ಬೆಂಗಳೂರು: ರೈತ-ಕೃಷಿಕೂಲಿಕಾರರ ಭೂಮಿ ಹಕ್ಕಿಗಾಗಿ, ಬಲವಂತದ ಭೂ ಸ್ವಾಧೀನ ವಿರೋಧಿಸಿ ಫೆಬ್ರವರಿ 10, 2025 ರಿಂದ ಸಹಸ್ರಾರು ರೈತ-ಕೃಷಿಕೂಲಿಕಾರರ ಬೃಹತ್ ವಿಧಾನ ಸೌಧ ಚಲೋ-ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕರ್ನಾಟಕ ರಾಜ್ಯ ಸಮಿತಿಗಳು ತಿಳಿಸಿವೆ. ಭೂ ಸ್ವಾಧೀನ
ಇಂದು (ಫೆ.03) ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಕೃಷಿ ಕೂಲಿಕಾರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಜಿ.ಎನ್. ನಾಗರಾಜ ಮಾತನಾಡಿ, ರೈತ ಹಾಗೂ ಜನ ವಿರೋಧಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧಿಸಿ,ಮನೆ-ನಿವೇಶನ, ಬಗರ್ ಹುಕುಂ-ಅರಣ್ಯ ಸಾಗುವಳಿ ರೈತ-ಕೂಲಿಕಾರರ ಹಕ್ಕು ರಕ್ಷಣೆಗಾಗಿ ಬಲವಂತದ ಭೂ ಸ್ವಾಧೀನ ಹಾಗೂ ಭೂ ಸಂಪತ್ತಿನ ಕಾರ್ಪೊರೇಟ್ ಲೂಟಿ ಹಿಮ್ಮೆಟ್ಟಿಸಲು,ಜನ ವಿರೋಧಿ ಕರಾಳ ರಾಜ್ಯ ಕೃಷಿ, ಕಂದಾಯ ಹಾಗೂ ಭೂ ಸ್ವಾಧೀನ ಕಾಯ್ದೆಗಳ ರದ್ದತಿಗಾಗಿ, ಸಾಲಮನ್ನಾ ಹಾಗೂ ಕನಿಷ್ಟ ಬೆಂಬಲ ಬೆಲೆ ಹಕ್ಕಿಗಾಗಿ ಹಾಗೂ ರೈತ ವಿರೋಧಿ ಕೇಂದ್ರ ಬಜೆಟ್ ಖಂಡಿಸಿ, ಕಿರುಕುಳ-ಲಂಚ ಇಲ್ಲದೇ ದರ್ಖಾಸ್ತ್ ಮಂಜೂರು ಹಾಗೂ ಇತರೆ ಭೂಮಿಗಳ ದುರಸ್ತ್ ಪೋಡಿ ಮಾಡಲು ಆಗ್ರಹಿಸಿ ಫೆಬ್ರವರಿ 10, 2025 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ರೈತ-ಕೃಷಿಕೂಲಿಕಾರರ ಬೃಹತ್ ವಿಧಾನ ಸೌಧ ಚಲೋ -ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದ್ದು ರಾಜ್ಯಾದ್ಯಂತ ಸಹಸ್ರಾರು ರೈತ-ಕೃಷಿಕೂಲಿಕಾರರು ಭಾಗವಹಿಸುತ್ತಿದ್ದಾರೆ ಎಂದರು.
ಭೂಮಿ, ಶ್ರಮ ಮತ್ತು ಬಂಡವಾಳ ಕ್ಷೇತ್ರಗಳಲ್ಲಿ ಮುಂದಿನ ಹಂತದ ನವ ಉದಾರೀಕರಣ ಧೋರಣೆಗಳಿಗೆ ಅನುಸಾರವಾಗಿ ಸಂರಚನಾ ಸುಧಾರಣೆಗಳನ್ನು ದೊಡ್ಡ ಪ್ರಮಾಣದಲ್ಲಿ ಜಾರಿ ಮಾಡುತ್ತಿರುವ ಸ್ವತಂತ್ರ ಭಾರತದ ಅತಿದೊಡ್ಡ ಕಾರ್ಪೊರೇಟ್ ಪರ ಸರ್ಕಾರವಾಗಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಣತಿಯಂತೆ, ಅತ್ಯಂತ ವೇಗವಾಗಿ ಇಡೀ ದೇಶದಲ್ಲೇ ಕರ್ನಾಟಕವು, ಕಾರ್ಪೊರೇಟ್ ಲೂಟಿಗೆ ಅವಕಾಶ ಮಾಡಿಕೊಡುತ್ತಿದೆ. ಮೇಲಿಂದ ಮೇಲೆ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಗಳನ್ನು ಹಮ್ಮಿಕೊಂಡು ರಾಜ್ಯದ ರೈತ-ಕೂಲಿಕಾರರ ಭೂಮಿ ಹಕ್ಕಿಗೆ ಗಂಭೀರ ಧಕ್ಕೆ ಉಂಟುಮಾಡುತ್ತಿದೆ. ಕಾರ್ಪೊರೇಟ್ ಭೂ ಕಬಳಿಕೆಗೆ ಸಂಪೂರ್ಣ ಬೆಂಬಲ ನೀಡುವಂತಹ ಭೂ ಸ್ವಾಧೀನ ಕಾಯ್ದೆಗಳನ್ನು, ಕರಾಳ ರಾಜ್ಯ ಕೃಷಿ ಕಾಯ್ದೆಗಳನ್ನು ಮುಂದುವರೆಸುತ್ತಿದೆ ಮತ್ತು ಕೃಷಿ ಭೂಮಿಯನ್ನು ಸುಲಭವಾಗಿ ಕಾರ್ಪೊರೇಟ್ ಉದ್ಯಮಿಗಳ ವಶಕ್ಕೆ ನೀಡಲು ಭೂ ಕಂದಾಯ ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಪ್ರಗತಿಪರ ಭೂ ಸುಧಾರಣಾ ಕಾನೂನು ಜಾರಿಗೆ ದೇಶದಲ್ಲೇ ಹೆಸರಾಗಿದ್ದ ಕರ್ನಾಟಕವು, ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ಭೂ ಸುಧಾರಣಾ ಕ್ರಮಗಳನ್ನು ಜಾರಿ ಮಾಡುವುದರಲ್ಲಿ ಮುಂಚೂಣಿಯಲ್ಲಿರುವುದು ದುರದೃಷ್ಟಕರ ಮತ್ತು ಆತಂಕದ ವಿಷಯವಾಗಿದೆ ಎಂದರು. ಭೂ ಸ್ವಾಧೀನ
ಇದನ್ನೂ ಓದಿ : ಕರಡು ಕೃಷಿ ಮಾರುಕಟ್ಟೆ ನೀತಿಯನ್ನು ವಿರೋಧಿಸಿ ರಾಜ್ಯ ರಾಜಧಾನಿಗಳಲ್ಲಿ ಪ್ರತಿಭಟನೆ:ಎಸ್‌ಕೆಎಂ
ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ಮಾತನಾಡಿ, ರಾಜ್ಯ ಸರ್ಕಾರದ ಇಂತಹ ರೈತ-ಕೂಲಿಕಾರರ ವಿರೋಧಿ ಧೋರಣೆಗಳಿಂದಾಗಿ ಮನೆ-ನಿವೇಶನ ರಹಿತರ, ಬಗರ್ ಹುಕುಂ -ಅರಣ್ಯ ಸಾಗುವಳಿ ರೈತರ ಭೂಮಿ ಹಕ್ಕಿಗೆ ಗಂಭೀರ ಧಕ್ಕೆ ಉಂಟಾಗಿದೆ. ರಾಜ್ಯದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮನೆ-ನಿವೇಶನ ಕೋರಿ, ಸರ್ಕಾರಿ ಭೂಮಿಗಳಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಕೋರಿ ಅರ್ಜಿ ಸಲ್ಲಿಸಿರುವ ಬಡವರು, ಪಾರಂ ನಂ. 50,53,57 ರಲ್ಲಿ ತಮ್ಮ ಬಗರ್ ಹುಕುಂ ಸಾಗುವಳಿ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ರೈತರ ನ್ಯಾಯಬದ್ಧವಾದ ಕೋರಿಕೆಯನ್ನು ಸಮರೋಪಾದಿಯಲ್ಲಿ ತಿರಸ್ಕರಿಸಲಾಗುತ್ತಿದೆ. ಈ ರೈತ-ಕೂಲಿಕಾರರ ಭೂಮಿ ಹಕ್ಕನ್ನು ಖಾತರಿಪಡಿಸಬೇಕಾಗಿದ್ದ ಸರ್ಕಾರ ವಿವಿಧ ರೀತಿಯ ನೆಪಗಳನ್ನು ಮುಂದು ಮಾಡಿ ರಾಜ್ಯದಾದ್ಯಂತ ದೊಡ್ಡ ಪ್ರಮಾಣದಲ್ಲಿ ಒಕ್ಕಲೆಬ್ಬಿಸಲಾಗುತ್ತಿದೆ. ಈಗಾಗಲೇ ಮಂಜೂರಾಗಿದ್ದು ದುರಸ್ತ್ (ಪೋಡಿ) ಆಗದೇ ಇರುವ ರೈತರ ಭೂಮಿಯನ್ನು ಸಹ ಕಿತ್ತುಕೊಳ್ಳುತ್ತಿದೆ. ಸಕ್ರಮಾತಿ ಸಮಿತಿಯ ಅಧಿಕಾರವನ್ನು ಕಂದಾಯ ಇಲಾಖೆ ಅಧಿಕಾರಿಗಳೇ ಚಲಾಯಿಸಿ ಬಗರ್ ಹುಕುಂ ಸಾಗುವಳಿ ಸಕ್ರಮ ಅರ್ಜಿಗಳನ್ನು ಅನರ್ಹ ಎಂದು ತಿರಸ್ಕರಿಸುತ್ತಿರುವುದು ಕರ್ನಾಟಕ ಭೂ ಕಂದಾಯ ಕಾಯ್ದೆ 94(ಎ), 94(ಬಿ) ಕಲಂಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಕಾನೂನು ಬಾಹಿರವಾಗಿದೆ ಎಂದರು.
ಇದರ ಜೊತೆಗೆ ಪಟ್ಟಣ, ಪುರ, ನಗರ, ಮಹಾನಗರ ವ್ಯಾಪ್ತಿಯ ಗಡಿಯಿಂದ ಇಂತಿಷ್ಟು ದೂರ ಬಗರ್ ಹುಕುಂ ಸಾಗುವಳಿದಾರರ ಅರ್ಜಿಯನ್ನು ಮತ್ತು ಸಾಗುವಳಿ ಹಕ್ಕನ್ನು ಪರಿಗಣಿಸಬಾರದು ಎಂಬ ನಿರ್ಬಂಧ, ಗೋಮಾಳ ಮತ್ತಿತರ ವಿಧದ ಸರ್ಕಾರಿ ಭೂಮಿಗಳನ್ನು ಮಂಜೂರು ಮಾಡಲು ಇರುವ ಹಲವು ನಿರ್ಬದಗಳು ಮುಂದುವರೆದಿರುವ ಕಾರಣದಿಂದ ಬಹುತೇಕ ಬಗರ್ ಹುಕುಂ ಸಾಗುವಳಿದಾರರು ಭೂಮಿ ಹಕ್ಕು ಪಡೆಯಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ತಂದೊಡ್ಡಲಾಗಿದೆ.
