ಚನ್ನರಾಯಪಟ್ಟಣ: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ನಡೆಯುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟ ಇಂದಿಗೆ 1197 ದಿನಗಳನ್ನು ತಲುಪಿದ್ದು, ಜುಲೈ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೊಂದಿಗೆ ಅಂತಿಮ ಸಭೆ ನಡೆಯಲಿದೆ. ವಿರೋಧಿ
ಭೂಸ್ವಾಧೀನ ವಿರೋಧಿ ಹೋರಾಟ ಅಂತಿಮ ಹಂತ ತಲುಪಿರುವ ಈ ಹೊತ್ತಿನಲ್ಲಿ ಭೂಮಿ ಕೊಡುವುದಾಗಿ ಕೆಲವರು ಗೊಂದಲ ಸೃಷ್ಟಿಸಿದ್ದು, ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ಜುಲೈ 14ರಂದು ನಡೆದ ‘ಗ್ರಾಮ ಸಂಕಲ್ಪಸಮಾವೇಶ’ದಲ್ಲಿ 13 ಹಳ್ಳಿಗಳ ರೈತರು ಭೂಮಿ ಕೊಡುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ಪುನರುಚ್ಛರಿಸಿ ಒಗ್ಗಟ್ಟು ಪ್ರದರ್ಶಿಸಿದರು.
ಕಳೆದ ಹತ್ತು ದಿನಗಳಿಂದ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಗ್ರಾಮ ಸಭೆಗಳನ್ನು ನಡೆಸಲಾಗಿದ್ದು, ಒಟ್ಟಾರೆ 13 ಹಳ್ಳಿಗಳ ಶೇ.73 ರಿಂದ ಶೇ.80 ರಷ್ಟು ತಮ್ಮ ರೈತರು ಭೂಮಿ ಕೊಡುವುದಿಲ್ಲ ಎಂದು ಸಹಿ ಮಾಡಿದ್ದಾರೆ. ವಿರೋಧಿ
ಇದನ್ನೂ ಓದಿ: ಕೆನರಾ ಬ್ಯಾಂಕ್ ದರೋಡೆ: ಬ್ಯಾಂಕ್ – ರೈಲ್ವೆ ನೌಕರರು; ಅತಿಥಿ ಉಪನ್ಯಾಸಕರು ಭಾಗಿ
ಚನ್ನರಾಯಪಟ್ಟಣ ಹೋಬಳಿಯ ಪಾಳ್ಯ ಗ್ರಾಮದ 43.14 ಎಕರೆ (ಶೇ.75), ಹರಳೂರು ಗ್ರಾಮದ 12.5 ಎಕರೆ ಎಕರೆ ಶೇ.100, ಪೋಲನಹಳ್ಳಿ 218 ಎಕರೆ (ಶೇ.71), ನಲ್ಲೂರು ಗ್ರಾಮದ 73 ಎಕರೆ (ಶೇ.70), ಮಲ್ಲೇಪುರ ಗ್ರಾಮದ 38 ಎಕರೆ (ಶೇ.100), ನಲ್ಲಪ್ಪನಹಳ್ಳಿ ಗ್ರಾಮದ 81 ಎಕರೆ (ಶೇ.76), ಚೀಮಾಚನಹಳ್ಳಿ ಗ್ರಾಮದ 97 ಎಕರೆ (ಶೇ.65), ಮಟ್ಟಬಾರ್ಲು 180 ಎಕರೆ (ಶೇ.100), ಮುದ್ದೇನಹಳ್ಳಿ ಗ್ರಾಮದ 68 ಎಕರೆ (ಶೇ.92), ಚನ್ನರಾಯಪಟ್ಟಣ ಗ್ರಾಮದ 160 ಎಕರೆ (ಶೇ.68), ಎಸ್. ತೆಲ್ಲಹಳ್ಳಿ ಗ್ರಾಮದ 77.7 ಎಕರೆ (ಶೇ.100), ಹ್ಯಾಡಾಳ ಗ್ರಾಮದ 85 ಎಕರೆ (ಶೇ.53), ಗೋಕರೆ ಬಚ್ಚೇನಹಳ್ಳಿ 139 ಎಕರೆ(ಶೇ.54) ಜಮೀನಿನ ಖಾತೆದಾರರು ಭೂಮಿ ಕೊಡುವುದಿಲ್ಲ ಎಂದು ನಿರ್ಣಯಿಸಿದ್ದಾರೆ. ವಿರೋಧಿ
ನಾವೇ ಅಧಿಕಾರಿಕ್ಕೆ ತಂದ ಸರ್ಕಾರ ನಮ್ಮ ವಿರುದ್ಧ ತೀರ್ಮಾನ ತೆಗೆದುಕೊಂಡರೆ, ನಾವೇ ಮುಂದೆ ನಿಂತು ಇಂಥ ಜನವಿರೋಧಿ ಸರ್ಕಾರವನ್ನು ಉರುಳಿಸಬೇಕಾಗುತ್ತದೆ. ಸರ್ಕಾರ ನಮ್ಮ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡರೆ, ಅದೇ ಅಂತಿಮಲ್ಲ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಮುಖಂಡರಾದ ಮೀನಾಕ್ಷಿ ಸುಂದರಂ ಹೇಳಿದರು. ವಿರೋಧಿ
ಸರ್ಕಾರ ಎಕರೆಗೆ ಮೂರೂವರೆ ಕೋಟಿ ರೂಪಾಯಿ ಪರಿಹಾರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ, ಅದು ಯಾರ ಹಣ? ಅದು ನಮ್ಮದೇ ತೆರಿಗೆ ಹಣ. ನೀವು ರೈತರಿಗೆ ಮೂರೂವರೆ ಕೋಟಿ ಹಣ ಕೊಟ್ಟು ಕೈಗಾರಿಕೋದ್ಯಮಿಗಳಿಗೆ ಕಡಿಮೆ ಹಣಕ್ಕೆ ಭೂಮಿ ಕೊಡುತ್ತೀರಾ. ನಮ್ಮ ತೆರಿಗೆ ಹಣವನ್ನು ಲೂಟಿ ಮಾಡುವುದಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಇಲ್ಲಿನ ರೈತರಿಗೆ ಬೆಳೆಗೆ ಬೆಂಬಲ ನೀಡದ ನೀವು, ಯಾವುದೋ ದೇಶದಿಂದ ಬರುವ ಕೈಗಾರಿಕೋದ್ಯಮಗಳಿಗೆ ತೆರಿಗೆ ಸೇರಿದಂತೆ ಎಲ್ಲ ಹಂತದಲ್ಲಿ ವಿನಾಯಿತಿ ನೀಡುತ್ತಿದ್ದೀರಾ. ನೀವು ರೈತರಿಗೆ ಯಾಕೆ ಬೆಂಬಲ ನೀಡುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀರನ್ನು ಪ್ರಶ್ನಿಸಿದರು. ಈ ಅನ್ಯಾಯವನ್ನು ಪ್ರಶ್ನಿಸುವುದಕ್ಕಾಗಿಯೇ ಇಲ್ಲಿನ ರೈತರು ಹೋರಾಟ ಮಾಡುತ್ತಿದ್ದಾರೆ ಎಂದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅವಕಾಶವಿದೆ ಎಂದು ಸಚಿವರು ವ್ಯಂಗ್ಯವಾಗಿ ಹೇಳಿದ್ದಾರೆ. ಆದರೆ, ಚಳವಳಿಯೊಂದು ನಿರಂತರವಾಗಿ ನಡೆಯುತ್ತಿದ್ದರೆ, ಅದು ಕಿವುಡು ಕಿವಿಗಳನ್ನೂ ಕೇಳುವಂತೆ ಮಾಡುತ್ತದೆ. ಪ್ರಜಾಪ್ರಭುತ್ವ ಎಂದರೆ ಪ್ರತಿಭಟನೆ ಮಾಡುದಷ್ಟೇ ಅಲ್ಲ, ಪ್ರಜಾಪ್ರಭುತ್ವ ಎಂದರೆ ಹೋರಾಟಗಾರರು ಮತ್ತು ರೈತರು ಹೇಳಿದ್ದನ್ನು ಕೇಳಿಸಿಕೊಳ್ಳುವುದು ಎಂದು ಸಚಿವರಿಗೆ ಕಿವಿಮಾತು ಹೇಳಿದರು.

ರೈತರಿಲ್ಲದೆ ಯಾರೂ ಇಲ್ಲ, ಕಾರ್ಮಿಕ ವರ್ಗ ಕೂಡ ರೈತರ ಜೊತೆಗಿದೆ. ನಾವು ಭೂಮಿ ಕೊಡಲ್ಲ ಎಂದು ನಿರ್ಧಾರಕ್ಕೆ ಬಂದಿದ್ದೇವೆ. ಇದರಲ್ಲಿ ಬೇರೆ ಯಾವುದೇ ಚೌಕಾಸಿಗೆ ಅವಕಾಶ ಇಲ್ಲ. ಭೂಮಿ ನಮ್ಮದು ನಾವು ಕೊಡುವುದಿಲ್ಲ. ನಾವು ರೈತರ ಜೊತೆಗೆ ನಿಲ್ಲುತ್ತೇವೆ. ನಾಳೆ ನಾವು 1198ನೇ ದಿನಕ್ಕೆ ಕಾಲಿಡುತ್ತೇವೆ; ಇದಕ್ಕೆ ಪೂರ್ಣವಿರಾಮ ಹಾಕುತ್ತೇವೆ ಎಂದರು.
ಹಿರಿಯ ಹೋರಾಟಗಾರರಾದ ಎಸ್ ಆರ್ ಹಿರೇಮಠ್ ಮಾತನಾಡಿ, “ಚನ್ನರಾಯಪಟ್ಟಣದ ರೈತರಿಗೆ ಇಂದು ಇಡೀ ದೇಶದ ಬೆಂಬಲ ವ್ಯಕ್ತವಾಗುತ್ತಿದೆ. ಅಭಿವೃದ್ಧಿ ಎಂದರೇನು ಎಂಬುದರ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದಕ್ಕಾಗಿ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ. ಕೆಲವು ತಜ್ಞರು ಕೂತು ಪರಿಸರದ ಬಗ್ಗೆ ‘ನಾರಿಕರ ವರದಿ’ ಸಿದ್ಧಪಡಿಸಿದ್ದೇವೆ. ನೈಸರ್ಗಿಕ ಸಂಪನ್ಮೂಲಗಳೇ ನಿಜವಾದ ಸಂಪತ್ತು ಎಂಬುದನ್ನು ಘೋಷಣೆ ಮಾಡಿದ್ದೇವೆ. ಪ್ರಕೃತಿಗೆ ಹತ್ತಿರವಿರುವವರು ಅದನ್ನು ನಿರ್ವಹಣೆ ಮಾಡಬೇಕು. ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಸ್ವಾರ್ಥ ರಾಜಕಾರಣಿಗಳ ಕೈಗೆ ಹೋಗಬಾರದು ಎಂದರು.
ಸರ್ಕಾರಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕು, ಇಂದು ಸರ್ಕಾರಗಳು ಮಾಡುತ್ತಿರುವುದು ಸಂವಿಧಾನ ಬಾಹಿರ. ಅವರೆಲ್ಲಾ ಸಾರ್ವಜನಿಕ ಸೇವಕರು, ನಾವೇ ಇದರ ಮಾಲೀಕರು. ಎಲ್ಲರಿಗೂ ಇಂದು ಪರಿಸರ ಬಹಳ ಮುಖ್ಯವಾಗಿದೆ. ಪರಿಸರ ಮಾಲಿನ್ಯವಷ್ಟೇ ಅಲ್ಲ, ಇಂದು ಅದು ತೀವ್ರ ಬಿಕ್ಕಟ್ಟಾಗಿದೆ. ಅದನ್ನು ಗಮನಿಸುವ ನಾಯಕತ್ವ ನಮಗೆ ಬೇಕಿದೆ.
ಸಂವಿಧಾನದ ಚೌಟಕಟ್ಟಿನಲ್ಲಿ ಕೆಲಸ ಮಾಡುವ ನಾಯಕತ್ವ ನಮಗೆ ಬೇಕಿದೆ; ಪ್ರತಿಯೊಬ್ಬರಿಗೂ ಗೌರವದ ಬದುಕು ಕಟ್ಟಿಕೊಡಬೇಕು. ಆದ್ದರಿಂದ, ನಾವೆರಲ್ಲರೂ ಸೇರಿ ಹೋರಾಟ ಮಾಡಬೇಕು. ಉಪ್ಪಿನ ಸತ್ಯಾಗ್ರಹ ಹಾಗೂ ಮಹಾಡ್ ಸತ್ಯಾಗ್ರದ ಮಾದರಿಯಲ್ಲಿ ಚಳವಳಿ ಮಾಡಬೇಕು. ಅವರ ಹೋರಾಟಗಳು ಹೊಸತಕ್ಕೆ ನಾಂದಿ ಹಾಡಿತು ಎಂದರು.
ದೇವನಹಳ್ಳಿಯ ಚನ್ನರಾಯಪಟ್ಟಣ ಇಂದು ಇಡೀ ದೇಶಕ್ಕೆ ಪರಿಚಿತವಾಗಿದೆ. ನೈತಿಕತೆ ಹಾಗೂ ಅಸ್ಮಿತೆ ಇಟ್ಟುಕೊಂಡು ನಡೆಸಿದ ದೊಡ್ಡ ಭೂಮಿ ಹೋರಾಟ ಇದಾಗಿದೆ. ಇಷ್ಟು ದೀರ್ಘಕಾಲ ಚಲಬಿಡದೆ ಹೋರಾಟ ನಡೆಸಿಕೊಂಡು ಬಂದಿರುವುದು ಸಣ್ಣ ವಿಷಯವಲ್ಲ. ಸರಕು ಬಿಕರಿಯಾಗುತ್ತದೆ, ಬದುಕು ಬಿಕರಿಯಾಗುವುದಿಲ್ಲ; ಮಾರಾಟಗಾರರಿಗೆ ಭೂಮಿ ಕೂಡ ಒಂದು ಸರಕು. ರೈತರಿಗಲ್ಲ ಎಂದು ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಹೇಳಿದರು.
ಕೈಗಾರಿಕೆಗಾಗಿ ನಂಜನಗೂಡಿನಲ್ಲಿ ಸಹ ಬೇಕಾಬಿಟ್ಟು ಭೂಮಿ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ನಮ್ಮ ಜೊತೆಗೆ ಹೋರಾಟ ಮಾಡುತ್ತಿದ್ದ ಕೆಲವರು ಹೆಚ್ಚು ಬೆಲೆ ಸಿಕ್ಕ ಬಳಿಕ ಭೂಮಿ ಕೊಡಲು ಒಪ್ಪಿಕೊಂಡಿದ್ದರು. ಆದರೆ, ಇಲ್ಲಿ ಹೆಚ್ಚಿನ ಪರಿಹಾರಕ್ಕಾಗಿ ಹೋರಾಟ ನಡೆಯುತ್ತಿಲ್ಲ. ಅದಕ್ಕಾಗಿಯೇ ಇದೊಂದು ಸತ್ವಯುತ ಹೋರಾಟ ಎಂದರೆ ತಪ್ಪಾಗುವುದಿಲ್ಲ. ಸಾಹಿತಿಗಳು, ಕಲಾವಿದರು, ದಲಿತ ಚಳವಳಿ ಹಾಗೂ ಬಿದ್ದಿಜೀವಿಗಳು ಸೇರಿದಂತೆ ದೆಹಲಿ ಮಟ್ಟದಲ್ಲೂ ಚನ್ನರಾಯಪಟ್ಟಣ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ಚನ್ನರಾಯಪಟ್ಟಣ ಇಂದು ವಿಶ್ವಮಟ್ಟದಲ್ಲಿ ಹೆಸದರಾಗಿದ್ದು, ಹಾಗೇ ಉಳಿಯಬೇಕಾದರೆ ನಾವರಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದರು.
