ಮುಂಬಡ್ತಿಗೆ ನಕಲಿ ಪದವಿ: ನಾಲ್ವರು ಅಧಿಕಾರಿಗಳು ವಜಾ

ಬೆಂಗಳೂರು: ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಎಂಟು ಹಗರಣಗಳು ನಡೆದಿವೆ. ಶಿಕ್ಷಣ ಇಲಾಖೆ, ಗೃಹ ಇಲಾಖೆ, ಕೆಪಿಎಸ್‌ಸಿ, ಕೆಪಿಟಿಸಿಎಲ್‌, ಕೆಲಸ ಮಾಡಿಕೊಡಲು ಕಮೀಷನ್‌ ಹೀಗೆ ಸಾಲು ಸಾಲು ಹಗರಣಗಳು ಬೆಳಕಿಗೆ ಬರುತ್ತಿವೆ. ಇದರ ಬೆನ್ನಲ್ಲೆ, ಅಸ್ತಿತ್ವದಲ್ಲಿಯೇ ಇಲ್ಲದ ವಿಶ್ವವಿದ್ಯಾಲಯದ ಹೆಸರಿನಲ್ಲಿ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ಮುಂಬಡ್ತಿ ಪಡೆದು ಹಗರಣ ಬೆಳಕಿಗೆ ಬಂದಿದೆ. ನಕಲಿ ಪ್ರಮಾಣ ಪತ್ರ ನೀಡಿದ್ದ ನಾಲ್ವರು ಅಧಿಕಾರಿಗಳನ್ನು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹುದ್ದೆಯಿಂದಲೇ ವಜಾ ಮಾಡಿದೆ.

ಬೀದರ್‌ ಜಿಲ್ಲೆ ಆರೋಗ್ಯ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ ರಾಜಕುಮಾರ, ಸಾಂಖ್ಯಿಕ ನಿರೀಕ್ಷಕರಾದ ಬೀದರ್ ಜಿಲ್ಲೆ ಔರಾದ್‌ ತಾಲ್ಲೂಕು ಕಚೇರಿಯ ಅಬ್ದುಲ್‌ ರಬ್‌, ಭಾಲ್ಕಿ ತಾಲ್ಲೂಕು ಕಚೇರಿಯ ಬಾಲಾಜಿ ಬಿರಾದಾರ ಮತ್ತು ಮೈಸೂರು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಜೆ. ಪುಟ್ಟರಾಜು ವಜಾಗೊಂಡವರು.

ಅಸ್ತಿತ್ವದಲ್ಲಿಯೇ ಇಲ್ಲದ ಸಿಕ್ಕಿಂನ ‘ಈಸ್ಟರ್ನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟಗ್ರೇಟೆಡ್‌ ಲರ್ನಿಂಗ್‌ ಇನ್‌ ಮ್ಯಾನೇಜ್‌ಮೆಂಟ್‌ (ಇಐಐಎಲ್‌ಎಂ) ಯುನಿವರ್ಸಿಟಿ’ ಹೆಸರಿನಲ್ಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ರಾಜಕುಮಾರ ಅವರು ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಯಿಂದ ಸಹಾಯಕ ನಿರ್ದೇಶಕ ಹುದ್ದೆಗೆ, ಅಬ್ದುಲ್‌ ರಬ್‌ ಮತ್ತು ಬಾಲಾಜಿ ಬಿರಾದಾರ ಅವರು ಸಾಂಖ್ಯಿಕ ನಿರೀಕ್ಷಕ ಹುದ್ದೆಯಿಂದ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಗೆ ಬಡ್ತಿ ಪಡೆದಿದ್ದರು.

ಜೆ. ಪುಟ್ಟರಾಜು ಅವರು ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯದ ಪದವಿಪ್ರಮಾಣ ಪತ್ರ ಸಲ್ಲಿಸಿದ್ದರು. ಬಡ್ತಿ ನೀಡಿದ ಬಳಿಕ, ಈ ಅಧಿಕಾರಿಗಳು ಸಲ್ಲಿಸಿದ್ದ ಪದವಿ ಪ್ರಮಾಣಪತ್ರದ ನೈಜತೆಯನ್ನು ಪರಿಶೀಲಿಸಲು ಆಯಾ ವಿಶ್ವವಿದ್ಯಾಲಯಕ್ಕೆ ನಿರ್ದೇಶನಾಲಯವು ಪತ್ರ ಬರೆದಿತ್ತು. ಈಸ್ಟರ್ನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟಗ್ರೇಟೆಡ್‌ ಲರ್ನಿಂಗ್‌ ಇನ್‌ ಮ್ಯಾನೇಜ್‌ಮೆಂಟ್‌ ಯುನಿವರ್ಸಿಟಿಗೆ ಯುಜಿಸಿ ಅಂಗೀಕಾರ ಇಲ್ಲ. ಅಲ್ಲದೆ, 2014-15ರಿಂದ ಈ ವಿಶ್ವವಿದ್ಯಾಲಯವು ಮುಚ್ಚಿದೆ’ ಎಂದು ಸಿಕ್ಕಿಂ ಸರ್ಕಾರ ಮಾಹಿತಿ ನೀಡಿತ್ತು. ಜೆ. ಪುಟ್ಟರಾಜು ಅವರು ಸಲ್ಲಿಸಿದ್ದ ಪದವಿ ಪ್ರಮಾಣಪತ್ರ ನಕಲಿ ಎಂದು ಅಲಗಪ್ಪ ವಿಶ್ವವಿದ್ಯಾಲಯ ಮಾಹಿತಿ ನೀಡಿತ್ತು. ಪದವಿ ‌ಪ್ರಮಾಣಪತ್ರ ನಕಲಿ ಎಂದು ಖಚಿತಗೊಳ್ಳುತ್ತಿದ್ದಂತೆ ಈ ನಾಲ್ವರು ಅಧಿಕಾರಿಗಳಿಗೆ ಹಿಂದಿನ ಹುದ್ದೆಗಳಿಗೆ ಹಿಂಬಡ್ತಿ ನೀಡಿದ್ದ ನಿರ್ದೇಶನಾಲಯ, ಇಲಾಖಾ ತನಿಖೆ ಕೈಗೊಂಡಿತ್ತು.

‘ಇಐಐಎಲ್‌ಎಂ ಯುನಿವರ್ಸಿಟಿಯ ಪದವಿ ಪ್ರಮಾಣಪತ್ರ ನಕಲಿ ಆಗಿದ್ದರೆ ಅದರಲ್ಲಿ ನಮ್ಮ ಪಾತ್ರ ಇಲ್ಲ. ಅದಕ್ಕೆ ಬೀದರ್‌ನಲ್ಲಿ ಕಾರ್ಯಾಚರಿಸುತ್ತಿರುವ, ಈ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರವಾದ ಬಾಲಾಜಿ ಇನ್‌ಸ್ಟಿಟ್ಯೂಟ್‌ ಆಫ್‌ ಪ್ರೊಫೆಷನಲ್‌ ಸ್ಟಡೀಸ್‌ ಆನ್‌ ಎಂಬಿಎ ಕಾಲೇಜು ಕಾರಣ. ಇಐಐಎಲ್‌ಎಂ ವಿಶ್ವವಿದ್ಯಾಲಯವನ್ನು 2014-15ರಲ್ಲಿ ಮುಚ್ಚಲಾಗಿದೆ. ಹೀಗಾಗಿ, ಬಡ್ತಿ ಪಡೆಯಲು ಉದ್ದೇಶಪೂರ್ವಕವಾಗಿ ನಕಲಿ ಪ್ರಮಾಣಪತ್ರ ಸೃಷ್ಟಿಸಿಲ್ಲ. ಅಲ್ಲದೆ, ವಿಶ್ವವಿದ್ಯಾಲಯ ಮುಚ್ಚಿದ್ದರಿಂದ ಪ್ರಮಾಣಪತ್ರಗಳ ನೈಜತೆ ಪರಿಶೀಲನೆ ಆಗಿಲ್ಲ’ ಎಂದು ನಿರ್ದೇಶನಾಲಯ ನೀಡಿದ್ದ ನೋಟಿಸ್‌ಗೆ ರಾಜಕುಮಾರ, ಅಬ್ದುಲ್ ರಬ್‌ ಮತ್ತು ಬಾಲಾಜಿ ಬಿರಾದಾರ ಉತ್ತರ ನೀಡಿದ್ದರು. ಆದರೆ, ಜೆ. ಪುಟ್ಟರಾಜು ಅವರು, ‘ನಕಲಿ ಪದವಿ ಪ್ರಮಾಣಪತ್ರ ವಿಚಾರದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಅದೇ ವೇಳೆ ಇಲಾಖಾ ವಿಚಾರಣೆಯೂ ನಡೆಯುತ್ತಿದೆ. ಏಕಕಾಲದಲ್ಲಿ ಎರಡು ವಿಚಾರಣೆ ನಡೆಸಲು ಕಾನೂನಿನಡಿ ಅವಕಾಶ ಇಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಇಲಾಖಾ ತನಿಖೆ ಕೈಬಿಡಬೇಕು’ ಎಂದು ಉತ್ತರಿಸಿದ್ದರು.

