ಬೇಡಿಕೆ ಈಡೇರಿಕೆಯ ಉಲ್ಲಂಘನೆ: ದೇಶದಾದ್ಯಂತ ನವೆಂಬರ್ 26ರಿಂದ ರಾಜಭವನಗಳಿಗೆ ರೈತರ ಮೆರವಣಿಗೆ

ನವದೆಹಲಿ: ಕೇಂದ್ರ ಸರ್ಕಾರವು ತನ್ನ ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ರದ್ದುಗೊಳಿಸಿದ ಒಂದು ವರ್ಷದ ನಂತರ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಮ್ಮ ಬಾಕಿ ಇರುವ ಇತರ ಬೇಡಿಕೆಗಳನ್ನು ಈಡೇರಿಸುವ ಕೇಂದ್ರದ ಭರವಸೆ ಉಲ್ಲಂಘನೆಯನ್ನು ವಿರೋಧಿಸಿ ನವೆಂಬರ್ 26 ರಂದು ರಾಜಭವನಗಳಿಗೆ ರಾಷ್ಟ್ರವ್ಯಾಪಿ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.

ದೇಶದಾದ್ಯಂತ ರಾಜಭವನಗಳಿಗೆ ಮೆರವಣಿಯನ್ನು ಕೈಗೊಂಡಿರುವುದು ರೈತರ ಪ್ರತಿಭಟನೆಯ ಮುಂದಿನ ಹಂತದ ಆರಂಭವನ್ನು ಸೂಚಿಸುತ್ತಿದ್ದು, ಋಣಭಾರದಿಂದ ಮುಕ್ತಿ ಸೇರಿದಂತೆ ತಮ್ಮ ಇತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೆ ನಿರಂತರ ಹೋರಾಟಕ್ಕೆ ಸಿದ್ಧರಾಗಿ ಮತ್ತು ಕೈಜೋಡಿಸುವಂತೆ ಎಸ್‌ಕೆಎಂ ಎಲ್ಲ ರೈತರಲ್ಲಿ ಮನವಿ ಮಾಡುತ್ತಿದೆ’ ಎಂದು ಎಸ್‌ಕೆಎಂ ಮುಖಂಡ ದರ್ಶನ್ ಪಾಲ್ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರೈತ ಸಂಘವು ನವೆಂಬರ್ 19 ಅನ್ನು ‘ಫತೇ ದಿವಸ್’ ಅಥವಾ ವಿಜಯ ದಿನವನ್ನು ಆಚರಿಸುತ್ತದೆ. ಈ ದಿನ ಸರ್ಕಾರವು ಪ್ರತಿಭಟನಾನಿರತ ರೈತರ ಬೇಡಿಕೆಗೆ ಮಣಿದಿತ್ತು. ಡಿಸೆಂಬರ್ 1 ರಿಂದ 11 ರವರೆಗೆ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭಾ ಸಂಸದರು ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳ ಶಾಸಕರ ಕಚೇರಿಗಳಿಗೆ ಮೆರವಣಿಗೆಗಳನ್ನು ನಡೆಸಲಿದೆ.

ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಜೀಪು ಹರಿಸಿ ಕೊಂದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಆಯಾ ರಾಜ್ಯಗಳ ಪ್ರಮುಖ ಸ್ಥಳೀಯ ಬೇಡಿಕೆಗಳ ಜೊತೆಗೆ ಎಸ್‌ಕೆಎಂ ಪ್ರತಿಭಟನೆಯ ಸಂದರ್ಭದಲ್ಲಿ ಹುತಾತ್ಮರಾದ ಎಲ್ಲಾ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಪಾಲ್ ಹೇಳಿದರು.

ಎಐಕೆಎಸ್‌ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಮಾತನಾಡಿ,  ಕೇಂದ್ರ ಸರ್ಕಾರವು 2021ರ ಡಿಸೆಂಬರ್ 9ಪಂದು ಕಾನೂನುಬದ್ಧವಾಗಿ ಖಾತರಿಪಡಿಸಿದ ಎಂಎಸ್‌ಪಿ ಮತ್ತು ವಿದ್ಯುತ್ ಬಿಲ್ ಅನ್ನು ಹಿಂತೆಗೆದುಕೊಳ್ಳುವುದರ ಕುರಿತು ನೀಡಿದ ಲಿಖಿತ ಭರವಸೆಗಳನ್ನು ಅನುಷ್ಠಾನಗೊಳಿಸಿಲ್ಲ. ಎಂಎಸ್‌ಪಿ ಕುರಿತು ಸಮಿತಿಯನ್ನು ರಚಿಸಿಲ್ಲ ಅಥವಾ ಪ್ರತಿಭಟನೆಯ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಿಸಲಾದ “ಸುಳ್ಳು” ಪ್ರಕರಣಗಳನ್ನು ಹಿಂಪಡೆದಿಲ್ಲ ಎಂದು ಆರೋಪಿಸಿದರು.

ಸರ್ಕಾರ ನೀಡಿದ ಭರವಸೆಯ ಆಧಾರದ ಮೇಲೆ ರೈತರು ದೆಹಲಿ ಗಡಿಯಲ್ಲಿ ತಮ್ಮ ಐತಿಹಾಸಿಕ ಹೋರಾಟವನ್ನು ಸ್ಥಗಿತಗೊಳಿಸಿದರು ಮತ್ತು 2021ರ ಡಿಸೆಂಬರ್ 11ರಂದು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು. ‘ರೈತರ ನ್ಯಾಯಯುತ ಬೇಡಿಕೆಗಳಿಗೆ ಕೇಂದ್ರ ಸರ್ಕಾರವು ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಿಂದ ಪ್ರಾರಂಭವಾಗುವ ಮತ್ತು ದೇಶದಾದ್ಯಂತ ಹರಡುವ ಬೃಹತ್ ಪ್ರತಿಭಟನೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ವಾರಗಳಲ್ಲಿ ಪ್ರತಿಭಟನೆಗಳನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕೃಷಿ ಕಾನೂನುಗಳ ವಿರುದ್ಧ ನಡೆದ ಒಂದು ವರ್ಷದ ಸುದೀರ್ಘ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘಟನೆಗಳ ಪ್ರಮುಖ ಸಂಸ್ಥೆಯಾದ ಎಸ್‌ಕೆಂ, ಹೋರಾಟದ ಮುಂದಿನ ಹಾದಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಡಿಸೆಂಬರ್ 8ರಂದು ಸಭೆಯನ್ನು ಸಹ ಕರೆದಿದೆ ಎಂದು ಹನ್ನನ್ ಮೊಲ್ಲಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಕೆಎಂ ನಾಯಕರಾದ, ಯುದ್ವೀರ್ ಸಿಂಗ್, ಅವಿಕ್ ಸಾಹ ಮತ್ತು ಅಶೋಕ್ ಧವಳೆ ಇದ್ದರು.

Donate Janashakthi Media

Leave a Reply

Your email address will not be published. Required fields are marked *