹನ, ಪ್ರತಿಕೃತಿ ದಹನ, ಪ್ರತಿಭಟನೆ, ಸಂಜೆ ಧರಣಿ ಮತ್ತು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಮೂಲಕ ಪ್ರತಿಭಟನಾ ದಿನಾಚರಣೆ ನಡೆಸಲಾಗುತ್ತದೆ ಎಂದು ಹನ್ನನ್ ಮೊಲ್ಲಾ (ಉಪಾಧ್ಯಕ್ಷರು, ಎಐಕೆಎಸ್), ಪಿ ಕೃಷ್ಣಪ್ರಸಾದ್ (ಹಣಕಾಸು ಕಾರ್ಯದರ್ಶಿ ಎಐಕೆಎಸ್), ವಿ ಶಿವದಾಸನ್, ಎಂಪಿ, (ಜಂಟಿ ಕಾರ್ಯದರ್ಶಿ ಎಐಎಡಬ್ಲ್ಯುಯು) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