ಮಂಗಳೂರು: ದಕ್ಷಿಣ ಕನ್ನಡ ನಡೆಯುತ್ತಿರುವ ಕೊಲೆ ರಾಜಕಾರಣದ ವಿರುದ್ಧ ಹಾಗೂ ಕೋಮುವಾದದ ರಾಜಕಾರಣದ ಅನಾಹುತದ ಕುರಿತು ತಳಮಟ್ಟದಲ್ಲಿ ಜಾಗೃತಿ ಮೂಡಿಸುವುದು. ಜಿಲ್ಲೆಯಲ್ಲಿ ಸೌಹಾರ್ದ ಕಾಪಾಡುವುದರ ಮಹತ್ವ ಸಾರುವ ಉದ್ದೇಶದಿಂದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ) ಮನೆಮನೆ ಅಭಿಯಾನವನ್ನು ಹಮ್ಮಿಕೊಂಡಿತು.
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಕೋಮುಹತ್ಯೆಯ ತನಿಖೆಗಳು ಸಮಪರ್ಕವಾಗಿ ನಡೆದಿಲ್ಲ. ಈಚೆಗೆ ನಡೆದ ಕೋಮು ಹತ್ಯೆಗಳಲ್ಲಿ ಕೈಗೊಂಡಿರುವ ತನಿಖೆ ಬಗ್ಗೆಯೂ ಸಾರ್ವಜನಿಕರಲ್ಲಿ ನಂಬಿಕೆ ಇಲ್ಲವಾಗಿದೆ. ಸುರತ್ಕಲ್ ನಲ್ಲಿ ಫಾಝಿಲ್ ಕೊಲೆಯಾದ ಜಾಗದಲ್ಲಿ ಕೆಲವೇ ದಿನ ಮುನ್ನ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಹತ್ಯೆಯ ನಾಲ್ವರು ಆರೋಪಿಗಳೂ ಭಾಗಿಯಾಗಿದ್ದರು. ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಶ್ರದ್ಧಾಂಜಲಿ ಸಲ್ಲಿಸದ ಬಜರಂಗದ ದಳದ ಜಿಲ್ಲೆಯ ಕೆಲವು ನಾಯಕರು ಫಾಝಿಲ್ ಹತ್ಯೆ ನಡೆದ ಅರ್ಧ ಗಂಟೆಯಲ್ಲಿ ಪ್ರವೀಣ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇವರನ್ನು ಪೊಲೀಸರು ತನಿಖೆಗೆ ಒಳಪಡಿಸಿಲ್ಲ. ಈ ಹತ್ಯೆ ಪ್ರಕರಣಗಳಲ್ಲಿ ನ್ಯಾಯ ಸಿಗಬೇಕಾದರೆ, ದಕ್ಷ ಈಪಿಎಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.
ಫಾಝಿಲ್ ಕೊಲೆ ನಡೆದು ಒಂದು ವಾರ ಆಯ್ತು. ಕೊಲೆಯಲ್ಲಿ ನೇರ ಭಾಗಿಗಳಾದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಕಾರಣ ಕೋಮು ದ್ವೇಷ ಎಂಬುದನ್ನೂ ಬಹಿರಂಗ ಪಡಿಸಿದ್ದಾರೆ. ಆದರೆ, ಸರಕಾರ ಫಾಝಿಲ್ ನ ಸಂತ್ರಸ್ತ ಕುಟುಂಬಕ್ಕೆ ನಿಯಮ ಪ್ರಕಾರ ನೀಡಬೇಕಾದ ಪರಿಹಾರ ನೀಡಿಲ್ಲ. ಕೋಮು ದ್ವೇಷದಿಂದ ಕೊಲೆಯಾದ ಪ್ರವೀಣ್ ನೆಟ್ಯಾರು ಸಂತ್ರಸ್ತ ಕುಟುಂಬಕ್ಕೆ ಸರಕಾರ ಒದಗಿಸಿದ ಪರಿಹಾರ ಧನ ಅದೇ ಕಾರಣಕ್ಕೆ ಕೊಲೆಯಾದ ಫಾಝಿಲ್ ಹಾಗೂ ಮಸೂದ್ ಕುಟುಂಬಕ್ಕೂ ದೊರಕಬೇಕಾದದ್ದು ಸಹಜ ನ್ಯಾಯ. ಈ ಕುರಿತು ಮುಖ್ಯಮಂತ್ರಿಗಳಾಗಲಿ, ಉಸ್ತುವಾರಿ ಸಚಿವರು, ಶಾಸಕರುಗಳಾಗಲಿ ಮಾತಾಡದೆ ಮೌನ ವಹಿಸಿರುವುದು, ತಾರತಮ್ಯ ಆಚರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರ್ಕಾರದ ಆಡಳಿತ ಯಂತ್ರ, ಶಾಸಕರು ಧರ್ಮಾಧರಿತ ತಾರತಮ್ಯ ನಡೆಸುತ್ತಿದ್ದಾರೆ. ಕೊಲೆಗೀಡಾದ ಯುವಕರ ಪೋಷಕರು ಹಾಗೂ ಜೈಲು ಪಾಲಾದ ಯುವಕರ ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ. ಹಿಂದು, ಮುಸ್ಲಿಂ ಸೌಹಾರ್ದದಿಂದ ಮಾತ್ರ ಇಂತಹ ಅಹಿತಕರ ಘಟನೆ ಮರುಕಳಿಸುವುದನ್ನು ತಡೆಯಬಹುದು ಎಂದರು.
ಫಾಝಿಲ್, ಮಸೂದ್ ಮನೆಗೆ ಶಾಸಕರು ಸಾಂತ್ವನದ ಭೇಟಿ ನೀಡಬೇಕು, ಪರಿಹಾರ ಧನ ಒದಗಿಸಬೇಕು, ಪ್ರವೀಣ್ ನೆಟ್ಯಾರು, ಫಾಝಿಲ್ ಕೊಲೆಯ ಹಿಂದಿನ ಸೂತ್ರಧಾರರ ಬಂಧನವಾಗಬೇಕು ಮತ್ತು ರಹಸ್ಯಗಳು ಬಯಲಾಗಬೇಕು. ಧರ್ಮದ ಹೆಸರಿನಲ್ಲಿ ಬಡ ತಾಯಂದಿರ ಮಕ್ಕಳನ್ನು ಕೊಲೆ ಮಾಡಿಸುವ ರಾಜಕಾರಣದ ವಿರುದ್ಧ ಧ್ವನಿ ಎತ್ತಬೇಕು. ಪರಿಹಾರದ ಧನದ ವಿಚಾರದಲ್ಲಿ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಶಾಸಕರು ಮಾತಾಡದೆ ಮೌನ ವಹಿಸಿದ್ದಾರೆ. ಜಿಲ್ಲಾಡಳಿತ ಕೂಡ ಕರ್ತವ್ಯ ಮರೆತಿದೆ ಎಂದು ತಿಳಿಸಿದ್ದಾರೆ.
ಮೂರು ಕೊಲೆಗಳ ನಂತರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ತುರ್ತು ಸ್ಥಿತಿ ಘೋಷಿಸಲಾಗಿದೆ. ನಾಗರಿಕ ಹಕ್ಕುಗಳು ನಿಷೇಧಿಸಲ್ಪಟ್ಟಿದೆ. ಅಧಿಕಾರಿಗಳು ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದಾರೆ. ಲಾಠಿಗಳು ಎಲ್ಲವನ್ನೂ ನಿಯಂತ್ರಿಸಲು ಹೊರಟಿವೆ. ಜನರ ಸಂಕಷ್ಟ ಆಲಿಸಬೇಕಾದ ಶಾಸಕರುಗಳು ಕಾಣೆಯಾಗಿದ್ದಾರೆ. ನಿಷೇಧಾಜ್ಞೆ ನೆಪದಲ್ಲಿ ಬೀದಿಗಿಳಿದು ನ್ಯಾಯ ಕೇಳಲು ಅವಕಾಶಗಳಿಲ್ಲ. ಆದರೂ, ವಿರೋಧ ಪಕ್ಷಗಳು, ಸಾಮಾಜಿಕ ಸಂಘಟನೆಗಳು, ನಾಗರಿಕರು ಮೌನ ವಹಿಸಬಾರದು.
ಬೀದಿಗಿಳಿಯಲು, ಪ್ರತಿಭಟನೆ ನಡೆಸಲು ಅನುಮತಿ ಇಲ್ಲದಿದ್ದರೂ ಮನೆಮನೆಗಳಲ್ಲಿ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಗಮನ ಸಳೆಯಬೇಕು, ಆಳುವವರ ಮೇಲೆ “ರಾಜಧರ್ಮ”ದ ಒತ್ತಡ ಹೇರಬೇಕು. ಇಲ್ಲದಿದ್ದಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಮತ್ತಷ್ಟು ಅನಾಹುತ, ಮತ್ತಷ್ಟು ಕಣ್ಣೀರಿಗೆ ಸಾಕ್ಷಿಯಾಗಬೇಕಾದೀತು. ಹಿಂದೂ-ಮುಸ್ಲಿಂ ಸೌಹಾರ್ದ ಎತ್ತಿ ಹಿಡಿಯುವ ಸಂದೇಶ ಹರಡಬೇಕು ಎಂದು ಒತ್ತಾಯಿಸಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ.