ಬೆಂಗಳೂರು: ಜಮೀನು ಕೊಡುವುದಾಗಿ ನಂಬಿಸಿ ಕಂಬಾಳು ಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯ ಸ್ವಾಮೀಜಿಗೆ ಮಹಿಳೆಯೊಬ್ಬರು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದಲ್ಲಿ ಈ ಮಠ ಇದೆ. ಚನ್ನವೀರ ಶಿವಾಚಾರ್ಯ ಸ್ವಾಮೀಜಿಗೆ 2000ರಲ್ಲಿ ಫೇಸ್‌ಬುಕ್ ಮೂಲಕ ವರ್ಷಾ ಎಂಬ ಮಹಿಳೆ ಪರಿಚಯವಾಗಿದ್ದಳು. ಕಷ್ಟಗಳನ್ನ ಹೇಳಿಕೊಂಡು ಸ್ವಾಮೀಜಿಯನ್ನ ವರ್ಷಾ ಪರಿಚಯ ಮಾಡಿಕೊಂಡು ಹಂತ ಹಂತವಾಗಿ ಹಣ ಹಾಕಿಸಿಕೊಂಡು ಮೋಸ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಇದನ್ನೂ ಓದಿ : ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಎಲ್‌ಪಿಜಿ ಸಾಗಿಸುತ್ತಿದ್ದ ಗೂಡ್ಸ್ ರೈಲು: ತಪ್ಪಿದ ಭಾರಿ ಅನಾಹುತ
ಆರಂಭದಲ್ಲಿ 500 ರೂಪಯಿ ಹಣ ಹಾಕಿಸಿಕೊಂಡಿದ್ದ ವರ್ಷಾ, ತನ್ನ ಹೆಸರಿನಲ್ಲಿ ಹೆಚ್ಚು ಜಮೀನಿದ್ದು, ಅದನ್ನು ಮಠದ ಹೆಸರಿಗೆ ಬರೆಯುವುದಾಗಿ ಹೇಳಿ, ಯುವತಿ ಹಂತ ಹಂತವಾಗಿ 35 ಲಕ್ಷ ರು ಹಣ ಪಡೆದಿದ್ದಳು. ಜಮೀನು ದಾಖಲೆ ತರುವ ವೇಳೆ ತನ್ನ ಮೇಲೆ ಹಲ್ಲೆಯಾಗಿದ್ದು, ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿರುವುದಾಗಿ ಯುವತಿ ಹೇಳಿದ್ದಳು.
ಆಸ್ಪತ್ರೆ ಬಿಲ್ ಪಾವತಿಸಲು ಸಹ ಹಣ ಕೇಳಿದ್ದಳು. ಆಕೆ ಮೇಲೆ ಅನುಮಾನ ಬಂದಿತ್ತು. ಪರಿಚಯಸ್ಥರೊಬ್ಬರನ್ನು ಆಸ್ಪತ್ರೆಗೆ ಕಳುಹಿಸಿ ವಿಚಾರಿಸಿದಾಗ, ವರ್ಷ ಎಂಬುವವರು ಯಾರೂ ದಾಖಲಾಗಿಲ್ಲವೆಂಬುದು ಗೊತ್ತಾಗಿತ್ತು. ಆನಂತರ ವರ್ಷಾ ಕಡೆಯವರು ಎನ್ನಲಾದ ಮಂಜುಳಾ ಹಾಗೂ ಇತರರು ಮೇ 23ರಂದು ಮಠಕ್ಕೆ ಹೋಗಿ ಗಲಾಟೆ ಮಾಡಿದ್ದರು. 55 ಲಕ್ಷ ವಾಪಸು ಕೊಡುವಂತೆ ಸ್ವಾಮೀಜಿಯನ್ನು ಬೆದರಿಸಿದ್ದರು. ಇದಾದ ನಂತರವೇ ಸ್ವಾಮೀಜಿ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.