ಉತ್ತರ ಪ್ರದೇಶದಲ್ಲಿ ಬಾಲಕಿಯೊಬ್ಬರ ದುಪ್ಪಟ ಹಿಡಿದೆಳೆದು ಬೈಕಿನಲ್ಲಿ ಎಳೆದುಕೊಂಡು ಹೋಗಿ ಹುಡುಗಿಯ ಸಾವಿಗೆ ಕಾರಣರಾದ ಮೂವರು ಮುಸ್ಲಿಂ ಯುವಕರಿಗೆ ರಾಜ್ಯದ ಆದಿತ್ಯನಾಥ್ ಸರ್ಕಾರ ನೀಡಿರುವ ಶಿಕ್ಷೆ ಎಂದು ಪ್ರತಿಪಾದಿಸಿ, ಮೂವರು ಯುವಕರು ಕಾಲಿಗೆ ಬ್ಯಾಂಡೇಜ್ ಹಾಕಿ ತೆವಳುತ್ತಿರುವ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಕಾಲಿಗೆ ಬ್ಯಾಂಡೇಜ್ ಹಾಕಿ ತೆವಳುತ್ತಿರುವ ಮೂವರು ಯುವಕರ ಹೆಸರು ಅರ್ಬಾಜ್, ಫೈಸಲ್ ಮತ್ತು ಶಹಬಾಜ್ ಎಂದಾಗಿದೆ ಎಂದು ವಿಡಿಯೊ ಪೋಸ್ಟ್ ಮಾಡಿರುವವರು ಪ್ರತಿಪಾದಿಸಿದಿದ್ದಾರೆ. ವಿಡಿಯೊದಲ್ಲಿ ಸಮವಸ್ತ್ರ ಧರಿಸಿ ನಿಂತಿರುವ ಪೋಲೀಸರು ಕೂಡಾ ಕಂಡುಬರುತ್ತಿದ್ದಾರೆ. ಮುಸ್ಲಿಂ
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಆರೆಸ್ಸೆಸ್ ಅನ್ನು ನಿಷೇಧಿಸಿತೆ ಕೆನಡಾ ಸರ್ಕಾರ?
ವಿಡಿಯೊವನ್ನು ಬಿಜೆಪಿ ಬೆಂಬಲಿಗರು ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ. ಬಿಜೆಪಿ ಯುವ ಘಟಕ ಉತ್ತರ ಪ್ರದೇಶದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಿಚಾ ರಾಜ್‌ಪೂತ್, ವೈರಲ್ ಕ್ಲಿಪ್ ಉತ್ತರ ಪ್ರದೇಶದ್ದು ಎಂದು ಪ್ರತಿಪಾದಿಸಿದ್ದು, “ನೆಲದ ಮೇಲೆ ತೆವಳುತ್ತಿರುವ ಯುವಕರು ಶಹಬಾಜ್ ಮತ್ತು ಅರ್ಬಾಜ್ ಎಂಬ ಆರೋಪಿಗಳು. ಅಂಬೇಡ್ಕರ್ ನಗರದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ದುಪಟ್ಟಾ ಎಳೆದ ಘಟನೆ” ಎಂದು ಬರೆದುಕೊಂಡಿದ್ದಾರೆ.
ರಿಚಾ ರಜಪೂತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ವ್ಯಕ್ತಿಯಾಗಿದ್ದಾರೆ. ಅವರು ಹಂಚಿರುವ ಹಲವಾರು ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಖ್ಯಾತ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಹಲವಾರು ವರದಿಗಳನ್ನು ಮಾಡಿವೆ.
ಇಷ್ಟೆ ಅಲ್ಲದೆ, ಬಿಜೆಪಿ ಬೆಂಬಲಿಗರಾದ ಮೋನಿಕಾ ಲಾಂಗೆ ಎಂಬವರು ಕೂಡಾ ಅದೇ ಪ್ರತಿಪಾದನೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇಷ್ಟೆ ಅಲ್ಲದೆ, ಸುಜೀತ್ ಸ್ವಾಮಿ ಎಂಬ ಬಳಕೆದಾರ ಕೂಡಾ ಈ ವಿಡಿಯೊ ಉತ್ತರ ಪ್ರದೇಶದ್ದಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿ20 ಕಾರ್ಯಕ್ರಮದ ವೇಳೆ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯಿಂದ ‘ಅಲ್ಲಾಹ್’ ಪದ ಮೋದಿ ತೆಗೆದುಹಾಕಿದರೆ?
ಫ್ಯಾಕ್ಟ್‌ಚೆಕ್
ತಪ್ಪು ಪ್ರತಿಪಾದನೆಯೊಂದಿಗೆ ಈ ವಿಡಿಯೊ ಹಂಚಿಕೊಳ್ಳಲಾಗುತ್ತಿದೆ ಎಂದು ಹಲವಾರು ವೆಬ್‌ಸೈಟ್‌ಗಳು ಫ್ಯಾಕ್ಟ್‌ಚೆಕ್ ಮಾಡಿವೆ. ಈ ವಿಡಿಯೊವನ್ನು ಸೆಪ್ಟೆಂಬರ್ 18 ರಂದು ನ್ಯೂಸ್ ಎಕ್ಸ್‌ಪ್ರೆಸ್ ಎಂಬ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಅದರಲ್ಲಿ, “ಭರತ್‌ಪುರದ ಹಿಸ್ಟ್ರಿ ಶೀಟರ್ ಅಜಯ್ ಝಮ್ರಿ ಹತ್ಯೆಯ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮೂಲಕ ಬಂಧಿಸಿದ್ದಾರೆ. ಆರೋಪಿಗಳ ಕಾಲಿಗೆ ಗುಂಡು ತಗುಲಿದೆ” ಎಂದು ಹೇಳುತ್ತದೆ.
ಇದರ ಆಧಾರದಲ್ಲಿ ಯೂಟ್ಯೂಬ್‌ನಲ್ಲಿ ಹುಡುಕಿದರೆ, ಘಟನೆಯ ಬಗ್ಗೆ ವರದಿ ಮಾಡಿರುವ ಫಸ್ಟ್ ಇಂಡಿಯಾ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಜಯ್ ಝಮ್ರಿ ಕೊಲೆ ಪ್ರಕರಣದ ವರದಿಯ ವಿಡಿಯೊ ಲಭ್ಯವಾಗುತ್ತದೆ. ಈ ವಿಡಿಯೊದಲ್ಲಿ ವೈರಲ್ ವೀಡಿಯೊದ ದೃಶ್ಯಗಳನ್ನು ಕಾಣಬಹುದಾಗಿದೆ.
ಈ ವಿಡಿಯೊ ವರದಿಯಲ್ಲಿ, “ಪೊಲೀಸರು ಮೂವರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಬಂಧಿಸಿದ್ದಾರೆ” ಎಂದು ತಿಳಿಸಲಾಗಿದೆ. ವೈರಲ್ ವಿಡಿಯೊದಲ್ಲಿ ಇರುವ ತೆವಳುತ್ತಿರುವ ಅದೇ ಮೂವರು ಯುವಕರು ಈ ವಿಡಿಯೊದಲ್ಲಿ ಕೂಡಾ ಕಾಣಿಸುತ್ತಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ‘ಯುದ್ಧ ನಡೆದರೆ ಭಾರತದ ಮುಸ್ಲಿಂ ಪಾಕ್ ಪರ’ ಎಂದು ಅಸಾದುದ್ದೀನ್ ಒವೈಸಿ ಹೇಳಿಲ್ಲ
ಈ ಬಗ್ಗೆ ಇನ್ನಷ್ಟು ಹುಡುಕಿದರೆ ಅಜಯ್ ಝಾಮ್ರಿ ಹತ್ಯೆ ಪ್ರಕರಣದ ಆರೋಪಿಗಳ ಬಂಧನ ಮತ್ತು ಎನ್‌ಕೌಂಟರ್‌ಗೆ ಸಂಬಂಧಿಸಿದ ವರದಿ ಕೂಡಾ ಲಭ್ಯವಾಗುತ್ತದೆ.
ಸೆಪ್ಟೆಂಬರ್ 6 ರಂದು ದೈನಿಕ್ ಭಾಸ್ಕರ್ ಅವರು ಪ್ರಕಟಿಸಿದ ವರದಿಯಲ್ಲಿ ಈ ಬಗ್ಗೆ ಉಲ್ಲೇಖವಿದ್ದು ಅವರ ಪ್ರಕಾರ, “ಆಗಸ್ಟ್ 27 ರಂದು ಭರತ್‌ಪುರದಲ್ಲಿ ಹಿಸ್ಟ್ರೀ ಶೀಟರ್ ಅಜಯ್ ಝಮ್ರಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ರಾಜಸ್ಥಾನ ಪೊಲೀಸರು ಡೆಹ್ರಾಡೂನ್‌ನಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಡೆಹ್ರಾಡೂನ್‌ನಿಂದ ಮೂವರನ್ನು ಬಂಧಿಸಿದ ನಂತರ ವಿಶೇಷ ತಂಡವು ಭರತ್‌ಪುರಕ್ಕೆ ತಲುಪಿದೆ ಎಂದು ಎಸ್‌ಪಿ ಮೃದುಲ್ ಕಚಾವಾ ಹೇಳಿದ್ದಾರೆ” ಎಂದು ವರದಿ ಹೇಳಿದೆ.
