ಅಮೆರಿಕನ್ನರ ಪ್ರಶ್ನೆಗೆ ʻಲಖಿಂಪುರ್‌ ಖೇರಿಯ ರೈತರ ಹತ್ಯೆ ಖಂಡನೀಯʼ ಎಂದ ನಿರ್ಮಲಾ ಸೀತಾರಾಮನ್‌!

ವಾಷಿಂಗ್ಟನ್: ಅಮೆರಿಕಾದ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಹತ್ಯೆಯನ್ನು ಖಂಡಿಸಿದ್ದಾರೆ. ಲಖಿಂಪುರದಲ್ಲಿ ನಾಲ್ವರು ರೈತರ ಸಾವಿಗೆ ಕಾರಣವಾದ ಹಿಂಸಾಚಾರ ಖಂಡನೀಯ ಎಂದು ಹೇಳಿದ್ದಾರೆ.

ಅಮೆರಿಕಾ ಪ್ರವಾಸದಲ್ಲಿ ಸರ್ಕಾರದ ಕೆಲಸದ ನಿಮಿತ್ತ ಭೇಟಿ ನೀಡಿರುವ ನಿರ್ಮಲಾ ಸೀತಾರಾಮನ್ ಬೋಸ್ಟನ್ ನಲ್ಲಿದ್ದು, ಹಾರ್ವರ್ಡ್ ಕೆನಡಿ ಸ್ಕೂಲ್ ನಲ್ಲಿ ನಡೆದ ಸಂವಾದಲ್ಲಿ ಮಾತನಾಡುತ್ತ ಈ ಹೇಳಿಕೆ ನೀಡಿದ್ದಾರೆ. ಸಂವಾದದಲ್ಲಿ ಲಖಿಂಪುರದ ಹಿಂಸಾಚಾರದ ಬಗ್ಗೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು.

ಈ ಘಟನೆ ಬಗ್ಗೆ ಪ್ರಧಾನಿ ಹಾಗೂ ಹಿರಿಯ ಸಚಿವರು ಮೌನವೇಕೆ ವಹಿಸಿದ್ದಾರೆ?. ಪ್ರಧಾನಿ ಹಾಗೂ ಹಿರಿಯ ಸಚಿವರು ಏಕೆ ಈ ರೀತಿಯ ಘಟನೆಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ? ಇಂತಹ ಘಟನೆಗಳ ಬಗ್ಗೆ ಪ್ರಶ್ನಿಸಿದಾಗ ಏಕೆ ರಕ್ಷಣಾತ್ಮಕ ಪ್ರತಿಕ್ರಿಯೆ ಬರುತ್ತಿದೆ ಎಂಬುದೇ ಮೊದಲಾದ ಪ್ರಶ್ನೆಗಳನ್ನು ನಿರ್ಮಲಾ ಸೀತಾರಾಮನ್ ಅವರನ್ನು ಕೇಳಲಾಯಿತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಲಖಿಂಪುರ ಖೇರಿ ಹಿಂಸಾಚಾರ ಘಟನೆ ಖಂಡನೀಯವಾದದ್ದು ನಮ್ಮಲ್ಲಿ ಪ್ರತಿಯೊಬ್ಬರೂ ಅದನ್ನೇ ಹೇಳುತ್ತಿದ್ದಾರೆ. ಹಾಗೆಯೇ ಬೇರೆ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಾಗಲೂ ಅದು ಆತಂಕದ ವಿಷಯವೇ ಆಗಿರುತ್ತದೆ ಎಂದಿದ್ದಾರೆ.

ಭಾರತದಲ್ಲಿ ಹಲವು ಭಾಗಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಅಮಾರ್ತ್ಯಸೇನ್ ಸೇರಿದಂತೆ ಭಾರತವನ್ನು ತಿಳಿದಿರುವ ನೀವೆಲ್ಲರೂ ಕೇವಲ ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿಯಷ್ಟೇ ಅಲ್ಲದೇ ಇತರ ಭಾಗಗಳಲ್ಲಿ ನಡೆದ ಕೃತ್ಯಗಳ ಬಗ್ಗೆ ಧ್ವನಿ ಎತ್ತಬೇಕೆಂದು ನಿರೀಕ್ಷಿಸುವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗ ನನ್ನ ಸಂಪುಟ ಸಹೋದ್ಯೋಗಿಯ ಪುತ್ರ ಬಹುಶಃ ಸಮಸ್ಯೆಗೆ ಸಿಲುಕಿರಬಹುದು ಹಾಗೂ ಅದು ಅವರಲ್ಲದೇ ಬೇರೆ ಯಾರೂ ಮಾಡಿಲ್ಲದೇ ಇರಬಹುದು ಆದರೆ ಕಾನೂನಿನ ಪ್ರಕ್ರಿಯೆಗಳು ಪೂರ್ಣಗೊಂಡು ನೈಜತೆ ಸಾಬೀತಾಗಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು. ಇನ್ನೂ ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ರೈತರಾಗಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ  ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಓಡಿಸುತ್ತಿದ್ದ ವಾಹನಗಳನ್ನು ರೈತರ ಮೇಲೆ ಹರಿಸಲಾಗಿದೆ ಎಂಬ ಆರೋಪವಿದೆ. ಅಲ್ಲದೆ, ಆ ಎರಡು ಕಾರುಗಳಲ್ಲಿ ಒಂದು ಕಾರನ್ನು ಓಡಿಸುತ್ತಿದ್ದುದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಆಗಿದ್ದಾನೆ. ಅಂದು ರೈತರು ಕೇಂದ್ರದ ಬಿಜೆಪಿ ಸರ್ಕಾರ ತರಲು ಹೊರಟಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *