ಚೈತ್ರನಂತವರನ್ನು ಸಮಾಜ ಕಂಟಕರಾಗಿ ಬೆಳೆಸಿ ಬಿಸಾಡುವವರ ಮುಖ ಬಯಲಾಗಬೇಕಿದೆ – ಮುನೀರ್ ಕಾಟಿಪಳ್ಳ

ಮಂಗಳೂರು: ʼಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನ ಸಂಘಪರಿವಾದ ‘ಹಿಂದುತ್ವ, ರಾಷ್ಟ್ರೀಯತೆ’ ಯ ಡೋಂಗಿತನವನ್ನು ಮತ್ತೆ ಬಯಲುಗೊಳಿಸಿದೆʼ ಎಂದು DYFI ರಾಜ್ಯಾಧ್ಯಕ್ಷ  ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ಅವರು, ʼʼಚೈತ್ರಾ ಕುಂದಾಪರ ಎಂಬ ಎಳೆಯ ಪ್ರಾಯದ ಯುವತಿಯ ಬಾಯಿಯಲ್ಲಿ ಮುಸ್ಲಿಂ ದ್ವೇಷ, ಮತಾಂಧತೆ, ಸುಳ್ಳು ಇತಿಹಾಸದ ಕೊಳಕು ಭಾಷಣಗಳನ್ನು ಮಾಡಿಸಿ, ಆಕೆಗೆ ಕುಂದಾಪುರದ ಕಾಳಿ ಎಂಬ ಬಿರುದನ್ನು ದಯಪಾಲಿಸಿ ಐದಾರು ವರ್ಷಗಳ ಕಾಲ ಕನ್ನಡ ನಾಡಿನ ಉದ್ದಗಲಕ್ಕೂ ಹಲವು ಅನಾಹುತಗಳನ್ನು ಸೃಷ್ಟಿಸಲಾಯಿತು. ಆಕೆ ಸಾಕ್ಷಾತ್ ಧರ್ಮ ರಕ್ಷಣೆಗಾಗಿ ಅವತಾರ ಎತ್ತಿದ ಸಿಂಹಿಣಿ ಎಂಬಂತೆ ಬಿಂಬಿಸಲಾಯಿತುʼʼ ಎಂದು ಮುನೀರ್‌ ಆರೋಪಿಸಿದ್ದಾರೆ. ಮುನೀರ್ ಕಾಟಿಪಳ್ಳ

ಕುಂದಾಪುರ, ಬೈಂದೂರು ಭಾಗದಲ್ಲಿ ಈಕೆಯ ಕೇಸರಿ ಸೀರೆಯುಟ್ಟ ಸಾಕ್ಷಾತ್ ಕಾಳಿಯಂತೆ ಕಾಣುವ ಚಿತ್ರಗಳುಲ್ಲ ಸ್ಟಿಕ್ಕರ್ ಗಳು ಉನ್ಮಾದಿತ ಯುವಕರ ಕಾರು, ಬೈಕುಗಳಲ್ಲಿ ರಾರಾಜಿಸಿದವು, ಫ್ಲೆಕ್ಸ್ ಗಳಲ್ಲಿ ವಿಜೃಂಭಿಸಿದವು. ದೂರದ ಗಂಗಾವತಿ, ಕೊಪ್ಪಳದಿಂದ ಹಿಡಿದು ಕುಂದಾಪುರ, ಸುಳ್ಯದವರಗೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಚುನಾವಣೆ ಗೆಲುವನ್ನು ಈಕೆಯ ಹಸಿ ಹಸಿ ಭಾಷಣಗಳು ಪ್ರಭಾವಿಸಿದವು. ಈಗ, ಬಿಜೆಪಿ MLA ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಿಜೆಪಿ ಪಕ್ಷಕ್ಕೆ ಸೇರಿದ ಉದ್ಯಮಿಯೊಬ್ಬರಿಗೆ 7 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಚೈತ್ರ ಬಂಧನ ನಡೆದಿದೆ. ಚೈತ್ರ ಸಾರ್ವಜನಿಕ ಜೀವನಕ್ಕೆ ಆ ಮೂಲಕ ದೊಡ್ಡ ಹೊಡೆತ ಬಿದ್ದಿದೆ. ಸಂಘಪರಿವಾರ ಬಿಡಿ, “ಏನೂ ನಡೆದಿಲ್ಲ” ಎಂಬಂತೆ ನಡೆದುಕೊಳ್ಳುತ್ತದೆ. ಹೊಸ ಹೊಸ ಚೈತ್ರಾ, ಮುತಾಲಿಕ್ ರಂತವರನ್ನು ಹುಟ್ಟುಹಾಕುತ್ತದೆ ಎಂದರು.

ಕರ್ನಾಟಕ ರಾಜ್ಯ ಸರಕಾರ ಈ ಪ್ರಕರಣವನ್ನು ಚೈತ್ರ ಮತ್ತವಳ ಜೊತೆಗಿರುವ ಮೂರ್ನಾಲ್ಕು ಸಹಚರರ ವಂಚನೆಯಾಗಿಯಷ್ಟೆ ಕಾಣಬಾರದು. ಕಳೆದ ಚುನಾವಣೆಯ ಸಂದರ್ಭ ಟಿಕೆಟ್ ಹಂಚಿಕೆಯಲ್ಲಿ ನಡೆದಿರುವ ಇಂತಹ ಮತ್ತಷ್ಟು ಪ್ರಕರಣಗಳ ಕಡೆಗೂ ಬೆಳಕು ಚೆಲ್ಲಬೇಕು. ಚೈತ್ರಾ ಪರಿಚಯಿಸಿದ ಟಿಕೆಟ್ ಕೊಡಿಸುವ Rss ನ ಹೈಕಮಾಂಡ್ ಪ್ರಭಾವಿಗಳು ‘ನಕಲಿ ವ್ಯಕ್ತಿ’ ಗಳು ಎಂದು ತಿಪ್ಪೆ ಸಾರಿಸಬಾರದು. ಆ ವ್ಯಕ್ತಿಗಳ ಹಿನ್ನಲೆ, ರಾಜಕೀಯ, ಸಂಘಟನಾ ಸ್ಥಾನಮಾನಗಳು ಬಯಲಾಗಬೇಕು, ಅವರಿಗಿಂತ ಮೇಲಿನ ಜನಗಳು ಈ ವಂಚನೆಯಲ್ಲಿ ಶಾಮೀಲಾಗಿರುವ ಸಾಧ್ಯತೆಗಳು ಹೆಚ್ಚಿವೆ. ಅಂತವರೂ ಜೈಲಿಗೆ ಸೇರಬೇಕು, ಜನಸಾಮಾನ್ಯರಿಗೆ ವಾಸ್ತವ ಸತ್ಯ ತಿಳಿಯುವಂತಾಗಬೇಕು‌ ಎಂದು ಅವರು ಒತ್ತಾಯಿಸಿದ್ದಾರೆ.

ಚೈತ್ರ ಕುಂದಾಪುರ ಎಲ್ಲರಿಗೂ ಗೊತ್ತಿರುವ ಮುಖ, ಚೈನ್ ಪ್ರಕರಣದಲ್ಲೇ ಆಕೆಯ ಕುರಿತಾದ ಭ್ರಮೆಗಳು ಕಳಚತೊಡಗಿತ್ತು. ಇನ್ನು ಸಭ್ಯತೆಯ, ಪ್ರಾಮಾಣಿಕತೆಯ, ಸತ್ಯ ಸಂಧತೆಯ ಮುಖವಾಡ ಧರಿಸಿ ಚೈತ್ರನಂತವರನ್ನು ಹುಟ್ಟು ಹಾಕಿ, ಕುಣಿಸಿ, ಬಳಸಿ ಸಮಾಜ ಕಂಟಕರಾಗಿ ಬೆಳೆಸಿ ಬಿಸಾಡುವವರ ಮುಖ ಬಯಲಾಗಬೇಕಿದೆʼʼ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *