ಲಕ್ಷ್ಮೇಶ್ವರ | ಉಳ್ಳಾಗಡ್ಡಿ ಬೆಲೆ ಕುಸಿತ ಅನ್ನದಾತ ಕಣ್ಣೀರು

ಲಕ್ಷ್ಮೇಶ್ವರ: ಅತಿವೃಷ್ಟಿಯಿಂದಾಗಿ ತೇವಾಂಶ ಹೆಚ್ಚಾಗಿ ಬೆಳೆ ಕೊಳೆರೋಗಕ್ಕೆ ತುತ್ತಾಗಿ ಇಳುವರಿ ಸಾಕಷ್ಟು ಕುಸಿದಿದೆ. ಮೈ ಮುರಿದು ದುಡಿದರೂ ಉಳ್ಳಾಗಡ್ಡಿ ಬೆಳೆಗಾರರಿಗೆ ಲಾಭ ಸಿಗುತ್ತಿಲ್ಲ. ಇಂಥ ಸಮಯದಲ್ಲಿ ಬೆಲೆಯೂ ಪಾತಾಳಕ್ಕೆ ಇಳಿದಿರುವುದು ಅನ್ನದಾತ ಕಣ್ಣೀರು ಹಾಕುವಂತೆ ಮಾಡಿದೆ. ಲಕ್ಷ್ಮೇಶ್ವರ

ಕಳೆದ ವರ್ಷ ಉಳ್ಳಾಗಡ್ಡಿಗೆ ಉತ್ತಮ ದರ ಸಿಕ್ಕಿತ್ತು. ಈ ವರ್ಷವೂ ಅದೇ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಈ ವರ್ಷ ಕೂಡ ಉಳ್ಳಾಗಡ್ಡಿ ಬೆಳೆದಿದ್ದಾರೆ. ಆರಂಭದಲ್ಲಿ ಚೆನ್ನಾಗಿ ಬೆಳೆದ ಬೆಳೆ ನಂತರ ಸುರಿದ ನಿರಂತರ ಮಳೆಯಿಂದ ಹಾಳಾಗಿದೆ. ಇದೀಗ ಉಳಿದ ಬೆಳೆಯನ್ನಾದರೂ ಕೊಯ್ಲು ಮಾಡಿ ಮಾರಾಟ ಮಾಡಬೇಕೆಂದರೆ ಬೆಲೆ ಕುಸಿದಿದ್ದು, ರೈತರನ್ನು ಕಂಗೆಡಿಸಿದೆ. ಲಕ್ಷ್ಮೇಶ್ವರ

ದನ್ನೂ ಓದಿ :  ಬೆಂಗಳೂರು | ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಿಟಿ ದಿಶಾಂಕ್ ಆಪ್‌ ಬಿಡುಗಡೆ

ತಾಲ್ಲೂಕಿನ ಅಡರಕಟ್ಟಿ, ಪುಟಗಾಂವ್‍ಬಡ್ನಿ, ಮಾಗಡಿ, ಯಳವತ್ತಿ, ಬಟ್ಟೂರ, ಗೊಜನೂರ, ಮಾಡಳ್ಳಿ, ರಾಮಗೇರಿ, ಬಸಾಪುರ, ಗೋವನಾಳ ಮತ್ತಿತರ ಕಡೆಗಳಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಉಳ್ಳಾಗಡ್ಡಿ ಪ್ರತಿವರ್ಷ ಬೆಳೆಯಲಾಗುತ್ತದೆ.

ಬೀಜ, ಗೊಬ್ಬರ, ಕ್ರಿಮಿನಾಶಕ, ಔಷಧೋಪಚಾರಕ್ಕಾಗಿ ರೈತರು ಎಕರೆಗೆ ಕನಿಷ್ಠ ₹30 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಬೆಲೆ ಕುಸಿತದಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಕ್ವಿಂಟಲ್‌ಗೆ ಕೇವಲ ₹500ರಿಂದ ₹800ಕ್ಕೆ ಮಾರಾಟ ಆಗುತ್ತಿದೆ. ಈ ಬೆಲೆಯಲ್ಲಿ ಮಾರಾಟ ಮಾಡಿದರೆ ರೈತರು ಮಾಡಿದ ಖರ್ಚು-ವೆಚ್ಚವೂ ಬರುವುದಿಲ್ಲ. ಹೀಗಾಗಿ ಅನೇಕ ರೈತರು ಬೆಳೆಯನ್ನು ಜಮೀನಿನಿಂದ ಹೊರ ತೆಗೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ.

‘ಕಷ್ಟಪಟ್ಟು ಉಳ್ಳಾಗಡ್ಡಿ ಬೆಳೆದಿದ್ದರೂ ಲಾಭ ಹೋಗಲಿ ಕೊನೆಯ ಪಕ್ಷ ಅಸಲು ಸಹ ರೈತರಿಗೆ ಸಿಗದ ಪರಿಸ್ಥಿತಿ ಇದೆ. ಆದಕಾರಣ ಸರ್ಕಾರ ಕೂಡಲೇ ಉಳ್ಳಾಗಡ್ಡಿ ಬೆಳೆಗಾರರಿಗೆ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು’ ಎಂದು ಭಾರತೀಯ ಕೃಷಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಆಗ್ರಹಿಸಿದರು.

‘ಮಹಾರಾಷ್ಟ್ರದ ಉಳ್ಳಾಗಡ್ಡಿ ಶೇಖರಣೆ ಇನ್ನೂ ಸಾಕಷ್ಟು ಇದೆ. ಅದು ಮಾರಾಟ ಆಗುವವರೆಗೆ ನಮ್ಮ ಭಾಗದ ಉಳ್ಳಾಗಡ್ಡಿ ಮಾರಾಟ ಆಗುವುದು ಕಡಿಮೆ. ಅಲ್ಲದೆ ರಫ್ತು ಬಂದ್ ಆಗಿದೆ. ಹೀಗಾಗಿ ಉಳ್ಳಾಗಡ್ಡಿ ಬೆಲೆ ಕಡಿಮೆ ಆಗಿದೆ’ ಎಂದು ಠೋಕ ವ್ಯಾಪಾರಸ್ಥರು ಹೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *