ಕರ್ನಾಲ್: ಹರಿಯಾಣದ ಕರ್ನಾಲ್‍ನಲ್ಲಿ ಕಳೆದ ಆಗಸ್ಟ್ 28ರಂದು ಪ್ರತಿಭಟನೆಯ ಸಂದರ್ಭದಲ್ಲಿ ರೈತರ ಮೇಲೆ ನಡೆದಿದ್ದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಸುಶೀಲ್ ಕಾಜಲ್ ಸಾವನ್ನಪ್ಪಿದರು. ಆಗ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಪ್ರತಿಭಟನಾ ನಿರತ ರೈತರ ತಲೆ ಒಡೆಯಿರಿ ಎಂದು ವಿವಾದಾತ್ಮಕ ಆದೇಶ ನೀಡಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕುತಂತ್ರಕ್ಕೆ ಮುಂದಾಗಿದ್ದರು.
ಇದನ್ನು ಓದಿ: ‘ರೈತರನ್ನು ಚನ್ನಾಗಿ ಹೊಡೆಯಿರಿ’ ಪೊಲೀಸರಿಗೆ ಆದೇಶಿಸಿದ್ದ ಅಧಿಕಾರಿಯ ವಿಡಿಯೊ ವೈರಲ್
ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಬೇಕೆಂದು ನಡೆಯುತ್ತಿರುವ ಪ್ರತಿಭಟನೆ ಜಯಲಭಿಸಿದೆ. ರೈತ ಮುಖಂಡರು ಮತ್ತು ರಾಜ್ಯ ಸರ್ಕಾರದ ನಡುವೆ ನಡೆದ ನಾಲ್ಕನೇ ಸುತ್ತಿನ ಮಾತುಕತೆ ಬಳಿಕ ಸರ್ಕಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಐಎಎಸ್ ಅಧಿಕಾರಿ ದೇವೇಂದ್ರ ಸಿಂಗ್ ಕರ್ನಾಲ್ ಲಾಠಿಚಾರ್ಜ್ ಪ್ರಕರಣದ ಕುರಿತು ಸಮಗ್ರ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನಡೆಸಲಾಗುವುದು ಮತ್ತು ಮೃತ ರೈತ ಸುಶೀಲ್ ಕಾಜಲ್ ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ಸೇರಿದಂತೆ, ತನಿಖೆ ನಡೆಯುವವರೆಗೂ ವಿವಾದಾತ್ಮಕ ಹೇಳಿಕೆ ನೀಡಿದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ರಜೆಯಲ್ಲಿ ಇರಲಿದ್ದಾರೆʼʼ ಎಂದು ತಿಳಿಸಿದರು.
ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಹಿರಿಯ ಐಎಎಸ್ ಅಧಿಕಾರಿ ದೇವೇಂದ್ರ ಸಿಂಗ್ ಭಾಗಿಯಾಗಿದ್ದರೇ, ರೈತ ಒಕ್ಕೂಟದ ನಾಯಕ ಗುರ್ನಾನಾಮ್ ಸಿಂಗ್ ಚಧುನಿ ಸಭೆಯಲ್ಲಿ ಉಪಸ್ಥಿತರಿದ್ದರು.
ಘಟನೆಗೆ ಸಂಬಂಧಿಸಿದಂತೆ ರೈತ ನಾಯಕ ಗುರ್ನಾಮ್ ಚದುನಿ ಸಭೆಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಈ ಪ್ರಕರಣದ ತನಿಖೆಯಾಗಬೇಕು. ಒಂದು ತಿಂಗಳೊಳಗೆ ಈ ತನಿಖೆ ಪೂರ್ಣಗೊಳಿಸಿ, ಅಲ್ಲದೆ ಕರ್ನಾಲ್ನ ಮಾಜಿ ಉಪ ಜಿಲ್ಲಾಧಿಕಾರಿ ಸಿನ್ಹಾ ತನಿಖೆ ಮುಗಿಯುವರೆಗೂ ರಜೆ ಮೇಲೆ ತೆರಳಬೇಕು ಎಂದು ಆಗ್ರಹಿಸಿದ್ದರು.
ಇದನ್ನು ಓದಿ: ರೈತರ ಮೇಲೆ ಲಾಠಿ ಪ್ರಹಾರ: ಕುಪಿತ ರೈತ ಸಂಘಟನೆಗಳಿಂದ ಹೆದ್ದಾರಿ ತಡೆ
ಅಂದು ಪ್ರತಿಭಟನೆಯ ಸಂದರ್ಭದಲ್ಲಿ ರೈತರು ಮಾತು ಕೇಳದಿದ್ದರೆ ಅವರ ತಲೆ ಒಡೆಯಿರಿ ಎಂದು ಪೊಲೀಸ್ ಸಿಬ್ಬಂದಿ ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ಇದಾದ ಬಳಿಕ ಅಧಿಕಾರಿ ವಿರುದ್ಧ ಎಲ್ಲೆಡೆ ಆಕ್ರೋಶ ಕೇಳಿಬಂದಿತ್ತು. ಈ ಹಿನ್ನೆಲೆ ಅಧಿಕಾರಿಯನ್ನು ವರ್ಗಾಯಿಸಲಾಗಿತ್ತು. ಅಲ್ಲದೆ ಸರ್ಕಾರಿ ಸಿಬ್ಬಂದಿ ಸೇರಿ ಐಎಎಸ್ ಅಧಿಕಾರಿ ವಿರುದ್ಧ ಎಫ್ಐಆರ್ ಸಹ ದಾಖಲಾಗಿತ್ತು.
ಆಗಸ್ಟ್ 28ರಂದು ಕರ್ನಾಲ್‍ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ತೀವ್ರತರವಾದ ಲಾಠಿ ಚಾರ್ಜ್ ನಡೆಸಿದ್ದರು. ಓರ್ವ ರೈತ ಮೃತಪಟ್ಟು ಹಲವು ರೈತರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಇದನ್ನು ವಿರೋಧಿಸಿ ರೈತರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದರು. ಸಾವಿರಾರು ರೈತರು ಜಮಾಯಿಸಿ ಪ್ರತಿಭಟನೆ ತೀವ್ರಗೊಳಿಸಿದ್ದರು. ಮೃತಪಟ್ಟ ರೈತನ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ಅವರ ಕುಟುಂಬಸ್ಥರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಜೊತೆಗೆ ಲಾಠಿ ಚಾರ್ಜ್ ವೇಳೆ ಗಾಯಗೊಂಡ ರೈತರಿಗೆ ತಲಾ 2 ಲಕ್ಷ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದ್ದರು.