ತಂದೆಗೆ ಇಷ್ಟವಿಲ್ಲದ ಕ್ರಿಕೆಟ್; ಕ್ರಿಕೆಟ್’ಗಾಗಿ ಪಡಬಾರದ ಕಷ್ಟ ಪಟ್ಟ ಮಗ

ತಂದೆ-ಅಣ್ಣನ ಸಾವು. ಬೆಂಕಿಯ ಬಲೆಗೆ ಬಿದ್ದವನು, ಎಡ್ಜ್’ಬಾಸ್ಟನ್’ನಲ್ಲಿ ಭಾರತಕ್ಕೆ ಟೆಸ್ಟ್ ಮ್ಯಾಚ್ ಗೆಲ್ಲಿಸಿದ ಕಥೆ!
ಬಿಹಾರದ ಸಾಸರಾಮ್’ನ ಬಡ್ಡಿ ಎಂಬ ಹಳ್ಳಿಯ ಹುಡುಗನಿಗೆ ವಿಪರೀತ ಕ್ರಿಕೆಟ್ ಹುಚ್ಚು. ‘ಕ್ರಿಕೆಟ್’ ಶಬ್ದ ಕಿವಿಗೆ ಬಿದ್ದರೆ ಸಾಕು, ಉರಿದು ಬೀಳುತ್ತಿದ್ದ ತಂದೆ. ‘’ಕ್ರಿಕೆಟ್ ಆಡಿ ಯಾವ ಊರು ಉದ್ಧಾರ ಮಾಡಬೇಕು ನೀನು..? ನೆಟ್ಟಗೆ ಒಂದು ಕೆಲಸ ಹುಡುಕೊಂಡು ಜೀವನ ನೋಡಿಕೋ’’ ಎಂದು ಕಟ್ಟಪ್ಪಣೆ ಮಾಡಿದ ತಂದೆ, ಅವತ್ತು ಮಗನ ಮುಂದೆ ಇಟ್ಟಿದ್ದ ಆಯ್ಕೆ ಎರಡೇ. ಕ್ರಿಕೆಟ್ ಅಥವಾ ಜೀವನ. ತಂದೆಯ ವಿರೋಧ ಕಟ್ಟಿಕೊಂಡು ಕ್ರಿಕೆಟ್’ನಲ್ಲೇ ಜೀವನ ಕಟ್ಟಿಕೊಳ್ಳುವ ನಿರ್ಧಾರ ಮಾಡಿ ಬಿಟ್ಟ ಮಗ.

-ಸುದರ್ಶನ್

ಬಡ್ಡಿಯಿಂದ ಹೊರಟ ಆಕಾಶದೀಪ ಬಂದು ತಲುಪಿದ್ದು ಬಂಗಾಳದ ದುರ್ಗಾಪುರಕ್ಕೆ. ಅಲ್ಲಿ ಒಂದು ಕೆಲಸ ಹುಡುಕಿಕೊಂಡ. ಕೆಲಸದ ಮಧ್ಯೆ ಲೋಕಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಅಭ್ಯಾಸ. ಉದ್ಯೋಗ, ಕ್ರಿಕೆಟ್ ಮತ್ತು ಜೀವನ. ಎಲ್ಲವೂ ಸರಿದಾರಿಯಲ್ಲೇ ಸಾಗುತ್ತಿತ್ತು ಎನ್ನುವಾಗಲೇ ಆಕಾಶದೀಪನ ಜೀವನದಲ್ಲಿ ಬರಸಿಡಿಲೊಂದು ಅಪ್ಪಳಿಸಿ ಬಿಟ್ಟಿತು.

