ಕುಕನೂರು : ಹೂವು ಕಟ್ಟಿ, ರಸ್ತೆ ಬದಿಗೆ ಕುಳಿತು ಮಾರಾಟ ಮಾಡುವ ಹುಡುಗಿ ಈಗ ಪಿಎಸ್‌ಐ(PSI) ಆಗಿದ್ದಾರೆ!
ಹೌದು, ಅದು ಹೂ ವ್ಯಾಪಾರ ಮಾಡೋ ದೊಡ್ಡ ಕುಟುಂಬ. ಈ ಕುಟುಂಬ ಜೀವನ ಸಂಪೂರ್ಣ ಹೂವಿನ ವ್ಯಾಪಾರದ ಮೇಲೆ ಅವಲಂಬನೆಯಾಗಿತ್ತು. ಈ ಕುಟುಂಬದ ಕುಡಿ ಫರಿದಾ ಬೇಗಂ ಕೂಡಾ ಹೂವಿನ ವ್ಯಾಪಾರ ಮಾಡುತ್ತಿದ್ದರು, ಇವರು ವ್ಯಾಪಾರ ಮಾಡಿಕೊಂಡೆ PSI ಹುದ್ದೆಗೆ ಏರಿದ್ದಾರೆ. ಕಲ್ಯಾಣ ಕರ್ನಾಟಕ ಮೀಸಲಾತಿಯಲ್ಲಿ 17ನೇ ರ್ಯಾಂಕ್ ಪಡೆದಿದ್ದಾರೆ.
ಫರಿದಾ ಬೇಗಂರದ್ದು ದೊಡ್ಡ ಕುಟುಂಬ. ತಂದೆ ಮೌಲಾ ಹುಸೇನ್ ಪಟೇಲ್‍ಗೆ ಒಟ್ಟು 12 ಜನ ಮಕ್ಕಳು ಫರಿದಾ ಬೇಗಂ 9ನೇ ಮಗಳು. 40 ವರ್ಷಗಳಿಂದ ಹೂ ವ್ಯಾಪಾರ ಮಾಡುತ್ತಲೇ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದ ತಂದೆ ತೀರಿಕೊಂಡರು. ತಂದೆ ದಿವಂಗತರಾದ ಬಳಿಕ ಮಕ್ಕಳು ಹೂವಿನ ವ್ಯಾಪಾರವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಫರೀದಾ ಕೂಡ ಸಣ್ಣದೊಂದು ಹೂವಿನ ಅಂಗಡಿಯಲ್ಲಿ ವ್ಯಾಪಾರ ಮಾಡಿದ್ದಾರೆ. ಶಾಲಾ ಕಾಲೇಜು ಓದುವ ಸಮಯದಲ್ಲಿ ಹಳ್ಳಿಹಳ್ಳಿಗೆ ಹೋಗಿ ಹೂ ಮಾರಾಟ ಮಾಡಿದ್ದರು. ಬಿಬಿಎ ಪದವಿ ಮುಗಿದ ಬಳಿಕ ಸರ್ಕಾರಿ ಹುದ್ದೆ ಪಡೆಯಬೇಕೆಂಬ ಫರೀದಾ ಹಂಬಲ ಇದೀಗ ನೆರವೇರಿದೆ.ಒಟ್ಟಾರೆ ಫರಿದಾ ಛಲಕ್ಕೆ ಯಾವುದೇ ಬಡತನ ಅಡ್ಡಿ ಬಂದಿಲ್ಲ. ಮನಸ್ಸಿದ್ರೆ ಮಾರ್ಗ ಅನ್ನೋದಕ್ಕೆ ಫರಿದಾ ಬೇಗಂ ಸಾಕ್ಷಿಯಾಗಿದ್ದಾರೆ.