ಹಾಸನ: ಅತಿಥಿ ಉಪನ್ಯಾಸಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಲ್ಲಿ ವಿಫಲವಾಗಿರುವ ಸರ್ಕಾರದ ಕ್ರಮ ಖಂಡಿಸಿ ಫೆ. 14ರಿಂದ ಬೆಂಗಳೂರಿನಲ್ಲಿ ನಿರಂತರ ಹೋರಾಟ ಮಾಡಲಾಗುವುದು ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.
‘2002 ರಲ್ಲಿ ಸರ್ಕಾರವೇ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿತ್ತು. ಈ ಪ್ರಕಾರ ಆಯ್ಕೆಯಾದ ಸುಮಾರು 14,106 ಮಂದಿ ಉಪನ್ಯಾಸಕರಿದ್ದಾರೆ. ಈ ನಡುವೆ ಕೊರೊನಾ ಸಂದರ್ಭದಲ್ಲಿ ಹೊಸದಾಗಿ 3 ಸಾವಿರ ಸಾವಿರ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಒಟ್ಟು 17,106 ಉಪನ್ಯಾಸಕರಿದ್ದಾರೆ. ಆದರೆ, ಸರ್ಕಾರದ ಗೊಂದಲದ ನಡೆಯಿಂದ ಸುಮಾರು 9,881 ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಸರ್ಕಾರಿ ಕಾಲೇಜುಗಳಲ್ಲಿ ರೈತರು, ಕಾರ್ಮಿಕರ ಮಕ್ಕಳೇ ಓದುತ್ತಿದ್ದಾರೆ. ಉಪನ್ಯಾಸಕರೂ ಆರ್ಥಿಕವಾಗಿ ಸ್ಥಿತಿವಂತರಾಗಿಲ್ಲ. ಹೀಗಿದ್ದರೂ, ಅತಿಥಿ ಉಪನ್ಯಾಸಕರನ್ನು ಒಡೆದು ಆಳುವ ನೀತಿ ಜಾರಿ ಮಾಡಿರುವುದು ಖಂಡನೀಯ. ಪುನರಾಯ್ಕೆ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಿ ಕೆಲಸ ಕಳೆದುಕೊಂಡಿರುವ ಎಲ್ಲರನ್ನೂ ಸೇವೆಯಲ್ಲಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.
ನೇಮಕಾತಿ ವೇಳೆ ಆನ್‌ಲೈನ್ ಐಡಿ ಇರುವ ಎಲ್ಲಾ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸಬೇಕು. ಬಳಸಿ ಬಿಸಾಡುವ ನೀತಿಯನ್ನು ಬಿಡಬೇಕು. ಎಲ್ಲಾ ಅತಿಥಿ ಉಪನ್ಯಾಸಕರಿಗೂ ಬೇರೆ ರಾಜ್ಯಗಳಲ್ಲಿ ಕೊಟ್ಟಿರುವ ರೀತಿಯಲ್ಲಿ ಸೇವಾ ನಿಯಮಾವಳಿ ಮಾರ್ಗಸೂಚಿಗಳನ್ನು ರಚಿಸಿ ಸೇವಾಭದ್ರತೆ ಕಲ್ಪಿಸಬೇಕು. ಪದವಿ ಕಾಲೇಜುಗಳಲ್ಲಿ ಕಾರ್ಯಭಾರದ ಅವಕಾಶ ಇಲ್ಲದಿದ್ದಾಗ ವಿಶ್ವವಿದ್ಯಾಲಯದ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಸೇವಾ ಹಿರಿತನ ಹಾಗೂ ವಯೋಮಿತಿ ಆಧಾರದಲ್ಲಿ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ಯುಜಿಸಿ ನಿಯಮಾವಳಿ ಪ್ರಕಾರ ವಿದ್ಯಾರ್ಥಿಗಳ ಸಂಖ್ಯೆಯನ್ನು 90-111 ರಿಂದ 40-60ಕ್ಕೆ ಇಳಿಸಿ 1 ಗಂಟೆ ಬೋಧನೆಗೆ ₹15 ಸಾವಿರ ನೀಡಬೇಕು. ಶಾಸನಬದ್ಧವಾದ ಎಲ್ಲಾ ಸೌಲಭ್ಯಗಳನ್ನು ತಾರತಮ್ಯ ಇಲ್ಲದೆ ನೀಡಬೇಕು. ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವ ತನಕ ಕೃಪಾಂಕ ಮತ್ತು ಸೇವಾ ಹಿರಿತನ ಆಧಾರದಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಕೊಟ್ಟಿರುವ ಹಾಗೆ ಇಲ್ಲಿಯೂ ಶೇ 50ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಅತಿಥಿ ಉಪನ್ಯಾಸಕರಾದ ಮಧು, ಕೆ.ಸಂಧ್ಯಾ, ಶಿಲ್ಪಾ, ಎಚ್.ಬಿ ರಜಿತ್ ಕುಮಾರ್, ಅರುಣ್ ಕುಮಾರ್ ಇದ್ದರು.