ಬೆಂಗಳೂರು : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಮತ್ತು ನಾಲ್ಕು ಕಾರ್ಮಿಕ ಕೋಡ್‌ಗಳನ್ನು ಹಿಂಪಡೆಯಬೇಕು, ವಿ.ಬಿ. ಗ್ರಾಮ್ ಜಿ, ವಿಮಾ ತಿದ್ದುಪಡಿ ಕಾಯ್ದೆ, ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿ. ಟ್ರೇಡ್ ಯೂನಿಯನ್ ಜಂಟಿ ಸಮಿತಿ (ಜೆಸಿಟಿಯು) – ಸಂಯುಕ್ತ ಹೋರಾಟ ಕರ್ನಾಟಕ (ಎಸ್‌ಎಚ್‌ಕೆ) ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಫೆಬ್ರವರಿ 12, 2026 ರಂದು ನಡೆಯಲಿದೆ. ಕರ್ನಾಟಕದಾದ್ಯಂತ ಮುಷ್ಕರದ ಬಿಸಿ ತಟ್ಟುವ ಸಾಧ್ಯತೆಯಿದೆ. ಫೆ.12
ಮುಷ್ಕರದ ಕುರಿತಾಗಿ ಇಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಾಯಕರು, ಸುಲಲಿತ ವ್ಯಾಪಾರದ ಹೆಸರಲ್ಲಿ ಯೂನಿಯನ್ ಮುಕ್ತ ವಾತಾವರಣವನ್ನು ಕಲ್ಪಿಸಲು ಕೇಂದ್ರ ಸರ್ಕಾರವು ಸರ್ವಾಧಿಕಾರಿ ವರ್ತನೆ ತೋರುತ್ತಿದೆ. ನಾಲ್ಕು ಕಾರ್ಮಿಕ ಕಾಯ್ದೆಗಳ ಮೂಲಕ ಹೊಸ ಶ್ರಮಿಕ ನೀತಿ ಜಾರಿ ಮಾಡಲು ಯತ್ನಿಸುತ್ತಿದೆ. ಶ್ರಮಿಕ ನೀತಿಯು ಮನುಸ್ಮೃತಿಯಿಂದ ಸ್ಫೂರ್ತಿ ಪಡೆದು ದುಡಿಮೆಗಾರನ ಕೆಲಸ ದುಡಿಯುವುದು ಮಾತ್ರ ಎಂಬ ಪರಿಕಲ್ಪನೆಯನ್ನು ಹೊಂದಿದೆ. ಕನಿಷ್ಠ ವೇತನಕ್ಕಿಂತ ಕಡಿಮೆ ಇರಬಾರದು ಎಂದಿದ್ದರೂ ಕಾರ್ಮಿಕ ಸಂಹಿತೆಯಲ್ಲಿ ದಿನಕ್ಕೆ ₹178 ನಿಗದಿ ಮಾಡಲಾಗಿದೆ. ಈಗಾಗಲೇ ಮಾಲೀಕರು ಗಳಿಸುವ ಲಾಭವು ಶೇ 51ರವರೆಗೆ ಹೆಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕರ ವೇತನದ ಪಾಲು ಶೇ 15.97ಕ್ಕೆ ಇಳಿದಿದೆ. ಹೊಸ ಕಾರ್ಮಿಕ ನೀತಿಯು ವೇತನದ ಪಾಲನ್ನು ಇನ್ನಷ್ಟು ಕಡಿಮೆ ಆಗಲಿದೆ ಎಂದು ನಾಯಕರು ಆರೋಪಿಸಿದರು.
ಇದನ್ನೂ ಓದಿ : “ಆಧುನಿಕ” ಸರಕುಗಳನ್ನು ಬಳಸುತ್ತಾರೆಂದರೆ ಬಡತನ ಇಲ್ಲವೆಂದು ಅರ್ಥವಲ್ಲ

ಅಸಂಘಟಿತ ಕಾರ್ಮಿಕರಿಗೆ ಇಎಸ್‌ಐ, ಇಪಿಎಫ್ ಇಲ್ಲ. ₹18 ಸಾವಿರಕ್ಕಿಂತ ಕಡಿಮೆ ವೇತನವಿದ್ದರೆ ಅವರಿಗೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಕಾಯಂ ನೌಕರರ ಪರಿಕಲ್ಪನೆಯನ್ನು ತೆಗೆದು ಹಾಕಲಾಗಿದೆ. ಕೈಗಾರಿಕಾ ಸಂಹಿತೆಯಲ್ಲಿ ಕಾರ್ಮಿಕರ ಪ್ರಾಥಮಿಕ ಸಂಘಗಳ ರಚನೆ, ನೋಂದಣಿಯಾದ ಸಂಘಗಳ ನಿರ್ವಹಣೆಯನ್ನು ಕಠಿಣಗೊಳಿಸಲಾಗಿದೆ ಎಂದರು.
ದಿನಕ್ಕೆ 12 ತಾಸು ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ. ಆದರೆ, ಹೆಚ್ಚುವರಿ ಸಮಯದ ವೇತನದ ಬಗ್ಗೆ ಪ್ರಸ್ತಾಪವಿಲ್ಲ. ನರೇಗಾ ಕಾಯ್ದೆಯನ್ನು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಕಾಯ್ದೆ ಎಂದು ಬದಲಾಯಿಸಲಾಗಿದೆ. ಹೊಸ ಕಾಯ್ದೆಯಲ್ಲಿ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರ ಈ ಕೋಡ್‌ಗಳಿಗೆ ನಿಯಮಾವಳಿ ರಚಿಸಬಾರದೆಂದೂ ಒತ್ತಾಯಿಸಲಾಗಿತ್ತು. ಆದರೂ ಸರ್ಕಾರ ಕಾರ್ಮಿಕ ಸಂಘಟನೆಗಳ ಬಳಿ ಕನಿಷ್ಠ ಚರ್ಚೆ ಮಾಡುವ ಸೌಜನ್ಯವನ್ನು ತೋರಲಿಲ್ಲ. 4 ಕೋಡ್‌ಗಳಿಗೆ ಗೆಜೆಟ್ ನೋಟೀಫಿಕೇಷನ್ ತಂದು ಕಾರ್ಮಿಕರು ಉಸಿರೆತ್ತದಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತಿದೆ. 2025 ಆಗಸ್ಟ್ ತಿಂಗಳಲ್ಲಿ ಕನಿಷ್ಠ ವೇತನದ ಮಂಡಳಿಯಿಂದ ಶಿಫಾದಸ್ಸಾದ ಕನಿಷ್ಠ ವೇತನವನ್ನು ಈಗ 1948ರ ಕನಿಷ್ಠ ವೇತನ ಕಾಯ್ದೆ ರದ್ದಾದ ಹಿನ್ನಲೆಯನ್ನು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯುವುದಾಗಿ ಹಿಂಬರಹ ಕೊಡುವ ಮುಖಾಂತರ ರಾಜ್ಯದ ಅಧಿಕಾರವನ್ನು ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಬಳಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಕೇಂದ್ರ ಸರ್ಕಾರವು, ನರೇಗಾ ಕಾಯ್ದೆಯಡಿಯಲ್ಲಿ ಖಾತರಿ ಪಡಿಸಲಾದ ಕೆಲಸ, ಕೆಲಸದ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಗ್ರಾಮೀಣ ಶ್ರಮ ಜೀವಿಗಳ ಕೊಂಡುಕೊಳ್ಳುವ ಸಾಮಾರ್ಥ್ಯ ಕಡಿಮೆ ಮಾಡುವುದು ಮತ್ತು ಕೃಷಿ ಕಾರ್ಮಿಕರ ಮತ್ತು ಇತರೆ ಗ್ರಾಮೀಣ ಕಾರ್ಮಿಕರ ವೇತನವನ್ನು ನಿಗ್ರಹಿಸುತ್ತಿದೆ. ವಿದ್ಯುತ್ಚಕ್ತಿಯನ್ನು ಖಾಸಗೀಕರಿಸಿ ವಿದ್ಯುತ್ ಪ್ರಸರಣ, ವಿತರಣಾ ವ್ಯವಸ್ಥೆಯ ಅನುಷ್ಠಾನ ಮತ್ತು ನಿರ್ವಹಣೆಯನ್ನು ಖಾಸಗಿ ಬಂಡವಾಳಗಾರರಿಗೆ ಕೊಡುವ ಮುಖಾಂತರ ಇದುವರೆಗೂ ವಿದ್ಯುತ್ ರೈತರಿಗೆ ಮತ್ತು ಜನಸಾಮಾನ್ಯರಿಗೆ ಸಬ್ಸಿಡಿ ದರದಲ್ಲಿ ಸಿಗುತ್ತಿದ್ದ ಪ್ರಮುಖ ಸೇವೆಯಿಂದ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದರು.
ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ, ಕಂಪನಿ ಕೃಷಿಯನ್ನು ಉತ್ತೇಜಿಸಿ ಬಲವಂತದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು ವಶಪಡಿಕೊಳ್ಳುತ್ತಿದೆ. ಇದರಿಂದ ರೈತರು ಕೂಲಿಕಾರರಾಗಿ ಮತ್ತು ನಿರುದ್ಯೋಗಸ್ಥರಾಗಿ ಮಾರ್ಪಾಡಾಗುತ್ತಿದ್ದಾರೆ. 1 ಫೆಬ್ರವರಿ 2026 ರಂದು ಕೇಂದ್ರ ಸರ್ಕಾರ 53.5 ಲಕ್ಷಕೋಟಿ ಬಜೆಟನ್ನು ಮಂಡಿಸಲಾಗಿದೆ. ಆದರೆ ಇದರಲ್ಲಿ ಜನಸಾಮಾನ್ಯರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರವಿಲ್ಲ ಬದಲಿಗೆ ಬಂಡವಾಳಗಾರರಿಗೆ ಹಸೆಮಣೆ ಹಾಕಲಾಗಿದೆ ಎಂದು ದೂರಿದರು.
ಫೆಬ್ರವರಿ 12 ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ ಸಂಘಗಳು ಎಲ್ಲಾ ರೈತ ಸಂಘಗಳು, ಕೂಲಿಕಾರ ಸಂಘಟನೆಗಳ, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿ ಯುವಜನ ಸಂಘಟನೆಗಳು ಸೇರಿ ಮುಷ್ಕರ ನಡೆಸಲಾಗುತ್ತಿದೆ. ಅಂದು ಎಲ್ಲಾ ವಿಭಾಗದ ಜನತೆ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವರಲಕ್ಷ್ಮೀ, ರೈತ ನಾಯಕರಾದ ಬಡಗಲಪುರ ನಾಗೇಂದ್ರ, ಎಚ್.ಆರ್.ಬಸವರಾಜಪ್ಪ, ವೀರಸಂಗಯ್ಯ, ಟಿ. ಯಶವಂತ್, ಕಾರ್ಮಿಕ ನಾಯಕರಾದ ಕೆ.ವಿ. ಭಟ್, ಜಿ. ಆರ್. ಶಿವಶಂಕರ್ ನೂರ್ ಶ್ರೀಧರ್‌ಎಲ್. ಕಾಳಪ್ಪ, ಗಂಗಣ್ಣ, ಛಾಯಾ, ಲೀಲಾವತಿ, ಕೂಲಿಕಾರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಸೇರಿದಂತೆ ಅನೇಕರಿದ್ದರು.
ಇದನ್ನೂ ನೋಡಿ : ಇದು ಜನರ ಬಜೆಟ್ ಅಲ್ಲ- ಕಾರ್ಪೊರೇಟ್ ಲಾಭಕ್ಕೆ ಬಜೆಟ್! | ಟಿಆರ್‌ಸಿ | ಗುರುರಾಜ ದೇಸಾಯಿ Janashakthi Media