“ಆರೋಪಿಗಳನ್ನು ಅಟಲ್‌ಬಂದ್ ಠಾಣೆಗೆ ಹಸ್ತಾಂತರಿಸುವ ವೇಳೆ ಆರೋಪಿಗಳಲ್ಲಿ ತೇಜ್‌ವೀರ್ ಎಂಬಾತ ಡಿಎಸ್‌ಟಿ ಕಾನ್‌ಸ್ಟೆಬಲ್ ಜಗದೀಶ್ ಅವರ ಪಿಸ್ತೂಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಅವರನ್ನು ಬೆನ್ನಟ್ಟಿದಾಗ ಆರೋಪಿಗಳು ಪೊಲೀಸ್ ತಂಡದ ಉಸ್ತುವಾರಿ ಮುಖೇಶ್ ಮೇಲೆ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದು, ಗುಂಡು ಅವರ ಎದೆಗೆ ತಗುಲಿದೆ. ಆದರೆ, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ ಕಾರಣ ಸ್ವಲ್ಪದರಲ್ಲೇ ಪಾರಾಗಿದ್ದಾರೆ”
“ಪ್ರತಿದಾಳಿ ನಡೆಸಿದ ಪೊಲೀಸರು ಮೂವರು ದುಷ್ಕರ್ಮಿಗಳಾದ ತೇಜ್‌ವೀರ್, ಯುವರಾಜ್ ಮತ್ತು ಬಂಟಿ ಖುಶಾಲ್ ಅವರ ಎರಡೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಇದಾದ ಬಳಿಕ ಅವರನ್ನು ಭರತ್‌ಪುರದ ಆರ್‌ಬಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.” ಎಂದು ದೈನಿಕ್ ಭಾಸ್ಕರ್ ವರದಿ ಹೇಳಿದೆ.
ಈ ವರದಿಯಲ್ಲಿ ಮೂವರು ಆರೋಪಿಗಳ ಚಿತ್ರಗಳನ್ನು ಕೂಡಾ ಪ್ರಕಟಿಸಲಾಗಿದ್ದು, ಆ ಚಿತ್ರವನ್ನು ವೈರಲ್ ವಿಡಿಯೋದೊಂದಿಗಿನ ಯುವಕರಿಗೆ ಹೋಲಿಸಿ ನೋಡಿದರೆ, ಅದು ಅವರೇ ಎಂಬುವುದು ಸ್ಪಷ್ಟವಾಗುತ್ತದೆ. ಹಾಗಾಗಿ ವೈರಲ್ ವಿಡಿಯೊ ಉತ್ತರ ಪ್ರದೇಶದದ್ದಲ್ಲ, ರಾಜಸ್ಥಾನದ್ದು ಎಂಬುದು ದೃಢವಾಗುತ್ತದೆ. ಮುಸ್ಲಿಂ
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬುರ್ಖಾ ಧರಿಸಿ ಮಹಿಳಾ ವಾಶ್‌ರೂಮ್‌ನಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಈ ವ್ಯಕ್ತಿ ಮುಸ್ಲಿಂ ಅಲ್ಲ
ಇದನ್ನು ಕೆಳಗೆ ನೀಡಲಾದ ಗ್ರಾಫಿಕ್‌ನಲ್ಲಿ ಇದನ್ನು ಹೆಚ್ಚು ಸ್ಪಷ್ಟವಾಗಿ ನೋಡಬಹುದು. ವೈರಲ್ ವೀಡಿಯೊದಲ್ಲಿ ಕಂಡುಬರುವ ಆರೋಪಿಯು ದೈನಿಕ್ ಭಾಸ್ಕರ್ ವರದಿಯಲ್ಲಿರುವ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿ ಒಬ್ಬರೇ ಎಂದು ತಿಳಿದುಬರುತ್ತದೆ. ಮುಸ್ಲಿಂ
ಇಷ್ಟೆ ಅಲ್ಲದೆ, ದೈನಿಕ್ ಭಾಸ್ಕರ್ ತಮ್ಮ ವೀಡಿಯೊ ವರದಿಯಲ್ಲಿ ಭರತ್‌ಪುರ ಎಸ್‌ಪಿ ಮೃದುಲ್ ಕಚಾವಾ ಅವರ ಹೇಳಿಕೆಯನ್ನು ಕೂಡಾ ದಾಖಲಿಸಿದೆ. ಮುಸ್ಲಿಂ
ಒಟ್ಟಿನಲ್ಲಿ ಹೇಳುವುದಾದರೆ, ಭರತ್‌ಪುರದ ಅಜಯ್ ಝಮ್ರಿ ಕೊಲೆ ಪ್ರಕರಣದ ಮೂವರು ಆರೋಪಿಗಳಾದ ತೇಜ್‌ವೀರ್, ಯುವರಾಜ್, ಬಂಟಿ ಕೌಶಲ್ ನೆಲದ ತೆವಳುತ್ತಿರುವ ವೀಡಿಯೊವನ್ನು ಉತ್ತರ ಪ್ರದೇಶದ ಬಾಲಕಿಯ ಕೊಲೆ ಆರೋಪಿಗಳಾದ ಅರ್ಬಾಜ್, ಫೈಸಲ್ ಮತ್ತು ಶಹಬಾಜ್ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ತಪ್ಪಾಗಿ ಹಂಚಿಕೊಂಡಿದ್ದಾರೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ಬಳ್ಳಿ ಮಾತ್ರವಲ್ಲ ಬೇರುಗಳನ್ನು ಕೂಡಾ ನಾಶ ಪಡಿಸಬೇಕು: ಚೈತ್ರ ಕುಂದಾಪುರ ವಂಚನೆ ಹಗರಣದ ಬಗ್ಗೆ ಹೋರಾಟಗಾರರ ಆಗ್ರಹ