ದ್ವಿದಳ ಧಾನ್ಯ, ಮೆಕ್ಕೆಜೋಳ, ಹತ್ತಿ ಬೆಳೆಗೆ 5 ವರ್ಷ ಕನಿಷ್ಠ ಬೆಂಬಲ ಬೆಲೆ – ಕೇಂದ್ರ ಸರ್ಕಾರದ ಪ್ರಸ್ತಾಪ

ನವದೆಹಲಿ : ಕೇಂದ್ರ ಸಚಿವ ಪಿಯೂಶ್‌ ಗೋಯಲ್ ಅವರು ಭಾನುವಾರ ತಡರಾತ್ರಿ ರೈತ ಮುಖಂಡರೊಂದಿಗಿನ ಮಾತುಕತೆ ನಡೆಸಿದ್ದು, ‘ದ್ವಿದಳ ಧಾನ್ಯ, ಮೆಕ್ಕೆಜೋಳ, ಹತ್ತಿ ಬೆಳೆಗಳನ್ನು 5 ವರ್ಷ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಕುರಿತು ಪ್ರಸ್ತಾಪವನ್ನು ಮಾಡಿದ್ದಾರೆ ಎಂದು ದಿ ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.  ದ್ವಿದಳ ಧಾನ್ಯ

‘ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಐದು ವರ್ಷಗಳವರೆಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರಿ ಸಂಸ್ಥೆಗಳಿಂದ ಖರೀದಿಸುವ ಪ್ರಸ್ತಾವನ್ನು ಸಮಿತಿಯು ರೈತರ ಮುಂದೆ ಇಟ್ಟಿದೆ. ಸರ್ಕಾರದ ಈ ಪ್ತಸ್ತಾಪವನ್ನು ತಮ್ಮ ವಲಯದಲ್ಲಿ ಚರ್ಚಿಸಿ ಎರಡು ದಿನಗಳ ಒಳಗೆ ತಮ್ಮ ಮುಂದಿನ ನಡೆಯನ್ನು ತಿಳಿಸುವುದಾಗಿ ರೈತ ನಾಯಕರು ಹೇಳಿದ್ದಾರೆ. ಹುರಳಿ ಬೇಳೆ, ಉದ್ದಿನ ಬೇಳೆ, ಮಸೂರ್‌ ದಾಲ್ ಅಥವಾ ಮೆಕ್ಕೆಜೋಳವನ್ನು ಮುಂದಿನ 5 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲಯಲ್ಲಿ ಖರೀದಿಸಲು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಹಾಗೂ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಹೇಳಿದರು.

ಈ ಖರೀದಿಯ ಪ್ರಮಾಣಕ್ಕೆ ಯಾವುದೇ ಮಿತಿ ಇಲ್ಲ. ಇದಕ್ಕಾಗಿ ಹೊಸ ಪೋರ್ಟಲ್ ಒಂದನ್ನು ಅಭಿವೃದ್ಧಿ ಪಡಿಸಲಾಗುವುದು. ಇದು ಪಂಜಾಬ್‌ನ ಕೃಷಿಯನ್ನು ಕಾಪಾಡುವುದಲ್ಲದೆ, ಅಂತರ್ಜಲ ಮಟ್ಟವನ್ನೂ ಹೆಚ್ಚಿಸುತ್ತದೆ. ಜೊತೆಗೆ ಭೂಮಿ ಬಂಜರಾಗುವುದನ್ನು ತಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ : ರೈತ ಹೋರಾಟಕ್ಕೆ ವ್ಯಾಪಕ ಬೆಂಬಲ | ಪಂಜಾಬ್, ಹರಿಯಾಣದಲ್ಲಿ ಬಂದ್

ರೈತರು ತಮ್ಮ ಉತ್ಪನ್ನಗಳ ಎಂಎಸ್‌ಪಿಗೆ ಕಾನೂನು ಖಾತರಿ ಒದಗಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ರೈತ ಮುಖಂಡರೊಂದಿಗೆ ಸಭೆ ನಡೆಸಲು ಸೆಕ್ಟರ್-26 ರಲ್ಲಿರುವ ಮಹಾತ್ಮ ಗಾಂಧಿ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ಗೆ ಆಗಮಿಸಿದ್ದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆ ರಾತ್ರಿ 8.30ರ ಸುಮಾರಿಗೆ ಆರಂಭವಾಯಿತು. ಈ ಹಿಂದೆ ಫೆಬ್ರವರಿ 8, 12 ಮತ್ತು 15 ರಂದು ಕೇಂದ್ರ ಸಚಿವರು ಮತ್ತು ರೈತ ಮುಖಂಡರ ನಡುವೆ ಸಭೆ ನಡೆದಿತ್ತು ಆದರೆ ಮಾತುಕತೆಗಳು ವಿಫಲವಾಗಿದ್ದವು. ರೈತ ಮುಖಂಡರ ನಡುವಿನ ನಾಲ್ಕನೇ ಸುತ್ತಿನ ಮಾತುಕತೆ ತಡರಾತ್ರಿ ಅಂತ್ಯಗೊಂಡಿದೆ.

ಕೇಂದ್ರದ ಪ್ರಸ್ತಾವಗಳ ಬಗ್ಗೆ ಮಾತನಾಡಿದ ರೈತ ನಾಯಕ ಸರ್ವನ್‌ ಸಿಂಗ್‌ ಪಂದೆರ್‌, ‘ಫೆ. 19–20ರಂದು ಇದನ್ನು ನಮ್ಮ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಇದರ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು, ನಿರ್ಧಾರ ಪ್ರಕಟಿಸುತ್ತೇವೆ. ಸಾಲ ಮನ್ನಾ ಹಾಗೂ ಇತರ ಬೇಡಿಕೆಗಳ ಬಗ್ಗೆ ಚರ್ಚೆ ಬಾಕಿ ಇದ್ದು, ಇದೂ ಎರಡು ದಿನಗಳಲ್ಲಿ ಬಗೆಹರಿಯುವ ಸಾಧ್ಯತೆ ಇದೆ. ಅಲ್ಲದೆ ‘ದೆಹಲಿ ಚಲೋ’ ಹೋರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಸಮಸ್ಯೆಗಳು ಬಗೆಹರಿಯದಿದ್ದರೆ ಫೆ.21ರಂದು ಬೆಳಿಗ್ಗೆ 11 ಗಂಟೆಗೆ ಮತ್ತೆ ಪ್ರತಿಭಟನೆ ಮುಂದುವರಿಯಲಿದೆ’ ಎಂದು ತಿಳಿಸಿದರು.

ವಿಡಿಯೋ ನೋಡಿ : “ಮೋದಿ ಹಟಾವೋ, ದೇಶ್ ಬಚಾವೋ” – ರೈತ – ಕಾರ್ಮಿಕ – ದಲಿತರ ಒಕ್ಕೊರಲ ದನಿ Janashakthi Media

 

Donate Janashakthi Media

Leave a Reply

Your email address will not be published. Required fields are marked *