ಬೆಂಗಳೂರು : ದೇಶದಾದ್ಯಂತ ರೈತರ ಹೋರಾಟ, ಪ್ರತಿಭಟನೆಗಳನ್ನು ಎದುರಿಸಿರುವ ಕೇಂದ್ರ ಸರ್ಕಾರದ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಬಗ್ಗೆ ರಾಜ್ಯದ ರೈತ ಮುಖಂಡರು, ಜನಪರ ಹೋರಾಟಗಳ ನಾಯಕರು, ವಿವಿಧ ಪಕ್ಷಗಳ ಮುಖಂಡರು ನೀಡಿರುವ ಪ್ರತಿಕ್ರಿಯೆಗಳು ಇಲ್ಲಿವೆ.
ಸಮರಶೀಲ ಹೋರಾಟಕ್ಕೆ ಸಿಕ್ಕ ಜಯ : ದೇಶದ ಕೃಷಿಯನ್ನು ಕಾರ್ಪೋರೆಟ್ ಕಂಪನಿಗಳಿಗೆ ವಹಿಸಿಕೊಡುವ ನರೇಂದ್ರ ಮೋದಿಯವರ ಒಕ್ಕೂಟ ಸರಕಾರದ ದೇಶ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಪ್ರತಿರೋಧಿಸಿ, ಕಳೆದೆರಡು ವರ್ಷಗಳಿಂದ ದೇಶವ್ಯಾಪ್ತಿಯಾಗಿ ಕೋಟ್ಯಾಂತರ ಜನ ಮತ್ತು ಮುಖ್ಯವಾಗಿ ದೆಹಲಿ ಸುತ್ತಲಿನ ಐದು ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಲಕ್ಷಾಂತರ ಜನ ಕಳೆದ 360 ದಿನಗಳಿಂದ ನಿರಂತರವಾಗಿ ನಡೆಸುತ್ತಿದ್ದ ಐತಿಹಾಸಿಕ ಮತ್ತು ಜಾಗತಿಕ ಗಮನ ಸೆಳೆದ ಸಮರ ಶೀಲ ಪ್ರತಿರೋಧಕ್ಕೆ ಮಣಿದ ಒಕ್ಕೂಟ ಸರಕಾರ, ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆದಿರುವುದಾಗಿ ಪ್ರಕಟಿಸಿದೆ. ಇದು ದೇಶದ ರೈತರು, ಕಾರ್ಮಿಕರು ಹಾಗೂ ನಾಗರೀಕರ ಸಮರ ಶೀಲ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಬಣ್ಣಿಸಿದೆ.
ಹೋರಾಟಕ್ಕೆ ಮಣಿದ ಸರಕಾರ : ದೆಹಲಿಯಲ್ಲಿ ರೈತರು ನಡೆಸಿದ ಹೋರಾಟ ದೇಶವ್ಯಾಪಿ ವಿಸ್ತರಿಸಿಕೊಂಡಿದೆ. ಈ ಹೋರಾಟದ ಪ್ರತಿಫಲದಿಂದ ಕೇಂದ್ರ ಸರ್ಕಾರವು ಈಗ ಕೃಷಿ ಕಾಯ್ದೆ ಹಿಂಪಡೆದಿರುವುದು ಸ್ವಾಗತಾರ್ಹ ಎಂದು ಸ್ವರಾಜ್ ಇಂಡಿಯಾ ಪಾರ್ಟಿ ರಾಜ್ಯ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು. ಪಂಜಾಬ್, ಉತ್ತರ ಪ್ರದೇಶ ಚುನಾವಣೆ ಬರುತ್ತಿದೆ. ಈ ಕಾರಣಕ್ಕಾಗಿ ಮಣಿದಿರುವ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸು ಪಡೆದಿದೆ. ಇದರಿಂದಾಗಿ ರೈತರು ಹಾಗೂ ಕೃಷಿ ಕ್ಷೇತ್ರ ಅಪಾಯದಿಂದ ಪಾರಾದಂತಾಗಿದೆ ಎಂದು ಚಾಮರಸ ಮಾಲಿ ಪಾಟೀಲ್ ತಿಳಿಸಿದ್ದಾರೆ.
ಎರಡು ವಿಷಯಗಳು ಸ್ಪಷ್ಟವಾಯ್ತು : ರೈತ ಚಳುವಳಿ ಎರಡು ಮಹತ್ವದ ವಿಷಯಗಳನ್ನು ಸ್ಪಷ್ಟಪಡಿಸಿದೆ.
- ಅಂಬೇಡ್ಕರ್ ಸಂವಿಧಾನ ಜಾರಿಯಲ್ಲಿರೋ ಪ್ರಜಾಪ್ರಭುತ್ವದಲ್ಲಿ ಎಂತಹ ಸರ್ವಾಧಿಕಾರಿಯೂ ಜನರಿಗೆ ತಲೆಬಾಗಲೇ ಬೇಕು
- ಮುಖ್ಯವಾಹಿನಿ ಮಾಧ್ಯಮಗಳು ಅಂತ ಅಂದುಕೊಂಡಿರುವ ಮೀಡಿಯಾಗಳು ದೇಶದ ಭವಿಷ್ಯ ನಿರ್ಧರಿಸಲು ಸಾಧ್ಯವಿಲ್ಲ. ಮಾಧ್ಯಮಗಳು ಇಲ್ಲದೆಯೂ, ಮಾಧ್ಯಮಗಳನ್ನೂ ಎದುರು ಹಾಕಿಕೊಂಡು ಎಂತಹ ಬಲಿಷ್ಠ/ಸರ್ವಾಧಿಕಾರಿಯನ್ನೂ ಜನರು ಮಣಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ.
ಹೋರಾಟ ನಿರತ ರೈತರನ್ನು, ನಿಜವಾದ ರೈತರು ಗದ್ದೆಯಲ್ಲಿದ್ದಾರೆ. ಹೋರಾಟದಲ್ಲಿ ಅಲ್ಲ., ಹೋರಾಟ ಮಾಡ್ತಿರೋದು ರೈತರಲ್ಲ. ಕಮ್ಯೂನಿಷ್ಟರು ಮತ್ತು ಕಾಂಗ್ರೆಸ್ಸಿಗರು, ರೈತ ಹೋರಾಟದ ಹಿಂದೆ ಖಲೀಸ್ಥಾನ್ ಪ್ರತ್ಯೇಕತಾವಾದ ಇದೆ, ರೈತ ಹೋರಾಟದ ಹಿಂದೆ ದೇಶದ್ರೋಹಿಗಳಿದ್ದಾರೆ, ರೈತ ಹೋರಾಟ ರೈತರದ್ದಲ್ಲ. ಎಪಿಎಂಸಿ ದಳ್ಳಾಲಿಗಳದ್ದು ಎಂದು ಹೀಯಾಳೀಸಿದ್ದರು. ಇಷ್ಟೆಲ್ಲಾ ಹೇಳಿದ ಬಿಜೆಪಿ ಮತ್ತು ಮೋದಿ ಈಗ ಕೃಷಿ ಕಾಯ್ದೆಯನ್ನು ವಾಪಸ್ ಪಡೆದುಕೊಂಡಿದ್ದು ಯಾಕೆ ? ದಲ್ಲಾಳಿಗಳ ಒತ್ತಡಕ್ಕೆ ಮಣಿದ್ರಾ ಮೋದಿ ? ದೇಶದ್ರೋಹಿಗಳಿಗೆ ಮೋದಿ ಹೆದರಿದ್ರಾ ?
