ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಕಾರಿಗೆ ಈರುಳ್ಳಿ, ಟೊಮೆಟೊ ಎಸೆದ ಉದ್ರಿಕ್ತ ರೈತರು

ನಾಸಿಕ್: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಕಾರು ಮತ್ತು ಬೆಂಗಾವಲು ವಾಹನವನ್ನು ತಡೆಯಲು ಯತ್ನಿಸಿದ ನೂರಾರು ರೈತರು, ತಮ್ಮ ಸಂಕಷ್ಟಗಳತ್ತ ರಾಜ್ಯ ಸರ್ಕಾರ ಗಮನಹರಿಸುವಂತೆ ಆಗ್ರಹಿಸಿ ಈರುಳ್ಳಿ ಮತ್ತು ಟೊಮೆಟೊಗಳಿಂದ ದಾಳಿ ನಡೆಸಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಡಿಸಿಎಂ ಓಝಾರ್ ವಿಮಾನ ನಿಲ್ದಾಣದಿಂದ ದಿಂಡೋರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಉಪಮುಖ್ಯಮಂತ್ರಿಯ ವಾಹನಗಳನ್ನು ಅಡ್ಡಗಟ್ಟಿದ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅಷ್ಟೆ ಅಲ್ಲದೆ, ಕಾರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ರೈತರು ಈರುಳ್ಳಿ ಮತ್ತು ಟೊಮೆಟೊಗಳನ್ನು ಕಾರುಗಳಿಗೆ ಗುರಿಯಾಗಿಸಿ ಎಸೆದಿದ್ದಾರೆ ಎಂದು ವರದಿಯಾಗಿದೆ. ರೈತರ ದಾಳಿಯ ಬಗ್ಗೆ ತಿಳಿದು ಸಮೀಪದ ಕಲ್ವಾನ್‌ನಿಂದ ಬಂದ ಪೋಲೀಸರು ಸ್ಥಳಕ್ಕೆ ತಲುಪಿ, ಯಾವುದೇ ಅಹಿತಕರ ಘಟನೆಗಳಿಲ್ಲದೆ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಿದ್ದಾರೆ.

ಇದನ್ನೂ ಓದಿ: ದ್ವೇಷ ಭಾಷಣ ಪ್ರಕರಣಗಳ ಪಟ್ಟಿಯಲ್ಲಿ ಬಿಜೆಪಿ ಸಂಸದ-ಶಾಸಕರಿಗೆ ಅಗ್ರಸ್ಥಾನ!

ಈರುಳ್ಳಿ ಮೇಲಿನ ರಫ್ತು ಸುಂಕವನ್ನು ಹಿಂಪಡೆಯುವಂತೆ ಮತ್ತು ಟೊಮೆಟೊಗಳಿಗೆ ಉತ್ತಮ ಬೆಂಬಲ ಬೆಲೆ ನೀಡಿ ರೈತರಿಗೆ ಸರಿಯಾದ ಜೀವನೋಪಾಯವನ್ನು ಖಚಿತಪಡಿಸುವಂತೆ ರೈತರು ಆಗ್ರಹಿಸಿದ್ದಾರೆ. “ನಾವು ಸರ್ಕಾರದ ನೀತಿಗಳನ್ನು ಖಂಡಿಸುತ್ತೇವೆ. ರೈತರು ಸಾಯುತ್ತಿದ್ದಾರೆ… ಈರುಳ್ಳಿ ಮೇಲಿನ ರಫ್ತು ಸುಂಕವನ್ನು ಹಿಂಪಡೆಯಬೇಕು ಮತ್ತು ಟೊಮೆಟೊಗೆ ಸೂಕ್ತವಾದ ಕನಿಷ್ಠ ಬೆಂಬಲ ಬೆಲೆಯನ್ನು ನಾವು ಬಯಸುತ್ತೇವೆ” ಎಂದು ಪ್ರತಿಭಟನಾಕಾರರೊಬ್ಬರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿಗೆ ರೈತರು ನೀಡಿರುವ “ಈರುಳ್ಳಿ-ಟೊಮೆಟೋ” ಸ್ವಾಗತವು ಅಜಿತ್ ಪವಾರ್ ಮತ್ತು ಅವರ ತಂಡವನ್ನು ಮುಜುಗರಕ್ಕೀಡುಮಾಡಿದೆ. ನಾಸಿಕ್‌ಗೆ ಅವರು ಲೋಕಸಭೆ ಚುನಾವಣೆಯ ಪೂರ್ವ ಚುನಾವಣಾ ಕೆಲಸದ ಮೇಲ್ವಿಚಾರಣೆಗಾಗಿ ಬಂದಿದ್ದರು. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಬಣವು ನಾಸಿಕ್ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿದೆ.

ಈ ನಡುವೆ, ನಾಸಿಕ್‌ನಲ್ಲಿ ರೈತರು ಈರುಳ್ಳಿ ಮೇಲಿನ ರಫ್ತು ಸುಂಕವನ್ನು ಕಡಿತಗೊಳಿಸುವಂತೆ ಒತ್ತಾಯಿಸಿ, ಸಗಟು ವ್ಯಾಪಾರವನ್ನು ನಿಲ್ಲಿಸಿ 13 ದಿನಗಳ ಕಾಲ ಮುಷ್ಕರ ನಡೆಸಿದ್ದರು. ಆದರೆ ಸರ್ಕಾರದ ಭರವಸೆಯ ನಂತರ ಅಕ್ಟೋಬರ್ 3 ರಂದು ಮುಷ್ಕರವನ್ನು ಹಿಂತೆಗೆದುಕೊಳ್ಳಲಾಯಿತು. ಈ ವೇಳೆ ವ್ಯಾಪಾರಿಗಳು ಅಧಿಕಾರಿಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿದ್ದು ತಮ್ಮ ಬೇಡಿಕೆ ಈಡೇರಿಸಲು ವಿಫಲವಾದರೆ ಮತ್ತೆ ಮುಷ್ಕರ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೇ-ಆಗಸ್ಟ್ ನಡುವೆ 200 ರೂ.ಗೆ ತಲುಪಿದ್ದ ಟೊಮೆಟೊ ಬೆಲೆ, ಇದೀಗ ರೂ. 12-18/ಕೆಜಿ ವ್ಯಾಪ್ತಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ . ಈ ಬೆಲೆಯು ರೈತರನ್ನು ಕಂಗಾಲಾಗಿಸಿದೆ.

ವಿಡಿಯೊ ನೋಡಿ: ಪಿಚ್ಚರ್‌ ಪಯಣ : 139 ಚಿತ್ರ: ಒಡಹುಟ್ಟಿದವರು ಭಾಷೆ: ಕನ್ನಡನಿರ್ದೇಶನ : ದೊರೈ – ಭಗವಾನ್ ವಿಶ್ಲೇಷಣೆ : ಭಾವನಾ ಮರಾಠೆ

Donate Janashakthi Media

Leave a Reply

Your email address will not be published. Required fields are marked *