“ಡಿಸೆಂಬರ್ 11ರಂದು ವಿಜಯೋತ್ಸವದೊಂದಿಗೆ ಪ್ರತಿಭಟನಾ ಸ್ಥಳಗಳನ್ನು ತೆರವು ಮಾಡಲಾಗುವುದು”
ಡಿಸೆಂಬರ್ 9ರಂದು, 378ದಿನಗಳಿಂದ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರ ಹಲವು ಬಾಕಿ ಇರುವ ಬೇಡಿಕೆಗಳಿಗೆ ಒಪ್ಪುವ ಒಂದು ಔಪಚಾರಿಕ ಪತ್ರವನ್ನು ಭಾರತ ಸರ್ಕಾರ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಯ ಮೂಲಕ ಸಂಯುಕ್ತ ಕಿಸಾನ್ ಮೋರ್ಚಾಗೆ ಕಳುಹಿಸಿದ ನಂತರ, ಸಂಯುಕ್ತ ಕಿಸಾನ್ ಮೋರ್ಚಾ(ಎಸ್.ಕೆ.ಎಂ.) ದೆಹಲಿ ಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮತ್ತು ಇತರೆಡೆಗಳಲ್ಲಿ ಮೋರ್ಚಾಗಳನ್ನು ಸ್ಥಗಿತಗೊಳಿಸುವುದಾಗಿ ಔಪಚಾರಿಕವಾಗಿ ಪ್ರಕಟಿಸಿದೆ. ಅಂದರೆ ಪ್ರಸಕ್ತ ಚಳುವಳಿಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ – – ಕದನವನ್ನು ಗೆದ್ದಿದ್ದೇವೆ ಮತ್ತು ಮತ್ತು ರೈತರ ಹಕ್ಕುಗಳನ್ನು ಖಾತ್ರಿಪಡಿಸುವ ಯುದ್ಧ, ವಿಶೇಷವಾಗಿ ಎಲ್ಲಾ ರೈತರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಪಡೆಯುವ ಕಾನೂನಾತ್ಮಕ ಹಕ್ಕನ್ನು ಗಳಿಸುವ ಹೋರಾಟ ಮುಂದುವರಿಯುತ್ತದೆ ಎಂದು ಅದು ಹೇಳಿದೆ.
ಈ ಮೊದಲು ಸಂಯುಕ್ತ ಕಿಸಾನ್ ಮೋರ್ಚಾ ಡಿಸೆಂಬರ್ 4ರಂದು ಒಂದು ಮಹತ್ವದ ಸಭೆಯನ್ನು ನಡೆಸಿತು. ರೈತ ಆಂದೋಲನದ ಬಾಕಿ ಇರುವ ಬೇಡಿಕೆಗಳು ಮತ್ತು ಭಾರತ ಸರ್ಕಾರದಿಂದ ಔಪಚಾರಿಕ ಪ್ರತಿಕ್ರಿಯೆಯ ಕೊರತೆಯ ಬಗ್ಗೆ ಚರ್ಚಿಸಲು ನಡೆದ ಈ ಸಭೆ ಭಾರತ ಸರ್ಕಾರದಿಂದ ಔಪಚಾರಿಕ ಮತ್ತು ತೃಪ್ತಿಕರ ಪ್ರತಿಕ್ರಿಯೆಗಳು ಬರುವವರೆಗೆ ರೈತರ ಆಂದೋಲನವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುವುದು ಎಂದು ಸರ್ವಾನುಮತದಿಂದ ನಿರ್ಧರಿಸಿತ್ತು.
ನವೆಂಬರ್ 19 ರಂದು 3 ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನ ಮಂತ್ರಿಗಳು ಪ್ರಕಟಿಸಿದ ನಂತರ ನವಂಬರ್ 21ರಂದು ಎಸ್.ಕೆ.ಎಂ. ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಆರು ಬೇಡಿಕೆಗಳನ್ನು ಮುಂದಿಡಲಾಗಿತ್ತು.
ಕೇಂದ್ರ ಸರಕಾರ ಈ ಪತ್ರಕ್ಕೆ ಸ್ಪಂದಿಸುವ ಬದಲು ಅನೌಪಚಾರಿಕವಾಗಿ ಕೆಲಸ ಮಾಡಲು ಬಯಸುವಂತಿದೆ ಮತ್ತು ರೈತರು ಎತ್ತಿರುವ ಪ್ರಶ‍್ನೆಗಳಿಗೆ ಚೂರು-ಚೂರಾಗಿ ಪ್ರತಿಕ್ರಿಯಿಸುತ್ತಿದೆ.. ರೈತ ಸಂಘಟನೆಗಳು ಅಲ್ಪ-ಸ್ವಲ್ಪ ಮೌಖಿಕ ಭರವಸೆಗಳನ್ನು ನಂಬಿಕೊಂಡು ಚಳುವಳಿಯನ್ನು ಹಿಂತೆಗೆದುಕೊಂಡ ನಂತರ ಸರಕಾರ ಹಿಂದೇಟು ಹಾಕಿರುವ ಕಹಿ ಅನುಭವದಿಂದಾಗಿ, ತಾವು ಎತ್ತಿದ ಪ್ರತಿಯೊಂದು ಪ್ರಶ್ನೆಗೆ ಔಪಚಾರಿಕ ಸ್ಪಂದನೆ ದೊರೆಯದೆ ಈ ಹೋರಾಟವನ್ನು ನಿಲ್ಲಿಸುವುದಿಲ್ಲ, ಮತ್ತು ಈ ಆಂದೋಲನದ ಭಾಗವಾಗಿ ರೈತರು ಹಾಗೂ ಅವರ ಬೆಂಬಲಿಗರ ವಿರುದ್ಧ ಹೂಡಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವ ಭರವಸೆ ಔಪಚಾರಿಕವಾಗಿ ಬರಬೇಕು ಎಂದು ಸಭೆಯ ನಂತರ ಎಸ್‌ಕೆಎಂ ಮುಖಂಡರು ಹೇಳಿದ್ದರು..
ಈ ಸಭೆಯಲ್ಲಿ, ಬಾಕಿ ಇರುವ ಪ್ರಶ್ನೆಗಳನ್ನು ಕುರಿತಂತೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಅಶೋಕ್ ಧವಳೆ, ಬಲ್ಬೀರ್ ಸಿಂಗ್ ರಾಜೇವಾಲ್, ಗುರ್ನಾಮ್ ಸಿಂಗ್ ಚದುನಿ, ಶಿವ ಕುಮಾರ್ ಕಕ್ಕಾಜಿ ಮತ್ತು ಯುಧ್ವೀರ್ ಸಿಂಗ್ ಒಳಗೊಂಡ 5 ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿ ಈ ವಿಷಯಗಳ ಕುರಿತು ಕೆಲವು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಬೇಕಾದ ರಾಜ್ಯ ಮಟ್ಟದ ತಂಡಗಳನ್ನು ಸಹ ನಿರ್ಧರಿಸುತ್ತದೆ, ಮುಂದಿನ ಎರಡು ದಿನಗಳನ್ನು ಭಾರತ ಸರ್ಕಾರದ ಪ್ರತಿಕ್ರಿಯೆಗೆ ಮತ್ತು ಎಸ್‍ಕೆಎಂ ರಚಿಸಿರುವ ಸಮಿತಿಯೊಂದಿಗೆ ಮಾತುಕತೆ ನಡೆಸಿ ಒಂದು ಇತ್ಯರ್ಥಕ್ಕೆ ಬರಲು ಅನುವು ಮಾಡಿಕೊಡಲು ಬಿಟ್ಟು, ಮುಂದಿನ ಸಭೆಯನ್ನು ಡಿಸೆಂಬರ್ 7 ಕ್ಕೆ ನಿಗದಿಪಡಿಸಲಾಗಿತ್ತು.
ಕೊನೆಗೂ ಸರಕಾರ ಔಪಚಾರಿಕವಾಗಿ ಪತ್ರವನ್ನು ಕಳಿಸಿದ ನಂತರ ಡಿಸೆಂಬರ್ 9ರಂದು ಎಸ್.ಕೆ.ಎಂ. ಸದ್ಯಕ್ಕೆ ಚಳುವಳಿಯನ್ನು ನಿಲ್ಲಿಸಲು ನಿರ್ಧರಿಸಿದೆ.
ಈ ಅದ್ಭುತ ಮತ್ತು ಐತಿಹಾಸಿಕ ವಿಜಯವನ್ನು ಲಖೀಂಪುರ ಖೇರಿಯಲ್ಲಿ ಪ್ರಾಣಾರ್ಪಣೆ ಮಾಡಿದ ರೈತರು ಸೇರಿದಂತೆ ಚಳವಳಿಯ ಸುಮಾರು 715 ಹುತಾತ್ಮರಿಗೆ ಅರ್ಪಿಸುವುದಾಗಿ ಎಸ್ ಕೆ ಎಂ ಹೇಳಿದೆ ಮತ್ತು ಮತ್ತು ಒಂದು ಅಭೂತಪೂರ್ವ ಚಳುವಳಿಯನ್ನು ನಡೆಸಿದ್ದಕ್ಕಾಗಿ ಮತ್ತು ಇದು ಗಳಿಸಿರುವ ಭವ್ಯ ಸಾಧನೆಗಾಗಿ ಎಲ್ಲ ಪ್ರತಿಭಟನಾ ನಿರತ ರೈತರು ಮತ್ತು ನಾಗರಿಕರನ್ನು ಮತ್ತು ಅವರ ಬೆಂಬಲಿಗರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದೆ.
*ರೈತರ ಒಗ್ಗಟ್ಟು, ಶಾಂತಿ ಮತ್ತು ತಾಳ್ಮೆಯೇ ಈ ಗೆಲುವಿನ ಕೀಲಿಕೈಯಾಗಿದ್ದು, ಯಾವುದೇ ಸಂದರ್ಭದಲ್ಲೂ ಇದು ಕ್ಷೀಣಗೊಳ್ಳಲು ಬಿಡುವುದಿಲ್ಲ, ಎಸ್.ಕೆ.ಎಂ, ಜಾಗರೂಕವಾಗಿರುತ್ತದೆ, ಸಾಮೂಹಿಕವಾಗಿ ನಿರ್ಧರಿಸುತ್ತದೆ ಮತ್ತು ಆಶ್ವಾಸನೆಗಳನ್ನು ಈಡೇರಿಸುವಂತೆ ಖಾತ್ರಿಪಡಿಸುವದಾಗಿ ರೈತರು ಪ್ರತಿಜ್ಞೆ ಕೈಗೊಳ್ಳುತ್ತಾರೆ” ಎಂದೂ ಅದು ಹೇಳಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಮತ್ತು ಅವರ ಸಂಗಡಿಗರ ನಿಧನಕ್ಕೆ ರಾಷ್ಟ್ರವು ಶೋಕಾಚರಣೆ ನಡೆಸುತ್ತಿರುವುದರಿಂದ ರೈತರ ಈ ವಿಜಯಕ್ಕೆ ಸಂಬಂಧಿಸಿದಂತೆ ಎಲ್ಲಾ ಆಚರಣೆಗಳನ್ನು ಮುಂದೂಡಲು ನಿರ್ಧರಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ವಿಜಯೋತ್ಸವವನ್ನು ಡಿಸೆಂಬರ್ 11 ರಂದು ರೈತರು ಸಂಭ್ರಮಾಚರಣೆಗಳೊಂದಿಗೆ ಪ್ರತಿಭಟನಾ ಸ್ಥಳಗಳನ್ನು ಒಟ್ಟಿಗೇ ತೆರವು ಮಾಡುವ ಸಂದರ್ಭದಲ್ಲಿ ನಡೆಸಲಾಗುವುದು ಎಂದು ಹೇಳಿದೆ.
ಭಾರತ ಸರ್ಕಾರವು ಪ್ರತಿಭಟನಾ ನಿರತ ರೈತರಿಗೆ ನೀಡಿರುವ ಆಶ್ವಾಸನೆಗಳಿಗೆ ಬದ್ಧವಾಗಿರುವಂತೆ ಖಚಿತಪಡಿಸಿಕೊಳ್ಳಲು ಮತ್ತು ಮುಂದಿನ ಕಾರ್ಯಾಚರಣೆಯನ್ನು ರೂಪಿಸಲು, ತನ್ನ ಮುಂದಿನ ಸಭೆಯನ್ನು ಜನವರಿ 15 ರಂದು ದೆಹಲಿಯಲ್ಲಿ ನಡೆಸುವುದಾಗಿಯೂ ಎಸ್.ಕೆ.ಎಂ. ಹೇಳಿದೆ.