ಪಾರ್ಶ್ವವಾಯು ಸಮಸ್ಯೆಗೊಳಗಾಗಿ ಹಾಸಿಗೆ ಹಿಡಿದ ತಂದೆ ಮತ್ತೆ ಮೇಲೇಳಲೇ ಅಲ್ಲ. ಅಪ್ಪ ಉಸಿರು ಚೆಲ್ಲಿದ ಎರಡೇ ತಿಂಗಳುಗಳ ಅಂತರದಲ್ಲಿ ಅಣ್ಣನ ಸಾವು. ಜೀವನ ತುಂಬಾ ಪರೀಕ್ಷೆಗೊಡ್ಡುತ್ತಿದೆ ಎಂದರೆ ಏನನ್ನೋ ಕಲಿಸುವ, ಕಲಿಯುವ ಅವಕಾಶ ಕೊಡುತ್ತಿದೆ ಎಂದರ್ಥ.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ : ನಿಷ್ಪಕ್ಷಪಾತ ತನಿಖೆ, ದೂರುದಾರ ಹಾಗು ನ್ಯಾಯವಾದಿಗಳಿಗೆ ರಕ್ಷಣೆ ಒದಗಿಸಲು ಸಿಪಿಐಎಂ ಆಗ್ರಹ

ಆಕಾಶದೀಪನ ತಲೆಯ ಮೇಲೆ ಆಕಾಶವೇ ಕುಸಿದು ಬಿದ್ದಂತಾಗಿತ್ತು. ಮನೆಯಲ್ಲಿ ಒಂದು ರೂಪಾಯಿ ದುಡ್ಡಿಲ್ಲ.., ಒಬ್ಬಂಟಿ ತಾಯಿ. ಕ್ರಿಕೆಟ್ ಕನಸನ್ನು ಪಕ್ಕಕ್ಕಿಡಲೇಬೇಕಾದ ಪರಿಸ್ಥಿತಿ. ಒಂದಲ್ಲ, ಎರಡಲ್ಲ.., ಮೂರು ವರ್ಷ ಕ್ರಿಕೆಟ್’ನಿಂದ ದೂರ ಉಳಿಯಲೇಬೇಕಾದ ಅನಿವಾರ್ಯತೆ ಎದುರಾಯಿತು.

ಸೂತ್ರವಿಲ್ಲದ ಗಾಳಿಪಟದಂತಾಗಿದ್ದ ಬದುಕನ್ನು ಮರಳಿ ಕಟ್ಟಲು ನಿಂತ ಆಕಾಶದೀಪ. ಆದರೆ ಜೀವನದ ಗುರಿ ಬೇರೆಯೇ ಇತ್ತು. ಕ್ರಿಕೆಟ್ ಆಡಬೇಕು, ಭಾರತ ಪರ ಟೆಸ್ಟ್ ಕ್ಯಾಪ್ ಧರಿಸಬೇಕೆಂಬ ಕನಸು ಕಂಡವ ಅಷ್ಟು ಸುಲಭವಾಗಿ ಆ ಕನಸನ್ನು ಕೈ ಬಿಡಲು ಹೇಗೆ ಸಾಧ್ಯ..?

ಜೀವನ ಒಂದು ಹಂತಕ್ಕೆ ಸುಧಾರಿಸಿತು ಎನ್ನುವಷ್ಟರಲ್ಲಿ ಮತ್ತೆ ದುರ್ಗಾಪುರಕ್ಕೆ ಬಂದವನೇ ಅಲ್ಲಿಂದ ನೇರವಾಗಿ ಬಂದಿಳಿದಿದ್ದು ಕೋಲ್ಕತಾಗೆ. ಉತ್ತರ ಪ್ರದೇಶದ ಅಮ್ರೋಹಾದಿಂದ ಕ್ರಿಕೆಟ್ ಆಡಲೆಂದೇ ಕೋಲ್ಕತಾಗೆ ಬಂದಿದ್ದ ಮೊಹಮ್ಮದ್ ಶಮಿ. ಆಕಾಶದೀಪನದ್ದೂ ಅದೇ ಕಥೆ.

ಆದರೆ ಕೋಲ್ಕತಾದ ಬದುಕು ಮತ್ತಷ್ಟು ದುಸ್ತರವಾಯಿತು. ಗುರುತು ಪರಿಚಯವಿಲ್ಲದ ಊರು. ಕೈಯಲ್ಲಿ ದುಡ್ಡಿಲ್ಲ. ತುಂಬಾ ಕಷ್ಟ ಪಟ್ಟ. ‘’ಅದೇನಾದರೂ ಸರಿ, ವಾಪಸ್ ಹೋಗುವ ಮಾತೇ ಇಲ್ಲ., ಇಲ್ಲೇ ಕ್ರಿಕೆಟ್ ಬದುಕು ಕಟ್ಟಿಕೊಳ್ಳುವೆ’’ ಎಂದು ದೃಢ ನಿರ್ಧಾರ ಮಾಡಿ ಬಿಟ್ಟಿದ್ದ.

ಕೋಲ್ಕತಾದಲ್ಲಿ ಸಣ್ಣ ರೂಮ್ ಒಂದನ್ನು ಬಾಡಿಗೆಗೆ ಪಡೆದು, ಅಲ್ಲೇ ಕೆಲಸ ಮಾಡುತ್ತಾ, ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಾ, ಅಲ್ಲಿ ಒಂದಷ್ಟು ದುಡ್ಡು ಸಂಪಾದಿಸುತ್ತಾ ಜೀವನದ ಅತೀ ದೊಡ್ಡ ಕನಸನ್ನು ನನಸಾಗಿಸಿಕೊಳ್ಳಲು ನಿಂತು ಬಿಟ್ಟ ಆಕಾಶದೀಪ.

ಹಗಲೂ ರಾತ್ರಿ ಪಟ್ಟ ಶ್ರಮ ಕೈ ಹಿಡಿಯಿತು. ಆಕಾಶದೀಪನಿಗೆ ಬಂಗಾಳ Under-23 ತಂಡದ ಬಾಗಿಲು ತೆರೆಯಿತು. ಅಲ್ಲಿಂದ ಬಂಗಾಳ ರಣಜಿ ತಂಡ. ಒಂದೆರಡು ಒಳ್ಳೆಯ ಡೊಮೆಸ್ಟಿಕ್ ಸೀಸನ್’ಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಕಾಂಟ್ರ್ಯಾಕ್ಟ್.

ಕಳೆದ ವರ್ಷ ಧೋನಿ ನಾಡು ರಾಂಚಿಯಲ್ಲಿ ತಾಯಿಯ ಮುಂದೆ ಇದೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ debut. ಒಂದೇ ಒಂದು ಅವಕಾಶಕ್ಕಾಗಿ ಕಾದು ಕುಳಿತಿದ್ದವನು ಆ ಅವಕಾಶ ಸಿಗುತ್ತಿದ್ದಂತೆ ಹಸಿದ ಹೆಬ್ಬುಲಿಯಾಗಿಬಿಟ್ಟ.

ಈಗ ಎಡ್ಜ್’ಬಾಸ್ಟನ್ ಟೆಸ್ಟ್’ನಲ್ಲಿ 10 ವಿಕೆಟ್’ಗಳನ್ನು ಪಡೆದು ಆ ಮೈದಾನದಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಗೆಲುವು ತಂದು ಕೊಟ್ಟಿದ್ದಾನೆ. ಆ 10 ವಿಕೆಟ್’ಗಳನ್ನು ಕ್ಯಾನ್ಸರ್’ನಿಂದ ಬಳಲುತ್ತಿರುವ ಸಹೋದರಿಗೆ ಅರ್ಪಿಸಿದ್ದಾನೆ.

ಇದನ್ನೂ ನೋಡಿ: ಉದ್ಯೋಗ ಸಂಬಂಧಿತ ಪ್ರೋತ್ಸಾಹ ಯೋಜನೆ(ELI) ಎನ್ನುವ ವಂಚನೆಯ ಆಳ‌ ಅಗಲ.. Janashakthi Media

Donate Janashakthi Media

Leave a Reply

Your email address will not be published. Required fields are marked *