ಬೆಂಗಳೂರು : ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ತಿರುವು ಸಿಕ್ಕಿದೆ.
ವಿಧಾನಸೌಧದಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ನಕಲಿ ಛಾಪಾ ಕಾಗದ ದಂಧೆ ನಡೆಸುತ್ತಿದ್ದ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಬಾಬು ಎಂಬ ವ್ಯಕ್ತಿಯನ್ನು ಸದ್ಯ ಎಸ್ಐಟಿ (SIT) ಆಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಧಾನಪರಿಷತ್ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ ಬಾಬು ಪತ್ನಿ ಸೀಮಾ ಈಗಾಗಲೇ ಬಂಧನಕ್ಕೊಳಗಾಗಿದ್ದಾಳೆ. ಸೀಮಾ ಬಂಧನದ ನಂತರ ಆರೋಪಿ ಬಾಬು ಛಾಪಾ ಕಾಗದವನ್ನು ಪಡೆದು, ವಿಧಾನಸೌಧದ ಆವರಣದಲ್ಲೇ ಮಾರುತ್ತಿದ್ದ ಎಂಬ ಸತ್ಯ ಬಯಲಾಗಿದೆ.
ಬಾಬು ಏನು ಕೆಲಸ ಮಾಡುತ್ತಾನೆಂದು ಯಾರಿಗೂ ಹೇಳುತ್ತಿರಲಿಲ್ಲ. ಸದ್ಯ ಎಸಿಪಿ ಸಕ್ರಿ ನೇತೃತ್ವದಲ್ಲಿ ರಚನೆಯಾಗಿರುವ ಎಸ್ಐಟಿ ತಂಡ ಬಂಧಿತರಿಂದ 63 ಲಕ್ಷ ರೂ. ಮೌಲ್ಯದ ಛಾಪಾ ಕಾಗದ ಜಪ್ತಿ ಮಾಡಿದ್ದು, ಬಾಬು ಸೇರಿ ಐವರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
2 ರೂಪಾಯಿ ಛಾಪಾ ಕಾಗದದಿಂದ 25 ಸಾವಿರ ರೂ. ಮೌಲ್ಯದ ಛಾಪಾ ಕಾಗದದವರೆಗೂ ಎಲ್ಲವನ್ನೂ ನಕಲಿ ಮಾಡುತ್ತಿದ್ದ ಆರೋಪಿಗಳು, ನಕಲಿ ಫಾಂಟ್ , ಸೀಲ್. ಸ್ಕ್ರೀನ್ ಪ್ರಿಂಟಿಂಗ್ ಬಳಸಿ ಚಾಪಾ ಕಾಗದ ಸೃಷ್ಟಿ ಮಾಡುತ್ತಿದ್ದರು.
ಮೈಸೂರು ಮಹರಾಜರ ಕಾಲದ ರೀತಿಯ ಛಾಪಾ ಕಾಗದ ಕೂಡ ಆರೋಪಿಗಳು ಸೃಷ್ಟಿ ಮಾಡಿದ್ದು, ಹಳೆಯ ಆಸ್ತಿ ಕಬಳಿಸುವ ಉದ್ದೇಶದಿಂದ ಇಂತಹ ನಕಲಿ ಛಾಪಾ ಕಾಗದ ಸೃಷ್ಟಿಯಾಗುತ್ತಿತ್ತು ಎನ್ನುವುದು ತಿಳಿದುಬಂದಿದೆ. ಸದ್ಯ ಹಳೆಯ ಸ್ಟಾಂಪ್ ಪೇಪರ್ ಮತ್ತು ಹೊಸ ಪೇಪರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ನೌಕರರು, ವಕೀಲರು ಸಹ ಶಾಮೀಲು ಆಗಿರುವುದು ವಿಶೇಷ ತನಿಖಾ ದಳದ (ಎಸ್ಐಟಿ) ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬಾಬು, ನಯಾಜ್ , ಹರೀಶ್ 2020 ರಲ್ಲೂ ಕೂಡಾ ಚಾಪಾ ಕಾಗದ ಹಗರಣದಲ್ಲಿ ಬಂಧಿಯಾಗಿದ್ದರು. ಆದೂ ಆಗಲು ದೊಡ್ಡ ಸುದ್ದಿಯಾಗಿತ್ತು. ಬಾಬುಗೆ ವಿಧಾನಸೌಧದಲ್ಲಿ ಕೆಲಸ ನೀಡಿದ್ದು ಯಾರು? ಇತನಿಗೆ ರಾಜಕಾರಣಿಗಳ ಬೆಂಬಲ ಇತ್ತೆ ಎಂಬ ಪ್ರಶ್ನೆಗಳು ಎದ್ದಿವೆ.