ವಿಜ್ಞಾನ ಪ್ರಶ್ನೆಗಳೆ ಹೆಚ್ಚು – ಅಭ್ಯರ್ಥಿಗಳ ಆರೋಪ
ವಿಜಯಪುರ : ಕರ್ನಾಟಕ ಲೋಕ ಸೇವಾ ಆಯೋಗದಿಂದ ಭಾನುವಾರ ನಡೆದ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಯಲ್ಲಿ ವಿಜಯಪುರದ ಜೆಎಸ್‌ಎಸ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬ ನಕಲು ಮಾಡುತ್ತಿದ್ದ ಘಟನೆ ನಡೆದಿದೆ.
ನೋಂದಣಿ ಸಂಖ್ಯೆ 5147677 ನಕಲು ಮಾಡುತ್ತಿದ್ದ ಅಭ್ಯರ್ಥಿ ಎಂದು ತಿಳಿದ್ದು, ಅಭ್ಯರ್ಥಿಯೂ ಪರೀಕ್ಷಾ ಕೇಂದ್ರದಿಂದ ತಪ್ಪಿಸಿಕೊಂಡಿದ್ದು, ಪೊಲೀಸರು ಶೋಧಿಸುತ್ತಿದ್ದಾರೆ. ಪರೀಕ್ಷೆ ವೇಳೆ ನಕಲು ಮಾಡಲು ಅಭ್ಯರ್ಥಿಗೆ ಸಹಕರಿಸಿದ್ದ ಆರೋಪದ ಹಿನ್ನೆಲೆ ಸಂಸ್ಥೆಯ ಗ್ರೂಪ್ ಡಿ ನೌಕರ ಅಯುಬ್ ಮುಜಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಉಪಕೇಂದ್ರದ ಮುಖ್ಯ ಅಧೀಕ್ಷಕ, ಸಂವೀಕ್ಷಕ ಹಾಗೂ ಗ್ರೂಪ್ ಡಿ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬೆಳಗ್ಗೆ 11.25ಕ್ಕೆ ಪರೀಕ್ಷೆ ವೇಳೆ ಅಭ್ಯರ್ಥಿ ನಕಲು ಮಾಡುತ್ತಿದ್ದ ಬಗ್ಗೆ ಪರೀಕ್ಷಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪರೀಕ್ಷಾ ನಿಯಂತ್ರಣಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಭ್ಯರ್ಥಿಗ ಒಎಂಆರ್ ಶೀಟ್ ಅನ್ನು ಪ್ರತ್ಯೇಕಿಸಿ ಸೀಲ್ ಮಾಡಿ, ದುರಾಚಾರ ಪ್ರಕರಣ ಎಂದು ಪರಿಗಣಿಸಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಲಾಗಿದೆ.
ಮುಗಿಯದ ಕೆಪಿಎಸ್ಸಿ ಗೊಂದಲ : ಕಳೆದ ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಪರೀಕ್ಷೆ ರದ್ದಾಗಿತ್ತು, ನಾಲ್ಕಕ್ಕೂ ಹೆಚ್ಚು ಜನರ ಬಂಧನವಾಗಿತ್ತು, ಈಗ ಮತ್ತೆ ಉತ್ತರ ಸಮೇತ ನಕಲು ಮಾಡುತ್ತಿದ್ದ ಘಟನೆಗಳು ಅನೇಕ ಕಡೆ ನಡೆದಿವೆ ಎಂಬ ಆರೋಪ ಕೇಳಿ ಬಂದಿವೆ. ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಇಲ್ಲ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಭೀತಾಗಿದೆ.
ವಿಜ್ಞಾನ ಪ್ರಶ್ನೆ ಹೆಚ್ಚು: ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಾಗಿದ್ದರಿಂದ ಕೆಲವು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಸಾಮಾನ್ಯ ಜ್ಞಾನದ 100 ಪ್ರಶ್ನೆಗಳಲ್ಲಿ 42ಕ್ಕೂ ಹೆಚ್ಚು ಪ್ರಶ್ನೆಗಳು ವಿಜ್ಞಾನಕ್ಕೆ ಸಂಬಂಧಿಸಿದವುಗಳಾಗಿವೆ. ‘ಪ್ರತಿ ಬಾರಿ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಾಗಿರುತ್ತಿದ್ದವು. ಈ ಸಲ ವಿಜ್ಞಾನ ವಿಷಯದ ಪ್ರಶ್ನೆಗಳು ಜಾಸ್ತಿ ಇದ್ದವು. ನಾವೆಲ್ಲ ಕಲಾ ವಿಭಾಗದಲ್ಲಿ ಓದಿದ್ದೇವು, ವಿಜ್ಞಾನ ವಿಷಯದ ಬಗ್ಗೆ ಗೊತ್ತಿದ್ದರೂ ಕೆಲಪದಗಳು ಅರ್ಥವಾಗದೆ, ತಪ್ಪು ಉತ್ತರಕ್ಕೆ ಟಿಕ್ ಮಾಡಿಬಿಟ್ಟಿದ್ದೇನೆ ಎಂದು ಯಲಬುರ್ಗಾದ ಸಂಗಮೆಶ್ ಹಿರೇಮಠ ತಮ್ಮ ನೀವನ್ನು ಹಂಚಿಕೊಂಡಿದ್ದಾರೆ.
ಎಫ್‌ಡಿಎ ಪರೀಕ್ಷೆಯಲ್ಲಿ ವಿಜ್ಞಾನ ಪ್ರಶ್ನೆಗಳೇ ಹೆಚ್ಚಾಗಿದ್ದರ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಸ್ವಾರಸ್ಯಕರ ಚರ್ಚೆ ಆಯಿತು. ‘ಎಫ್‌ಡಿಎ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ವತಿಯಿಂದ ವಿಜ್ಞಾನ ದಿನದ ಶುಭಾಶಯಗಳು’ ಎಂದು ಒಬ್ಬರು ಪೋಸ್ಟ್ ಮಾಡಿದರೆ, ‘ಇದೇನು ಎಫ್‌ಡಿಎ ಎಕ್ಸಾಮೋ, ಮೆಡಿಕಲ್ ಎಕ್ಸಾಮೋ’ ಎಂದು ಕೆಲವು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.