ರೈತರ ಅಸಹಾಯಕತೆ ಬಳಸಿಕೊಳ್ಳುವ ಕೆಲವು ಶಕ್ತಿಗಳಿವೆ, ಭೂಮಿ ಕೊಡುತ್ತೇವೆ ಎಂದು ಹೇಳಿದವರೂ ಸಹ ಅಸಹಾಯಕರು ಇರಬಹುದು. ಆದರೆ, ನಮ್ಮ ಹೋರಾಟವನ್ನು ಗೆದ್ದೇಗೆಲ್ಲುತ್ತೇವೆ. ಸಂಕಲ್ಪ ಸಮಾವೇಶ 13ಹಳ್ಳಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಇಡೀ ರಾಜ್ಯದ ಕೃಷಿ ಭೂಮಿ, ಜಲಮೂಲ, ಅರಣ್ಯ ಹಾಗೂ ಖನಿಜ ಸಂಪತ್ತು ಉಳಿಸುವುದಕ್ಕಾಗಿಯೇ ಮಾಡುತ್ತಿರುವ ಹೋರಾಟ. ಇದಕ್ಕೆಲ್ಲಾ ಪ್ರೇರಣೆಯೇ ಚನ್ನರಾಯಪಟ್ಟಣ ಭೂಮಿ ಹೋರಾಟ. ನಾವೆಲ್ಲರೂ ನಾಳೆ ಗೆದ್ದೇಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತ ತಾಯಂದರಿರು ಮನಸ್ಸ ಮಾಡದೇ ಇದ್ದಿದ್ದರೆ ಈ ಹೋರಾಟ ಇಷ್ಟು ಗಟ್ಟಿಯಾಗಿ ನಿಲ್ಲುತ್ತಿರಲಿಲ್ಲ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಶ್ಲಾಘಿಸಿದರು.
ಬದುಕಿಗೆ ಭೂಮಿ ಬೇಕು ಎನ್ನುತ್ತಾರೆ. ಆದರೆ, ಸ್ವಾಭಿಮಾನ ಹಾಗೂ ಘನತೆಯ ಬದುಕಿಗೆ ಭೂಮಿ ಬೇಕು. ಹಳ್ಳಿಗಾಡಿನ ಭೂಹೀನರು ಅದನ್ನೇ ಯಾವಾಗಲೂ ಬಯಸುತ್ತಾರೆ. ಇದು ಸಂಕಲ್ಪ ಸಮಾವೇಶ ಎಂದು ಕರೆದಿದ್ದೀರಾ, 13 ಹಳ್ಳಿಗಳು ಸಂಕಲ್ಪ ಮಾಡಿದ್ದೀರಾ, ಮಹಿಳೆಯರು ಮುಂದೆ ನಿಂತು ಮಾಡಿದ ಹೋರಾಟಕ್ಕೆ ಎಂದಿಗೂ ಸೋಲಾಗಿಲ್ಲ; ನಾಳೆ ನಾವು ಗೆದ್ದೇಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ ಅವರ ಮಾತುಗಳು ಭಿನ್ನವಾಗಿವೆ. ಹಸಿರು ವಲಯ ಎಂದು ಘೋಷಣೆ ಮಾಡುವ ಬೆದರಿಕೆ ಹಾಕಲಾಗುತ್ತದೆ. ಭೂಮಿ ಮಾಲೀಕರು ಏನು ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಅದನ್ನೆಲ್ಲಾ ಹೇಳುವುದಕ್ಕೆ ನೀವ್ಯಾರು? ಭೂಮಿ ನೀವೇ ಕೊಟ್ಟಿದ್ದರೆ ಹೀಗೆಲ್ಲಾ ಹೇಳಿದಂತೆ ಕೇಳಬಹುದಿತ್ತು. ಆದರೆ, ಈ ಭೂಮಿ ನಮ್ಮದು. ನೀವು ಸ್ವಾಧೀನ ಕೈಬಿಟ್ಟರೆ ಇದು ಹಸಿರು ವಲಯವಾಗಿಯೇ ಉಳಿಯುತ್ತದೆ. ನಾವೆಲ್ಲರೂ ರೈತರ ಜೊತೆಗಿರುತ್ತೇವೆ, ಈ ಹೋರಾಟವನ್ನು ಗೆದ್ದೇ ಗೆಲ್ಲುತ್ತೇವೆ ಎಂದರು.
ರಾಜ್ಯ ರೈತ ಸಂಘದ ಚಾಮರಸ ಮಲೀ ಪಾಟೀಲ್ ಮಾತನಾಡಿ, ಇಲ್ಲಿನ ಭೂಮಿ ಎಷ್ಟೊಂದು ಸಮೃದ್ಧವಾಗಿದೆ ಎಂದು ನಾನು ನೋಡಿದೆ. ದ್ರಾಕ್ಷಿ ಸೇರಿದಂತೆ ಎಲ್ಲ ತರಕಾರಿ ಬೆಳೆಯುವದುನ್ನೂ ನಾನು ಇಂದು ನೋಡಿದೆ ಎಂದರು. ವಿರೋಧಿ
ಆಂಧ್ರಪ್ರದೇಶದಲ್ಲಿ ಕಿಯಾ ಕಂಪನಿಗೆ ನೀಡಿದ ಭೂಮಿ ಬರಡು ಭೂಮಿಯಾಗಿತ್ತು. ಕಿಯಾದಲ್ಲಿ ನಮ್ಮ ಮಕ್ಕಳಿಗೆ ಭೂಮಿ ಕೊಡುವುದಿಲ್ಲ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಜಗನ್ ರೆಡ್ಡಿ ಚಿಕ್ಕಪ್ಪ ನನಗೆ ಹೇಳಿದ್ದರು. ಇಲ್ಲಿಯೂ ಸಹ ನಮ್ಮ ಜನರಿಗೆ ಕಂಪನಿಗಳು ನಮಗೆ ಭೂಮಿ ಕೊಡುವುದಿಲ್ಲ ಎಂದರು. ವಿರೋಧಿ

ಹಿಂದೆಯೂ ಸಹ ಮಲ್ಲಪ್ಪ ಶೆಟ್ಟಿ, ಮೀರ್ ಸಾಧಿಕ್ ಅಂತವರೂ ಕೂಡ ದ್ರೋಹದ ಕೆಲದ ಮಾಡಿದ್ದಾರೆ. ಇಲ್ಲಿಯೂ ಕೂಡ ಅಂತಹ ಪ್ರಸಂಗ ನಡೆದಿದೆ. ನಾವೇ ನಿಜವಾದ ರೈತರು ಎಂದು ಕೆಲವರು ಪಹಣಿ ಹಿಡಿದು ಹೇಳಿದ್ದಾರೆ. ಅನ್ನ ತಿನ್ನುವ ಬಾಯಿಗೆ ಮಣ್ಣು ಹಾಕಿಕೊಳ್ಳುವ ಕೆಲಸ ಮಾಡಿಕೊಳ್ಲಬೇಡಿ ಎಂದು ನಾನು ಅವರಿಗೆ ಮನವಿ ಮಾಡುತ್ತೇನೆ ಎಂದರು.
ನಾಳೆ 1777 ಎಕರೆ ಸ್ವಾಧೀನವನ್ನು ಕೈಬಿಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರೆ ಒಳ್ಳೆಯದು. ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ನಾವು ಉತ್ತರ ಕರ್ನಾಟಕದ ರೈತರ ಜೊತೆಗೂಡಿ ಸೋಲಿಸುತ್ತೇವೆ. ಸಿದ್ದರಾಮಯ್ಯ ನಾವು ಸಮಾಜವಾದಿ, ರೈತ ಸಂಘ, ನಂಜುಡಸ್ವಾಮಿ ಅನುಯಾಯಿ ಎಂದು ಹೇಳುತ್ತಾರೆ. ವಿರೋಧಿ
ಆ ಮಾತನ್ನು ಅವರು ಮತ್ತೆ ಹೇಳಬೇಕಾದರೆ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ವ್ಯತಿರಿಕ್ತ ತೀರ್ಮಾನ ಮಾಡಿದರೆ ನಿಮ್ಮ ದುರಾಡಳಿತದ ಬಗ್ಗೆ ರಾಜ್ಯದ ಹಳ್ಳಿ ಹಳ್ಳಿಗಳ ಜನರಿಗೆ ತಿಳಿಸುತ್ತೇವೆ; ನಿಮ್ಮ ಅಧಿಕಾರದ ವಿರುದ್ಧ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ವಿರೋಧಿ
ರೈತ ಸಂಘದ ಎಚ್.ಆರ್. ಬಸವರಾಜಪ್ಪ ಮಾತನಾಡಿ, 60-70ರ ದಶಕದಲ್ಲಿ ಭೂಮಿ ಇಲ್ಲದೇ ಇದ್ದ ಕೃಷಿ ಕಾರ್ಮಿಕ ನನಗೂ ಭೂಮಿ ಬೇಕು ಎಂದು ಕಾತರಿಸುತ್ತಿದ್ದ, ಕೆಲವರು ಭೂ ಮಾಲೀಕರ ಬಳಿ ಗೇಣಿ ಮಾಡುತ್ತಿದ್ದರು. ಉಳುವವನೇ ಭೂಮಿ ಒಡೆಯ ಹೋರಾಟ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು; ಈ ಹೋರಾದಿಂದ ಕಾಯ್ದೆಯಾದ ಬಳಿಕ ಹಲವರಿಗೆ ಭೂಮಿ ಸಿಕ್ಕಿದೆ. ನೆಮ್ಮದಿ ಎಂಬುದು ಹಣದಿಂದ ಬರುವುದಲ್ಲ, ನಮ್ಮ ರೈತರು ಹಿಂದಿನಿಂದಲು ನೆಮ್ಮದಿಯಾಗಿಯೇ ಬದುಕುತ್ತಿದ್ದಾರೆ; ಬೇರೆ ಯಾವುದಕ್ಕೂ ನಾವು ಆಸೆಪಟ್ಟವರಲ್ಲ ಎಂದರು.
60 ರ ದಶಕದಲ್ಲಿ ಈ ದೇಶದಲ್ಲಿ ಅನ್ನವೇ ಇರಲಿಲ್ಲ, ಅಮೆರಿಕ ಮತ್ತು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದರು. ಇಂದು ದೇಶಕ್ಕೆ ಬೇಕಾಗಿರುಷ್ಟು ಅನ್ನ ಬೆಳೆದು ಹಂಚಿಕೊಂಡು ಉಣ್ಣುತ್ತಿದ್ದೇವೆ. ರೈತ ಕುಲ ಎಂದಿಗೂ ಬೇಡಿದ ಕುಲವಲ್ಲ, ಇದು ಕೊಟ್ಟ ಕುಲ. ಎಲ್ಲ ಜೀವರಾಶಿಗಳನ್ನೂ ಸಾಕಿಸಲುಹಿದ ಕುಲ, ರೈತನೇ ಈ ದೇಶದ ಮಾಲೀಕ ಎಂದು ಹೇಳಿದರು.
ಇಷ್ಟುದಿನ ನೀವು ಒಗ್ಗಟ್ಟಾಗಿ ಹೋರಾಟ ಮಾಡಿದ್ದೀರಿ, ನಿಮಗೆ ನಮ್ಮ ಎಲ್ಲ ಸಂಘಟನಗಳಿಂದ ಅಭಿನಂದನೆ ಸಲ್ಲಿಸುತ್ತೇವೆ. ರೈತರ ಒಗ್ಗಟ್ಟನ್ನು ಪಡೆಯುವ ಕೆಲಸ ಆರಂಭವಾಗಿದೆ. ಇಂತವರು ಸ್ವಾತಂತ್ರ್ಯ ಹೋರಾಟ ಕಾಲದಿಂದಲೂ ಇದ್ದಾರೆ. ನಮ್ಮಲ್ಲಿ ಒಡಕು ಬರದಿದ್ದರೆ ಸೋಲಾಗುವುದೇ ಇಲ್ಲ. ಇಲ್ಲಿ ಯಾವುದೇ ಒಡಕಾಗಿಲ್ಲ ಆದ್ದರಿಂದ ಗೆಲುವು ಖಚಿತ. ಈ ಹೋರಾಟ ಇಂದು ರಾಜ್ಯ-ರಾಷ್ಟ್ರ ಮಟ್ಟದ ಗಮನ ಸೆಳೆದಿದೆ ಎಂದರು. ವಿರೋಧಿ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯ ರಾಜಕಾರಣಿ ಆಗಿದ್ದಾರೆ. ಈ ಹೋರಾಟದಲ್ಲಿ ಅವರು ದುಡುಕಿ ರೈತರಿಗೆ ಮೋಸ ಮಾಡಿದರೆ ಚರಿತ್ರೆಯಲ್ಲಿ ಅವರ ಪಕ್ಷ ಮತ್ತು ಸರ್ಕಾರ ಅಳಿಸಿಹೋಗುತ್ತದೆ ಎಂಬ ಎಚ್ಚರಿಕೆಯನ್ನು ಕೊಡುತ್ತಿದ್ದೇನೆ. ಭೂಸ್ವಾಧೀನ ಕೈಬಿಡುವ ವಿಶ್ವಾಸವಿದೆ. ಕೈಗಾರಿಕಾ ಮಂತ್ರಿ ಮತ್ತು ಉಸ್ತುವಾರಿ ಮಂತ್ರಿ ಮಾತು ಕೇಳಿಕೊಂಡು ಸ್ವಾಧೀನ ಕೈಬಿಡದಿದ್ದರೆ, ನೀವು ನಾಶವಾಗುವ ಜೊತೆಗೆ ಸರ್ಕಾರವೂ ಸರ್ವನಾಶವಾಗುತ್ತದೆ. ಇಲ್ಲಿನ ರೈತರು ಮತ್ತು ನಾವು ಹೋರಾಟ ಕೈಬಿಡುವ ಮಾತೇ ಇಲ್ಲ ಎಂದರು.
ರೈತ ಸಂಘದ ನಾಯಕಿಯಾದ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಇಲ್ಲಿನ ಒಗ್ಗಟ್ಟು ಮುರಿಯುವ ಕೆಲಸವನ್ನು ಕೆವರು ಮಾಡುತ್ತಿದ್ದಾರೆ. ಇಷ್ಟು ದಿನ ಇವರು ಯಾರೂ ಕಂಡಿರಲಿಲ್ಲ, ಇದ್ದಕ್ಕಿದ್ದಂತೆ ಭೂಮಿ ಕೊಡುತ್ತೇವೆ ಎಂದು ಬಂದಿದ್ದಾರೆ. ಈ ನಡುವೆ, ಕಾನೂನಿನ ತೊಡಕು ಇದೆ ಎಂದು ಹೇಳಿ, 10 ದಿನ ಕಾಲಾವಕಾಶ ಕೇಳಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಕ್ಷಣಾ ಮಂತ್ರಿಗಳನ್ನು ಭೇಟಿ ಮಾಡಿ ಬಂದಿದ್ದಾರೆ. ಡಿಫೆನ್ಸ್ ಕಾರಿಡಾರ್ ಮಾಡುತ್ತೇವೆ ಎಂದು ಅನುಮತಿ ಕೇಳಿದ್ದಾರೆ. ರೈತರು ಭೂಮಿ ಕೊಡದೇ ಇದ್ದರೆ ಡಿಫೆನ್ಸ್ ಕಾರಿಡಾರ್ ಆಂಧ್ರಪ್ರದೇಶಕ್ಕೆ ಹೋಗುತ್ತದೆ ಎಂದು ಹೇಳಿದ್ದಾರೆ; ಇದೆಲ್ಲಾ ಮಾಡುತ್ತಿರುವುದು ಸರಿಯಲ್ಲ ಎಂದರು. ವಿರೋಧಿ
ರಕ್ಷಣಾ ಕಾಡಿರಾಡ್ ಮಾಡುವುದೇ ಇದ್ದರೆ ಅದಕ್ಕೆ ಕೆಐಎಡಿಬಿ ಮಧ್ಯಸ್ಥಿತಕೆ ಬೇಕಾಗಿರುಲ್ಲ. ಅದನ್ನು ನಿರ್ಧರಿಸುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ. ಕೇಂದ್ರ ಯಾವುದೇ ರಾಜ್ಯದಲ್ಲಿ ಬೇಕಿದ್ದರೂ ಮಾಡಬಹುದು. 4ರ ಸಭೆ ವರೆಗೂ ಸರ್ಕಾರಕ್ಕೆ ಏನು ಮಾಡಬೇಕು ಎಂಬುದು ಗೊತ್ತಿರಲಿಲ್ಲ. ಅದಕ್ಕಾಗಿಯೇ ಅವರು ಇದ್ದಕ್ಕಿದ್ದಂತೆ ಡಿಫೆನ್ಸ್ ಕಾರಿಡಾರ್ ನೆಪದಲ್ಲಿ ಭೂಮಿಯನ್ನು ಕೆಐಎಡಿಬಿ ಲ್ಯಾಂಡ್ ಬ್ಯಾಂಕ್ನಲ್ಲಿ ಇಟ್ಟುಕೊಳ್ಳಲು ಯೋಚಿಸಿದ್ದಾರೆ. ಇವರ ಷಡ್ಯಂತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು. ವಿರೋಧಿ
ನಾಳಿನ ಸಭೆ ಏನಾಗುತ್ತದೆ ನೋಡೋಣ, ನಾವು ಸಾಕಷ್ಟು ಆಶಾಭಾವ ಇಟ್ಟುಕೊಟ್ಟುಕೊಳ್ಳೋಣ. ನಮಗೆ ಸಾಕಷ್ಟು ತಾಳ್ಮೆ ಬೇಕು. ಏಕೆಂದರೆ, ರೈತರಾದ ನಮಗೆ ಬೆಳೆ ಬೆಳೆಯುವಾಗ ಕಾಣಿಸುವ ಎಲ್ಲ ಸಮಸ್ಯೆಗಳು ಈಗಲೂ ಬರುತ್ತವೆ. ನಾವು ಭೂಮಿಯನ್ನು ಅಳೆಯುವ ಕೆಲಸ ಮಾಡಿಲ್ಲ. ಅರ್ಧ ಎಕರೆ, ಒಂದು ಎಕರೆ ಇದ್ದರೂ ಶ್ರದ್ಧೆಯಿಂದ ಬೆಳೆ ಬೆಳೆಯುವ ಕೆಲಸ ಮಾಡುತ್ತಿದ್ದೇವೆ.
ನಮಗೆ ನಷ್ಟವಾದರೂ ಬೇರೆಯವರಿಗೆ ನೀಡುವ ಕೆಲಸ ಮಾಡುತ್ತಿದ್ದೇವೆ. ಇಂಥ ನಿಸ್ವಾರ್ಥದ ಸಂಸ್ಖೃತಿ ಒಂದುಕಡೆಯಾದರೆ, ಎಲ್ಲವೂ ನಾನೇ ಎಂಬ ಮನಸ್ಥಿತಿ ಒಂದು ಕಡೆ. ಈ ಎರಡೂ ವೈರುಧ್ಯಗಳ ನಡುವೆ ನಡೆಯುತ್ತಿರುವ ಹೋರಾಟ ಇದು. ಅಹಂಕಾರ ಹಾಗೂ ಗಂಡಿನ ದರ್ಪ ಇಲ್ಲಿ ಕಾಣಿಸುತ್ತಿದೆ; ಆದರೆ ಇಲ್ಲಿ ತಾಯ್ತನದ ಶಕ್ತಿ ಇದೆ. ಅಂತಿಮವಾಗಿ ತಾಯ್ತನವೇ ಗೆಲ್ಲುತ್ತದೆ ಎಂದರು. ವಿರೋಧಿ
