ಪ್ರತಿಭಟನೆಗೆ ಬೆದರಿ ದೆಹಲಿ-ನೋಯ್ಡಾ ಗಡಿ ಬಂದ್ | ರೈತರ ಭೇಟಿಗೆ ಒಪ್ಪಿದ ಕೇಂದ್ರ ಸರ್ಕಾರ

ನೋಯ್ಡಾ: ಪರಿಹಾರ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ರೈತರು ನಡೆಸಿದ ಪ್ರತಿಭಟನೆಗೆ ಕೇಂದ್ರ ಸರ್ಕಾರ ಮಂಡಿಯೂರಿದ್ದು, ಮೂವರು ಕೇಂದ್ರ ಸಚಿವರು ಸಂಜೆ 6 ಗಂಟೆಗೆ ಚಂಡೀಗಢದಲ್ಲಿ ಪ್ರತಿಭಟನಾ ನಿರತ ರೈತರ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸಂಸತ್ತಿನತ್ತ ಸಾಗುತ್ತಿದ್ದ ಉತ್ತರ ಪ್ರದೇಶದ ರೈತರನ್ನು ನೋಯ್ಡಾದಲ್ಲಿ ಪೊಲೀಸರು ತಡೆದಿದ್ದರು. ಇದರ ನಂತರ ಕೇಂದ್ರದ ಕಿರಿಯ ಕೃಷಿ ಸಚಿವ ಅರ್ಜುನ್ ಮುಂಡಾ, ಕಿರಿಯ ಗೃಹ ಸಚಿವ ನಿತ್ಯಾನಂದ ರೈ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ರೈತರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.

ನಿಗದಿತ ಸಮಯದೊಂದಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ಬೆಳೆಗಳಿಗೆ ಎಂಎಸ್‌ಪಿ, ಪಿಂಚಣಿ ಮತ್ತು ಬೆಳೆ ವಿಮೆಯನ್ನು ಖಾತರಿಪಡಿಸುವ ಕಾನೂನು ತರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ರೈತರು ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ಪ್ರತಿಭಟನೆ ಯೋಜಿಸಿದ್ದರು. ಸಾವಿರಾರು ರೈತರು ತಮ್ಮ ಹಳ್ಳಿಯಿಂದ ಸಂಸತ್ತಿಗೆ ಮೆರವಣಿಗೆ ಮಾಡುವ ಕಾರಣಕ್ಕೆ ಉತ್ತರ ಪ್ರದೇಶವು ಗುರುವಾರ ದೆಹಲಿಯೊಂದಿಗಿನ ತನ್ನ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: 2022ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದ 777 ಕೋಟಿ ರೂ. ವೆಚ್ಚದ ಸುರಂಗ ದುರಸ್ತಿ ಸಾಧ್ಯವಿಲ್ಲ ಎಂದ ಪಿಡಬ್ಲ್ಯೂಡಿ!

ನೋಯ್ಡಾ ಗಡಿ ಕ್ರಾಸಿಂಗ್‌ನಲ್ಲಿ ಭಾರೀ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಗಡಿಯನ್ನು 24 ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ಹಿರಿಯ ಪೋಲೀಸ್ ಅಧಿಕಾರಿ ಹೇಳಿದ್ದಾರೆ. ಮಯೂರ್ ವಿಹಾರ್ ಬಳಿಯ ದೆಹಲಿ-ನೋಯ್ಡಾ ಗಡಿಯಲ್ಲಿ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲು ಭಾರೀ ಸಲಕರಣೆಗಳೊಂದಿಗೆ ಪೊಲೀಸ್ ಸಿಬ್ಬಂದಿ ಅಲರ್ಟ್ ಆಗಿದ್ದರಿಂದ ವಾಹನ ಸವಾರರು ಪರದಾಡಿದ್ದಾರೆ. ಈ ನಡುವೆ ರೈತರು ರಾಷ್ಟ್ರ ರಾಜಧಾನಿಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಈ ನಡುವೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತೀಯ ಕಿಸಾನ್ ಸಭಾದ ಬ್ಯಾನರ್‌ಗಳ ಅಡಿಯಲ್ಲಿ ರೈತರು ಗುರುವಾರ ನೋಯ್ಡಾ ಸೆಕ್ಟರ್ 24 ರ ಎನ್‌ಟಿಸಿಪಿ ಕಚೇರಿ ಮತ್ತು ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯ ಹೊರಗೆ ಜಮಾಯಿಸಿ 10% ರಷ್ಟು ಅಬಾದಿ ಭೂಮಿಗೆ ಒತ್ತಾಯಿಸಿದ್ದಾರೆ. ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಮಧ್ಯಾಹ್ನ ಗ್ರೇಟರ್ ನೋಯ್ಡಾದಲ್ಲಿ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಸಿಎಂ ಸೊರೆನ್ ಮತ್ತು ಆದಿವಾಸಿ ಜನಾಂಗದ ವಿರುದ್ಧ ಕೀಳು ಮಟ್ಟ ದ ಹೇಳಿಕೆ | ನಿರೂಪಕ ಸುಧೀರ್ ಚೌಧರಿ ಭಾಷಣ ಕೈಬಿಟ್ಟ ಐಐಟಿ ಬಾಂಬೆ

ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸದಸ್ಯರು ಸ್ಥಳೀಯ ಪ್ರಾಧಿಕಾರದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ನೋಯ್ಡಾದಲ್ಲಿ ಪ್ರತಿಭಟನಾಕಾರರ ನೇತೃತ್ವವನ್ನು ಭಾರತೀಯ ಕಿಸಾನ್ ಪರಿಷತ್ತು ವಹಿಸಿದ್ದು, ಇದರ ಕಾರ್ಯಕರ್ತರು ಡಿಸೆಂಬರ್ 2023 ರಿಂದ ಸ್ಥಳೀಯ ಪ್ರಾಧಿಕಾರದ ಕಚೇರಿಯ ಹೊರಗೆ ಧರಣಿ ನಡೆಸುತ್ತಿದ್ದಾರೆ.

“ರೈತರ ಆಂದೋಲನದ ದೃಷ್ಟಿಯಿಂದ, ದೆಹಲಿಯ ಎಲ್ಲಾ ಗಡಿಗಳಲ್ಲಿ ಮತ್ತು ಕಿಸಾನ್ ಚೌಕ್ ಮತ್ತು ಇತರ ಸ್ಥಳಗಳಲ್ಲಿ ತಡೆಗೋಡೆಗಳನ್ನು ಅಳವಡಿಸಲಾಗುತ್ತಿದೆ. ಪ್ರತಿ ವಾಹನವನ್ನು ಪರಿಶೀಲಿಸಿ ರವಾನಿಸಲಾಗುತ್ತಿದೆ, ಇದರಿಂದಾಗಿ ಸಂಚಾರ ನಿಧಾನವಾಗಿ ಚಲಿಸುತ್ತಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಟ್ರಾಫಿಕ್ ನಿಯಂತ್ರಿಸಲು ಹಿರಿಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ವಿವಿಧ ಸ್ಥಳಗಳಲ್ಲಿ ಹಾಜರಿದ್ದು, ಟ್ರಾಫಿಕ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗಾಗಿ ತಮ್ಮಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಬದಲಾಗಿ 10% ರಷ್ಟು ಆಬಾದಿ ನಿವೇಶನಗಳು ಅಥವಾ ಅದಕ್ಕೆ ಸಮಾನವಾದ ಪರಿಹಾರವನ್ನು ರೈತರಿಗೆ ನೀಡಬೇಕು ಎಂದು ರೈತರು ಒತ್ತಾಯಿಸುತ್ತಾರೆ.

ಪ್ರತಿಭಟನಾ ಮೆರವಣಿಗೆ ಕುರಿತು ಮಾತನಾಡಿದ ರೈತರೊಬ್ಬರು, “ನಮ್ಮ ಮಾತು ಯಾರೂ ಕೇಳುವುದಿಲ್ಲ, ನಾವೇನು ಮಾಡಬೇಕು. ನಾವು 5 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವಂತೆ ತೋರುತ್ತಿದ್ದು, ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತೇವೆ. ನಾವು ಹೆಚ್ಚುವರಿಯಾಗಿ ಏನನ್ನೂ ಕೇಳುವುದಿಲ್ಲ. ಈಗಾಗಲೇ ಜಾರಿಗೊಂಡಿರುವುದನ್ನು ನಾವು ಕೇಳುತ್ತಿದ್ದು, 10%ರಷ್ಟು ಅಬಾದಿ ಭೂಮಿ ನಮ್ಮ ಹಕ್ಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ: ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಕೇರಳ ಸಿಎಂ