ಅಲ್ಲದೇ, ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಾಜ್ಯದಾದ್ಯಂತ ಇರುವ ಲಕ್ಷಾಂತರ ಎಕರೆ ಸರ್ಕಾರಿ ಕಂದಾಯ ಭೂಮಿಗಳನ್ನು ಪರಿಭಾವಿಸಲ್ಪಟ್ಟ ಅರಣ್ಯ ವ್ಯಾಪ್ತಿಗೆ ವರ್ಗಾಯಿಸಲಾಗಿದೆ. ಈ ರೀತಿ ವರ್ಗಾಯಿಸಲ್ಪಟ್ಟ ಭೂಮಿಗಳನ್ನು ಅರಣ್ಯ ಇಲಾಖೆಯೂ ತನ್ನ ಹೆಸರಿಗೆ ಇಂಡೀಕರಣ ಮಾಡಿಸಿಕೊಂಡು ಪೊಲೀಸ್ ರಕ್ಷಣೆಯಲ್ಲಿ ಒಕ್ಕಲೆಬ್ಬಿಸುತ್ತಿರುವುದು ತೀವ್ರ ಗತಿಯಲ್ಲಿ ನಡೆಯುತ್ತಿದೆ. ಇಂತಹ ಯಾವುದೇ ಸಂದರ್ಭದಲ್ಲೂ ರೈತರ ಬಗರ್ ಹುಕುಂ ಸಾಗುವಳಿ ಸಕ್ರಮ ಕೋರಿರುವ ಅರ್ಜಿಗಳನ್ನಾಗಲಿ ಅಥವಾ ಈಗಾಗಲೇ ಮಂಜೂರಾಗಿ ನಮೂದಾಗಿರುವ ಹಕ್ಕು ದಾಖಲೆಗಳ ಕಂದಾಯ ದಾಖಲೆಗಳನ್ನಾಗಲಿ ಪರಿಗಣನೆಗೆ ತೆಗೆದುಕೊಳ್ಳದೇ ರಾತ್ರೋ ರಾತ್ರಿ ಬೃಹತ್ ಜೆಸಿಬಿ ಯಂತ್ರಗಳ ಮೂಲಕ ಫಸಲು ನಾಶ ಪಡಿಸಲಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿ 1920 ದಶಕದ ಮೈಸೂರು ಮಹಾರಾಜರ ಗೆಜೆಟ್ ಪ್ರಕಟಣೆಯನ್ನು ಮುಂದು ಮಾಡಿ ಭೂಮಿ ಕಿತ್ತುಕೊಳ್ಳಲು ಬಳಸುತ್ತಿದ್ದರೆ, ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿ ಪ್ರದೇಶಗಳಲ್ಲಿ ಮದ್ರಾಸ್ ಗೆಜೆಟ್ ಅಧಿಸೂಚನೆ 1890 ಅನ್ನು ಬಳಸಲಾಗುತ್ತಿದೆ. ಹೀಗೆ ಸುಮಾರು ನೂರು ವರ್ಷಗಳ ಹಿಂದಿನ ಅಂದರೆ ಸ್ವತಂತ್ರ ಪೂರ್ವದ ದಾಖಲಾತಿಗಳನ್ನು ಮುಂದು ಮಾಡಿ ರೈತರನ್ನು ಬೆದರಿಸಲಾಗುತ್ತಿದೆ. ಇಂತಹ ಎಲ್ಲಾ ಸಂದರ್ಭಗಳಲ್ಲೂ ಜಿಲ್ಲಾಧಿಕಾರಿಗಳಾಗಲಿ ಅಥವಾ ಸರ್ಕಾರವಾಗಲಿ ರೈತರ ರಕ್ಷಣೆಗೆ ಬರುತ್ತಿಲ್ಲ. ಕೋರ್ಟ್ ತೀರ್ಪು, ಅರಣ್ಯ ಕಾಯ್ದೆಗಳ ಕಡೆ ಬೆರಳು ತೋರಿ ಅರಣ್ಯ ಇಲಾಖೆಯ ರೈತ ವಿರೋಧಿ ಕ್ರಮಗಳನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಇತ್ತೀಚಿನ ಸುಮಾರು 20 ವರ್ಷಗಳಲ್ಲಿ ವಿಶೇಷವಾಗಿ ರಾಜ್ಯ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನು ಆಯೋಜಿಸಿ ಭೂಮಿ ಧಾರೆ ಎರೆಯುವುದಾಗಿ ಪಣ ತೊಟ್ಟು ನಿಂತ ಸಂದರ್ಭದ ನಂತರ ಭೂ ಸ್ವಾಧೀನದ ಕರಾಳತೆ ಬೆಳೆಯುತ್ತಲೇ ಇದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆ 1966 ಸೇರಿದಂತೆ ಹಲವಾರು ಭೂ ಸ್ವಾಧೀನ ಕಾಯ್ದೆಗಳ ಮೂಲಕ ರಾಜ್ಯದಾದ್ಯಂತ ಲಕ್ಷಾಂತರ ಎಕರೆ ಭೂಮಿಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಇಂತಹ ಬಹುತೇಕ ಪ್ರಕರಣಗಳಲ್ಲಿ ಪ್ರಾಥಮಿಕ ಅಧಿಸೂಚನೆಗೂ ಅಂತಿಮ ಅಧಿಸೂಚನೆಗೂ ಹತ್ತರಿಂದ ಇಪ್ಪತ್ತು ವರ್ಷಗಳ ಅಂತರ ಇರುವ ಮತ್ತು ಇನ್ನೂ ಹೆಚ್ಚಿನ ಅಂತರ ಇರುವ ಭೂ ಸ್ವಾಧೀನ ಪ್ರಕರಣಗಳಾಗಿವೆ. ಕೈಗಾರಿಕಾ ಪ್ರದೇಶ ಅಭಿವೃದ್ಧಿ ಹೆಸರಿನಲ್ಲಿ ಹತ್ತಾರು ಭೂ ಸ್ವಾಧೀನ ಏಜೆನ್ಸಿಗಳು ತಲೆ ಎತ್ತಿವೆ. ಸುವರ್ಣ ಕಾರಿಡಾರ್, ಸ್ಥಳೀಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಹೀಗೆ ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಭೂಮಿಗಳನ್ನು ಮನಸೋ ಇಚ್ಛೆ ತೆಗೆದುಕೊಳ್ಳಲಾಗಿದೆ. ರಾಜ್ಯದಾದ್ಯಂತ ಕೈಗಾರಿಕೆಗೆ ಎಂದು ಭೂ ಸ್ವಾಧೀನ ಪ್ರಕ್ರಿಯೆ ಮೂಲಕ ವಶಕ್ಕೆ ತೆಗೆದುಕೊಂಡು ಹತ್ತಾರು ವರ್ಷ ಕಳೆದರೂ ಯಾವುದೇ ಉದ್ದೇಶಿತ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲ. ಇತ್ತ ಕಡೆ ಕೃಷಿಯೂ ಇಲ್ಲದೇ, ಅತ್ತ ಕಡೆ ಯಾವುದೇ ಕೈಗಾರಿಕಾ ಯೋಜನೆಗಳು ಅನುಷ್ಠಾನ ಆಗದೇ ಉದ್ದಿಮೆಗಳ ವಶದಲ್ಲಿ ಭೂಮಿ ಉಳಿದುಕೊಂಡಿದೆ. ಲ್ಯಾಂಡ್ ಬ್ಯಾಂಕ್ ಹೆಸರಿನಲ್ಲಿ ಜಮೆ ಆಗಿರುವ ಭೂಮಿ, ಕೈಗಾರಿಕೆಗೆ ಎಂದು ಉದ್ಯಮಿಗಳಿಗೆ ಹಸ್ತಾಂತರ ಆಗಿಯೂ ಬಳಕೆಯಾಗದೇ ಉಳಿದುಕೊಂಡಿರುವ ಭೂಮಿ ರಾಜ್ಯದಾದ್ಯಂತ ಅಂದಾಜು 2 ಲಕ್ಷ ಎಕರೆಗೂ ಹೆಚ್ಚು ಇದೆ. ಇದಲ್ಲದೇ ಭೂ ಸ್ವಾಧೀನ ಪ್ರಕ್ರಿಯೆಯು ಚಾಲ್ತಿಯಲ್ಲಿರುವ ಭೂಮಿ ಮತ್ತು ಮುಂದೆ ಭೂ ಸ್ವಾಧೀನಕ್ಕೆ ಒಳಪಡಿಸಬೇಕು ಎಂದು ಪ್ರಸ್ತಾವನೆ ತಯಾರಿಸಿಕೊಂಡಿರುವ ಭೂಮಿ ಇವುಗಳೆಲ್ಲವನ್ನೂ ಲೆಕ್ಕ ಹಾಕಿದರೆ ಭೂ ಸ್ವಾಧೀನದ ಮೂಲಕ ಸಾಧಿಸುತ್ತಿರುವ ಭೂ ಕಬಳಿಕೆ ಗಾತ್ರ ಗಾಬರಿ ಹುಟ್ಟಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ನಿರುದ್ಯೋಗ- ಬಡತನಕ್ಕೆ ಸ್ವಲ್ಪ ಮಟ್ಟಿನ ಪರಿಹಾರ ನೀಡುವ ಯೋಜನೆಗೂ ಬಜೆಟ್ ಕಡಿತ – ಏಕೆ?
ಬಲವಂತದ ಭೂ ಸ್ವಾಧೀನದ ಪ್ರಶ್ನೆ ಕರ್ನಾಟಕದ ಪ್ರಮುಖ ಭೂಮಿ ಪ್ರಶ್ನೆಗಳಲ್ಲಿ ಒಂದಾಗಿದ್ದು, ಪ್ರತಿಯೊಂದು ತಾಲ್ಲೂಕಿನಲ್ಲೂ ಒಂದಲ್ಲ ಒಂದು ರೀತಿಯ ಭೂ ಸ್ವಾಧೀನದ ಪ್ರಯತ್ನಗಳು ಇದ್ದೇ ಇವೆ. ಇದಲ್ಲದೇ ನೈಸ್ ನಂತಹ ಖಾಸಗಿ ಕಂಪನಿಗಳು ಕೂಡ ಏIಂಆಃ ಜೊತೆ ಅಕ್ರಮ ಕೂಟ ರಚಿಸಿಕೊಂಡು ಭೂ ಕಬಳಿಕೆಯಲ್ಲಿ ನಿರತವಾಗಿವೆ. ಇದಲ್ಲದೇ, ಬೆಂಗಳೂರು ಸುತ್ತಮುತ್ತ ಸುಮಾರು ನೂರು ಕಿ.ಮೀ ವ್ಯಾಪ್ತಿಯಲ್ಲಿ ಪಿ.ಆರ್.ಆರ್., ಕೆ.ಹೆಚ್.ಬಿ, ಬಿ.ಡಿ.ಎ., ಬಿಎಂಆರ್.ಡಿ.ಎ. ಸೇರಿದಂತೆ ವಿವಿಧ ಯೋಜನಾ ಪ್ರಾಧಿಕಾರಗಳ ಹೆಸರುಗಳಲ್ಲಿ ವ್ಯಾಪಕವಾದ ಭೂ ಸ್ವಾಧೀನ ಅಧಿಸೂಚನೆಗಳನ್ನು ಹೊರಡಿಸಲಾಗುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಅತ್ಯಂತ ಅಪ್ರಜಾಸತ್ತಾತ್ಮಕವಾಗಿ, ವಸಾಹತುಶಾಹಿ ಆಳ್ವಿಕೆ ಮಾದರಿಯಲ್ಲಿ ನಡೆಸಲಾಗುತ್ತಿದೆ. ಇದ್ದುದರಲ್ಲಿ ರೈತರ ಹಕ್ಕುಗಳಿಗೆ ಸ್ವಲ್ಪ ಅವಕಾಶ ಇದ್ದ ಭೂ ಸ್ವಾಧೀನ ಕಾಯ್ದೆ 2013 ಅನ್ನು ರಾಜ್ಯದ ಯಾವುದೇ ಭೂ ಸ್ವಾಧೀನದ ಸಂದರ್ಭದಲ್ಲಿ ಅನ್ವಯಿಸದೇ ದೊಡ್ಡ ಪ್ರಮಾಣದ ವಂಚನೆ ನಡೆಸಲಾಗುತ್ತಿದೆ. ರೈತರ ಪ್ರಜಾಸತ್ತಾತ್ಮಕ ಆಕ್ಷೇಪಣೆಗಳನ್ನು ತೀವ್ರ ದಮನದ ಮೂಲಕ ಸದೆಬಡಿಯಲಾಗುತ್ತಿದೆ.
ಕರ್ನಾಟಕದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್ ನಷ್ಟು ಕೃಷಿ ಯೋಗ್ಯ ಬಂಜರು ಪ್ರದೇಶವಿದೆ. ಇಂತಹ ಭೂಮಿಗಳನ್ನು ಭೂ ರಹಿತರಿಗೆ, ಕೃಷಿ ಕೂಲಿಕಾರರಿಗೆ, ಬಡರೈತರಿಗೆ, ದಲಿತರಿಗೆ ಹಂಚಿಕೆ ಮಾಡುತ್ತಿಲ್ಲ. ಬದಲಾಗಿ ಕಾರ್ಪೊರೇಟ್ ಕೃಷಿಗೆ ಗುತ್ತಿಗೆ ನೀಡುವ ಆಲೋಚನೆಯನ್ನು ಹೊಂದಿರುವುದಾಗಿ ಸರ್ಕಾರ ಹೇಳಿರುವುದು ವರದಿಯಾಗಿದೆ. ಕಷ್ಟ ಪಟ್ಟು ಭೂಮಿ ಅಭಿವೃದ್ಧಿ ಪಡಿಸಿ ಮೂರು-ನಾಲ್ಕು ತಲೆಮಾರುಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಬಡ ಸಾಗುವಳಿದಾರರಿಗೆ ಒಂದೆರಡು ಎಕರೆ ಭೂಮಿ ಮಂಜೂರು ಮಾಡಲು ಮೀನಾಮೇಷ ಎಣಿಸುವ ಸರ್ಕಾರ, ದೊಡ್ಡ ದೊಡ್ಡ ಪ್ಲಾಂಟೇಷನ್ ಒಡೆಯರಿಗೆ 25 ಎಕರೆ ತನಕ ಒತ್ತುವರಿ ಭೂಮಿಯನ್ನು ಗುತ್ತಿಗೆ ಗೆ ನೀಡಲು ಮುಂದಾಗಿದೆ.
ಕಳೆದ ಸುಮಾರು ಮೂವತ್ತು ವರ್ಷಗಳ ನವ ಉದಾರೀಕರಣ ಕಾಲಘಟ್ಟದ ಇಂತಹ ಹಲವಾರು ರೈತ- ಕೂಲಿಕಾರರ ವಿರೋಧಿ ನೀತಿಗಳಿಂದಾಗಿ ರಾಜ್ಯದ ಕೃಷಿ ಉತ್ಪಾದನೆ ಮತ್ತು ಆಹಾರ ಉತ್ಪಾದನೆ ಗಂಭೀರ ಬಿಕ್ಕಟ್ಟಿಗೆ ಸಿಲುಕಿದ್ದರೂ, ರಾಜ್ಯದ ಜನ ಹಸಿವು-ನಿರುದ್ಯೋಗ, ವಲಸೆ-ಬಡತನ ದಿಂದ ಬಳಲುತ್ತಿದ್ದರೂ ರೈತ ವಿರೋಧಿ ಭೂಮಿ ನೀತಿಗೆ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಕರ್ನಾಟಕದ ಭೂ ನೀತಿ ಮತ್ತು ಸಂಬಂಧಗಳನ್ನು ವಿವರವಾಗಿ ಪರಿಶೀಲಿಸಿ ಪರ್ಯಾಯ ಭೂ ನೀತಿಗಳಿಗಾಗಿ ಸಂಘರ್ಷ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ರಾಜ್ಯ ಉಪಾಧ್ಯಕ್ಷರಾದ ಎನ್ ವೆಂಕಟಾಚಲಯ್ಯ, ಹಣಕಾಸು ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ ಪುಟ್ಟಮಾದು, ಪ್ರದಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಇದ್ದರು.