ಜನಶಕ್ತಿ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಮಾತನಾಡಿ, “13 ಹಳ್ಳಿಗಳ ಭೂತಪಸ್ವಿಗಳಿಗೆ ಶರಣು, 1200 ದಿನಗಳ ದೊಡ್ಡ ಮಹಾತಪಸ್ಸು ಮಾಡಿದ್ದೀರ. ಇಂಥಹ ಧೀರ್ಘ ಹಾಗೂ ಸಾತ್ವಿಕ ತಪಸ್ಸಿಗೆ ನಾಳೆ ಒಳ್ಳೆ ಫಲ ಸಿಗಲೇಬೇಕು” ಎಂದರು. ವಿರೋಧಿ
ಎಲ್ಲ ಕಡೆ ಭೂಮಿ ಕಬಳಿಸುತ್ತಿರುವಾಗ ನಮ್ಮನ್ನು ತಡೆಯುವವರೇ ಇಲ್ಲ ಎನ್ನುತ್ತಿರುವಾಗ, ಸರ್ಕಾರಗಳ ಅಹಂಕಾರವನ್ನು 13 ಹಳ್ಳಿಗಳ ಜನ ತಡೆದಿದ್ದಾರೆ. ಅಂತಿಮ ಅಧಿಸೂಚನೆ ಬಂದ ಬಳಿಕವೂ ಹಲವು ಜನರ ಬೆಂಬಲ ಸಿಕ್ಕಿದೆ. ಇದು 13 ಹಳ್ಳಿಗಳ ಹೋರಾಟವಲ್ಲ, ಇಡೀ ದೇಶದ ಹೋರಾಟ. ಸ್ಪೇನ್ನಿಂದಲೂ ನಮಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ನೂರಕ್ಕೆ ನೂರು ನಾಳಿನ ಫಲಿತಾಂಶ ನಮ್ಮ ಪರವಾಗಿ ಆಗೇ ಆಗುತ್ತದೆ. ನಾಳಿನ ಸಭೆಗೆ ಎಲ್ಲ ತಾಯಂದಿರೂ ಸಿಹಿ ತನ್ನಿ, ‘ಸಿಹಿ ತಿಂದು, ಸಿಹಿ ಸುದ್ದಿ ಕೊಡಿ’ ಎಂದು ಮುಖ್ಯಮಂತ್ರಿಗಳನ್ನು ಕೇಳೋಣ ಎಂದರು. ವಿರೋಧಿ
ಇಲ್ಲಿರುವ ಸಂಘಟನೆಗಳೆಲ್ಲವೂ ಕಾವಲು ಪಡೆ ಮಾತ್ರ, ನಿಮ್ಮ ಭೂಮಿ ಕೈತಪ್ಪುವುದುಕ್ಕೆ ನಾವು ಬಿಡುವುದೇ ಇಲ್ಲ. ಈ ತಪಸ್ಸಿಗೆ ನಾಳೆ ಪ್ರತಿಫಲ ಸಿಗಬಹುದು. ನಮ್ಮ ಭೂಮಿ ಬಲವಂತದ ವಶಪಡಿಸಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದರೆ, ಶಿವನ ತಪ್ಪಸ್ಸು ಕೆಡಿಸಿದರೆ ಪ್ರಳಯ ಸೃಷ್ಠಿ ಆಗುತ್ತದೆ. ಇಲ್ಲೂ ಕೂಡ ಅದೇ ಆಗುತ್ತದೆ. ಅಂಥ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕದಿರೆ ಅವರಿಗೇ ತೊಂದರೆ; ನಮಗೇನೂ ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ವಿರೋಧಿ
ಸಭೆಯಲ್ಲಿ ಇಂದಿರಾ ಕೃಷ್ಣಪ್ಪ, ಬಡಗಲಪುರ ನಾಗೇಂದ್ರ, ಎಸ್.ಆರ್. ಹಿರೇಮಠ್, ಟಿ.ಯಶವಂತ್, ಮೀನಾಕ್ಷಿ ಸುಂದರಂ, ಗುರುಪ್ರಸಾದ್ ಕೆರಗೋಡು, ಕೆವಿ ಭಟ್, ಚಾಮರಸ ಪಾಟೀಲ್, ಎಚ್.ಆರ್. ಬಸವರಾಜಪ್ಪ, ಮುಖ್ಯಮಂತ್ರಿ ಚಂದ್ರು, ದೇವಿ, ಚುಕ್ಕಿ ನಂಜುಂಡಸ್ವಾಮಿ, ಕಾಳಪ್ಪ, ಅಪ್ಪಣ್ಣ, ಜಿಜಿ ನಾರಾಯಣಸ್ವಾಮಿ, ಆಂಜನೇಐ ರೆಡ್ಡಿ, ನೂರ್ ಶ್ರೀಧರ್, ನಂಜಪ್ಪ ನಲ್ಲಪ್ಪನಹಳ್ಳಿ, ಮಾರೇಗೌಡ, ಕಾರಳ್ಳಿ ಶ್ರೀನಿವಾಸ್, ರಮೇಶ್ ಚೀಮಾಚನಹಳ್ಳಿ ಸೇರಿದಂತೆ ಹಲವರಿದ್ದರು.
ಇದನ್ನೂ ನೋಡಿ: ದೇವನಹಳ್ಳಿ | ಅನ್ನ ಕೊಡೋ ರೈತರ ಬಾಯಿಗೆ ಮಣ್ಣು ಹಾಕ್ತೀರಾ ಸಿದ್ರಾಮಯ್ಯನವರೇ.? | ಗ್ರೌಂಡ್ ರಿಪೋರ್ಟ್Janashakthi