ಭಾರತೀಯ ಕಿಸಾನ್ ಪರಿಷತ್ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ 12.30ಕ್ಕೆ ನೋಯ್ಡಾದ ಮಹಾಮಾಯಾ ಫ್ಲೈಓವರ್‌ನಲ್ಲಿ ಸಮಾವೇಶಗೊಂಡ ರೈತರು ಸಂಸತ್ತಿನತ್ತ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು. “ನಮ್ಮ ಬಹುಕಾಲದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲು ಮಹಾಮಾಯಾ ಫ್ಲೈಓವರ್‌ನಿಂದ ರೈತರು ದೆಹಲಿಯ ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸಲಿದ್ದಾರೆ” ಎಂದು ಬಿಕೆಪಿ ನಾಯಕ ಸುಖಬೀರ್ ಯಾದವ್ ಖಲೀಫಾ ಹೇಳಿದ್ದಾರೆ.

ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ರೈತರ ಪ್ರತಿಭಟನೆಗೆ ಮುಂಚಿತವಾಗಿ, ಗೌತಮ್ ಬುದ್ಧ ನಗರ ಪೊಲೀಸರು ಈಗಾಗಲೇ ಬುಧವಾರ ಮತ್ತು ಗುರುವಾರ ಸಿಆರ್ಪಿಸಿ ಸೆಕ್ಷನ್ 144 ಅನ್ನು ವಿಧಿಸಿದ್ದಾರೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ, ಡಿಎನ್‌ಡಿ ಲೂಪ್, ಕಾನ್ಲಿಂಡಿ ಕುಂಜ್ ಸೇತುವೆ, ದಲಿತ ಪ್ರೇರಣಾ ಸ್ಥಳ, ಅಟ್ಟಾ ಚೌಕ್ ಮತ್ತು ನೋಯ್ಡಾದ ರಜನಿಗಂಧ ಚೌಕ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್ ಕಂಡುಬಂದಿದೆ ಎಂದು ವರದಿಯಾಗಿದೆ. ಈ ಹಿಂದೆ ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡ ತಮ್ಮ ಜಮೀನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿನ ರೈತ ಸಂಘಟನೆಗಳು ಡಿಸೆಂಬರ್ 2023 ರಿಂದ ಪ್ರತಿಭಟನೆ ನಡೆಸುತ್ತಿವೆ.

ಹರ್ಯಾಣ ಪೊಲೀಸರಿಂದ ಕಠಿಣ ಕ್ರಮದ ಎಚ್ಚರಿಕೆ

ಮುಂದಿನ ವಾರ ದೆಹಲಿಗೆ ಯೋಜಿತ ಮೆರವಣಿಗೆಯಲ್ಲಿ ಅನುಮತಿಯಿಲ್ಲದೆ ಭಾಗವಹಿಸದಂತೆ ಹರಿಯಾಣ ಪೊಲೀಸರು ರೈತರನ್ನು ಕೇಳಿಕೊಂಡಿದ್ದಾರೆ ಮತ್ತು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದರೆ ‘ಕಠಿಣ ಕ್ರಮ’ ಎಂದು ಎಚ್ಚರಿಸಿದ್ದಾರೆ. ಇಲ್ಲಿಯವರೆಗೂ ಯಾವುದೇ ರೈತ ಸಂಘಟನೆ ಪ್ರತಿಭಟನೆಗೆ ಅನುಮತಿ ಕೋರಿಲ್ಲ ಎಂದು ಅಂಬಾಲಾ ಎಸ್ಪಿ ಜಶಂದೀಪ್ ಸಿಂಗ್ ರಾಂಧವಾ ಗುರುವಾರ ಹೇಳಿದ್ದಾರೆ.

ಯಾವುದೇ ವ್ಯಕ್ತಿ ಅನುಮತಿ ಪಡೆಯದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಂಧವ ತಿಳಿಸಿದ್ದಾರೆ. ಆಂದೋಲನಕಾರರು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದರೆ, ಅವರ ವಿರುದ್ಧ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನಾಕಾರರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಸರ್ಕಾರಿ ಆಸ್ತಿ ನಷ್ಟವನ್ನು ಸಹ ಭರಿಸಲಾಗುವುದು ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಎಚ್ಚರ ಮತ್ತು ವಿವೇಕದ ಕಣ್ಣುಗಳನ್ನು ತೆರೆಯಿಸುವ ಹೊಣೆ ಪತ್ರಕರ್ತರದ್ದು – ಟಿ. ಗುರುರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *