ಭಾರತದಲ್ಲಿ ಇಂದು ನವ-ಫ್ಯಾಸಿಸಂ ನ ಅಪಾಯ ತೀವ್ರವಾಗುತ್ತಿರುವ ಸಂದರ್ಭದಲ್ಲಿ ಕಳೆದ ಶತಮಾನದಲ್ಲಿ ಫ್ತಾಸಿಸಂ ಹೇಗೆ ಹುಟ್ಟಿ ಹರಡಿತು? ಅದರ ವಿರುದ್ಧದ ಸೈದ್ಧಾಂತಿಕ ಮತ್ತು ರಾಜಕೀಯ ಹೋರಾಟದಿಂದ ಈ ಸಂದರ್ಭದಲ್ಲಿ ಏನು ಕಲಿಯಬಹುದು? ಎಂಬುದು ಅತ್ಯಂತ ಪ್ರಸ್ತುತವಾದ ವಿಷಯ. ಇಟಲಿಯಲ್ಲಿ ಮುಸಲೋನಿ ನಾಯಕತ್ವದ ಫ್ಯಾಸಿಸಂ ಯಾಕೆ ಹೇಗೆ ಹುಟ್ಟಿ ಹರಡಿತು ? ಮತ್ತು ಅದರ ವಿರುದ್ಧ ಪ್ರತಿರೋಧ ಒಡ್ಡಿ ಸೋಲಿಸುವುದು ಹೇಗೆ ? ಈ ಪ್ರಶ್ನೆಗಳ ಕುರಿತು ಸೈದ್ಧಾಂತಿಕ ಚಿಂತನೆ ಮತ್ತು ರಾಜಕೀಯ ಹೋರಾಟ ಎರಡನ್ನೂ ನಡೆಸಿ 11 ವರ್ಷಗಳ ಕಾಲ ಫ್ಯಾಸಿಸ್ಟ್ ಜೈಲಿನಲ್ಲಿ ತನ್ನ ಕೊನೆಕಾಲ ಕಳೆದ ಅಂಟೊನಿಯೊ ಗ್ರಾಮ್ಶಿ ಅವರ ಚಿಂತನೆಗಳ ಮರುಓದು ಈ ವಿಷಯದ ಅರಿವಿಗೆ ಅನಿವಾರ್ಯವಾದ್ದು. ಪ್ರಮುಖವಾಗಿ ಗ್ರಾಮ್ಶಿ ಅವರ “ಜೈಲು ಟಿಪ್ಪಣಿಗಳು” ಕೃತಿಯನ್ನು ಆಧಾರವಾಗಿಟ್ಟುಕೊಂಡು “ಗ್ರಾಮ್ಶಿ ಚಿಂತನೆಗಳು” ಪುಸ್ತಕವನ್ನು ಬರೆಯಲಾಗಿದೆ. ಇದನ್ನು ಬರೆದವರು ಭಾರತದ ಪ್ರಮುಖ ಮಾರ್ಕ್ಸ್ ವಾದಿ ಚಿಂತಕರು ಮತ್ತು ಕಮ್ಯುನಿಸ್ಟ್ ನಾಯಕರಾದ ಇ.ಎಂ.ಎಸ್ ನಂಬೂದಿರಿಪಾದ್ ಮತ್ತು ಪಿ ಗೋವಿಂದ ಪಿಳ್ಳೆ. ಈ ಪುಸ್ತಕವನ್ನುಕ್ರಿಯಾ ಮಾಧ್ಯಮ ಪ್ರಕಟಿಸಿದ್ದು, ಶಿವಮೊಗ್ಗದಲ್ಲಿ ಎಪ್ರಿಲ್ 9ರಂದು ಗ್ರಾಮ್ಶಿ ಮತ್ತು ಫೂಕೊ ಕುರಿತ ಕಮ್ಮಟದಲ್ಲಿಕರ್ನಾಟಕದ ಪ್ರಮುಖ ಚಿಂತಕ ಕೆ ಫಣಿರಾಜ್ ಅವರು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಈ ಪುಸ್ತಕದ ಆಯ್ದ ಭಾಗಗಳ ಮೂಲಕ ಪುಸ್ತಕದ ಪರಿಚಯ.
ವಸಂತರಾಜ ಎನ್.ಕೆ
ಈ ಪುಸ್ತಕದ ಲೇಖಕರಾದ ಇ.ಎಂ.ಎಸ್ ನಂಬೂದಿರಿಪಾದ್ ಮತ್ತು ಪಿ ಗೋವಿಂದ ಪಿಳ್ಳೆ ಹೇಳುವಂತೆ ಅಂಟೋನಿಯೋ ಗಾಮ್ಶಿ “ಲೆನಿನ್, ರೋಸಾ, ಮಾವೋ ರಂತೆ ಮಾರ್ಕ್ಸ್ವಾದ-ಲೆನಿನ್‌ವಾದದ ಜ್ಞಾನ ಭಂಡಾರಕ್ಕೆ ಮೂಲಭೂತ ಮತ್ತು ವಿಶಿಷ್ಟ ಕೊಡುಗೆಗಳನ್ನು ನೀಡಿದ ಚಿಂತಕ ಮತ್ತು ಕ್ರಾಂತಿಕಾರಿ’. ಅಷ್ಟು ಮಾತ್ರವಲ್ಲ ಮಾರ್ಕ್ಸ್, ಏಂಗೆಲ್ಸ್, ಲೆನಿನ್ ನಂತರ ಅತ್ಯಂತ ಹೆಚ್ಚು ಚರ್ಚಿತರಾದ ಮಾರ್ಕ್ಸ್ವಾದಿ. ಇದಕ್ಕೆ ಅವರು ಸಮಾಜವಾದಿ ಕ್ರಾಂತಿಯ ಹೊಸ್ತಿಲಲ್ಲಿದ್ದ ಇಟಲಿಯಲ್ಲಿ ಅದನ್ನು ಕಸಿದ ಫ್ಯಾಸಿಸ್ಟರ ವಿರುದ್ಧ ಹೋರಾಡುತ್ತಾ ಜೈಲಿನಲ್ಲಿ ಪ್ರಾಣ ಬಿಟ್ಟದ್ದು ಮತ್ತು ಫ್ಯಾಸಿಸಂ-ವಿರೋಧಿ ಹೋರಾಟದ ನಾಯಕತ್ವ ವಹಿಸಿದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯzರ್ಶಿಯಾಗಿದ್ದು ಮಾತ್ರ ಕಾರಣವಲ್ಲ. ಗಾಮ್ಶಿ ಮರಣಾ ನಂತರದ ದಶಕಗಳಲ್ಲಿ ಅವರ ಕೃತಿ, ಚಿಂತನೆಗಳ ಕುರಿತ ವಿಶ್ಲೇಷಣೆಗೆ ಮೀಸಲಾದ (ಸುಮಾರು ೨೦ ಸಾವಿರ) ಲೇಖನಗಳು ಮತ್ತು ಪುಸ್ತಕಗಳನ್ನು ಹಾಗೂ ಉಲ್ಲೇಖಗಳನ್ನು ನೋಡಿದರೆ ಅವರ ವಿಚಾರಗಳ ಪ್ರಖರತೆ, ಮಹತ್ವ ತಿಳಿಯುತ್ತದೆ. ಸೋವಿಯೆಟ್ ಮತ್ತು ಪೂರ್ವ ಯುರೋಪಿನ ದೇಶಗಳಲ್ಲಿ ಸಮಾಜವಾದದ ಹಿನ್ನಡೆಯ ನಂತರ ಗ್ರಾಮ್ಶಿ ಚಿಂತನೆಗಳಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಾಗಿದೆ.
ಈ ಆಸಕ್ತಿ ಕಮ್ಯುನಿಸ್ಟ್, ಎಡ ಚಳುವಳಿಗಳು, ಎಡ ಮತ್ತು ಮಾರ್ಕ್ಸ್ವಾದಿ ಬೌದ್ಧಿಕ ವಲಯಗಳಿಗೆ ಸೀಮಿತವಾಗಿಲ್ಲ. ತಮ್ಮದು ಮಾರ್ಕ್ಸೋತ್ತರ ಚಿಂತನೆ ಎಂದು ಹೇಳುವ ಪೋಸ್ಟ್-ಮಾಡರ್ನಿಸ್ಟರು (ಆಧುನಿಕೋತ್ತರವಾದಿಗಳು), ‘ಸಾಂಸ್ಕೃತಿಕ ಮಾರ್ಕ್ಸ್ವಾದಿಗಳು’ ಎಂದು ಕರೆದುಕೊಳ್ಳುವವರು ಗ್ರಾಮ್ಶಿಯ ಹಲವು ಪರಿಕಲ್ಪನೆಗಳನ್ನು ತಮ್ಮ ಚಿಂತನೆಗಳ ಕೇಂದ್ರದಲ್ಲಿ ಇಟ್ಟುಕೊಂಡಿದ್ದಾರೆ. ಬಲಪಂಥೀಯರು ಮತ್ತು ಉಗ್ರ ಬಲಪಂಥೀಯರಿಗೆ ಸಹ ಗ್ರಾಮ್ಶಿಯ ಕೆಲವು ಚಿಂತನೆಗಳು (ಕೆಲವೊಮ್ಮೆ ತಪ್ಪಾದ ವ್ಯಾಖ್ಯಾನಗಳಿಂದಾಗಿ) ಆಕರ್ಷಕವೆನಿಸಿವೆ. ಯು.ಕೆ ಶಿಕ್ಷಣ ಸಚಿವ ೨೦೧೩ರಲ್ಲಿ “ಗ್ರಾಮ್ಶಿ ಸಾಂಪ್ರದಾಯಿಕ ಶೈಕ್ಷಣಿಕ ವಿಧಾನಗಳನ್ನು ಸಮರ್ಥಿಸಿದ್ದಾರೆ’ ಎಂದು ಹೇಳಿದರೆ, ಉಗ್ರ ಬಲಪಂಥದ ಫ್ರೆಂಚ್ ನಾಯಕ ನೊವೆಲ್ ಡ್ರೋಯ್ಟ್ ಮತ್ತು ಬೆಲ್ಜಿಯನ್ ನಾಯಕ ಫ್ಲಾಮ್ಸ್, ಗ್ರಾಮ್ಶಿ ‘ನಮ್ಮವನು’ ಎಂದರಂತೆ! ಗ್ರಾಮ್ಶಿ ನಮ್ಮ ಕಾಲದ ಮಾರ್ಕ್ಸವಾದಿ ಚಿಂತಕ ಮಾತ್ರವಲ್ಲ, ಎಲ್ಲರೂ ಸ್ಫೂರ್ತಿ ಪಡೆಯುವ ಚಿಂತಕರಾಗಿದ್ದರು – ಹೀಗೆಂದು ಈ ಪುಸ್ತಕದ ಇಂಗ್ಲಿಷ್ ಅನುವಾದಕ ಎಂ.ಜಿ.ರಾಧಾಕೃಷ್ಣನ್ ತಮ್ಮ ಮುನ್ನುಡಿಯಲ್ಲಿ ಹೇಳುತ್ತಾರೆ.
ಭಾರತದಲ್ಲೂ ಒಂದು ಕಡೆ ಎಡ ಮತ್ತು ಮಾರ್ಕ್ಸ್ವಾದಿ ಬುದ್ಧಿಜೀವಿಗಳು, ಕಮ್ಯುನಿಸ್ಟರು ಮತ್ತು ಇನ್ನೊಂದು ಕಡೆ ಪೋಸ್ಟ್-ಮಾಡರ್ನಿಸ್ಟರು ಮತ್ತು ‘ಸಾಂಸ್ಕೃತಿಕ ಮಾರ್ಕ್ಸ್ವಾದಿ’ ಧಾರೆಯಿಂದ ಪ್ರಭಾವಿತರಾದವರು ಗ್ರಾಮ್ಶಿ ಚಿಂತನೆಗಳನ್ನು ಭಾರತದ ಸನ್ನಿವೇಶದ ವಿಶ್ಲೇಷಣೆಗೆ ಅನ್ವಯಿಸಲು ಪ್ರಯತ್ನಿಸಿದ್ದಾರೆ. ಮಾರ್ಕ್ಸವಾದಿ ಚಿಂತಕ ಪ್ರೊ. ಐಜಾಝ್ ಅಹಮದ್ “ಫ್ಯಾಸಿಸಂ ಮತ್ತು ರಾಷ್ಟ್ರೀಯ ಸಂಸ್ಕೃತಿ : ಹಿಂದುತ್ವದ ದಿನಗಳಲ್ಲಿ ಗ್ರಾಮ್ಶಿ ಓದು” ಎಂಬ ದೀರ್ಘ ಪ್ರಬಂಧ ಇಂತಹ ಒಂದು ಉತ್ತಮ ಉದಾಹರಣೆ. ೧೯೮೦ರ ದಶಕದಲ್ಲಿ ಗ್ರಾಮ್ಶಿಯ ಕೃತಿಗಳ ಅಧ್ಯಯನದ ನಂತರ ಇ.ಎಂ.ಎಸ್ ಮತ್ತು ಗೋವಿಂದ ಪಿಳ್ಳೆ ಅವರಿಗೆ “ಗ್ರಾಮ್ಶ್ಷಿಯ ‘ಜೈಲು ಟಿಪ್ಪಣಿ’ಗಳನ್ನು ಕರಗತ ಮಾಡಿಕೊಳ್ಳದೆ ಇಂದಿನ ಪೀಳಿಗೆಯ ಮಾರ್ಕ್ಸ್ವಾದಿ-ಲೆನಿನ್‌ವಾದಿಗಳಿಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ.” ಎಂದನಿಸಿತು. ಹಾಗಾಗಿ ಅವರು ಜೊತೆಯಾಗಿ ‘ಚಿಂತಾ’ ವಾರಪತ್ರಿಕೆಯಲ್ಲಿ ‘ಗ್ರಾಮ್ಶಿಯನ್ ವಿಚಾರ ವಿಪ್ಲವಂ’ ಎಂಬ ಪರಿಚಯಾತ್ಮಕ ಲೇಖನ ಸರಣಿಯನ್ನು ಬರೆದರು. ೧೯೯೬ರಲ್ಲಿ ಅದು ಒಂದು ಪುಸ್ತಕವಾಗಿ ಪ್ರಕಟವಾಯಿತು.
ಈ ಪುಸ್ತಕದಲ್ಲಿ ಗ್ರಾಮ್ಶಿ ಅವರ ಸಂಕಷ್ಟಮಯ ಜೀವನ, ಅವರ ಚಿಂತನೆಗಳ ಅಡಿಗಲ್ಲುಗಳು, ಸುಮಾರು ಎಂಟು ವಿಚಾರ (ಥೀಮ್) ಗಳ ಕುರಿತು ಅವರ ವಿಶ್ಲೇಷಣೆಗಳನ್ನು – ಒಳಗೊಂಡ ಮೂರು ಭಾಗಗಳಿವೆ. ಎಡ-ಪ್ರಗತಿಪರ ಚಳುವಳಿಯ ಕಾರ್ಯಕರ್ತರು ಸೇರಿದಂತೆ ಎಲ್ಲ ಸಾಮಾನ್ಯ ಆಸಕ್ತರಿಗೆ ನಿಲುಕುವಂತೆ ಗ್ರಾಮ್ಶಿ ಅವರ ಸಂಕೀರ್ಣ ಚಿಂತನೆ ವಿಶ್ಲೇಷಣೆಗಳನ್ನು ನಿರೂಪಿಸಿದ ಇದು ಒಂದು ವಿಶಿಷ್ಟ ಪುಸ್ತಕ. ಫಣಿರಾಜ್ ತಮ್ಮ ಮುನ್ನುಡಿಯಲ್ಲಿ ಹೇಳುವಂತೆ “ವಿಶಾಲವಾದ ವಸ್ತು ವಿಷಯಗಳ ಕುರಿತ ಚಿಂತನೆಗಳ ಗಹನತೆಯು ತೆಳುವಾಗದ ಹಾಗೆ ಸೋಸಿದ ಸಾರ ಸಂಗ್ರಹ ರೂಪದ ಕೈಪಿಡಿ” ಇದು. ಗಹನವಾದ ದಪ್ಪದ ಕ್ಲಾಸಿಕ್ ಕೃತಿಗಳನ್ನು ಪೂರ್ತಿಯಾಗಿ ಅನುವಾದ ಮಾಡದೆಯೂ ಸಾರ ಸಂಗ್ರಹ ರೂಪದಲ್ಲಿ ಸಾಮಾನ್ಯರಿಗೆ ನಿಲುಕುವಂತೆ ಹೇಳುವುದು ಅಗತ್ಯ ಮತ್ತು ಸಾಧ್ಯ ಎಂದು ಈ ಕೃತಿ ತೋರಿಸುತ್ತದೆ. ಮಾತ್ರವಲ್ಲ ಅದಕ್ಕೆ ಒಂದು ಒಳ್ಳೆಯ ಮಾದರಿಯನ್ನು ಸಹ ಒದಗಿಸುತ್ತದೆ. ಈ ದೃಷ್ಟಿಯಿಂದಲೂ ಇದೊಂದು ವಿಶಿಷ್ಟ ಕೃತಿ.
ಇದನ್ನೂ ಓದಿ: ರಾಜ್ಯದ ಖಾಸಗಿ ಶಾಲೆ – ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಡೊನೇಷನ್ ಹಾವಳಿ ಕಡಿವಾಣಕ್ಕೆ ಎಸ್ಎಫ್ಐ ಒತ್ತಾಯ
ಈ ಪುಸ್ತಕ ಮಲಯಾಳಂ ಅವೃತ್ತಿಯ ಅನುವಾದ. ಮಲಯಾಳಂನಿಂದ ಕನ್ನಡಕ್ಕೆ ಹಲವು ಸೃಜನಶೀಲ ಮತು ಸೃಜನೇತರ ಕೃತಿಗಳ ಅನುವಾದ ಮಾಡಿರುವ ನುರಿತ ಅನುವಾದಕರಾದ ಪ್ರಭಾಕರನ್ ಕೆ ಮಾಡಿದ್ದಾರೆ. ಅನುವಾದವನ್ನು ಪರಿಷ್ಕರಿಸಲು ೨೦೨೧ರಲ್ಲಿ ಪ್ರಕಟವಾದ ಇಂಗ್ಲಿಷ್ ಅನುವಾದವನ್ನು ಸಹ ಬಳಸಲಾಗಿದೆ.
ಗ್ರಾಮ್ಶಿ ಮತ್ತು ಅವರ ಚಿಂತನೆಗಳ ಕುರಿತು ಕನ್ನಡದಲ್ಲಿ ಬಹುಶಃ ಮೊದಲ ಪುಸ್ತಕ ಬರೆದ ಮತ್ತು ಕರ್ನಾಟಕದ ಪ್ರಮುಖ ‘ಗ್ರಾಮ್ಶಿ ಪಂಡಿತ’ರು ಎಂದು ಗುರುತಿಸಲಾಗುವ ಚಿಂತಕ ಲೇಖಕ ಫಣಿರಾಜ್ ಕೆ ಇದಕ್ಕೆ ಒಂದು ಸ್ಫೂರ್ತಿದಾಯಕ ಮುನ್ನುಡಿ ಬರೆದಿದ್ದಾರೆ.
ಈ ಪುಸ್ತಕದ ಓದು ಗ್ರಾಮ್ಶಿ ಎದುರಿಸಿದ ಸವಾಲನ್ನು ನಮ್ಮ ಕಾಲದಲ್ಲಿ ಎದುರಿಸಲು ಕರ್ನಾಟಕದ ಜನತೆಯನ್ನು ತಯಾರು ಮಾಡುವ ಸಾಧ್ಯತೆಯನ್ನು ಹೊಂದಿದೆ.
ಪುಸ್ತಕದ ಪಠ್ಯದಿಂದ
ಇಟಲಿಯ ಕಮ್ಯೂನಿಸ್ಟ್ ಪಕ್ಷದ ಸ್ಥಾಪಕ ನೇತಾರರಲ್ಲಿ ಪ್ರಮುಖರಾಗಿದ್ದ ಗ್ರಾಮ್ಷಿ ಇಟಲಿಯ ಕ್ರಾಂತಿಯ ಚಳುವಳಿಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲ, ಮಾಸ್ಕೊದಲ್ಲಿ ತಂಗಿದ್ದು ಯೂರೋಪಿನ ವಿವಿಧ ಕೇಂದ್ರಗಳಲ್ಲಿ ಸಂಚರಿಸುತ್ತಾ ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕರಲ್ಲೊಬ್ಬರಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆ ಪಡೆದುಕೊಂಡ ಅನುಭವ ಸಂಪತ್ತಿನ ಮತ್ತು ಅಧ್ಯಯನದ ಬೆಳಕಿನಲ್ಲಿ ನಡೆಸಿದ ವಿಮರ್ಶೆಗಳ ಮತ್ತು ಸ್ವಯಂ-ವಿಮರ್ಶೆಗಳ ಫಲವಾದ ಜ್ಞಾನವನ್ನು ಗ್ರಾಮ್ಷಿ ತಮ್ಮ “ಜೈಲು ಟಿಪ್ಪಣಿ”ಗಳಲ್ಲಿ ಒಳಗೊಂಡಿದ್ದಾರೆ.
ಮಾರ್ಕ್ಸ್ವಾದ-ಲೆನಿನ್‌ವಾದದ ಜ್ಞಾನ ಭಂಡಾರಕ್ಕೆ, ವಿ.ಐ.ಲೆನಿನ್ ನಂತರ ಜರ್ಮನಿಯ ರೋಸಾ ಲಕ್ಸ್ಂಬರ್ಗ್, ಚೈನಾದ ಮಾವೋ ತ್ಸೆ ತುಂಗ್ ಮುಂತಾದವರಂತೆ, ಮೂಲಭೂತ ಮತ್ತು ವಿಶಿಷ್ಟ ಕೊಡುಗೆಗಳನ್ನು ನೀಡಿದ ಮಾರ್ಕ್ಸ್ವಾದಿ ಚಿಂತಕ ಮತ್ತು ಕ್ರಾಂತಿಕಾರಿಗಳ ಸಾಲಿಗೆ ಗ್ರಾಮ್ಶಿ ಸೇರುತ್ತಾರೆ. ಮಾರ್ಕ್ಸ್, ಏಂಗೆಲ್ಸ್ ಮತ್ತು ಲೆನಿನ್ ಇವರಿಂದ ರೂಪುಗೊಂಡ ಕಾರ್ಮಿಕ ವರ್ಗದ ದರ್ಶನ, ರಾಜಕೀಯ ಮತ್ತು ಸಾಂಸ್ಕೃತಿಕ ಧೋರಣೆಗಳನ್ನು ರಾಷ್ಟ್ರ ಮೀಮಾಂಸೆ, ಸಾಂಸ್ಕೃತಿಕ ನೆಲೆಗಟ್ಟು, ಇಟಲಿ ಕ್ರಾಂತಿಯ ಅನುಭವಗಳೊಂದಿಗೆ ಪುನರ್-ಅವಿಷ್ಕಾರ ಮಾಡಿ, ಆ ಮೂಲಕ ಮಾರ್ಕ್ಸ್ವಾದಿ ಲೆನಿನ್‌ವಾದಿ ಅಧ್ಯಯನಗಳು ಮತ್ತು ಜ್ಞಾನಮೀಮಾಂಸೆಗಳನ್ನು ಗ್ರಾಮ್ಶಿ ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಗ್ರಾಮ್ಶ್ಷಿಯ ‘ಜೈಲು ಟಿಪ್ಪಣಿ’ಗಳನ್ನು ಕರಗತ ಮಾಡಿಕೊಳ್ಳದೆ ಇಂದಿನ ಪೀಳಿಗೆಯ ಮಾರ್ಕ್ಸ್ವಾದಿ-ಲೆನಿನ್‌ವಾದಿಗಳಿಗೆ ತಮ್ಮ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ.
ಇ.ಎಂ.ಎಸ್. ನಂಬೂದಿರಿಪಾದ್, ಪಿ ಗೋವಿಂದ ಪಿಳ್ಳೆ
ಮುನ್ನುಡಿಯಿಂದ
ಮಾರ್ಕ್ಸ್ ವಾದ- ಲೆನಿನ್ ವಾದಗಳ ವೈಚಾರಿಕ ಕಣ್ಣೋಟಗಳಿಗೆ ಬದ್ಧವಾಗಿರುವ ಕಾರ್ಮಿಕ ವರ್ಗದ ಪಕ್ಷವು ತನ್ನ ಎದುರಿಗಿರುವ ಸವಾಲುಗಳನ್ನು ನಗಣ್ಯಗೊಳಿಸಿ , ಮುಂದೊಂದು ದಿನ ನಾವು ವಿಜಯಿಯಾಗುತ್ತೇವೆ ಎಂಬ ಹುಂಬ ಆಶಾವಾದದಲ್ಲಿ ಕಾಲ ತಳ್ಳದೆ, ತಾನು ನಡೆದು ಬಂದ ಹಾದಿಯಲ್ಲಿ ಎಸಗಿರುವ ತಪ್ಪುಗಳನ್ನು ವಿಮರ್ಶಿಸಿಕೊಂಡು, ಆಗಿರುವ ಹಿನ್ನಡೆಗಳನ್ನು ಒಪ್ಪಿಕೊಂಡು, ಮುಂದಿನ ಕಾರ್ಯಯೋಜನೆಗಳ ಕಡೆ ನಡೆಯಬೇಕು ಎಂಬ ಸ್ಪಷ್ಟತೆಯಲ್ಲಿ ಈ ಕಿರು ಹೊತ್ತಿಗೆಯನ್ನು ರಚಿಸಲಾಗಿದೆ.
1970ರ ನಂತರದ ಕಾಲದಲ್ಲಿ ಪಂಡಿತ ವಲಯದಲ್ಲಿ ಗ್ರಾಮ್ಶಿಯ ವಿಚಾರಗಳ ಕುರಿತು ವಿಶೇಷ ಆಸಕ್ತಿ ಕಾಣಿಸಿಕೊಂಡಿತು. ತುಂಬು ಬೌದ್ಧಿಕ ಜಿಜ್ಞಾಸೆ, ಪಾಂಡಿತ್ಯದ ಭಾಷಾ ಬಳಕೆಗಳು ಇರುವ ಅಂತಹ ಕೃತಿಗಳಲ್ಲಿ ಚಿಂತನೆಗಳಿಗೆ ಸಂಘಟನಾ ಜಾಗೃತಿಯ ಪ್ರಾಯೋಗಿಕ ಆಚರಣೆಗಳ ರೂಪ ಕೊಡುವ ತುರ್ತು ಕಾಣುವುದಿಲ್ಲ. ಪ್ರಸ್ತುತ ಪುಸ್ತಕದ ಇಬ್ಬರೂ ಲೇಖಕರು ದಶಕಗಳ ಕಾಲ ದುಡಿಯುವ ವರ್ಗವನ್ನು ಸಂಘಟಿಸುವ ಕಾರ್ಯಾಚರಣೆಯ ಭಾಗವಾಗಿ ಬೌದ್ಧಿಕ ಜ್ಞಾನ ಪಡೆದವರಾಗಿ ಇರುವುದರಿಂದ, ಇಲ್ಲಿನ ಚಿಂತನಾ ನಿರೂಪಣೆಯು ಸಂಘಟನಾ ಕಾರ್ಯಶೀಲತೆಯ ಕುಲುಮೆಯಲ್ಲಿ ಬೆಂದು, ಪ್ರಯೋಗದ ಸುತ್ತಿಗೆ ಹೊಡೆತದಲ್ಲಿ ಆಕಾರ ಪಡೆದು, ಕಾರ್ಯಕರ್ತರು ಬಳಸಬಹುದಾದ ಸಂಘಟನಾ ಸಾಧನದ ರೂಪದಲ್ಲಿ ಪ್ರಕಟವಾಗಿದೆ. ಶತಮಾನದ ಇತಿಹಾಸವಿರುವ ದುಡಿಯುವ ವರ್ಗವನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳ ಕಾರ್ಯಕ್ರಮ – ಕಾರ್ಯತಂತ್ರಗಳ ಒರೆಗಲ್ಲಿಗೆ ಉಜ್ಜಿ ಗ್ರಾಮ್ಶಿಯ ವಿಚಾರಗಳ ಮೌಲ್ಯಮಾಪನ ಮಾಡಿರುವುದು ಈ ಕಿರುಹೊತ್ತಿಗೆಯ ವಿಶೇಷ.
ಈ ಕಿರು ಹೊತ್ತಿಗೆಯ ಮುಖೇನ ಘನ ಸಮಾಜವಾದಿ ಚಿಂತಕ – ರಾಜಕಾರಣಿ ಅಂಟೋನಿಯೊ ಗ್ರಾಮ್ಶಿ ‘ನಮ್ಮ ಗ್ರಾಮ್ಶಿ’ ಆಗಲಿ ಎಂದು ಹಾರೈಸುತ್ತೇನೆ.
ಫಣಿರಾಜ್ ಕೆ.
ಇದನ್ನೂ ನೋಡಿ: ಪಿಚ್ಚರ್ ಪಯಣ – 155 | ಕಾಡುವ ವಲಸಿಗ ಫಿಲಂಗಳು – ವಸಂತರಾಜ್ ಎನ್.ಕೆ Janashakthi Media