ಅಳಿಸಲಾರದ ಮುಸ್ಲಿಂ ಶಿಕ್ಷಕಿ ಫಾತೀಮಾ ಶೇಕ್

ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತೀಮಾ ಶೇಕ್ ಅವರ ಜನ್ಮದಿನಾಚರಣೆಯ ಶುಭಾಷಯಗಳು
ಕಳೆದ ವರ್ಷ ಜನವರಿ 9 ರಂದು ಪತ್ರಕರ್ತ ಪ್ರೊ. ದಿಲಿಪ್ ಸಿ. ಮಂಡಲ್ ಪಾತೀಮಾ ಶೇಕ್ ಒಬ್ಬ ಕಾಲ್ಪನಿಕ ಮಹಿಳೆ ಎಂದು ಟ್ವೀಟ್ ಮಾಡಿದರು. ಇದು ಚರ್ಚೆಯನ್ನು ಹುಟ್ಟುಹಾಕಿತು. ನಂತರ ಅವರು 2006 ರಲ್ಲಿ ಫಾತೀಮಾ ಶೇಕ್ ಪಾತ್ರ ಸೃಷ್ಟಿಸಿದ್ದು ನಾನೇ ಎಂದಾಗ, ಇದಕ್ಕಿಂತ ಮೊದಲ ದಾಖಲೆಗಳನ್ನು ಆಧರಿಸಿ ಫಾತೀಮಾ ಅವರ ಮೂಲದ ಚರ್ಚೆಯನ್ನು ಮುನ್ನಲೆಗೆ ತರಲಾಯಿತು. ನಂತರದ ದಿಲೀಪ್ ಮಂಡಲ್ ಹೇಳಿಕೆಗಳ ಗೊಂದಲವು ಇದೊಂದು ರಾಜಕೀಯ ಪ್ರೇರಿತ ಎನ್ನುವಂತಾಯ್ತು. ಹೀಗೆ ಫಾತೀಮಾ ಶೇಕ್ ಅವರನ್ನು ಚರಿತ್ರೆಯಿಂದಲೇ ಅಳಿಸಲೆತ್ನಿಸಿದರೂ ಮತ್ತೆ ಚಿಗುರೊಡೆಯುತ್ತಿದ್ದಾರೆ.

– ಅರುಣ್ ಜೋಳದಕೂಡ್ಲಿಗಿ

ಕಳೆದ ವರ್ಷ ಜನವರಿ 9 ರಂದು ಪತ್ರಕರ್ತ ಪ್ರೊ. ದಿಲಿಪ್ ಸಿ. ಮಂಡಲ್ ಪಾತೀಮಾ ಶೇಕ್ ಒಬ್ಬ ಕಾಲ್ಪನಿಕ ಮಹಿಳೆ ಎಂದು ಟ್ವೀಟ್ ಮಾಡಿದರು. ಇದು ಚರ್ಚೆಯನ್ನು ಹುಟ್ಟುಹಾಕಿತು. ನಂತರ ಅವರು 2006 ರಲ್ಲಿ ಫಾತೀಮಾ ಶೇಕ್ ಪಾತ್ರ ಸೃಷ್ಟಿಸಿದ್ದು ನಾನೇ ಎಂದಾಗ, ಇದಕ್ಕಿಂತ ಮೊದಲ ದಾಖಲೆಗಳನ್ನು ಆಧರಿಸಿ ಫಾತೀಮಾ ಅವರ ಮೂಲದ ಚರ್ಚೆಯನ್ನು ಮುನ್ನಲೆಗೆ ತರಲಾಯಿತು. ನಂತರದ ದಿಲೀಪ್ ಮಂಡಲ್ ಹೇಳಿಕೆಗಳ ಗೊಂದಲವು ಇದೊಂದು ರಾಜಕೀಯ ಪ್ರೇರಿತ ಎನ್ನುವಂತಾಯ್ತು. ಹೀಗೆ ಫಾತೀಮಾ ಶೇಕ್ ಅವರನ್ನು ಚರಿತ್ರೆಯಿಂದಲೇ ಅಳಿಸಲೆತ್ನಿಸಿದರೂ ಮತ್ತೆ ಚಿಗುರೊಡೆಯುತ್ತಿದ್ದಾರೆ.

ಸೂಸಿ ತಾರು ಮತ್ತು ಲಲಿತ ಕೆ. ಅವರು 1991 ರಲ್ಲಿ ಸಂಪಾದಿಸಿದ `ವುಮನ್ ರೈಟಿಂಗ್ ಇನ್ ಇಂಡಿಯಾ’ ಮೊದಲ ಸಂಪುಟದಲ್ಲಿ ಸಾವಿತ್ರಿಬಾಯಿ 1856 ರಲ್ಲಿ ಬರೆದ ಪತ್ರವೊಂದು ಪ್ರಕಟವಾಗುತ್ತದೆ. ಈ ಪತ್ರದಲ್ಲಿ ಫಾತೀಮಾ ಶೇಕ್ ಅವರ ಉಲ್ಲೇಖ ಗಮನ ಸೆಳೆಯುತ್ತದೆ. ನಂತರ ಫಾತೀಮಾಳ ಬಗ್ಗೆ ಕುತೂಹಲ ಮೂಡುತ್ತದೆ. ಮೊದಲ ಬಾರಿಗೆ ಫಾತೀಮ-ಸಾವಿತ್ರಿಬಾ ಫುಲೆ ಇರುವ ಒಂದು ಹಳೆಯ ಕಪ್ಪುಬಿಳುಪಿನ ಚಿತ್ರವನ್ನು ಬ್ರಿಟಿಷ್ ಸರಕಾರದಲ್ಲಿ ಅಧಿಕಾರಿಯಾಗಿದ್ದ ಲೋಖಂಡೆ ತನ್ನ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇದನ್ನು ಗುರುತಿಸಿ 1924 ರಲ್ಲಿ ಆರ್.ಎನ್.ಲಾಡ್ ಎನ್ನುವವರು ಸಂಪಾದಕರಾಗಿದ್ದ `ಮಜೂರ್’ಎನ್ನುವ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ. ಮುಂದೆ ಡಾ.ಎಂ.ಜಿ.ಮಾಲಿ ಅವರ `ಸಾವಿತ್ರಿಬಾ ಪುಲೆ ಸಮಗ್ರ ವಾಜ್ಮಯ’ ಎನ್ನುವ ಕೃತಿಯಲ್ಲಿ ಈ ಫೋಟೋ ಅಚ್ಚಾಗುತ್ತದೆ. ಇದನ್ನು ಆಧರಿಸಿ 2020 ರಲ್ಲಿ ಬಿಬಿಸಿಯ ಹಿಂದಿ ಚಾನಲ್ ನಲ್ಲಿ ಪತ್ರಕರ್ತ ನಾಜಿರುದ್ದೀನ್ `ಫಾತೀಮಾ ಶೇಕ್-ಸಾವಿತ್ರಿಬಾಯಿ ಕೆ ಸಾತ್ ವಂಚಿತೋ ಕೋ ಶಿಕ್ಷಿತ್ ಕರ್ನೆ ವಾಲಿ ಮಹಿಳಾ’ ಎಂಬ ಕಾರ್ಯಕ್ರಮ ಪ್ರಸಾರ ಮಾಡಿ ಈ ಫೋಟೋದ ಚಾರಿತ್ರಿಕತೆ ಕುರಿತು ಚರ್ಚಿಸುತ್ತಾರೆ.

ಇದನ್ನೂ ಓದಿ: ಕಾಫಿ ಫಾರ್ಮರ್ಸ್ ಫೆಡರೇಷನ್ ರಾಷ್ಟ್ರಾಧ್ಯಕ್ಷರಾಗಿ ಎಚ್.ಆರ್. ನವೀನ್ ಕುಮಾರ್ ಆಯ್ಕೆ

ಈ ಎಲ್ಲಾ ಸಂಗತಿಗಳ ಎಳೆಗಳನ್ನು ಪೋಣಿಸಿ ಜೋತಿಬಾ ಫುಲೆ ಮತ್ತು ಸಾವಿತ್ರಿಭಾಯಿ ಅವರ ಜೀವನಕಥನವನ್ನು ತಾಳೆ ನೋಡಿ ಫಾತೀಮಾ ಶೇಕ್ ಬಗ್ಗೆ ಸಾಧ್ಯವಿರಬಹುದಾದ ಸಂಗತಿಗಳು ಮುನ್ನಲೆಗೆ ಬರುತ್ತವೆ. ಈ ಶೋಧವು ಮರಾಠಿ ಹಿಂದಿ ತೆಲುಗು ಸಂಶೋಧನೆಗಳಲ್ಲಿ ಕಂಡು ಬರುತ್ತದೆ. ಹಿಂದಿಯ ಹಿರಿಯ ಲೇಖಕ ಮೋಹನ್ ದಾಸ್ ನೈಮಿಶ್ಯಾಮ್ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿಯಾಗಿ ಫಾತೀಮಾ ಶೇಕ್ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ತೆಲುಗಿನಲ್ಲಿ ಸೈಯದ್ ನಾಜೀರ್ ಅಹಮದ್ ಅವರ `ಫಾತೀಮಾ ಶೇಕ್’ ಕೃತಿಯಲ್ಲಿಯೂ ಈ ಪ್ರಯತ್ನ ಮುಂದುವರಿದಿದೆ. ನಾಜೀರ್ ಅಹಮದ್ ಅವರ ಈ ಕೃತಿಯನ್ನು ಕಾ.ಹು.ಚಾನ್ ಪಾಶ ಕನ್ನಡಕ್ಕೆ ತಂದಿದ್ದಾರೆ.

ಕೆಳಜಾತಿಗಳಿಗೆ ಅಕ್ಷರ ಕಲಿಸುವುದು ಧರ್ಮವಿರೋಧಿ ಎಂದು ಮೇಲ್ಜಾತಿಗಳು ಗದ್ದಲ ಎಬ್ಬಿಸಿದಾಗ, ಗೋವಿಂದರಾವ್ ಮಗ ಜೋತಿಬಾ, ಸೊಸೆ ಸಾವಿತ್ರಿಬಾಯಿ ಅವರನ್ನು ಮನೆಯಿಂದ ಹೊರಹಾಕುತ್ತಾರೆ. ಗೋವಿಂದರಾವ್ ತಂಗಿ ಸುಗುಣಬಾಯಿ ಪರ್ಷಿಯನ್ ಶಿಕ್ಷಕ ಮುನ್ಷಿ ಗಫರ್ ಖಾನ್ ಅವರ ಬಳಿ ವಿಷಯ ತಿಳಿಸುತ್ತಾರೆ. ಗಫರ್ ಖಾನ್ ಫುಲೆ ದಂಪತಿಗಳನ್ನು ಉಸ್ಮಾನ್ ಶೇಕ್ ಮನೆಗೆ ಕರೆದೊಯ್ಯುತ್ತಾರೆ; ನಡೆದ ಘಟನೆಯನ್ನು ಕೇಳಿ ಉಸ್ಮಾನ್ ಶೇಕ್ ತನ್ನ ಮನೆಯನ್ನು ಬಿಟ್ಟುಕೊಡುತ್ತಾರೆ. ಮನೆ ಒಳಗಿಂದ ಒಂದು ಹುಡುಗಿ ಬಂದು ಸಾವಿತ್ರಿಬಾಯಿಯನ್ನು ಪರಿಚಯ ಮಾಡಿಕೊಳ್ಳುತ್ತಾಳೆ. ಆ ಹುಡುಗಿಯೇ ಉಸ್ಮಾನ್ ಶೇಕ್ ಅವರ ತಂಗಿ ಫಾತೀಮಾ ಶೇಕ್. 1831 ರ ಜನವರಿ 09 ರಂದು ಫಾತೀಮಾ ಪುಣೆಯಲ್ಲಿ ಜನಿಸುತ್ತಾರೆ. ಅಣ್ಣ ಉಸ್ಮಾನ್ ಶೇಕ್ ಜತೆ ಫುಣೆಯ ಭಿಡೆವಾಡೆಯಲ್ಲಿ ಬೆಳೆಯುತ್ತಾರೆ. ಉಸ್ಮಾನ್ ತಂಗಿಗೆ ಉರ್ದು ಮತ್ತು ಮರಾಠಿ ಶಿಕ್ಷಣ ಕೊಡಿಸುತ್ತಾರೆ. ಅಮೇರಿಕನ್ ಮಿಷನರಿ ಸಿಂಥಿಯಾ ಫರಾರ್ ನಡೆಸುತ್ತಿದ್ದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸಾವಿತ್ರಿಬಾಯಿ ಮತ್ತು ಫಾತೀಮಾ ತರಬೇತಿ ಪಡೆಯುತ್ತಾರೆ. ಹಾಗಾಗಿ ಫಾತೀಮಾ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ.

ಭಾರತದಲ್ಲಿ ಮುಸ್ಲಿಂ ಚಿಂತಕರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸಿದ ಸರ್ ಸೈಯದ್ ಅಹ್ಮದ್ ಖಾನ್ ಮೂಲಕ ಆಧುನಿಕ ಭಾರತದ ಮುಸ್ಲಿಂ ಶಿಕ್ಷಣವನ್ನು ಗುರುತಿಸುತ್ತಿದ್ದರು. ಇದೀಗ ಈ ಚರಿತ್ರೆ 1848 ರ ಫಾತೀಮಾ ಶೇಕ್ ತನಕ ಹಿಂದಕ್ಕೆ ಎಳೆಯುತ್ತದೆ. 2014 ರಲ್ಲಿ ಬಾಲ ಭಾರತಿ ಮಹಾರಾಷ್ಟ್ರ ಸ್ಟೇಟ್ ಬ್ಯೂರೋದ ಶಾಲೆಗಳ ಉರ್ದು ಪಠ್ಯಪುಸ್ತಕದಲ್ಲಿಯೂ, 2022 ರಲ್ಲಿ ಆಂಧ್ರದ 08 ನೇ ತರಗತಿಯ ಪಠ್ಯದಲ್ಲಿಯೂ ಫಾತೀಮಾ ಶೇಕ್ ಪರಿಚಯ ಸೇರಿಸಲಾಗಿದೆ. 2022 ರಲ್ಲಿ ಫಾತಿಮಾಳ 191 ನೇ ಜನ್ಮದಿನಾಚರಣೆಗೆ ಗೂಗಲ್ ಡೂಡಲ್ ಮೂಲಕ ಗೌರವಿಸಿತು. ದಲಿತ-ದಮನಿತ-ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರಿಗೆ ಮೊದಲಬಾರಿಗೆ ಸಾವಿತ್ರಿಬಾ ಫುಲೆ ಅವರ ಜತೆಗೆ ಶಿಕ್ಷಕಿಯಾಗಿ ಶಿಕ್ಷಣ ಕೊಟ್ಟ ಫಾತೀಮಾ ಮರೆಯಬಾರದ ಶಿಕ್ಷಕಿ.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಲಾಯರ್ ಎಂಟ್ರಿಯಿಂದ ಸಿಕ್ಕ ಸುಳಿವುಗಳೇನು? Janashakthi Media

Donate Janashakthi Media

Leave a Reply

Your email address will not be published. Required fields are marked *