ನವದೆಹಲಿ : ಮೂರು ಕೃಷಿ ಕಾನೂನುಗಳ ವಿರೋಧಿಸಿ ರೈತ ಸಂಘಟನೆಗಳು ವರ್ಷಗಳ ಹಿಂದೆ ಆರಂಭಿಸಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ. ಈ ಕುರಿತು ರೈತ ಸಂಘಟನೆಗಳು ಘೋಷಣೆ ಮಾಡಿದ್ದು, ರೈತರ ಬೇಡಿಕೆಗಳಿಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ್ದರಿಂದ ಹೋರಾಟವನ್ನು ಅಂತ್ಯಗೊಳಿಸಿವ ನಿರ್ಧಾರವನ್ನು ರೈತರು ಕೈಗೊಂಡಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ರೈತ ಸಂಘಟನೆಗಳ ಮಹತ್ವದ ಸಭೆ ನಡೆದಿದ್ದು, ಇಲ್ಲಿ ಪ್ರತಿಭಟನೆ ಹಿಂಪಡೆದುಕೊಳ್ಳುವ ಅಂತಿಮ ನಿರ್ಧಾರ ಪ್ರಕಟಿಸಲಾಗಿದೆ. ಡಿಸೆಂಬರ್ 11 ರಿಂದ ಸಿಂಘು ಗಡಿಯಿಂದ ರೈತರು ತಮ್ಮ ಮನೆಗಳಿಗೆ ತೆರಳಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಆರು ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿ ಮೋದಿಗೆ ಪತ್ರ ಬರೆದಿತ್ತು. ಇದರ ನಂತರ ಒಕ್ಕೂಟ ಸರ್ಕಾರ ನಿನ್ನೆ ಸಂಯುಕ್ತ ಕಿಸಾನ್ ಮೋರ್ಚಾದ ಐದು ಸದಸ್ಯರ ಸಮಿತಿಗೆ ಲಿಖಿತ ಕರಡು ಪ್ರಸ್ತಾವನೆಯನ್ನು ಕಳುಹಿಸಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆ ವಿರುದ್ಧ ಅನ್ನದಾತರು ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ. ಒಂದು ವರ್ಷದಿಂದ ನಿರಂತರವಾಗಿ ಈ ಹೋರಾಟ ಮುಂದುವರೆದಿದೆ. ಇದರ ಮಧ್ಯೆ, ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಳ್ಳುವುದಕ್ಕೂ ಸ್ವಲ್ಪ ದಿನ ಮುಂಚಿತವಾಗಿ ವಿವಾದಿತ ಕೃಷಿ ಕಾನೂನು ವಾಪಸ್ ಪಡೆದುಕೊಳ್ಳುವುದಾಗಿ ಕೇಂದ್ರ ಘೋಷಣೆ ಮಾಡಿತ್ತು. ಇದಾದ ಬಳಿಕ ಕೂಡ ರೈತ ಸಂಘಟನೆಗಳು, ಕನಿಷ್ಠ ಬೆಂಬಲ ಬೆಲೆ ಘೋಷಣೆ, ರೈತರ ಮೇಲಿನ ಎಫ್ಐಆರ್ ಸೇರಿದಂತೆ ಅನೇಕ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೆದಿತ್ತು.
⦁ ಎಂಎಸ್‌ಪಿ ವಿಷಯದ ಕುರಿತು ಕೇಂದ್ರ ಸರ್ಕಾರವು ಎಸ್‌ಕೆಎಂ ಜೊತೆಗೆ ರಾಜ್ಯಗಳು, ಕೃಷಿ ತಜ್ಞರು, ವಿಜ್ಞಾನಿಗಳ ಪ್ರಾತಿನಿಧ್ಯದೊಂದಿಗೆ ಸಮಿತಿಯನ್ನು ರಚಿಸುತ್ತದೆ.
⦁ ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಎಲ್ಲ ಕಡೆ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.
⦁ ಕೇಂದ್ರಾಡಳಿತ ಪ್ರದೇಶಗಳಲ್ಲಿ ರೈತರ ವಿರುದ್ಧದ ದೂರುಗಳೆಲ್ಲವನ್ನು ಹಿಂಪಡೆಯಲಾಗುವುದು. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಿಗೂ ಇದನ್ನು ಅನುಸರಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡುತ್ತಿದೆ.
⦁ ಪಂಜಾಬ್ ರಾಜ್ಯ ಸರ್ಕಾರ ಈಗಾಗಲೇ ಹೋರಾಟದಲ್ಲಿ ಮೃತ ರೈತರಿಗೆ ಪರಿಹಾರ ಘೋಷಿಸಿದೆ. ಈಗ ಯುಪಿ ಮತ್ತು ಹರಿಯಾಣ ಸರ್ಕಾರಗಳು ಪರಿಹಾರಕ್ಕಾಗಿ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿವೆ.
⦁ ವಿದ್ಯುತ್ ಕಾಯ್ದೆ ಕುರಿತು ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳುವುದಾಗಿ ಕೇಂದ್ರ ಭರವಸೆ ನೀಡಿದೆ.
ಈ ಅವಧಿಯಲ್ಲಿ ಮೃತಪಟ್ಟ ಸುಮಾರು 700 ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂಬ ಆಗ್ರಹವೂ ಇದರಲ್ಲಿದೆ. ಅಲ್ಲದೆ ಸರ್ಕಾರ ಕೂಡ ರೈತರ ಬೇಡಿಕೆಗಳಿಗೆ ತಲೆ ಬಾಗಲೇ ಬೇಕಾಗಿದ್ದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂಬಂತೆ. ಮುಂಬರುವ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಒಟ್ಟಿನಲ್ಲಿ ಒಂದು ವರ್ಷದ ಸುದೀರ್ಘ ರೈತ ಹೋರಾಟಕ್ಕೆ ಈಗ ಸಂಪೂರ್ಣ ಜಯ ಸಿಕ್ಕಂತಾಗಿದೆ. ಸದ್ಯ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಆಂದೋಲನವನ್ನು ಅಂತ್ಯಗೊಳಿಸಿ ಪಂಜಾಬ್‌ನ ರೈತರು ತಮ್ಮ ಊರುಗಳಿಗೆ ತೆರಳಲು ನಿರ್ಧರಿಸಿದ್ದಾರೆ.