ಫ್ಯಾಸಿಸ್ಟರನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕೆಂಬ ಒಕ್ಕೊರಲಿನ ಕೂಗು

ಫ್ಯಾಸಿಸ್ಟ್ ಮಾದರಿಯ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಬೇಕು. ಸಾಮಾಜಿಕ ನ್ಯಾಯ ಸ್ಥಾಪಿಸಲು; ಪ್ರಾದೇಶಿಕ ಅಸ್ಮಿತೆ, ಸ್ವಾಯತ್ತತೆಗಳನ್ನು ಕಾಪಾಡುವ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಲು; ಸೌಹಾರ್ದ ಪರಂಪರೆಯ ಮೇಲೆ ದಾಳಿಯನ್ನು ಹಿಮ್ಮೆಟ್ಟಿಸಲು; ದಲಿತರ, ಮಹಿಳೆಯರ, ಮುಸ್ಲಿಮರ ಸಂಕಟಗಳಿಗೆ ಕಿವಿಯಾಗುವ ಸಾಂತ್ವನ ಕೊಡುವ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಲು ಬಿಜೆಪಿ ಸೋಲು ಅಗತ್ಯ. ಈ ಸಂದೇಶವನ್ನು ಕರ್ನಾಟಕದ ತುಂಬಾ ತೆಗೆದುಕೊಂಡು ಹೋಗಿ ಜನತೆಯನ್ನು ಎಚ್ಚರಿಸಬೇಕು. ಇದು ‘ಸಾರ್ವತ್ರಿಕ ಚುನಾವಣೆಯಲ್ಲಿ ಸಾರ್ವಜನಿಕರ ಹೊಣೆ’ ಎಂಬುದು ರಾಜ್ಯ ಮಟ್ಟದ ಚಿಂತನ ಗೋಷ್ಠಿಯಲ್ಲಿ ಮೂಡಿಬಂದ ಒಕ್ಕೊರಲಿನ ಕೂಗು. ಇದನ್ನು ‘ಸೌಹಾರ್ದ ಕರ್ನಾಟಕ’ ಮತ್ತು ಇತರ ಎಡ-ಪ್ರಜಾಸತ್ತಾತ್ಮಕ ಸಂಘಟನೆಗಳು ಸಂಘಟಿಸಿದ್ದವು.

‘ಸಾಮಾಜಿಕ ನ್ಯಾಯದ ಆಶಯ’ದ ಬಗ್ಗೆ ಡಾ.ಬಂಜಗೆರೆ ಜಯಪ್ರಕಾಶ್, ಸಾಂಸ್ಕೃತಿಕ ರಾಜಕಾರಣದ ಕುರಿತು ಪ್ರಸನ್ನ, ‘ಮಹಿಳೆಯ ಸಮಕಾಲೀನ ಸವಾಲುಗಳು’ ಬಗ್ಗೆ ಡಾ.ಮೀನಾಕ್ಷಿ ಬಾಳಿ, ‘ಶ್ರಮಿಕರ ಸಂಕಟಗಳ ಕುರಿತು ಕೆ.ಎನ್.ಉಮೇಶ್, ಒಕ್ಕೂಟ ವ್ಯವಸ್ಥೆ ಬಗ್ಗೆ ಡಾ.ಟಿ.ಆರ್.ಚಂದ್ರಶೇಖರ್, ‘ಸೌಹಾರ್ದತೆಯ ಸಂರಕ್ಷಣೆ’ ಬಗ್ಗೆ ಬಿ.ಎಂ.ಹನೀಫ್ ವಿಷಯ ಮಂಡನೆ ಮಾಡಿ ಮಾತನಾಡಿದರು.

ಡಾ.ಕೆ.ಷರೀಫಾ ಸಾರ್ವಜನಿಕರಿಗೆ ಮನವಿಯನ್ನು ಮಂಡಿಸಿದರು. ಸಿಪಿಐ(ಎಂ) ಕಾರ್ಯದರ್ಶಿ ಯು.ಬಸವರಾಜ್, ದಲಿತ ಮುಖಂಡ ಮತ್ತು ಆರ್.ಪಿ.ಐ ನಾಯಕ ಮೋಹನರಾಜ್ ಮತ್ತು ಎ.ಐ.ಸಿ.ಸಿ.ಟಿ.ಯು ನಾಯಕ ಮಣಿ ಕ್ರಿಯಾತ್ಮಕ ಮಾತುಗಳನ್ನು ಆಡಿದರು. ಡಾ.ಕೆ.ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.