‘ಈ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾದರೆ ದಂಡ ವಿಧಿಸಲು ಅವಕಾಶ ಇದೆ. ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮಗಳ ಅನ್ವಯ ಆರೋಪ ಸಾಬೀತಾಗಿರುವುದರಿಂದ ಉದ್ಯೋಗಕ್ಕೆ ಅನರ್ಹರಾಗಿದ್ದಾರೆ’ ಎಂದು ಪರಿಗಣಿಸಿ ನಿರ್ದೇಶನಾಲಯದ ನಿರ್ದೇಶಕ (ಶಿಸ್ತು ಪ್ರಾಧಿಕಾರಿ) ಎನ್‌. ಮಾಧುರಾಮ್‌ ಅವರು ಈ ನಾಲ್ವರನ್ನೂ ಕರ್ತವ್ಯದಿಂದ ವಜಾಗೊಳಿಸಿ ಆದೇಶಿಸಿದ್ದಾರೆ.

ಘಟನೆಯ ಹಿನ್ನೆಲೆ : ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್‌ ಅವರಿಗೆ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌,   ಪತ್ರ ಬರೆದಿದ್ದರು.  140 ಸಿಬ್ಬಂದಿ ಪೈಕಿ, ಎಂಟು ಹೊರ ರಾಜ್ಯಗಳಲ್ಲಿರುವ 16 ವಿಶ್ವವಿದ್ಯಾಲಯಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ 18, ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ 114 ಮಂದಿ ಪದವಿ ಪ್ರಮಾಣಪತ್ರ ಸಲ್ಲಿಸಿದ್ದು, ಅವುಗಳ ನೈಜತೆ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು.

ಈ ವಿಶ್ವವಿದ್ಯಾಲಯಗಳಿಗೆ ಆಯಾ ರಾಜ್ಯಗಳು ಅನುಮತಿ ನೀಡುವ ವೇಳೆ ಹೊರ ರಾಜ್ಯಗಳಲ್ಲಿ ಕೇಂದ್ರಗಳನ್ನು ತೆರೆದು ಪದವಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆಯೇ, ಈ ವಿಶ್ವವಿದ್ಯಾಲಯಗಳಿಗೆ ದೂರ ಶಿಕ್ಷಣ ಅಥವಾ ಅಂಚೆ ತೆರಪಿನ ಶಿಕ್ಷಣ ಮೂಲಕ ಪದವಿ ನೀಡಲು ಯುಜಿಸಿ ಅಥವಾ ರಾಜ್ಯ ಸರ್ಕಾರ ಅನುಮತಿ ನೀಡಿದೆಯೇ, ನೀಡಿದ್ದರೆ ವರ್ಷದ ಮಾಹಿತಿ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದರು.

