ಏಪ್ರಿಲ್ 10ರಂದು ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನದ ವೇಳೆಯಲ್ಲಿ ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್ಗುಚಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ನಾಲ್ಕು ಜನರು ಬಲಿಯಾಗಿದ್ದರು. ಯೋಧರು ಗುಂಡು ಹಾರಿಸಿದ್ದು ಸ್ವಯಂ ರಕ್ಷಣೆಗಾಗಿ ಎಂದು ಕೂಚ್ ಬೆಹಾರ್ ಪೊಲೀಸ್ ಅಧಿಕಾರಿ ಹೇಳಿದ್ದರು.
ಕೂಚ್ ಬೆಹಾರ್ ನಲ್ಲಿ ಯೋಧರು ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆ ಕುರಿತು ಬಿಜೆಪಿ ನಾಯಕರು ಗಾಯಗೊಂಡಿರುವ ಸಿಐಎಸ್ಎಫ್ ಯೋಧ ಎಂಬ ಶೀರ್ಷಿಕೆಯೊಂದಿಗೆ ಫೋಟೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ.
ಬಿಜೆಪಿ ನಾಯಕ, ಸಂಸದ ಸೌಮಿತ್ರ ಖಾನ್ ಅವರು ಇದೇ ಫೋಟೊವನ್ನು ಶೇರ್ ಮಾಡಿ ಸಿತಾಲ್ಗುಚಿ ಗಲಭೆಯಲ್ಲಿ ಗಾಯಗೊಂಡ ಯೋಧ ಎಂದು ಹೇಳಿದ್ದಾರೆ.
’ಇದೇ ಫೋಟೊನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡಾ ಶೇರ್ ಮಾಡಿದ್ದರು. ಬಿಜೆಪಿ ಸಂಸದ ಅರ್ಜುನ್ ಸಿಂಗ್ ಇದೇ ಫೋಟೊವನ್ನು ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ಆಮೇಲೆ ಡಿಲೀಟ್ ಮಾಡಿದ್ದಾರೆ.
ಆದರೆ ಬಿಜೆಪಿ ನಾಯಕರು ಈ ಗಲಭೆಯಲ್ಲಿ ನಾಲ್ವರು ನಾಗರಿಕರು ಬಲಿಯಾದ್ದಾರೆ ಎಂದು ಉಲ್ಲೇಖಿಸಿಲ್ಲ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಸಂತೋಷ್ ರಂಜನ್ ರೈ ಅವರು ಕೂಡಾ ಅದೇ ಫೋಟೊ ಟ್ವೀಟ್ ಮಾಡಿಕೊಂಡಿದ್ದಾರೆ.
ಫ್ಯಾಕ್ಟ್ ಚೆಕ್
ಈ ಫೋಟೊ ಬಗ್ಗೆ ಫ್ಯಾಕ್ಟ್ಚೆಕ್ ಮಾಡಿದ ಆಲ್ಟ್ ನ್ಯೂಸ್ ಬಿಜೆಪಿ ನಾಯಕರು ಟ್ವೀಟ್ ಮಾಡಿರುವ ಈ ಫೋಟೋ ಸಿತಾಲ್ಗುಚಿಯಲ್ಲಿ ನಡೆದ ಗಲಭೆಯದ್ದಲ್ಲ ಮತ್ತು ಗಾಯಗೊಂಡ ಯೋಧನ ಫೋಟೊ ಅಲ್ಲ ಎಂದು ಹೇಳಿದೆ.
ಈ ಫೋಟೊ 2021 ಏಪ್ರಿಲ್ 10ರಂದು ದೈನಿಕ್ ಜಾಗರಣ್ನಲ್ಲಿ ಪ್ರಕಟವಾದ ಒಂದು ವರದಿ ಫೋಟೋವಾಗಿದೆ.
Several BJP leaders shared a photo of an injured CISF jawan claiming he was attacked during poll violence in West Bengal’s Sitalkuchi when four people had died in CISF shooting. But the image was shot a day before in Jharkhand. #AltNewsFactCheck https://t.co/8sG4pDX3Ru
— Alt News (@AltNews) April 12, 2021
ದೈನಿಕ್ ಜಾಗರಣ್ ಸುದ್ದಿ
ವರದಿ ಪ್ರಕಾರ ಇದು ಎಎಸ್ಐ ಎಸ್.ಪಿ .ಶರ್ಮಾ ಅವರದ್ದು. ಜಾರ್ಖಂಡ್‌ನ ಭೀಮಕನರಿ ಸಿಐಎಸ್ಎಫ್ ಶಿಬಿರದಲ್ಲಿ ಕರ್ತವ್ಯ ನಿರತರಾಗಿದ್ದಾಗ ಲಂಗೂರ್ ದಾಳಿ ಮಾಡಿತ್ತು. ನಾಲ್ಕು ಲಂಗೂರ್ಗಳು (ಮಂಗ) ಶರ್ಮಾ ಅವರ ಮೇಲೆ ದಾಳಿ ನಡೆಸಿದ್ದು, ಅವರ ಕುತ್ತಿಗೆಗೆ ಗಾಯಗಳಾಗಿತ್ತು. ಶರ್ಮಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಲ್ಲಿದೆ.
ಧನಬಾದ್ನಲ್ಲಿರುವ ಸಿಐಎಸ್ಎಫ್ ಪ್ರಧಾನ ಕಚೇರಿ ಕೂಡಾ ಬಘಮರದಲ್ಲಿ ಎಸ್.ಪಿ ಶರ್ಮಾ ಅವರ ಮೇಲೆ ಲಂಗೂರ್ ಗಳು ದಾಳಿ ಮಾಡಿದ ಫೋಟೊ ಇದು ಎಂದು ಬೂಮ್ ಲೈವ್ಗೆ ತಿಳಿಸಿದೆ.