ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿ ದ್ವೇಷ ಹರಡಲು ಯತ್ನ ಮಾಡಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಆರ್.ಕನ್ನಡ ಸಂಪಾದಕ ನಿರಂಜನ್ ಅವರ ವಿರುದ್ಧ ಎಸ್. ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಎಂ
ಮಾರ್ಚ್ 27ರಂದು ಸಂಜೆ ಸಂಜೆ 7:15 ಗಂಟೆಗೆ ಆರ್ ಕನ್ನಡ ಸುದ್ದಿ ವಾಹಿನಿಯಲ್ಲಿ ಎಂಜಿ ರಸ್ತೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುವಾಗ ವಾಹನಗಳ ಸಂಚಾರ ತಡೆದು ಆಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಮಾಡಿದ ವಿಡಿಯೋ ತುಣುಕನ್ನು ಪ್ರಸಾರ ಮಾಡಲಾಗಿತ್ತು. ಆದರೆ, ಆ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿದ್ದು, ಬೆಂಗಳೂರಿನ ಕಡೆಗೆ ಪ್ರಯಾಣ ಮಾಡಿರಲಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ವಿಭಾಗದ ಕಾರ್ಯದರ್ಶಿ ರವೀಂದ್ರ ಎಂ.ವಿ. ನೀಡಿರುವ ಪೊಲೀಸ್ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ – ಸಿ.ಎಂ.ಸಿದ್ದರಾಮಯ್ಯ
ವಿಡಿಯೋ ತುಣುಕಿನ ವಾಸ್ತವ ಪರಿಶೀಲಿಸದೆ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವ ಉದ್ದೇಶದಿಂದ ಆರ್. ಕನ್ನಡ ಚಾನೆಲ್ ನಲ್ಲಿ ತಪ್ಪು ಮಾಹಿತಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುದ್ದಿಯನ್ನು ಸುದ್ದಿಯಾಗಿ ಪ್ರಕಟಿಸುವ ಬದಲು ಆರ್. ಕನ್ನಡ ಒಂದು ಪಕ್ಷದ ವಕ್ತಾರನಂತೆ ಕೆಲಸ ಮಾಡುತ್ತಿದೆ ಎಂದು ರವೀಂದ್ರ ಆರೋಪಿಸಿದ್ದಾರೆ.
ರವೀಂದ್ರ ಅವರ ದೂರಿನನ್ವಯ ಆರ್.ಕನ್ನಡ (ರಿಪಬ್ಲಿಕ್) ವಾಹಿನಿಯ ಮಾಲಕ ಅರ್ನಬ್ ಗೋಸ್ವಾಮಿ ಮತ್ತು ಸಂಪಾದಕ ನಿರಂಜನ್ ವಿರುದ್ಧ ಕಲಂ 505(2)ರಡಿ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ನೋಡಿ : ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ಹೇಗಿದೆ? ಸಮಸ್ಯೆ ಸವಾಲುಗಳೇನು?