ಮನವಿಯ ಆಯ್ದ ಭಾಗ ಮತ್ತು ವಿಚಾರ ಮಂಡಕರ ಗಮನ ಸೆಳೆದ ಮಾತುಗಳು ಇಲ್ಲಿವೆ

ಗಮನ ಸೆಳೆದ ಮಾತುಗಳು

ಫ್ಯಾಸಿಸ್ಟ್ ರು ಅಧಿಕಾರಕ್ಕೇರದಂತೆ ತಡೆಯುವ ಹೊಣೆ ನಾಡಿನ ಒಳಿತು ಬಯಸುವ ಸಾರ್ವಜನಿಕರದ್ದು. ಎರಡು ಅಲುಗಿನ ಕತ್ತಿಗಳನ್ನು ಹೊಂದಿದವರ‌ ಸರಕಾರೀ ಅಧಿಕಾರವನ್ನು ಬಳಸುತ್ತಿರುವ ಕೋಮುವಾದಿ ಧ್ರುವೀಕರಣದ ವಿರುದ್ಧ ನಡೆಯುವ ಹೋರಾಟವಿದು. ಶತಮಾನಗಳಿಂದ ಕಟ್ಟಿದ ಸೌಹಾರ್ದ ಪರಂಪರೆಗೆ ಧಕ್ಕೆ ತರುವುದಕ್ಕಾಗಿಯೇ ಕೆಲವರಿಗೆ ಮೀಸಲಾತಿ ಹೆಚ್ಚಿಸಿ ಇನ್ನೂ ಕೆಲವರಿಗೆ ಇದ್ದ ಮೀಸಲಾತಿ ಕಳೆಯುವುದು ಹುನ್ನಾರದ ಭಾಗ. ಕೋಮುವಾದಕ್ಕೆ ಕೋಮವಾದವೇ ಎಂದಿಗೂ ಉತ್ತರವಲ್ಲ.

– ಬಿ.ಎಂ.ಹನೀಫ್ (ಚಿಂತಕ, ಪರ್ತಕರ್ತ)

ಹಲವು ಕಾರಣಗಳಿಂದ ಸಾಮಾಜಿಕ ಅಪಮಾನ ಹೆಚ್ಚಿದೆ.  ಸಾಮಾಜಿಕ ನ್ಯಾಯದ ಆಶಯಗಳನ್ನು ಬಹಿರಂಗವಾಗಿಯೇ ಪ್ಋಶ್ನಿಸಲಾಗುತ್ತಿದೆ.  ಮೀಸಲಾತಿ ಸುದೀರ್ಘ ಚರ್ಚೆಯಲ್ಲಿದೆ. ಜಗಳ ಒಳಜಗಳ ಹಚ್ಚಲಾಗುತ್ತಿದೆ.  ಬಡತನ, ಹಿಂದುಳಿದಿರುವಿಕೆ, ತಾರತಮ್ಯ ಹೆಚ್ಚುತ್ತಿದೆ. ಮುಸ್ಲಿಮರು, ದಲಿತರು, ಮಹಿಳೆಯರುಗಳಿಗೆ ಸೋಶಿಯಲ್ ಸಿಂಪಥಿ ಇಲ್ಲದ ಸಮುದಾಯವಾಗಿಸಲಾಗಿದೆ. ಇಂದಿನ ಸರ್ಕಾರ ನಡೆಸುವವರು ಬ್ರಾಹ್ಮಣಶಾಹಿ ಸರ್ವಾಧಿಕಾರಿ ಸ್ಥಾಪನೆಗೆ ಮುಂದಾಗಿದ್ದಾರೆ. ಸಮತೋಲನ ಸಮಾಜ ನಿರ್ಮಾಣಕ್ಕೆ  ಅವರನ್ನು ಸೋಲಿಸಬೇಕಾಗಿದೆ.

– ಡಾ.ಬಂಜಗೆರೆ ಜಯಪ್ರಕಾಶ್ (ಚಿಂತಕ, ಲೇಖಕ)

ಜನತೆಯ ಪ್ರಶ್ನೆ ಮುನ್ನೆಲೆಗೆ ಬರುವ ಬದಲು ಜನಸಂಸ್ಕೃತಿಯನ್ನು ಹಾಳುಗೆಡಹುವ ದ್ವೇಷ ಮುಂಚೂಣಿಗೆ ಬರುತ್ತಿರುವುದು ಅಪಾಯಕಾರಿ.  ಅದಾನಿಯನ್ನು ಕಟ್ಟಲು ಸಾಂಸ್ಕೃತಿಕ ರಾಜಕಾರಣ‌ ಮಾಡುತ್ತಿರುವ ಪಕ್ಷವನ್ನು ಅಧಿಕಾರದಿಂದ ತೊಲಗಿಸಬೇಕು. ಸಂಸ್ಕೃತಿ ಯನ್ನು ಜನರು ಕಟ್ಟುತ್ತಾರೆ. ಸಾಂಸ್ಕೃತಿಕ ರಾಜಕಾರಣ ವನ್ನು ರಾಜಕೀಯ ವ್ಯಕ್ತಿಗಳು ಮಾಡುತ್ತಿದ್ದಾರೆ. ಅದು ಮಂದಿರ ಮಸೀದಿ ಚರ್ಚು ಗಳನ್ನು ಕಟ್ಟುವ ಪುರೋಹಿತಶಾಹಿ ರಾಜಕಾರಣ. ಮಾತ್ರವಲ್ಲ, ಸಮಾಜ ಬದಲಾವಣೆಗೆ ಶ್ರಮಿಸಿದ ಬಸವಣ್ಣ, ಕಬೀರ, ಮಂಟೇಸ್ವಾಮಿ, ವಿವೇಕಾನಂದ ಎಲ್ಲರೂ ಈಗ ಪೂಜಾ ಸಾಮಗ್ರಿಗಳು ಅಷ್ಟೇ.

ಸಾಮರಸ್ಯದ ಪರಂಪರೆಯನ್ನು ‌ಹಾಳುಗೆಡಹಿ, ಪುರೋಹಿತಶಾಹಿಯನ್ನು ಮತ್ತೆ ತರುತ್ತಿರುವ ಸರಕಾರವನ್ನು ಕಿತ್ತೆಸೆಯುವುದು‌ ನಮ್ಮೆಲ್ಲರ ಹೊಣೆ.

– ಪ್ರಸನ್ನ (ರಂಗಕರ್ಮಿ)

ಹೆಣ್ಣು ಮಕ್ಕಳು ಈ ಸಮಾಜದಲ್ಲಿರುವ ತಮ್ಮ ವಿರೋಧಿ ಮೌಲ್ಯಗಳನ್ನೇ ಖರೆ ಎಂದು ಸುಖಿಸುವ ಪರಿಸ್ಥಿತಿ ನಿರ್ಮಿಸಿದ ಮನುವಾದಿ ತಂತ್ರ ಸೋಲಿಸೋಣ. ಈಗ ವಿಧಾನ ಸಭೆಯಲ್ಲಿ ಮಹಿಳೆಯರ ಸಂಖ್ಯೆ ೩% ರಷ್ಟೂ ಇಲ್ಲ. ಒಬ್ಬರೇ ಮಂತ್ರಿ. ಮಹಿಳೆಯರ ಭಾಗಿದಾರಿಕೆ ಇಲ್ಲದ ವ್ಯವಸ್ಥೆ ಪ್ರಜಾತಂತ್ರ ಆಗಲು ಹೇಗೆ ಸಾಧ್ಯ? ಅಭಿವೃದ್ಧಿಯ ವಿನ್ಯಾಸಗಳಲ್ಲಿ ಮಹಿಳೆಗೆ ಇಲ್ಲದ ಸ್ಥಾನವನ್ನು ಚರ್ಚೆ ಮಾಡದ ಅಭಿವೃದ್ಧಿ ಯಾರ ಅಭಿವೃದ್ಧಿ ಎಂದು ಪ್ರಶ್ನಿಸಿದವರು

– ಡಾ.ಮೀನಾಕ್ಷಿ ಬಾಳಿ (ಅಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ)

