ಕುಕನೂರು: ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಪೊಲೀಸರನ್ನು ಮುಂದಿಟ್ಟುಕೊಂಡು ವಿಂಡ್ ಟವರ್ ಕಂಪನಿಯ ಮಧ್ಯಸ್ಥಿಕೆ ವಹಿಸುವ ಗುತ್ತಿಗೆದಾರರು ದಬ್ಬಾಳಿಕೆ ನಡೆಸುತ್ತಿದ್ದ್ದೂ, ಕಂಪನಿಗಳ ಧೋರಣೆ ಹಾಗೂ ನಿರ್ಲಕ್ಷ್ಯದಿಂದಾಗಿ ರೈತರು ಮತ್ತು ಸಾರ್ವಜನಿಕರು ಸಂಕಷ್ಟವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಕುಕನೂರು
ತಾಲ್ಲೂಕಿನ ನಲಜೇರಿ ಗ್ರಾಮದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ವಿಂಡ್ ಟವರ್ ಕಂಪನಿಗಳಿಗೆ ಸೇರಿವೆ. ಅನೇಕ ಕಂಪನಿಗಳು ಪವನ ವಿದ್ಯುತ್ ಉತ್ಪಾದನೆ ಮಾಡಲು ವಿಂಡ್‌ನಿಂದ ಉತ್ಪಾದನೆಯಾದ ವಿದ್ಯುತ್‌ಅನ್ನು ಗ್ರಿಡ್‌ಗೆ ಸಾಗಾಟ ಮಾಡಲು ವಿದ್ಯುತ್ ಲೈನ್‌ಗಳನ್ನು ಎಳೆದಿವೆ. ಕುಕನೂರು
ಆದರೆ ಅನೇಕ ಕಡೆ ತಂತಿಗಳಿಗೆ ಮರದ ಟೊಂಗೆಗಳು ತಾಕುತ್ತಿವೆ. ಮರದ ಬಳಿ ಹೋಗುವ ರೈತರು ಮತ್ತು ಜಾನುವಾರುಗಳಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಮರದ ಟೊಂಗೆಗಳನ್ನು ಕತ್ತರಿಸುವಂತೆ ಕಂಪನಿಗಳಿಗೆ ಹೇಳಿದರೂ ಯಾರೂ ಸ್ಪಂದಿಸುತ್ತಿಲ್ಲ. ರೈತರ ಜೊತೆ ವಿಂಡ್ ಕಂಪನಿಗಳ ಸಿಬ್ಬಂದಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
‘ವಿದ್ಯುತ್ ಟವರ್‌ಗಳನ್ನು ಹಾಕುವ ಮೊದಲು ರೈತರಿಂದ ಭೂಮಿ ಖರೀದಿಸುವಾಗ ಹತ್ತಾರು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತೇವೆ. ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕಂಪನಿಗಳು ಭರವಸೆ ನೀಡಿದ್ದವು. ಆದರೆ ನಂತರ ಸಮಸ್ಯೆಗಳಿಗೆ ಸ್ಪಂದಿಸದೇ ತಮ್ಮಿಷ್ಟಕ್ಕೆ ತಕ್ಕಂತೆ ವರ್ತಿಸುತ್ತವೆ. ಇದನ್ನು ಪ್ರಶ್ನಿಸಿದರೆ ರೈತರಿಗೆ ಪೊಲೀಸರ ಮೂಲಕ ಬೆದರಿಕೆ ಹಾಕಿಸಲಾಗುತ್ತಿದೆ’ ಎಂದು ಗ್ರಾಮಸ್ಥ ಹಾಗೂ ಭೂಮಿ ಕಳೆದುಕೊಂಡ ಮಾಲೀಕ ದಿನೇಶ್ ಗೌಡ ಮಾಲಿಪಾಟೀಲ್ ಆರೋಪಿಸಿದರು.
ಇದನ್ನೂ ಓದಿ: ಮಕ್ಕಳ ದಾಖಲಾತಿ ಹೆಚ್ಚಿಸಲು “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮ
‘ಇನ್ನು ಭೂಮಿ ಖರೀದಿ, ಭೂಮಿ ಲೀಸ್‌ನಲ್ಲಿ ಕೂಡ ಅನೇಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಕೆಲವರಿಗೆ ಪ್ರತಿ ಎಕರೆಗೆ ₹ 30 ಲಕ್ಷ ನೀಡಿದರೆ, ಇನ್ನು ಕೆಲವರಿಗೆ ₹ 15ರಿಂದ ₹20 ಲಕ್ಷ ಮಾತ್ರ ನೀಡಲಾಗುತ್ತಿದೆ. ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಹಾಕಲು ಕೂಡ ಅನೇಕರಿಗೆ ಹಣ ಕೊಡುತ್ತೇವೆ ಎಂದು ಹೇಳಿ ಕಂಬ ಹಾಕಿದ ಮೇಲೆ ಹಣ ಕೊಡುತ್ತಿಲ್ಲ’ ಎಂದು ರೈತರು ದೂರಿದರು.
‘ವಿದ್ಯುತ್ ಉತ್ಪಾದನೆಗಾಗಿ ಅಳವಡಿಸುತ್ತಿರುವ ಟವರ್‌ಗಳಿಂದ ರೈತರಿಗೆ ದೊಡ್ಡ ಮಟ್ಟದ ಸಮಸ್ಯೆಯಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ, ವಿಂಡ್ ಪವರ್ ಟವರ್ ಅಳವಡಿಸುತ್ತಿರುವ ಕಂಪನಿಗಳ ಜೊತೆ ಮಾತನಾಡಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಹಣ ಸಿಗುವಂತೆ ನೋಡಿಕೊಳ್ಳಬೇಕಿದೆ’ ಎಂಬುದು ರೈತರ ಆಗ್ರಹವಾಗಿದೆ.
ಇದನ್ನೂ ನೋಡಿ: ಶಾಂತಿ ಸ್ಥಾಪಿಸುವ ಬದಲು ಪ್ರಚೋದಿಸುತ್ತಿರುವ ಗೋಧಿ ಮೀಡಿಯಾ ಬಗ್ಗೆ ಕಾಶ್ಮೀರಿ ಜನರ ಆಕ್ರೋಶ Janashakthi Media