ಫ್ಯಾಕ್ಟ್‌ಚೆಕ್: ಜಿ20 ಕಾರ್ಯಕ್ರಮದ ವೇಳೆ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯಿಂದ ‘ಅಲ್ಲಾಹ್’ ಪದ ಮೋದಿ ತೆಗೆದುಹಾಕಿದರೆ?

ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ವಿದೇಶಿ ನಾಯಕರು ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದ್ದರು. ಈ ಕಾರ್ಯಕ್ರಮದ ವೇಳೆ ಹಿನ್ನೆಲೆಯಲ್ಲಿ ಗಾಂಧಿಯವರ ಇಷ್ಟದ ಭಜನೆಗಳಾದ ‘ವೈಷ್ಣವ ಜನತೋ ಮತ್ತು ರಘುಪತಿ ರಾಘವ ರಾಜಾ ರಾಮ್’ ನುಡಿಸಲಾಗಿತ್ತು. ಈ ವೀಡಿಯೊವನ್ನು ಬಿಜೆಪಿ ಬೆಂಬಲಿಗರು ಹಂಚಿಕೊಂಡಿದ್ದು, “ರಘುಪತಿ ರಾಘವ ರಾಜಾ ರಾಮ್” ಎಂಬ ಭಜನೆಯಿಂದ ‘ಅಲ್ಲಾಹ್‌’ ಎಂಬ ಪದವನ್ನು ಪ್ರಧಾನಿ ಮೋದಿ ಅವರು ತೆಗೆದುಹಾಕಿದ್ದಾರೆ ಎಂದು ಪ್ರತಿಪಾದಿಸಿ ವೈರಲ್ ಮಾಡುತ್ತಿದ್ದಾರೆ.

ಶಾಲಿನಿ ಸೇಠ್ ಎಂಬ ಬಿಜೆಪಿ ಬೆಂಬಲಿಗ ಖಾತೆಯೊಂದು ವೀಡಿಯೊವನ್ನು ಟ್ವೀಟ್ ಮಾಡಿ, “ವಾಹ್ ಮೋದಿಯವರೆ ವಾಹ್, ರಾಜ್‌ಘಾಟ್‌ನಿಂದ ಭಾರತದ ಜನರಿಗೆ ಸರಿಯಾದ ಭಜನೆಯನ್ನು ಹಾಡಿದ್ದಕ್ಕಾಗಿ ಪ್ರತಿಯೊಬ್ಬ ಹಿಂದೂವಿನ ಹೃತ್ಪೂರ್ವಕ ಧನ್ಯವಾದಗಳು. ಗಮನವಿಟ್ಟು ಕೇಳಿ, ಬೇರೆಯವರ ಕೊಡುಗೆಯಾ ‘ಅಲ್ಲಾಹ್’ ಎಂಬ ಪದವನ್ನು ತೆಗೆದು ಸರಿಯಾದ ಭಜನೆಯನ್ನು ನುಡಿಸಲಾಯಿತು. ಬೇರೇನು ಬೇಕು, ಜೈ ಸನಾತನ ಧರ್ಮ” ಎಂದು ಬರೆದಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್ ಇಲ್ಲಿದೆ)

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌ | ‘ಯುದ್ಧ ನಡೆದರೆ ಭಾರತದ ಮುಸ್ಲಿಮರು ಪಾಕ್‌ ಪರ’ ಎಂದು ಅಸಾದುದ್ದೀನ್ ಒವೈಸಿ ಹೇಳಿಲ್ಲ

ಮುಕುಂದ್ ಮತ್ತು ಅನೂಪ್ ಕುಮಾರ್‌ ಸಿಂಗ್ ಎಂಬ ಟ್ವಿಟರ್‌ ಬಳಕೆದಾರರು ಕೂಡಾ ಅದೇ ರೀತಿ ಪ್ರತಿಪಾದಿಸಿ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್:

ವಿವಾದಿತ ವಿಡಿಯೊ ಕ್ಲಿಪ್‌ನಲ್ಲಿ ಇರುವ ಹಾಡನ್ನು ಎಚ್ಚರಿಕೆಯಿಂದ ಕೇಳಿದರೆ ಅದು ಎಡಿಟ್ ಮಾಡಿರುವ ವಿಡಿಯೊ ಎಂದು ನಮಗೆ ತಿಳಿಯುತ್ತದೆ. ಮತ್ತಷ್ಟು ಆಧಾರಕ್ಕಾಗಿ, G20 ಶೃಂಗಸಭೆಯಲ್ಲಿ ಪಾಲ್ಗೊಂಡು ರಾಜ್‌ಘಾಟ್‌ನಲ್ಲಿ ಗೌರವ ಸಲ್ಲಿಸಿದ ವಿದೇಶಿ ನಾಯಕರ ವೀಡಿಯೊಗಳು ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಆ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಧೀಕೃತ ಯೂಟ್ಯೂಬ್ ಚಾನೆಲ್ ಅಲ್ಲಿ ಸೆಪ್ಟೆಂಬರ್ 9 ರಂದು ಅಪ್‌ಲೋಡ್ ಮಾಡಲಾಗಿದೆ.

ಈ ವಿಡಿಯೊವನ್ನು ಎಚ್ಚರಿಕೆಯಿಂದ ನೋಡಿದರೆ ವಿದೇಶಿ ನಾಯಕರು ರಾಜ್‌ಘಾಟ್ ತಲುಪಿದಾಗ, ಹಿನ್ನೆಲೆಯಲ್ಲಿ “ವೈಷ್ಣವ್ ಜಾನ್ ತೊ ತೆನೆ ಕಹಿಯೇ ಜೋ ಪೀಡ್ ಪರೈ ಜಾನೇ ರೇ” ಹಾಡು ಪ್ಲೇ ಆಗುತ್ತಿರುವುದು ದಾಖಲಾಗಿದೆ. ಗುಂಪು ಮಹಾತ್ಮಾ ಗಾಂಧಿಯವರಿಗೆ ನಮನ ಸಲ್ಲಿಸಿ ನಿರ್ಗಮಿಸಲು ಪ್ರಾರಂಭಿಸಿದ ನಂತರ, “ರಘುಪತಿ ರಾಘವ್ ರಾಜ ರಾಮ್, ಪತಿತ್ ಪವನ್ ಸೀತಾರಾಮ್” ಹಾಡು ಹಿನ್ನೆಲೆಯಲ್ಲಿ ನುಡಿಸಲಾಗುತ್ತದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಬುರ್ಖಾ ಧರಿಸಿ ಮಹಿಳಾ ವಾಶ್‌ರೂಮ್‌ನಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಈ ವ್ಯಕ್ತಿ ಮುಸ್ಲಿಂ ಅಲ್ಲ

ಗಮನಿಸಬೇಕಾದ ಅಂಶವೆಂದರೆ 7:39 ನಿಮಿಷಗಳಲ್ಲಿ, “ಈಶ್ವರ ಅಲ್ಲಾ ತೇರೋ ನಾಮ್, ಸಬ್ಕೋ ಸಮಂತಿ ದೇ ಭಗವಾನ್” ಎಂಬ ಸಾಲು ಕೇಳಿಬರುತ್ತದೆ. ಹೀಗಾಗಿ ಬಿಜೆಪಿ ಬೆಂಬಲಿಗರು ವೈರಲ್ ಮಾಡುತ್ತಿರುವ, ”ರಾಜ್‌ಘಾಟ್‌ನಲ್ಲಿ ವಿದೇಶಿ ಅತಿಥಿಗಳ ಮುಂದೆ ನರೇಂದ್ರ ಮೋದಿ ಅವರು ಹಾಡಿನಿಂದ ‘ಅಲ್ಲಾಹ್’ ಎಂಬ ಪದವನ್ನು ತೆಗೆದುಹಾಕಿದ್ದಾರೆ” ಎಂಬ ಪ್ರತಿಪಾದನೆ ಸುಳ್ಳಾಗಿದೆ ಎಂಬುವುದು ದೃಢವಾಗುತ್ತದೆ.

ಎನ್‌ಡಿಟಿವಿಯ ಯೂಟ್ಯೂಬ್ ಚಾನೆಲ್ ಕೂಡಾ ಜಿ20 ಶೃಂಗಸಭೆಗೆ ಬಂದ ವಿದೇಶಿ ಅತಿಥಿಗಳು ಮಹಾತ್ಮ ಗಾಂಧಿಯವರ ಅಂತಿಮ ವಿಶ್ರಾಂತಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸುವ ಸಂಪೂರ್ಣ ವಿಡಿಯೊವನ್ನು ಪ್ರಸಾರ ಮಾಡಿದೆ. ಈ ವಿಡಿಯೊದಲ್ಲಿ ಕೂಡಾ “ಈಶ್ವರ ಅಲ್ಲಾ ತೇರೋ ನಾಮ್, ಸಬ್ಕೋ ಸನ್ಮತಿ ದೇ ಭಗವಾನ್” ಎಂಬ ವಾಕ್ಯಗಳನ್ನು ಭಜನೆಯಲ್ಲಿ ಹಾಡುತ್ತಿರುವುದು ಹಿನ್ನಲೆಯಲ್ಲಿ ಹೇಳಿಬರುತ್ತದೆ.

ಒಟ್ಟಿನಲ್ಲಿ ಹೇಳಬಹುದಾದರೆ, ರಾಜ್‌ಘಾಟ್‌ನಲ್ಲಿ ವಿದೇಶಿ ಪ್ರತಿನಿಧಿಗಳು ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಿದಾಗ ನುಡಿಸಲಾಗುತ್ತಿರುವ ಭಜನೆಯಿಂದ ‘ಅಲ್ಲಾಹ್’ ಪದವನ್ನು ತೆಗೆದುಹಾಕಲಾಗಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಪಾದಿಸುತ್ತಿರುವ ಪ್ರತಿಪಾದನೆ ತಪ್ಪಾಗಿದೆ. ಹಾಗೂ ಅವರು ಪೋಸ್ಟ್ ಮಾಡಿರುವ ವಿಡಿಯೊ ಎಡಿಟ್ ಮಾಡಿರುವ ವಿಡಿಯೊಗಳಾಗಿವೆ.

ವಿಡಿಯೊ ನೋಡಿ: ಕ್ರೀಡಾ ಬದ್ಧತೆ ಮೆರೆದ ಮೊಹಮ್ಮದ್‌ ಸಿರಾಜ್‌ Janashakthi Media

Donate Janashakthi Media

Leave a Reply

Your email address will not be published. Required fields are marked *