ಚುಚ್ಚುವ ಸಂಕಟಗಳು ಎಲ್ಲಾ ಜನವಿಭಾಗಗಳಿಗೆ ಎದುರಾಗಿವೆ. ಆದರೆ, ಸಂಕಟವನ್ನೇ ಸಂಭ್ರಮಿಸುವ ವ್ಯವಸ್ಥೆಯನ್ನು ಸೃಷ್ಟಿ ಮಾಡಲಾಗಿದೆ.  ಮಾತ್ರವಲ್ಲ, ಸಂಕಷ್ಟದ ಪ್ರಮಾಣವನ್ನು ದಿನವೂ ಹೆಚ್ಚಿಸುವ ಸಲುವಾಗಿ ಕರ್ನಾಟಕದಲ್ಲಿ ಕಾರ್ಮಿಕರ ವೇತನ ಪ್ರಮಾಣ ಕಸಿದುಕೊಳ್ಳಲಾಗಿದೆ. ಕಾರ್ಮಿಕ ಕಾಯ್ದೆ ತೆಗೆದುಹಾಕಿ ಕಾರ್ಮಿಕ ಸಂಹಿತೆ ತರಲಾಗಿದೆ, ಮುಷ್ಕರ ಮಾಡುವಂತಿಲ್ಲ. ಹಕ್ಕು ಕೇಳುವಂತಿಲ್ಲ. ಶ್ರಮ ಮಾನದನ್ ಎಂಬ ಡಂಬಾಚಾರದ ಯೋಜನೆ ಕೊಟ್ಟು ಶ್ರಮ ಏವ ಜಯತೆ ಎನ್ನುತ್ತಾರೆ. ಇಂಥವರನ್ನು ಈ ಚುನಾವಣೆಯಲ್ಲಿ ಅಧಿಕಾರದಲ್ಲಿ ಉಳಿಸಬೇಕಾ?  ಬಿಜೆಪಿ 80 ಸೀಟು ದಾಟದಂತೆ ನೋಡಿಕೊಳ್ಳಬೇಕು.

– ಕೆ.ಎನ್.ಉಮೆಶ್.(ಸಿಐಟಿಯು ಅ.ಭಾ, ಕಾರ್ಯದರ್ಶಿ)

ಮನವಿ

ಕಳೆದ ಐದು ವರ್ಷಗಳ ಆಡಳಿತವನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಿ ಮತದಾನ ಮಾಡಬೇಕಿದೆ.

ದುಡಿಯುವವರ ಮೇಲಿನ ದಬ್ಬಾಳಿಕೆಗಳು, ಮಹಿಳೆ, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಆಕ್ರಮಣಗಳು ಹೊಸ ಸ್ವರೂಪ ಪಡೆದವು.  ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರ ಮೇಲೆ, ಅವರ ಅಭಿವ್ಯಕ್ತಿ ಸ್ವಾತಂತ್ರವನ್ನು ದಮನ ಮಾಡುವ ಕ್ರಮಗಳು, ಜೀವ ಬೆದರಿಕೆಗಳು ನಡೆದವು.  ಕಾನೂನು ಬದ್ಧ ಆಡಳಿತ ಕುಸಿತವಾಯಿತು. ಕನ್ನಡ ನಾಡಿನ ವೈವಿಧ್ಯ ಸಂಸ್ಕೃತಿ,  ಅಸ್ಮಿತತೆಯನ್ನು ಇಲ್ಲವಾಗಿಸುವ ಯತ್ನಗಳು ನಡೆದವು.

ಮುಖ್ಯವಾಗಿ ಶಾಂತಿ, ಸಾಮರಸ್ಯ, ಸೌಹಾರ್ದತೆಯ ನಾಡು ಮತೀಯ ದ್ವೇಷದ ಕಿಚ್ಚಿನಿಂದ ದಹಿಸಲ್ಪಟ್ಟಿತು. ಅದನ್ನು ಮತ್ತಷ್ಟು ವಿಸ್ತರಿಸುವ ತೀವ್ರ ಪ್ರಯತ್ನಗಳಿವೆ. ಈಗಲೂ ಕಾರ್ಪೋರೇಟ್ ಮತ್ತು ಕೋಮುವಾದಿ ಶಕ್ತಿಗಳು ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ಮಾಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಕರ್ನಾಟಕದ ಸೌಹಾರ್ದ ಸಂಸ್ಕೃತಿಯನ್ನು, ಶಾಂತಿ ಸಾಮರಸ್ಯವನ್ನು, ಆರ್ಥಿಕ ಸ್ವಾವಲಂಬನೆಯನ್ನು ಸಂರಕ್ಷಿಸಿಕೊಳ್ಳ ಬೇಕಿದೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳ ಬೇಕಿದೆ.

ಈ ಹಿನ್ನೆಲೆಯಲ್ಲಿ ಜಾತ್ಯಾತೀತತೆ, ಪ್ರಜಾಪ್ರಭುತ್ವದ ಈ ಅವಕಾಶವನ್ನು ಸೂಕ್ತವಾಗಿ ಬಳಸಲು ಮನವಿ ಮಾಡುತ್ತೇವೆ..

 

 

 

 

Donate Janashakthi Media

Leave a Reply

Your email address will not be published. Required fields are marked *