ಈಗ ಮಾಧ್ಯಮಗಳು ಇದ್ದೇ ಒಂದು ಚಿಕ್ಕ ಹೋರಾಟ ಗೆಲ್ಲೋದು ಕಷ್ಟ. ಈಗಿನಂತೆ ಯಾವ ಮಾಧ್ಯಮಗಳೂ ಇಲ್ಲದೇ ಸ್ವಾತಂತ್ರ್ಯ ಹೋರಾಟ ಹೇಗೆ ಮಾಡಿದ್ರು ? ಹೇಗೆ ಸಕ್ಸಸ್ ಆದ್ರು ? ಈಗಿನ ಮಾಧ್ಯಮಗಳು ಸ್ವಾತಂತ್ರ್ಯ ಹೋರಾಟದ ಕಾಲದಲ್ಲೂ ಇದ್ದಿದ್ದರೆ ನಮಗೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲವೇನೋ ? ಈ ಎರಡೂ ಪ್ರಶ್ನೆಗಳಿಗೆ ಕೃಷಿ ಕಾಯ್ದೆ ವಿರುದ್ದದ ರೈತ ಹೋರಾಟ ಉತ್ತರ ನೀಡಿದೆ. ಎಂದು ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ನಡೆಯ ಬಗ್ಗೆ ಎಚ್ಚರ ವಹಿಸಬೇಕಿದೆ : ಕರ್ನಾಟಕದಲ್ಲಿ ಈಗಾಗಲೇ ತಿದ್ದುಪಡಿ ಮಾಡಿರುವ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳು ಹಿಗ್ಗಾಮುಗ್ಗಾ ಅನುಷ್ಠಾನಗೊಂಡಿದೆ. ಶೇಕಡಾ 70 ರಿಂದ 80ರಷ್ಟು ವಿವಿಧ ಬೆಳೆಗಳಲ್ಲಿ ಎಪಿಎಂಸಿ ಒಳಗಿನ ವ್ಯವಹಾರ ಈಗಾಗಲೇ ಕಡಿಮೆಯಾಗಿದೆ. ಹಾಗೆಯೇ ಶೇಕಡಾ 60 ಭೂಮಿಯ ವ್ಯವಹಾರ ಈ ಸಾರಿ ಅಧಿಕ ಗೊಂಡಿದೆ. ಕರ್ನಾಟಕದಲ್ಲಿ ಈ ಕಾಯ್ದೆಗಳು ವಾಪಾಸು ಬಂದಾಗ ಮಾತ್ರ ನಾವೆಲ್ಲ ಯಶಸ್ಸು ಅಂತ ಭಾವಿಸಬಹುದು.
ಅಷ್ಟರೊಳಗೆ ಬಿಜೆಪಿ ರೈತಪರ ಅಂತ ತನ್ನ ಮುಖವಾಡ ಬದಲಾಯಿಸಿ ಚುನಾವಣಾ ರಾಜಕೀಯದ ಲಾಭ ಪಡೆಯಲು ಎಲ್ಲ ಪ್ರಯತ್ನ ಮಾಡಲಿದೆ, ಅನುಮಾನವೇ ಇಲ್ಲ. ಹಾಗೇ ಶೀಘ್ರ ತೋರುಗಾಣಿಕೆಗೆ ಬೆಂಬಲ ಬೆಲೆಗೆ ಕಾನೂನನ್ನು ತರಬಹುದು. ಜೊತೆಗೆ ಪ್ರಭಾವಿ ಕೆಲ ಮುಖಂಡರುಗಳನ್ನು, ಸೆಳೆದುಕೊಳ್ಳಬಹುದು. ಎಲ್ಲವುದರಲ್ಲೂ ರೈತ ಸಂಘಟನೆಗಳು ಎಚ್ಚರವಹಿಸಬೇಕು. ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಪ್ರತಿಕಿಯಿಸಿದ್ದಾರೆ.