ಈ ಸುದೀರ್ಘ ಆಂದೋಲನದ ಉದ್ದಕ್ಕೂ ಪ್ರತಿಭಟನಾ ಸ್ಥಳಗಳಲ್ಲಿ ತಾಳ್ಮೆಯಿಂದ ಬೆಂಬಲ ವ್ಯಕ್ತಪಡಿಸಿದ ಸ್ಥಳೀಯ ಸಮುದಾಯಗಳಿಗೆ ಎಸ್.ಕೆ.ಎಂ.ಧನ್ಯವಾದಗಳನ್ನು ಅರ್ಪಿಸುತ್ತ, ಅವರಿಗೆ ಉಂಟಾದ ಅನಾನುಕೂಲತೆಗಳಿಗಾಗಿ ಕ್ಷಮೆಯಾಚಿಸುವುದಾಗಿ ಹೇಳಿದೆ. ಈ ಆಂದೋಲನದಲ್ಲಿ ರೈತರೊಂದಿಗೆ ಕಾರ್ಮಿಕ ಸಂಘಗಳು, ಮಹಿಳಾ ಸಂಘಟನೆಗಳು ಮತ್ತು ಯುವಜನ /ವಿದ್ಯಾರ್ಥಿ ಸಂಘಟನೆಗಳು ಜತೆಗೂಡಿ ಹೋರಾಡಿವೆ. ವಕೀಲರು ಕಾನೂನು ನೆರವು ಒದಗಿಸಿದರು ಮತ್ತು ಸೌಹಾರ್ದ ಪ್ರದರ್ಶಿಸಿದರು; ವೈದ್ಯರು ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಿ ಅವಿರತ ಸೇವೆ ಸಲ್ಲಿಸಿದರು; ವಿವಿಧ ಧಾರ್ಮಿಕ ಸಂಸ್ಥೆಗಳು ಲಂಗರ್‌ಗಳನ್ನು ಸ್ಥಾಪಿಸಿ ಪ್ರತಿಭಟನಾಕಾರರಿಗೆ ಬೇಷರತ್ತಾಗಿ ಮತ್ತು ಅಡೆತಡೆಯಿಲ್ಲದೆ ಆಹಾರ ನೀಡಿದವು; ಮಾನವ ಹಕ್ಕುಗಳ ಗುಂಪುಗಳು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು, ಹಲವಾರು ಕಲಾವಿದರು. ಆಂದೋಲನದಲ್ಲಿ ನಿರಂತರವಾಗಿ ಕೈಜೋಡಿಸಿದರು; ಇವರೆಲ್ಲರಿಗೂ, ಹಲವಾರು ಸಂಸ್ಥೆಗಳು, ಹೆದ್ದಾರಿ ಧಾಬಾ ಮಾಲೀಕರು ಮತ್ತು ಕಿಸಾನ್ ಆಂದೋಲನಕ್ಕೆ ಅದರ ಸಾಂಸ್ಥಿಕ ಸಭೆಗಳನ್ನು ನಡೆಸಲು ಜಾಗ ನೀಡಿದ ಜನರು NRI ಗಳು ಮತ್ತು ಅಂತರರಾಷ್ಟ್ರೀಯ ರೈತ ಸಂಘಟನೆಗಳು ಮತ್ತು ತಂತಮ್ಮ ಸ್ಥಳಗಳಲ್ಲಿ ಸೌಹಾರ್ದ ಕಾರ್ಯಾಚರಣೆಗಳು ಇತ್ಯಾದಿಗಳ ಮೂಲಕ ಬೆಂಬಲಿಸಿದವರು ಮತ್ತು ಹಿತೈಷಿಗಳು ಸೇರಿದಂತೆ ಎಲ್ಲರನ್ನೂ ನೆನಪಿಸಿಕೊಳ್ಳುತ್ತ ಸಂಯುಕ್ತ ಕಿಸಾನ್ ಮೋರ್ಚಾ ಈ ಸಂದರ್ಭದಲ್ಲಿ ನೀಡಿರುವ ಹೇಳಿಕೆಯಲ್ಲಿ ಕೃತಜ್ಞತೆಗಳನ್ನು ಸಲ್ಲಿಸಿದೆ.