ಭೂಮಿ ಗೆದ್ದ ರೈತರು | ಸರ್ಕಾರವನ್ನು ನಡುಗಿಸಿದ ಐತಿಹಾಸಿಕ ಹೋರಾಟ

ಗುರುರಾಜ ದೇಸಾಯಿ
ದೇವನಹಳ್ಳಿ ಭೂಸ್ವಾಧೀನ ಪ್ರಕರಣವನ್ನು ಸಂಪೂರ್ಣ ರದ್ದು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ರೈತ ಮುಖಂಡರ ಜೊತೆಗೆ ಜುಲೈ 15 ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಭೂಮಿ

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿತ್ತು, ಆದರೆ ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.  1198 ದಿನಗಳಿಂದ ನಿರಂತರವಾಗಿ ಚನ್ನರಾಯಪಟ್ಟಣದಲ್ಲಿ ಧರಣಿ ನಡೆಸಿದ್ದ ರೈತರು ಹಲವು ಬಾರಿ ಬೆಂಗಳೂರಿನಲ್ಲಿ ಮಹತ್ವದ ಸಮಾವೇಶ, ಧರಣಿಗಳ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದರು.  ಅಂತಿಮವಾಗಿ ರೈತರು ಛಲ ಬಿಡದೆ ಹೋರಾಟ ನಡೆಸಿ ಗೆಲುವು ಸಾಧಿಸಿದ್ದಾರೆ.

ಹೋರಾಟದ ಹಿನ್ನೆಲೆ : ಅತ್ಯಾಧುನಿಕ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ನಿರ್ಮಾಣಕ್ಕೆ ಕೆಐಡಿಬಿ ಮೂಲಕ 13 ಗ್ರಾಮಗಳ ವ್ಯಾಪ್ತಿಯ 1777 ಎಕರೆ ಜಮೀನನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಕೈಗಾರಿಕಾ ಸಚಿವರಾಗಿದ್ದ ಮುರಗೇಶ್‌ ನಿರಾಣಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿಟ್ಟಿನಲ್ಲಿ 2021 ರಲ್ಲಿ ಪ್ರಾಥಮಿಕ ಅಧಿಸೂಚನೆ ಹಾಗೂ 2022 ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ್ದರು.

ಸರ್ಕಾರದಿಂದ ಭೂಸ್ವಾಧೀನವನ್ನು ವಿರೋಧಿಸಿ ರೈತರು ಹೋರಾಟ 2022 ರಿಂದಲೇ ಹೋರಾಟವನ್ನು ಆರಂಭಿಸಿದರು. ರೈತರ ಹೋರಾಟಕ್ಕೆ ರಾಜ್ಯ ರೈತ ಸಂಘ, ಪ್ರಾಂತರೈತ ಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಜನಪರ ಸಂಘಟನೆಗಳು ಬೆಂಬಲವನ್ನು ನೀಡಿದವು.  ಸಂಯುಕ್ತ ಕಿಸಾನ್‌ ಮೋರ್ಚಾದ ಒತ್ತಾಸೆಯಂತೆ ಈ ಹೋರಾಟ ದೆಹಲಿ ಮಾದರಿಯಲ್ಲಿ, ರೈತ ಕಾರ್ಮಿಕರ ಹೋರಾಟವಾಗಿ ಮಾರ್ಪಟ್ಟಿತು. ಸಂಯುಕ್ತ ಹೋರಾಟ ಕರ್ನಾಟಕ ಸೇರಿದಂತೆ ಎಡಪಕ್ಷಗಳು ಈ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವು.  ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 1198 ದಿನಗಳ ಕಾಲ ಧರಣಿ ನಡೆಸಿದ ರೈತರು “ಪ್ರಾಣ ಹೋದರು ಭೂಮಿ ಕೊಡುವುದಿಲ್ಲ” ಎಂದು ಪಟ್ಟು ಹಿಡಿದ ಪರಿಣಾಮ ರೈತ ಆಂದೋಲನದ ಮುಂದೆ ಸರ್ಕಾರ ಮಂಡಿಯೂರಬೇಕಾಯಿತು.

ಭೂಸ್ವಾಧೀನಕ್ಕೆ ಒಳಪಟ್ಟಿ ಭೂಮಿಯ ನಕ್ಷೆ
ಭೂಸ್ವಾಧೀನಕ್ಕೆ ಒಳಪಟ್ಟಿ ಭೂಮಿಯ ನಕ್ಷೆ

ಸಾವಿರ ದಿನದ ಹೋರಾಟ : ಭೂಮಿ ರೈತರಿಗೆ ಬದುಕನ್ನು ಕಟ್ಟಿಕೊಟ್ಟಿತ್ತು.  ಭೂಮಿ ಕಳೆದುಕೊಳ್ಳುತ್ತೇವೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು. ದೆಹಲಿಯ ರೈತ ಹೋರಾಟವನ್ನು ಸ್ಪೂರ್ತಿಯಾಗಿಸಕೊಂಡ ಚನ್ನರಾಯಪಟ್ಟಣ ಹೋಬಳಿಯ ರೈತರು ಭೂಮಿ ಬದುಕಿಗಾಗಿ ಹೋರಾಟ ಆರಂಭಿಸಿದರು.

“ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ” ಯನ್ನು ರಚಿಸಿಕೊಂಡು KIADB ಯ ಭೂಸ್ವಾಧೀನದ ನೋಟಿಸ್ ವಿರುದ್ಧ ಮೊಟ್ಟ ಮೊದಲಿಗೆ ಚನ್ನರಾಯಪಟ್ಟಣ ನಾಡಕಛೇರಿ ಮುಂಬಾಗ 2022 ಜನವರಿ 28 ರಂದು ಸಣ್ಣ ವಿರೋಧದ ಮೂಲಕ ಆರಂಭವಾದ ಪ್ರತಿಭಟನೆ ಹಲವು ಜನಪರ ಸಂಘಟನೆ, ಸಂಯುಕ್ತ ಕಿಸಾನ್‌ ಮೋರ್ಚಾ, ಸಂಯುಕ್ತ ಹೋರಾಟ ಕರ್ನಾಟಕದ ನಾಯಕತ್ವದ ಮೂಲಕ ದೊಡ್ಡ ಆಂದೋಲನವಾಗಿ ಹೊರ ಹೊಮ್ಮಿತು.  ದೇವನಹಳ್ಳಿ ಬಂದ್‌, ಟ್ರ್ಯಾಕ್ಟರ್‌ ಮೆರವಣಿಗೆ, ಸಚಿವರುಗಳಿಗೆ ಘೇರಾವ್‌, ಸಿಎಂ ಮನೆ ಮುಂದೆ ಪ್ರತಿಭಟನೆ, ಸಾಹಿತಿ, ಬುದ್ದೀಜೀವಿಗಳು, ರಂಗಭೂಮಿ, ಸಿನಿಮಾ ಕಲಾವಿದರ ಬೆಂಬಲ ಹೀಗೆ ಹಲವು ಮಾರ್ಗಗಳಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಬಲಗೊಳ್ಳುತ್ತಾ ಹೋಯಿತು.

ಈ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ನಾನಾ ಕುತಂತ್ರಗಳನ್ನು ರೂಪಿಸಿತು. ಹೋರಾಟದ ಟೆಂಟ್‌ ಮೇಲೆ ಧಾಳಿ ನಡೆಸಿ, ಅದನ್ನು ಕಿತ್ತು ಹಾಕಿದರು. ಅಲ್ಲಿದ್ದ ರೈತ ಹೋರಾಟಗಾರನ್ನು ಲಾಠಿ ಮೂಲಕ ಚದುರಿಸಲು ಪ್ರಯತ್ನಿಸಿದರು. ಹಲವರನ್ನು ಬಂಧಿಸಿದರು… ಸರ್ಕಾರದ ಈ ನಡೆ ರೈತರಲ್ಲಿ ಆಕ್ರೋಶ ಹೆಚ್ಚಿ ಹೋರಾಟ ಮತ್ತಷ್ಟು ಗಟ್ಟಿಯಾಗಲು ಕಾರಣವಾಯಿತು. ಅಂತಿಮವಾಗಿ 1198 ದಿನಗಳ ತಾಳ್ಮೆಯ ಹೋರಾಟದ ಭಾಗವಾಗಿ ರೈತರು ತಮ್ಮ ಭೂಮಿಯಲ್ಲಿ ಮತ್ತೆ ಉಳಿಮೆ ಮಾಡುವಂತಾಗಿದೆ.

ಇದನ್ನೂ ಓದಿ : ಛಲ ಬಿಡದೆ ಹೋರಾಡಿ ಗೆದ್ದ ರೈತರು | ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದಾಗಿ ಸಿಎಂ ಘೊಷಣೆ ಭೂಮಿ

ಐಕ್ಯತೆ ಎತ್ತಿ ಹಿಡಿದ 13 ಹಳ್ಳಿಯ ರೈತರು : 1198 ದಿನಗಳ ಕಾಲ ಹೋರಾಟ ನಡೆಸುವುದು ಅಷ್ಟು ಸುಲಭ ಅಲ್ಲ. ಹತ್ತಾರು ಸಂಘಟನೆಗಳನ್ನು ಒಗ್ಗೂಡಿಸಕೊಂಡು ಗೆಲ್ಲುವ ಮೂಲಕ ಐಕ್ಯತೆ ಇದ್ದರೆ “ ಗೆಲ್ಲಲೊಂದು ಜಗತ್ತಿದೆ” ಎಂಬುದನ್ನು ಇಲ್ಲಿಯ ರೈತರು ತೋರಿಸಿಕೊಟ್ಟಿದ್ದಾರೆ.

ಈ ಹೋರಾಟ ಹಲವು ಅಡೆತಡೆ ದೌರ್ಜನ್ಯಗಳನ್ನು ಎದುರಿಸಿದೆ. ಸ್ವತಃ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್‌ ಕಾಂಗ್ರೆಸ್‌ ಮುಖಂಡರನ್ನು ಮುಂದೆಬಿಟ್ಟು ““ಭೂಮಿಯನ್ನು ಕೊಡಲು ನಾವು ಸಿದ್ದ ಇದ್ದೇವೆ” ಎಂಬ ಹೋರಾಟವನ್ನು ಆರಂಭಿಸಿ “ಕೈ” ಸುಟ್ಟುಕೊಂಡರು. ಇದ್ಯಾವುದಕ್ಕೂ ಜಗ್ಗದೆ ಐಕ್ಯ ಘೋಷಣೆಯ ಮೂಲಕ ಸರ್ಕಾರದ ಎದೆಯನ್ನು ನಡಗಿಸುವಲ್ಲಿ 13 ಹಳ್ಳಿಗಳ ರೈತರು ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣ ಹೋಬಳಿಯ ಪಾಳ್ಯ ಗ್ರಾಮದ 43.14 ಎಕರೆ (ಶೇ.75), ಹರಳೂರು ಗ್ರಾಮದ 12.5 ಎಕರೆ ಎಕರೆ ಶೇ.100, ಪೋಲನಹಳ್ಳಿ 218 ಎಕರೆ (ಶೇ.71), ನಲ್ಲೂರು ಗ್ರಾಮದ 73 ಎಕರೆ (ಶೇ.70), ಮಲ್ಲೇಪುರ ಗ್ರಾಮದ 38 ಎಕರೆ (ಶೇ.100), ನಲ್ಲಪ್ಪನಹಳ್ಳಿ ಗ್ರಾಮದ 81 ಎಕರೆ (ಶೇ.76), ಚೀಮಾಚನಹಳ್ಳಿ ಗ್ರಾಮದ 97 ಎಕರೆ (ಶೇ.65), ಮಟ್ಟಬಾರ್ಲು 180 ಎಕರೆ (ಶೇ.100), ಮುದ್ದೇನಹಳ್ಳಿ ಗ್ರಾಮದ 68 ಎಕರೆ (ಶೇ.92), ಚನ್ನರಾಯಪಟ್ಟಣ ಗ್ರಾಮದ 160 ಎಕರೆ (ಶೇ.68), ಎಸ್. ತೆಲ್ಲಹಳ್ಳಿ ಗ್ರಾಮದ 77.7 ಎಕರೆ (ಶೇ.100), ಹ್ಯಾಡಾಳ ಗ್ರಾಮದ 85 ಎಕರೆ (ಶೇ.53), ಗೋಕರೆ ಬಚ್ಚೇನಹಳ್ಳಿ 139 ಎಕರೆ(ಶೇ.54) ಜಮೀನಿನ ಖಾತೆದಾರರು ಭೂಮಿ ಕೊಡುವುದಿಲ್ಲ ಎಂದು ನಿರ್ಣಯಿಸಿ ಹೋರಾಟವನ್ನು ನಡೆಸಿದ್ದರು.

ಅರ್ಧದಷ್ಟು ದಲಿತರ ಭೂಮಿ : ರಾಜ್ಯ ಸರ್ಕಾರ ಸ್ವಾಧೀನಕ್ಕೆ ಮುಂದಾಗಿದ್ದ ಭೂಮಿಯಲ್ಲಿ ಅರ್ಧದಷ್ಟು ದಲಿತ ಸಮುದಾಯಕ್ಕೆ ಸೇರಿದವರ ಭೂಮಿಯಾಗಿತ್ತು. ದಲಿತರು ಆರ್ಥಿಕವಾಗಿ ಬಲಿಷ್ಟರಾಗಬಾರದು ಎಂಬ ಬಂಡವಾಳಿಗರ ಷಡ್ಯಂತ್ರಕ್ಕೆ ಕಾಂಗ್ರೆಸ್‌ ಸರಕಾರ ಕೈ ಜೋಡಿಸಿದ್ದು ಐತಿಹಾಸಿಕ ಪ್ರಮಾದ ಎಂದು ಹೋರಾಟಗಾರರು ವಿಶ್ಲೇಷಿಸುತ್ತಾರೆ. ಕೆಳಗಿನ ಎರಡು ಚಿತ್ರಗಳಲ್ಲಿ ನೀವು ಭೂಸ್ವಾಧೀನಕ್ಕೊಳಗಾಗುತ್ತಿದ್ದ ದಲಿತರ ಭೂಮಿಯ ಅಂಕಿಅಂಶಗಳನ್ನು ಗಮನಿಸಬಹುದು.

ಜನರಗೆ ಅನ್ನ ನೀಡುವ ಅನ್ನದಾತನ ತಂಟೆಗೆ ಬಂದ ಸರ್ಕಾರವನ್ನು ಈ ಹೋರಾಟ ಅಲುಗಾಡಿಸಿದೆ. ನವಲಗುಂದ – ನರಗುಂದ ಮಾದರಿಯ ಹೋರಾಟಕ್ಕೆ ಈ ಹೋರಾಟ ಸೇರ್ಪಡೆಯಾಗಿದೆ ಎಂದು ಬಣ್ಣಿಸಲಾಗುತ್ತಿದೆ. ಕೆಂಪು, ನೀಲಿ, ಹಸಿರು ಶಾಲುಗಳು ಐಕ್ಯತೆಯಿಂದ, ಬದ್ಧತೆಯಿಂದ ಹೋರಾಟ ನಡೆಸಿದರೆ ಏನನ್ನೂ ಬೇಕಾದರೂ ದಕ್ಕಿಸಬಹುದು ಎಂದು ಈ ಹೋರಾಟ ತೋರಿಸಿಕೊಟ್ಟಿದೆ. ಈ ಹೋರಾಟವನ್ನು ಐಕ್ಯ ಗೆಲುವಾಗಿ ನೋಡದೆ ವ್ಯಕ್ತಿಗತವಾಗಿ ಬಳಸಿಕೊಂಡರೆ ಸೋಲುವ ಸಾಧ್ಯತೆ ಇದೆ ಎಂಬುದನ್ನು ಚಳುವಳಿಯ ನಾಯಕರು ಮರೆಯಬಾರದು.

ಇದನ್ನೂ ನೋಡಿ : ಛಲ ಬಿಡದೆ ಹೋರಾಡಿ ಗೆದ್ದ ರೈತರು | ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದಾಗಿ ಸಿಎಂ ಘೊಷಣೆ ಭೂಮಿ

 

Donate Janashakthi Media

Leave a Reply

Your email address will not be published. Required fields are marked *