ಮೈಸೂರು : ಮೈಸೂರಿನಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಮತ್ತೊಂದು ತಿರುವು ಕಂಡು ಬಂದಿದೆ. ತನ್ನ ಸಾವಿಗೆ ತಂದೆ ತಾಯಿ ಚಿಕ್ಕಮ್ಮ ಚಿಕ್ಕಪ್ಪ ಕಾರಣ. ಆದರೆ ಈ ಕೊಲೆಯ ಕೇಸನ್ನು ನಿನ್ನಮೇಲೆ ಹಾಕಲು ಯತ್ನಿಸುತ್ತಿದ್ದಾರೆ, ಹುಷಾರಾಗಿರು ಎಂದು ಪ್ರಿಯಕರನೊಂದಿಗೆ ಮಾತನಾಡಿರುವ ರೆಕಾರ್ಡಿಂಗ್ ಮತ್ತು ಡೆತ್ ನೋಟ್ ಬರೆದಿಟ್ಟಿರುವುದು ಈಗ ಬೆಳಕಿಗೆ ಬಂದಿದೆ.
ಮಗಳು ಅನ್ಯಜಾತಿ ಹುಡುಗನನ್ನು ಪ್ರೇಮಿಸುತ್ತಿದ್ದಾಳೆ ಎಂದು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಕತ್ತಿಸುಕಿ ಕೊಂದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿತ್ತು. ಪೋಲಿಸರು ಪ್ರಕರಣ ದಾಖಲಿಸಿದ್ದರು ಇದೀಗ ಅದೇ ಪ್ರಕರಣದಲ್ಲಿ ಹಲವು ಮಾಹಿತಿಗಳು ಬಹಿರಂಗ ಗೊಂಡಿವೆ.
ನಾನು ಸತ್ತರೆ ಅದಕ್ಕೆ ನಮ್ಮ ಅಪ್ಪ-ಅಮ್ಮನೇ ಕಾರಣ’. ‘ನನ್ನನ್ನು ಅಪಹರಣ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ’ ಎಂದು ಯುವತಿ, ಯುವಕನಿಗೆ ತಿಳಿಸಿದ್ದಾಳೆ. ನನ್ನನ್ನು ತಂದೆ, ತಾಯಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಬಾಲ ಮಂದಿರದಲ್ಲಿ ನಿನ್ನ ಇಷ್ಟದಂತೆ ಇರುವಂತೆ ಹೇಳಿದ್ದಾರೆ. ನನ್ನನ್ನು ಪಾಂಡವಪುರದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದ್ದ ಯುವತಿ ನಾನು ಮಾತಾಡುವುದನ್ನು ರೆಕಾರ್ಡ್ ಮಾಡು ಎಂದು ಯುವಕನಿಗೆ ಹೇಳಿರುವುದರಿಂದ ಈ ಮೂಲಕ ಕೆಲವೊಂದು ಸಾಕ್ಷ್ಯಗಳು ಸುಳಿವು ದೊರೆತಿದೆ.
ನಾನು ಸತ್ತರೆ ಅದನ್ನು ನಿನ್ನ ಮೇಲೆ ಹಾಕಲು ಪ್ಲ್ಯಾನ್ ಮಾಡುತ್ತಿದ್ದಾರೆ. ನನ್ನ ಈ ಆಡಿಯೋವನ್ನ ಪಿರಿಯಾಪಟ್ಟಣ ಪೊಲೀಸರಿಗೆ ಕೊಡು ಅಂತ ಶಾಲಿನಿ ಪ್ರಿಯಕರ ಮಂಜುನಾಥ್ಗೆ ಹೇಳಿದ್ದಾಳೆ. ಇನ್ನು ಮಂಜುನಾಥ್ ನೀನು ಬಾಲಮಂದಿರದಿಂದ ಏಕೆ ಬಂದೆ? ಈ ವೇಳೆ ನಿನಗೆ ಏನೇ ಆದರೂ ನನಗೆ ಕಾಲ್ ಮಾಡು. 18 ವರ್ಷ ಆಗುವವರೆಗೂ ಹುಷಾರಾಗಿರು ಅಂತ ಮಂಜುನಾಥ್ ಶಾಲಿನಿಗೆ ಫೋನ್ನಲ್ಲಿ ಹೇಳಿದ್ದ.
ಪೊಲೀಸರಿಗೆ ಮಾಹಿತಿ ನೀಡಿರುವ ಮಂಜುನಾಥ್, ನನ್ನನ್ನು ಕೊಲೆ ಮಾಡಿಸಲು ಶಾಲಿನಿ ತಂದೆ 2 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾರೆ. ಸಾವಿಗೂ ಮುನ್ನ ಈ ಬಗ್ಗೆ ನನಗೆ ಶಾಲಿನಿ ಮಾಹಿತಿ ನೀಡಿದ್ದಳು. ನನ್ನ ವಿರುದ್ಧ ಮೂರು ಬಾರಿ ಸುಳ್ಳು ದೂರು ದಾಖಲಿಸಿದ್ದಾರೆ. ಕಳೆದ 4 ತಿಂಗಳಿಂದ ನಾನು ಶಾಲಿನಿಯನ್ನು ಪ್ರೀತಿಸುತ್ತಿದೆ. 18 ವರ್ಷದ ಆದ ಬಳಿಕ ಮದುವೆಯಾಗುವ ಭರವಸೆ ನೀಡಿದ್ದೆ. ಅನ್ಯಜಾತಿ ಎಂಬ ಕಾರಣಕ್ಕೆ ಶಾಲಿನಿ ತಂದೆ ಮದುವೆಗೆ ಒಪ್ಪಿರಲಿಲ್ಲ. ನನಗೂ ಸಹ ಜೀವ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾರೆ.
ಪಿರಿಯಾಪಟ್ಟಣ ಪೊಲೀಸರಿಗೆ ಶಾಲಿನಿ ಸುದೀರ್ಘ ಪತ್ರ ಬರೆದಿದ್ದಾಳೆ. ಜಾತಿ ಪಿಡುಗಿಗೆ ನಾನು ಬಲಿಯಾಗುತ್ತಿದ್ದೇನೆ. ನನ್ನ ಸಾವಿಗೆ ಯಾರಿಗೂ ಶಿಕ್ಷೆ ಕೊಡಬೇಡಿ. ನನ್ನ ತಂದೆ- ತಾಯಿಯನ್ನು ಕರೆದು ಬುದ್ದಿ ಹೇಳಿ. ನಾನು ಅನ್ಯ ಜಾತಿಯವನನ್ನು ಪ್ರೀತಿಸಿದೆ ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದರು. ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನನ್ನ ತಂದೆ ತಾಯಿಗೆ ನನಗಿಂತ ಜಾತಿಯೇ ಮುಖ್ಯ. ಈ ಪತ್ರ ನಾನೇ ಸ್ವಯಂಪ್ರೇರಿತವಾಗಿ ಬರೆದಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.