ರದ್ದಿನ ನಿರ್ಧಾರ ಸ್ವಾಗತ : ಪ್ರಧಾನಿ ಮೋದಿ ಅವರ ತೀರ್ಮಾನವನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸ್ವಾಗತಿಸಿದ್ದು, 3 ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಕಾನೂನಿನ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿರೋಧ ತೋರಿದ ಎಲ್ಲ ರೈತರಿಗೆ ನನ್ನ ಸೆಲ್ಯೂಟ್ ಎಂದಿದ್ದಾರೆ. ಅಲ್ಲದೇ 2020 ಸೆಪ್ಟೆಂಬರ್ ರಲ್ಲಿ ಸಂಸತ್ತಿನಲ್ಲಿ ಕೃಷಿ ಕಾನೂನುಗಳ ವಿರುದ್ಧ ಮಾಡಿದ ಭಾಷಣ ಹಾಗೂ ಚರ್ಚೆಯ ಪ್ರತಿಯನ್ನು ಹಾಕಿ ಟ್ವೀಟ್ ಮಾಡಿದ್ದಾರೆ
ಮಣ್ಣಿನ ಮಕ್ಕಳ ಹೋರಾಟಕ್ಕೆ ಸಿಕ್ಕ ಗೆಲುವು : ಕೇಂದ್ರ ಸರ್ಕಾರ ಕೃಷಿ ಕಾಯ್ದೆ ರದ್ದು ಮಾಡಿರುವುದು ದೇಶದ ಮಣ್ಣಿನ ಮಕ್ಕಳ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿದ ಅವರು, ರೈತರ ಹೋರಾಟಕ್ಕೆ ಸಿಕ್ಕ ಗೆಲುವಿನ ಸ್ಫೂರ್ತಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧದ ಜನ ಹೋರಾಟಕ್ಕೆ ನಾಂದಿಯಾಗಲಿದೆ. ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ದೇಶದ ಜನ ಅಣಿಯಾಗಿದ್ದಾರೆ ಎಂದಿದ್ದಾರೆ. ಕೃಷಿ ಕಾಯ್ದೆಯಷ್ಟೇ ಅಲ್ಲ, ಕೇಂದ್ರ ಸರ್ಕಾರದ ಪ್ರತಿಯೊಂದು ನೀತಿ ಮತ್ತು ಕಾರ್ಯಕ್ರಮಗಳು ರೈತ ವಿರೋಧಿಯಾದುದು. ಇದು ವಿರಮಿಸುವ ಕಾಲ ಅಲ್ಲ, ರೈತ ವಿರೋಧಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಾಗಬೇಕಾದ ದಾರಿ ದೂರವಿದೆ : ಚರ್ಚಾಸ್ಪದವಾದ ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಲು ಪ್ರಧಾನಿ ನಿರ್ಧಾರ. ಅವರಿಗೀಗ ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗಳನ್ನು ಗೆಲ್ಲಬೇಕಾಗಿದೆ. ಆದರೆ ಅದು ಅಷ್ಟು ಸುಲಭವಲ್ಲ. ವರುಷವಿಡೀ ಸರಕಾರ ಕೊಟ್ಟ ಕಷ್ಟ ಸುಲಭವಾಗಿ ಮರೆಯುವಂಥದ್ದಲ್ಲ. ಇದಕ್ಕಾಗಿ ಹೋರಾಡಿದ ಎಲ್ಲರಿಗೂ ಅಭಿನಂದನೆಗಳು. ಸಾಗಬೇಕಾದ ಹಾದಿ ಮಾತ್ರ ಇನ್ನೂ ಬಹಳ ದೂರವಿದೆ ಎಂದು ಚಿಂತಕ ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯೆ ನೀಡಿದ್ದಾರೆ.
ಹೋರಾಟ ಸರಕಾರಕ್ಕೆ ಪಾಠ ಕಲಿಸಿದೆ : ಬಹುಮತ ಇದೆ ಯಾರು ಏನು ಮಾಡಲು ಸಾಧ್ಯ?ಎನ್ನುವವರಿಗೆ ಮತ್ತು ಹೋರಾಟದಿಂದ ಏನು ಸಾಧಿಸಲು ಸಾಧ್ಯ? ಎನ್ನುವವರಿಗೆ ರೈತರ ಹೋರಾಟ ದೊಡ್ಡ ಪಾಠವನ್ನು ಹೇಳಿ ಕೊಟ್ಟಿದೆ. ಅಧಿಕಾರದ ದರ್ಪದಲ್ಲಿ ಇದ್ದವರು ರೈತರ ಹೋರಾಟಕ್ಕೆ ಮಣಿಯಲೇಬೇಕಾಯಿತು. 3 ವಿವಾದಿತ ಕೃಷಿ ಮಸೂದೆಯನ್ನು ವಾಪಾಸ್ ಪಡೆದ ಕೇಂದ್ರ ಸರ್ಕಾರ. ಹೋರಾಟದಲ್ಲಿ ಹುತಾತ್ಮರಾದವರಿಗೆ ಮತ್ತು ನಿರಂತರ ಹೋರಾಟದಲ್ಲಿ ಪಾಲ್ಗೊಂಡ ಎಲ್ಲಾ ರೈತರಿಗೆ ಅವರ ಬೆಂಬಲಕ್ಕೆ ನಿಂತ ದೇಶದ ಮತ್ತು ಗಡಿಯಾಚೆಯ ಮಾನವತಾದಿ ಮನಸ್ಸುಗಳಿಗೆ ಲಾಲ್ ಸಲಾಂ ಎಂದು ಎಸ್‌ಎಫ್‌ಐ ಮುಖಂಡ ಗಣೇಶ್ ರಾಠೋಡ್ ಹೇಳಿದ್ದಾರೆ.
ಹೋರಾಟ ನಿಲ್ಲದು : ಕೃಷಿ ಕಾಯ್ದೆಗಳ ತಿದ್ದುಪಡಿಯಿಂದ ಸ್ವರ್ಗವೇ ಧರೆಗಿಳಿಯುತ್ತೆ ಅಂದಿದ್ರಿ. ಈಗ್ಯಾಕೆ ಹಿಂಪಡೆದಿರಿ ಮತ್ತೆ ? ಛಲ ಬಿಡದೆ ಹೋರಾಡಿ ಮೋದಿ ಸರಕಾರವನ್ನು ಹಿಮ್ಮೆಟ್ಟಿಸಿದ ರೈತ ಬಂಧುಗಳಿಗೆ ಅಭಿನಂದನೆಗಳು. ನಾವೂ ಚಳವಳಿಯ ಭಾಗ ಆಗಿದ್ದುದಕ್ಕೆ ಹೆಮ್ಮೆ. ಕೇಂದ್ರ ಸರಕಾರ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆದರೆ ಸಾಲದು. ರಾಜ್ಯ ಸರಕಾರ ತಂದಿರುವ ಭೂಮಸೂದೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕೂಡಾ ರದ್ದಾಗಬೇಕು. ಅದಿಲ್ಲದಿದ್ದರೆ ರಾಜ್ಯದ ರೈತರ ಸಂಕಷ್ಟ ಹೆಚ್ವುತ್ತದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಹೋರಾಟ ಮುಂದುವರಿಯಬೇಕು ಎಂದು ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಸಂಘ ಪರಿವಾರದ ತಂತ್ರ : ಜಯ ಹೌದು, ಚುನಾವಣಾ ಘೋಷಣೆ ಹೌದು. ಜೊತೆಗೆ ರೈತ ಚಳುವಳಿಯನ್ನು ಸಿಖ್ ಚಳುವಳಿಯೆಂದು ಕಿರಿದುಗೊಳಿಸುವ ಧೂರ್ತ ಉದ್ದೇಶ ಇರಬಹುದು. ಸಂಘಟನೆಯನ್ನು ಹೌದು-ಅಲ್ಲ, ಸಾಕು – ಬೇಕು ಮುಂತಾದ ದ್ವಂದ್ವ ಗಳಲ್ಲಿ ಮುಳುಗಿಸಿ ಶಕ್ತಿ ಕುಂದಿಸುವ ಹುನ್ನಾರವೂ ಇರಬಹುದು.ಈ ಘೋಷಣೆಯ ಹಿಂದೆ ಕೃಷಿ ಕಾನೂನುಗಳ ಹೊಸ ಘಾತುಕ ಆವೃತ್ತಿಗಳೂ ಹೊರಬರಲು ಕಾದು ಕುಳಿತಿರಬಹುದು. ಒಂದೇ ಕಲ್ಲಿನಲ್ಲಿ ಅನೇಕ ಹಕ್ಕಿಗಳನ್ನು ಹೊಡೆಯುವ ಸಂಘಪಾರಿವಾರದ ಮಾಮೂಲು ತಂತ್ರದಲ್ಲಿ ಇವೆಲ್ಲವೂ ಇರಬಹುದು. ನಾವು ವ್ಯವಹರಿಸುತ್ತಿರುವುದು ದೆವ್ವದ ಜೊತೆ ಎಂಬುದನ್ನು ಮರೆದಿದ್ದರೆ ಒಳ್ಳೆಯದು ಎಂದು ಲೇಖಕ ವಿ.ಎನ್.ಲಕ್ಷ್ಮೀನಾರಾಯಣ ಅವರ ಪ್ರತಿಕ್ರಿಯೆ ನೀಡಿದ್ದಾರೆ.