ಚನ್ನರಾಯಪಟ್ಟಣ: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 1777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದರೂ, ರೈತರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ, ಹೋರಾಟಗಾರರು ಸೆಪ್ಟೆಂಬರ್ 1ರಂದು ಬೆಂಗಳೂರಿನಲ್ಲಿರುವ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ) ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು, 1777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕೆಂದು ಮೂರೂವರೆ ವರ್ಷ ಹೋರಾಟ ಮಾಡಿದ್ದರು. ಹೋರಾಟಕ್ಕೆ ಮಣಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 15ರಂದು ರೈತರೊಂದಿಗೆ ಸಭೆ ನಡೆಸಿ, ಭೂಸ್ವಾಧೀನ ಪ್ರಕ್ರಿಯೆಯನ್ನೇ ಕೈಬಿಟ್ಟಿರುವುದಾಗಿ ಘೋಷಣೆ ಮಾಡಿದ್ದರು. ಬಳಿಕ ಆ.15ರಂದು ಈ ಬಗ್ಗೆ ಜಾಹೀರಾತು ಕೂಡ ಪ್ರಕಟಿಸಲಾಗಿತ್ತು. ಕೈಬಿಡುವುದಾಗಿ
ಆದರೆ ಆ.29ರಂದು ಕೆಐಎಡಿಬಿ ಕೇಂದ್ರ ಕಚೇರಿಯ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಚನ್ನರಾಯಪಟ್ಟಣ ಹೋಬಳಿಯ ಹ್ಯಾಡಾಳ ಮತ್ತು ಗೋಕರೆ ಬಚ್ಚೇನಹಳ್ಳಿ ರೈತರಿಗೆ ನೋಟಿಸ್ ನೀಡಿದ್ದು, ಸೆ.6ರಂದು ದರ ನಿಗದಿ ಸಭೆಗೆ ಆಗಮಿಸುವಂತೆ ಸೂಚಿಸಿದ್ದಾರೆ. ಭೂಸ್ವಾಧೀನ ಕೈಬಿಟ್ಟಿರುವ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಬಳಿಕವೂ, ಕೆಐಎಡಿಬಿ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿರುವುದು ರೈತರಲ್ಲಿಆತಂಕದ ಜತೆಗೆ ಗೊಂದಲಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಮಾದಿಗ ಸಮುದಾಯ: ಆತಂಕ ದೂರಾಗಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು – ಎಚ್. ಆಂಜನೇಯ ಒತ್ತಾಯ
ಅಂತಿಮ ಸೂಚನೆ ಪ್ರಕಟಕ್ಕೆ ಆಗ್ರಹ
ಈ ಹಿನ್ನೆಲೆಯಲ್ಲಿರೈತರು ಮತ್ತು ಹೋರಾಟಗಾರರು ಸೋಮವಾರ ಬೆಂಗಳೂರಿನಲ್ಲಿರುವ ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಮತ್ತು ಅರವಿಂದ ಭವನದಲ್ಲಿರುವ ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೈಬಿಡುವುದಾಗಿ
ಮುಖ್ಯಮಂತ್ರಿಗಳ ಆದೇಶದಂತೆ ಭೂಸ್ವಾಧೀನ ಕೈಬಿಟ್ಟರುವ ಬಗ್ಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಬಳಿಕ ಭೂಮಿ ಕೊಡುವ ರೈತರೊಂದಗೆ ಒಪ್ಪಂದ ಮಾಡಿಕೊಳ್ಳಿ ಎಂದು ಈ ವೇಳೆ ಆಗ್ರಹಿಸಿದರು. ಕೈಬಿಡುವುದಾಗಿ
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕಾರಳ್ಳಿ ಶ್ರೀನಿವಾಸ್ ಮಾತನಾಡಿ, 13 ಹಳ್ಳಿಗಳ ಭೂಸ್ವಾಧೀನ ಕೈಬಿಟ್ಟ ಬಳಿಕ ದೇಶದಾದ್ಯಂತ ರಾಜ್ಯ ಸರಕಾರಕ್ಕೆ ಒಳ್ಳೆಯ ಹೆಸರು ಬಂದಿದ್ದು, ಅದನ್ನು ಉಳಿಸಿಕೊಂಡು ಹೋಗಿ. ಮುಖ್ಯಮಂತ್ರಿಗಳ ಘೋಷಣೆ ಬಳಿಕವೂ ರೈತರಿಗೆ ನೋಟಿಸ್ ನೀಡಿರುವುದು ಸರಿಯಲ್ಲ. ಮೊದಲು ಡಿನೋಟಿಫೈ ಆದೇಶ ಹೊರಡಿಸಿ, ನಂತರ ಬೇಕಿದ್ದರೆ ಭೂಮಿ ಕೊಡುವ ರೈತರ ಜೊತೆಗೆ ಒಪ್ಪಂದ ಮಾಡಿಕೊಳ್ಳಿ ಎಂದರು.
ನೋಟಿಸ್ ಕೊಟ್ಟಿದ್ದು ಸರಿಯಲ್ಲ
ಕರ್ನಾಟಕ ಪ್ರಾಂತ ರೈತ ಸಂಘದ ಟಿ.ಯಶವಂತ್ ಮಾತನಾಡಿ, ಮುಖ್ಯಮಂತ್ರಿಗಳು ಭೂಸ್ವಾಧೀನ ಕೈಬಿಟ್ಟಿದ್ದೇವೆ ಎಂದು ಹೇಳಿದ ಬಳಿಕವೂ ನೀವು ನೋಟಿಸ್ ಕೊಟ್ಟಿರುವುದು ಸರಿಯಲ್ಲ. ಈ ಕೂಡಲೇ ಆದೇಶ ವಾಪಸ್ ಪಡೆಯಬೇಕು. ಅಲ್ಲದೆ, ನಕಲಿ ಸಹಿ ಮಾಡಿ ರೈತರ ಒಪ್ಪಿಗೆ ಇದು ಎಂದು ಪತ್ರ ಕೊಟ್ಟಿರುವವರ ಮೇಲೆ ಕೂಡಲೇ ಎಫ್‌ಐಆರ್ ದಾಖಲಿಸಬೇಕು. ಮುಖ್ಯವಾಗಿ ದರ ನಿಗದಿಗೆ ಸೆ.6ರಂದು ಕರೆದಿರುವ ಸಭೆಯನ್ನು ರದ್ದುಗೊಳಿಸಬೇಕು. ಒಂದು ವೇಳೆ ನೀವು ಹಠ ಮಾಡಿ ಸಭೆ ನಡೆಸಿದರೆ, ನಾವು ನಮ್ಮ ಪ್ರತಿಭಟನೆಯ ಸ್ವರೂಪವನ್ನೇ ಬದಲಾಯಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭೂ ಸ್ವಾಧೀನ ಅಧಿಕಾರಿಗೆ ದೂರು
ಕೆಐಎಡಿಬಿ ಭೂಸ್ವಾಧೀನಕ್ಕೆ ಒಪ್ಪಿಗೆ ಇದೆ ಎಂದು ರೈತರ ಹೆಸರಿನಲ್ಲಿನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅದನ್ನು ನಂಬಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಹ್ಯಾಡಾಳ ಗ್ರಾಮದ ರೈತ ಲಗುಮಯ್ಯ ಎಂಬುವರು ಈ ಸಂಬಂಧ ವಿಶೇಷ ಭೂ ಸ್ವಾಧೀನ ಅಧಿಕಾರಿಗೆ ದೂರು ಕೊಟ್ಟಿದ್ದಾರೆ. ಭೂ ಸ್ವಾಧೀನಕ್ಕೆ ನನ್ನ ಒಪ್ಪಿಗೆ ಇದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಅಥವಾ ನಕಲಿ ಸಹಿ ಹಾಕಿ ಅಧಿಕಾರಿಗಳ ದಾರಿ ತಪ್ಪಿಸಿರುವವರು, ಅದಕ್ಕೆ ಕುಮ್ಮಕ್ಕು ನೀಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: FRS ಗೆ ಯಾಕೆ ವಿರೋಧ? ಐಸಿಡಿಎಸ್ ಯೋಜನೆಯ ಆಶಯಕ್ಕೆ ಕತ್ತರಿ! Janashakthi Media #anganwadiworkers
