ಖ್ಯಾತ ವಿಮರ್ಶಕ ಜಿ.ಎಚ್. ನಾಯಕ ಇನ್ನಿಲ್ಲ

ಮೈಸೂರು : ಕನ್ನಡದ ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ, ಪ್ರಾಧ್ಯಾಪಕ, ಜಿ. ಎಚ್ ನಾಯಕ ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಮೈಸೂರಿನಲ್ಲಿ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಜಿ.ಎಚ್ ನಾಯಕ ಅವರಿಗೆ 88 ವರ್ಷ ವಯಸ್ಸಾಗಿತ್ತು.

ಮೈಸೂರಿನ ಸರಸ್ವತಿಪುರಂನಲ್ಲಿ ನೆಲೆಸಿದ್ದ ಅವರ ಅಂತ್ಯಕ್ರಿಯೆ ಮೊಮ್ಮಗಳು ಇಂಗ್ಲೆಂಡ್‌ನಿಂದ ಶನಿವಾರ ಬಂದ ನಂತರ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಜಿ.ಎಚ್.ನಾಯಕ ಎಂದು ಚಿರಪರಿಚಿತರಾಗಿದ್ದ ಅವರ ಪೂರ್ಣ ಹೆಸರು ಗೋವಿಂದರಾಯ ಹಮ್ಮಣ್ಣ ನಾಯಕ . ಸೆಪ್ಟೆಂಬರ್ 18, 1935ರಲ್ಲಿ ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲ್ಲೂಕಿನ ಸೂರ್ವೆಯಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ಮುಂದೆ ಅಲ್ಲಿಯೇ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ ಅವರು ಮೈಸೂರಿನಲ್ಲಿಯೇ ನಿವೃತ್ತ ಜೀವನ ನಡೆಸುತ್ತಿದ್ದರು.

 

ಜಿ.ಎಚ್ ನಾಯಕ ಅವರ ‘ಉತ್ತರಾರ್ಧ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ನಿರಪೇಕ್ಷ’ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ನಿಜದನಿ’ ವಿಮರ್ಶಾ ಕೃತಿಗೆ ವಿ ಎಂ ಇನಾಂದಾರ ಸ್ಮಾರಕ ಬಹುಮಾನ ಲಭಿಸಿವೆ. ಅವರು ಪಂಪ ಪ್ರಶಸ್ತಿ ಪುರಸ್ಕೃತರೂ ಆಗಿದ್ದರು.ಜಿ.ಎಚ್ ನಾಯಕ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಕನ್ನಡ ಸಾಹಿತ್ಯದ ವಿಮರ್ಶೆ, ವಿಶ್ಲೇಷಣೆ ಹಾಗೂ ಬರಹಲೋಕದ ಅಪರೂಪದ ವ್ಯಕ್ತಿ. ಪ್ರಗತಿಪರ ಚಿಂತಕರು, ಸೌಜನ್ಯಶೀಲ, ನಿಷ್ಠುರ ವಿಮರ್ಶಕರಾದ ನಾಯಕ್ ಅವರು ಪೂರ್ವಗ್ರಹವಿಲ್ಲದ ಅಪ್ಪಟ ಮಾನವೀಯ ಮನಸ್ಸುಳ್ಳವರಾಗಿದ್ದರು. ನಾಯಕ್ ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಅನನ್ಯ. ಹಂಪಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶ ಪ್ರಾಧ್ಯಾಪಕರಾಗಿಯೂ ಅವರ ಸೇವೆ ಗಮನಾರ್ಹ.ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಪ್ರಖರ ಚಿಂತರಕೊಬ್ಬರನ್ನು ಕಳೆದುಕೊಂಡಂತಾಗಿದೆ.

Donate Janashakthi Media

Leave a Reply

Your email address will not be published. Required fields are marked *