ಅಲ್ಲದೆ, ಆಯಾ ರಾಜ್ಯಗಳಲ್ಲಿ ಯಾವ, ಯಾವ ಭಾಷೆಯಲ್ಲಿ (ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ) ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ? ಯುಜಿಸಿ ಅಥವಾ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳನ್ನು ರದ್ದುಪಡಿಸಿದ್ದರೆ ಅದರ ವಿವರ ಮತ್ತು ಯಾವ ವರ್ಷ ರದ್ದು ಆಗಿದೆ ಎಂಬ ಮಾಹಿತಿ, ಈ ವಿ. ವಿಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಗಣಿತಶಾಸ್ತ್ರ ವಿಷಯಗಳಲ್ಲಿ ದೂರ ಶಿಕ್ಷಣ, ಅಂಚೆ ತೆರಪಿನ ಮೂಲಕ ಕಲಿಯಲು ಅವಕಾಶ ಇದೆಯೇ? ವಿಶೇಷವಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷ ಸಮಾಜವಿಜ್ಞಾನ ವಿಷಯವನ್ನು ಅಧ್ಯಯನ ಮಾಡಿ, ದ್ವಿತೀಯ ವರ್ಷದಲ್ಲಿ ಅರ್ಥಶಾಸ್ತ್ರದ ವಿಷಯ ಬದಲಾವಣೆ ಮಾಡಲು ಅವಕಾಶ ಇದೆಯೇ?’ ಎಂಬ ಬಗ್ಗೆಯೂ ಸ್ಪಷ್ಟಪಡಿಸುವಂತೆ ಕೋರಿದ್ದರು.

ಮುಂಬಡ್ತಿಗಾಗಿ ಪದವಿ ಪಡೆದ ಹೊರ ರಾಜ್ಯಗಳ 16 ವಿವಿಗಳು ಈ ರೀತಿ ಇವೆ. 

ಗಾಂಧಿ, ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌, ಆಂಧ್ರಪ್ರದೇಶ

ಡಾ. ಸಿ.ವಿ. ರಾಮನ್‌ ವಿವಿ, ಬಿಲಾಸ್‌ಪುರ, ಛತ್ತೀಸ್‌ಗಡ

ಅಲಗಪ್ಪ ವಿವಿ, ತಮಿಳುನಾಡು

ವಿನಾಯಕ ಮಿಷನ್ಸ್‌ ರಿಸರ್ಚ್‌ ಫೌಂಡೇಷನ್‌, ತಮಿಳುನಾಡು

ಮಧುರೈ ಕಾಮರಾಜ್‌ ವಿವಿ, ತಮಿಳುನಾಡು

ಸಾಮ್‌ ಹಿಗ್ಗಿನ್‌ಬಾಟಂ ಇನ್‌ಸ್ಟಿಟ್ಯೂಟ್‌ ಆಫ್ ಅಗ್ರಿಕಲ್ಚರ್‌ ಟೆಕ್ನಾಲಜಿ ಆಯಂಡ್‌ ಸೈನ್ಸ್‌, ಅಲಹಾಬಾದ್‌, ಉತ್ತರಪ್ರದೇಶ

ಬುಂಧೇಲ್‌ ವಿವಿ, ಝಾನ್ಸಿ, ಉತ್ತರಪ್ರದೇಶ

ಸ್ವಾಮಿ ವಿವೇಕಾನಂದ ಸುಬ್ರಮತಿ ವಿವಿ, ಉತ್ತರಪ್ರದೇಶ

ಶೋಭಿತ್‌ ವಿವಿ, ಮೀರತ್‌, ಉತ್ತರಪ್ರದೇಶ‌

ರಬೀಂದ್ರನಾಥ್ ಠಾಗೋರ್‌ ವಿವಿ, ಭೋಪಾಲ್‌, ಮಧ್ಯಪ್ರದೇಶ

ಸಿಎಂಜೆ ವಿವಿ, ಮೇಘಾಲಯ,

ಸಂಗೈ ಇಂಟರ್‌ನ್ಯಾಷನಲ್‌ ವಿವಿ, ಮಣಿಪುರ

ದಿ ಗ್ಲೋಬಲ್‌ ಓಪನ್‌ ವಿವಿ, ನಾಗಾಲ್ಯಾಂಡ್,

ಜೆ.ಆರ್‌.ಎನ್‌. ರಾಜಸ್ಥಾನ್‌ ವಿದ್ಯಾಪೀಠ, ಉದಯಪುರ, ರಾಜಸ್ಥಾನ

ಕೇಂದ್ರೀಯ ವಿವಿ, ತಮಿಳುನಾಡು.

ಈಸ್ಟರ್ನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟೆಗ್ರೇಟೆಡ್‌ಲರ್ನಿಂಗ್‌ ಇನ್‌ ಮ್ಯಾನೇಜ್‌ಮೆಂಟ್‌ ವಿವಿ, ಸಿಕ್ಕಿಂ

Donate Janashakthi Media

Leave a Reply

Your email address will not be published. Required fields are marked *