ಬೆಂಗಳೂರು | ನಕಲಿ ತುಪ್ಪ ಮಾರಾಟ: 1.26 ಕೋಟಿ ರೂ. ಮೌಲ್ಯದ ತುಪ್ಪ ವಶಕ್ಕೆ ಸಿಸಿಬಿ ಪೊಲೀಸರು

ಬೆಂಗಳೂರು:  ಸಿಸಿಬಿ ಪೊಲೀಸರು  ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಡು ಪತ್ತೆಹಚ್ಚಿದಾರೆ. ನಂದಿನಿ ಉತ್ಪನ್ನದ ಅಧಿಕೃತ ಮಾರಾಟಗಾರ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ಧಾರೆ.

ಇದನ್ನೂ ಓದಿ : ರೈತರ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ; 6 ಮಂದಿ ಬಂಧನ

ನಂದಿನಿ ತುಪ್ಪದ ಬಹುಬೇಡಿಕೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪಿಗಳು, ತಮಿಳುನಾಡು ರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ಸಿದ್ದಪಡಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ಧಾರೆ. ಚಾಮರಾಜಪೇಟೆಯ ಮಹೇಂದ್ರ ಮತ್ತು ಈತನ ಪುತ್ರ ದೀಪಕ್‌ ಹಾಗೂ ತಮಿಳುನಾಡು ಮೂಲದ ಮುನಿರಾಜು ಮತ್ತು ಅಭಿಅರಸು ಬಂಧಿತರು. ಆರೋಪಿಗಳಿಂದ 1.26 ಕೋಟಿ ರೂ. ಮೌಲ್ಯದ 8,136 ಲೀಟರ್ ನಕಲಿ ನಂದಿನಿ ಬ್ರ್ಯಾಂಡ್‌ನ ಕಲಬೆರೆಕೆ ತುಪ್ಪ ಮತ್ತು ನಾಲ್ಕು ವಾಹನಗಳು, ಕಲಬೆರೆಕೆ ತುಪ್ಪ ತಯಾರು ಮಾಡಲು ಬಳಸುತ್ತಿದ್ದ ಯಂತ್ರಗಳು, ತೆಂಗು ಮತ್ತು ಪಾಮ್‌ ಆಯಿಲ್‌ ಎಣ್ಣೆಗಳನ್ನು ವಶಕ್ಕೆ ಪಡೆಯಲಾಗಿದೆ.

ಇತ್ತೀಚೆಗೆ ಮಹೇಂದ್ರನ ವ್ಯವಹಾರದಲ್ಲಿ ಕೆಲವೊಂದು ವ್ಯತ್ಯಾಸ ಕಂಡು ಬಂದಿತ್ತು. ಹೀಗಾಗಿ ಕೆಎಂಎಫ್‌ನ ಜಾಗೃತ ದಳದ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದಾಗ 1 ವರ್ಷದಿಂದ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ಧಾರೆ. ಆರೋಪಿಗಳ ಪೈಕಿ ಮಹೇಂದ್ರ ಪರವಾನಿಗೆಯನ್ನು ಪಡೆದು, ನಂದಿನಿ ಉತ್ಪನ್ನಗಳ ಅಧಿಕೃತ ಮಾರಾಟಗಾರನಾಗಿದ್ದಾನೆ. ಈತನ ಪುತ್ರ ದೀಪಕ್ ಇದೇ ವ್ಯವಹಾರ ಮಾಡಿಕೊಂಡಿದ್ದಾನೆ. ಮುನಿರಾಜು ಮತ್ತು ಅಭಿಅರಸು ನಕಲಿ ತುಪ್ಪ ತಯಾರು ಮಾಡಿ ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದರು.
ಅಕ್ರಮ ಹಿನ್ನೆಲೆ ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ನ.14ರಂದು ಮಹೇಂದ್ರ ಮಾಲೀಕತ್ವದ ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್​ಪ್ರೈಸಸ್‌ ಎಂಬ ಗೋಡೌನ್ ಮತ್ತು ಅವರ ಸರಕು ಸಾಗಾಣಿಕೆ ವಾಹನಗಳ ಮೇಲೆ ಸಿಸಿಬಿ ಪೊಲೀಸರು ಮತ್ತು ಕೆಎಂಎಫ್‌ ಜಾಗೃತ ದಳ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದರು. ಈ ವೇಳೆ ತಮಿಳುನಾಡಿನಿಂದ ಕಲಬೆರಕೆ ತುಪ್ಪವನ್ನು ನಂದಿನಿ ಬ್ರ್ಯಾಂಡ್‌ ಸ್ಯಾಚೆಟ್‌ಗಳಿಗೆ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ ಮಹೇಂದ್ರ ಗೋಡೌನ್‌ಗೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.
ದಾಳಿ ವೇಳೆ 5 ಮೊಬೈಲ್‌ಗಳು, 4 ಬೊಲೇರೋ ಗೂಡ್ಸ್ ವಾಹನಗಳ‍ು, ಕೃತ್ಯದಿಂದ ಸಂಪಾದಿಸಿದ 1.19 ಕೋಟಿ ರೂ. ನಗದು, 56.95 ಲಕ್ಷ ರೂ. ಮೌಲ್ಯದ 8136 ಲೀಟರ್ ಕಲಬೆರೆಕೆ ತುಪ್ಪದ ಪ್ಯಾಕೆಟ್‌ಗಳು, ತೆಂಗು ಮತ್ತು ಪಾಮ್‌ ಆಯಿಲ್‌ ತುಂಬಿದ ಕ್ಯಾನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಮಿಳುನಾಡಿನಲ್ಲಿ ಕಲಬೆರಕೆ ತುಪ್ಪ ತಯಾರಿಸುತ್ತಿದ್ದ ವಂಚಕರು, ಅಲ್ಲಿಯೇ ಪ್ಯಾಕೆಟ್‌ ಮತ್ತು ಬಾಟಲಿಗಳಿಗೆ ನಂದಿನಿ ಬ್ರ್ಯಾಂಡ್‌ನ ಸ್ಟಿಕರ್‌ಗಳನ್ನು ಅಂಟಿಸುತ್ತಿದ್ದರು. ಬಳಿಕ ವಾಹನಗಳಲ್ಲಿ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದರು. ಇನ್ನು ಈ ನಕಲಿ ಪ್ಯಾಕೆಟ್‌ಗಳಲ್ಲಿ ಶೇ.60ರಷ್ಟು ಅಸಲಿ ನಂದಿನಿ ತುಪ್ಪ, ಇನ್ನುಳಿದಂತೆ ಪಾಮ್ ಆಯಿಲ್ ಮತ್ತು ತೆಂಗು ಎಣ್ಣೆ ಮಿಶ್ರಣ ಮಾಡಿ ಪ್ಯಾಕೆಟ್ ಮಾಡುತ್ತಿದ್ದರು. ಇದೇ ಪ್ಯಾಕೆಟ್‌ ಹಾಗೂ ಬಾಟಲಿಗಳನ್ನು ಮಹೇಂದ್ರ ಮತ್ತು ಆತನ ಪುತ್ರ ಬೆಂಗಳೂರಿನ ವಿವಿಧ ಸಗಟು, ಚಿಲ್ಲರೆ ಮತ್ತು ನಂದಿನಿ ಪಾರ್ಲರ್‌ಗಳಿಗೆ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟದ ಬಗ್ಗೆ ಕೆಎಂಎಫ್‌ ಜಾಗೃತ ದಳದ ಅಧಿಕಾರಿಗಳಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮತ್ತು ಜಾಗೃತ ದಳ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆಸಲಾಗಿದೆ.

ಇದನ್ನೂ ನೋಡಿ : ಪಿಚ್ಚರ್ ಪಯಣ – 165 | ಸಿನೆಮಾ: ಅನ್ನ, ನಿರ್ದೇಶನ -ಇಸ್ಲಾಹುದ್ದೀನ್ ಎನ್. ಎಸ್ ವಿಶ್ಲೇಷಣೆ : ಎಂ ನಾಗರಾಜ ಶೆಟ್ಟಿ

 

Donate Janashakthi Media

Leave a Reply

Your email address will not be published. Required fields are marked *