ಎಪಿಎಂಸಿ ಕಾಯ್ದೆಯಿಂದ ರೈತರ ಆದಾಯಕ್ಕೆ ಪೆಟ್ಟು: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ರೈತರ ಆದಾಯಕ್ಕೆ ಸ್ವಲ್ಪ ಪೆಟ್ಟು ಬಿದ್ದಿದ್ದು, ಕಳೆದ ಮೂರು ವರ್ಷದಲ್ಲಿ ರೈತರಿಗೆ ತುಂಬಾ  ಸಮಸ್ಯೆಯಾಗಿದೆ. ಆದರಿಂದ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡಿ ಹಳೆ ಎಪಿಎಂಸಿ ಕಾಯ್ದೆಯನ್ನೇ ಸುಧಾರಿತ ರೂಪದಲ್ಲಿ ಜಾರಿಗೆ ತರಲಾಗುವುದು ಎಂದು ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ವಿಧಾನಸೌಧದಲ್ಲಿ ಇಂದು ಬಿಜೆಪಿ ಸರ್ಕಾರದ ಅವಧಿಯ ಎಪಿಎಂಸಿ ಕಾಯ್ಧೆ ರದ್ದು ಮಾಡುವುದು ಹಾಗೂ ಸುಧಾರಿತ ಹೊಸ ಕಾಯ್ಧೆ ಜಾರಿ ತರುವ ಸಂಬಂಧ, ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರನ್ನೊಳಗೊಂಡಿದ್ದ ಉನ್ನತ ಮಟ್ಟದ ಸಭೆ ಬಳಿಕ ಶಿವಾನಂದ ಪಾಟೀಲ್ ಈ ಮಾಹಿತಿ ನೀಡಿದರು.

ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿ ಹಳೆ ಎಪಿಎಂಸಿ ಕಾಯ್ದೆಯನ್ನು ಜಾರಿಮಾಡುತ್ತಿದ್ದೇವೆ. ಈ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರ ರೈತರ ಪ್ರತಿಭಟನೆಗೆ ಮಣಿದು ರೈತ ವಿರೋಧಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿತ್ತು. ಆದರೆ ಕರ್ನಾಟಕದ ಬಿಜೆಪಿ ಸರ್ಕಾರ ಈ ಕಾಯ್ದೆಗಳನ್ನು ರದ್ದು ಮಾಡದೆ ಮುಂದುವರಿಸಿತ್ತು ಎಂದರು. ಈ ಕಾಯ್ದೆಗಳಿಂದ ರೈತರ ಕಲ್ಯಾಣ ಆಗಲಿಲ್ಲ, ಅವರ ಆದಾಯವೂ ದ್ವಿಗುಣವಾಗಲಿಲ್ಲ. ಜತೆಗೆ ಎಪಿಎಂಸಿ ವ್ಯವಸ್ಥೆಗೂ ತೊಂದರೆಯಾಯಿತು. ಹಾಗಾಗಿ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿಸಿದ್ದೆವು. ಇಂದಿನ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಮಾಡಿದ್ದೇವೆ. ಮುಂದಿನ ಅಧಿವೇಶನದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಎಪಿಎಂಸಿ ಕಾಯ್ದೆಯನ್ನು ಮಂಡನೆ ಮಾಡಿ ಸದನದ ಒಪ್ಪಿಗೆ ಪಡೆಯುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಸಿಎಂ ಜೊತೆ ಚರ್ಚೆ : ರೈತ ವಿರೋಧಿ ಕಾಯ್ದೆಗಳನ್ನು ರದ್ದು ಪಡಿಸಿ – ರೈತ ಸಂಘಟನೆಗಳ ಆಗ್ರಹ

ಹಳೆಯ ಎಪಿಎಂಸಿ ಕಾಯ್ದೆಯಲ್ಲಿ ನ್ಯೂನತೆಗಳಿದ್ದರೆ ಅದನ್ನು ಸರಿಪಡಿಸಿ ಅಗತ್ಯವಿದ್ದರೆ  ಕೆಲವೊಂದು ಬದಲಾವಣೆ ಮಾಡಿಕೊಳ್ಳುತ್ತೇವೆ.  ಕೆಲವೊಂದನ್ನು ಸೇರಿಸಬೇಕಾಗುತ್ತದೆ ಆದರಿಂದ ಸುಧಾರಿತ ರೂಪದಲ್ಲಿ ಮಂಡನೆ ಮಾಡುತ್ತೇವೆ. ಹಳೆ ಕಾಯ್ದೆ ಇಡಿ ದೇಶಕ್ಕೆ ಮಾದರಿಯಾಗಿತ್ತು. ಈಗಲೂ ನೂತನ ತಿದ್ದುಪಡಿ ಕಾಯ್ದೆಯನ್ನು ಹಳೆ ಮಾದರಿಯಲ್ಲೇ ರೂಪಿಸುತ್ತೇವೆ. ಮುಂದಿನ ವಾರದೊಳಗೆ ಕಾಯ್ದೆಗೆ ಅಂತಿಮ ರೂಪುರೇಷೆ ನೀಡುವುದಾಗಿ ಅವರು ಹೇಳಿದ್ದಾರೆ. ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಎಪಿಎಂಸಿ ಕಾಯ್ದೆಯಿಂದ ಎಪಿಎಂಸಿ ಸಮಿತಿಗಳ ಸತ್ವ ಹಾಗೂ ಶಕ್ತಿ ಕುಂದಿತ್ತು. ಇದೊಂದು ಅಪಕ್ವವಾದ ಕಾಯ್ದೆಯಾಗಿತ್ತು. ಹಾಗಾಗಿಯೇ ಈ ಕಾಯ್ದೆಯನ್ನು ರದ್ದುಗೊಳಿಸಿ ಈ ಹಿಂದಿನ ಎಂಪಿಎಂಸಿ ಕಾಯ್ದೆಯನ್ನು ಮೂಲ ಸ್ವರೂಪದಲ್ಲೇ ಜಾರಿಮಾಡುತ್ತೇವೆ. ಸಿಎಂ ಬಿಲ್​ ಬಗ್ಗೆ ಸಾಕಷ್ಟು ಸಭೆಗಳನ್ನ ನಡೆಸಿದ್ದರು. ನಾವು ಇವತ್ತು ಮತ್ತೊಮ್ಮೆ ಸಭೆ ನಡೆಸಿದ್ದೇವೆ. ಜುಲೈ 3 ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಎಪಿಎಂಸಿಯ ಹಳೆ ಕಾಯ್ದೆಯನ್ನು ಸುಧಾರಿತ ರೂಪದಲ್ಲಿ ಮಂಡಿಸಿ ಈಗಿರುವ ಕಾಯ್ದೆಯನ್ನು ರದ್ದುಗೊಳಿಸುವ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *