ದೇವನಹಳ್ಳಿ ಭೂಸ್ವಾಧೀನ: ಮುಂದಿನ ಹೋರಾಟದ ಬಗ್ಗೆ ರೈತರು ಚರ್ಚೆ

ದೇವನಹಳ್ಳಿ: ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಎರಡು ತಿಂಗಳು ಕಳೆದಿದೆ. ಆದಾಗ್ಯೂ, ಈವರೆಗೆ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲಾಗಿದೆ ಎಂಬ ಕುರಿತು ಸರ್ಕಾರ ಡಿನೋಟಿಫಿಕೇಷನ್ ಆದೇಶ ಹೊರಡಿಸದ ಕಾರಣ, ಸೆಪ್ಟೆಂಬರ್‌ 21ರಂದು ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಸಮಿತಿಯು ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿತು. ದೇವನಹಳ್ಳಿ

ಈ ಕುರಿತು ಸಭೆಯಲ್ಲಿ ಮಾತನಾಡಿದ ಕಾರಳ್ಳಿ ಶ್ರೀನಿವಾಸ್, “ಚನ್ನರಾಯಪಟ್ಟಣ ರೈತರು, ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಜುಲೈ 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಈ ಕುರಿತು ದೇಶದಾದ್ಯಂತ ಸುದ್ದಿಯಾಗಿತ್ತು. ಸರ್ಕಾರವು ರೈತರ ಪರ ನಿಲುವು ತೆಗೆದುಕೊಂಡಿದ್ದಾಗಿ ಪ್ರಚಾರವನ್ನೂ ಪಡೆದಿತ್ತು. ಆದರೆ, ಈ ಘೋಷಣೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ” ಎಂದು ಅಸಮಾಧಾನ ಹೊರಹಾಕಿದರು. ದೇವನಹಳ್ಳಿ

ಮತ್ತೊಂದೆಡೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಎರಡು ಹಳ್ಳಿಗಳ 439 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಬೆಲೆ ನಿಗದಿಗೆ ಸಭೆ ಬರುವಂತೆ ಆ ಎರಡು ಹಳ್ಳಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ನೋಟಿಸ್ ನೀಡಲಾಗಿದ್ದು, ಗೊಂದಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಜಾತಿ ಸಮೀಕ್ಷೆ ಪ್ರಶ್ನಿಸಿರುವ ಅರ್ಜಿ ಊರ್ಜಿತತ್ವದ ಪ್ರಶ್ನೆ ಎತ್ತಿದ ಹಿಂದುಳಿದ ವರ್ಗಗಳ ಆಯೋಗ

ರೈತರು ಹೋರಾಟ ತೀವ್ರಗೊಳಿಸುವ ಸೂಚನೆ ನೀಡಿದ ನಂತರ ಈ ಸಭೆಯನ್ನು ಮುಂದೂಡಲಾಗಿದೆ. ಮುಖ್ಯಮಂತ್ರಿ ಆದೇಶಕ್ಕೆ ಬೆಲೆ ನೀಡದವರನ್ನು ಹೇಗೆ ನಂಬುವುದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಚಂದ್ರತೇಜಸ್ವಿ ಮಾತನಾಡಿ, ‘ರೈತರು ತಮ್ಮ ಊರುಗಳಲ್ಲಿ ಮತ್ತೊಮ್ಮೆ ಸಂಘಟಿತರಾಗಿ, ಹೋರಾಟ ಚುರುಕುಗೊಳಿಸಬೇಕು. ಯಾವುದೇ ಸಂದರ್ಭದಲ್ಲಿ ಹೋರಾಟದ ಅನಿವಾರ್ಯತೆ ಎದುರಾಗಬಹುದು. ಎಲ್ಲರೂ ಸನ್ನದ್ಧರಾಗಿರಬೇಕು. ಈ ಬಾರಿ ಹಿಂದಿಗಿಂತಲೂ ಉಗ್ರ ಹೋರಾಟ ರೂಪುಗೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು.

ರೈತರ ಜಮೀನುಗಳ ಪರಭಾರೆ ಪ್ರಕ್ರಿಯೆಯನ್ನು ಕೆಐಎಡಿಬಿ ಕೈಬಿಟ್ಟಿದೆ ಎಂಬ ಆದೇಶವನ್ನು ಸರ್ಕಾರ ಶೀಘ್ರವೇ ಹೊರಡಿಸಬೇಕು. ಇಲ್ಲವಾದಲ್ಲಿ, ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ರೈತರು ಸರ್ಕಾರಕ್ಕೆ ಎಚ್ಚರಿಸಿದರು.

ಸಭೆಯಲ್ಲಿ ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್, ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ವಥಪ್ಪ, ಶ್ರೀನಿವಾಸ್, ಸುಬ್ರಹ್ಮಣಿ, ನಂದೀಶ್, ನಂದನ್, ಗೋಪಿನಾಥ್, ಮುನಿವೆಂಕಟಮ್ಮ, ಲಕ್ಷ್ಮಮ್ಮ, ಮೋಹನ್, ವೆಂಕಟೇಶ್, ಪಿಳ್ಳಣ್ಣ, ಮರಿಯಣ್ಣ, ಲಕ್ಷ್ಮಣ್ಣ ಸೇರಿದಂತೆ ಹಲವು ಗ್ರಾಮಗಳ ರೈತರು ಭಾಗವಹಿಸಿದ್ದರು.

Cut-off box – ‘ದಸರಾ ಬಳಿಕ ಮುಂದಿನ ನಿರ್ಧಾರ’ ಎರಡು ಹಳ್ಳಿಗಳ ರೈತರ ಭೂಸ್ವಾಧೀನದ ಕುರಿತು ಬೆಲೆ ನಿಗದಿ ಸಭೆಗೆ ಹಾಜರಾಗುವಂತೆ ಸೂಚಿಸಿ ಕೆಐಎಡಿಬಿ ನೋಟಿಸ್ ಜಾರಿ ಮಾಡಿರುವ ಕುರಿತು ಸಂಯುಕ್ತ ಹೋರಾಟದ ಮುಖಂಡರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಜೊತೆಗೆ ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಭೇಟಿಗೆ ಸಮಯಾವಕಾಶವನ್ನೂ ಕೇಳಲಾಗಿದೆ. ಆದರೆ ದಸರಾ ಸೇರಿದಂತೆ ಇನ್ನಿತರ ಕಾರಣಗಳಿಂದ ಮುಖ್ಯಮಂತ್ರಿ ಭೇಟಿ ಸಾಧ್ಯವಾಗಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಹೇಳಿದರು. ‘ತಮ್ಮ ಮನವಿಯನ್ನು ಮುಖ್ಯಮಂತ್ರಿ ಪುರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ. ದಸರಾ ಮುಗಿಯುವವರೆಗೆ ಕಾಯೋಣ. ಆ ನಂತರ ನಮ್ಮ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಹೇಳಿದರು.

ಇದನ್ನೂ ನೋಡಿ: ಸಾಮಾಜಿಕ, ಆರ್ಥಿಕ ಸಮೀಕ್ಷೆ (ಜಾತಿ ಗಣತಿ)‌ ಜಾರಿ: ಮು.ಮಂ. ಸಿದ್ದರಾಮಯ್ಯ ಕೊಟ್ಟ ಕುದುರೆ ಏರುವರೇ? Janashakthi Media

Donate Janashakthi Media

Leave a Reply

Your email address will not be published. Required fields are marked *