ಕೇರಳ ಮತ್ತು ತಮಿಳುನಾಡಿನಲ್ಲಿ ಎರಡು ‘ವಂದೇ ಭಾರತ್’ ರೈಲುಗಳನ್ನು ಉದ್ಘಾಟಿಸಲು ದಕ್ಷಿಣ ರೈಲ್ವೆ 2.63 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದು ಆರ್‌ಟಿಐ ಅರ್ಜಿಯೊಂದರರಿಂದ ಬೆಳಕಿಗೆ ಬಂದಿರುವ ಮಾಹಿತಿ. ಆರ್ ಟಿ ಐ ಕಾರ್ಯಕರ್ತ ಮತ್ತು ಮಾಜಿ ರೈಲ್ವೆ ಉದ್ಯೋಗಿ ಅಜಯ್ ಬಸುದೇವ್ ಬೋಸ್ ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗಳ ಮೂಲಕ ಇದು ಬಹಿರಂಗವಾಗಿದೆ. ದಕ್ಷಿಣ ರೈಲ್ವೇಯ ಚೆನ್ನೈ ವಿಭಾಗದ ಚೆನ್ನೈ-ಕೊಯಂಬತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಲು ಒಟ್ಟು 1,14,42,108 ರೂ. ಖರ್ಚಾಗಿದೆ. ಎಪ್ರಿಲ್ 8 ರಂದು ಪ್ರಧಾನಿಗಳು ಈ ರೈಲಿಗೆ ಚಾಲನೆ ನೀಡಿದರು. ಈ ಪೈಕಿ 1,05,03,624 ರೂ.ಗಳನ್ನು ಚೆನ್ನೈ ಮೂಲದ ಇವೋಕ್ ಮೀಡಿಯಾ ಎಂಬ ಖಾಸಗಿ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗೆ ಪಾವತಿಸಲಾಗಿದೆಯಂತೆ.
ಮತ್ತೊಂದೆಡೆ, ತಿರುವನಂತಪುರ-ಕಾಸರಗೋಡು ರೈಲಿನ ಉದ್ಘಾಟನೆಯನ್ನು ಆಯೋಜಿಸಲು ಮೈತ್ರಿ ಅಡ್ವರ್ಟೈಸಿಂಗ್ ವರ್ಕ್ಸ್ ಪ್ರೈವೇಟ್ ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗೆ ಒಟ್ಟು 1,48,18,259 ರೂ.ಗಳನ್ನು ಪಾವತಿಸಲಾಗಿದೆ ಎಂದು ದಕ್ಷಿಣ ರೈಲ್ವೆಯ ತಿರುವನಂತಪುರಂ ವಿಭಾಗವು ಉತ್ತರ ನೀಡಿದೆ. ಏಪ್ರಿಲ್ 25 ರಂದು ಪ್ರಧಾನಿಗಳಿಂದ ಈ ಉದ್ಘಾಟನೆ ನಡೆಯಿತು.
“ನಾನು ಆರ್‌ಟಿಐ ಮೂಲಕ ಪಡೆಯುತ್ತಿರುವ ಮಾಹಿತಿಯ ಪ್ರಕಾರ, ಅಂತಹ ಕಾರ್ಯಕ್ರಮಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಹಣವನ್ನು ರೈಲ್ವೇಯಲ್ಲಿನ ಸುರಕ್ಷತಾ ಸೌಲಭ್ಯಗಳನ್ನು ಸುಧಾರಿಸಲು ಬಳಸಬಹುದಿತ್ತು. ರೈಲ್ವೇ ತನ್ನದೇ ಆದ ಸಾರ್ವಜನಿಕ ಸಂಪರ್ಕ ವಿಭಾಗವನ್ನು ಹೊಂದಿದ್ದರೂ, ಇವುಗಳಲ್ಲಿ ಹೆಚ್ಚಿನ ಕೆಲಸಗಳನ್ನು ಖಾಸಗಿ ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡಲಾಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ ”ಎಂದು ಬೋಸ್ ಹೇಳಿದ್ದಾರೆ.
ಅಲ್ಲದೆ ನವಂಬರ್ 2022ರಲ್ಲಿ ಆರಂಭವಾದ ಮೈಸೂರು -ಚೆನ್ನೈ ವಂದೇ ಭಾರತ್‍ನ ಉದ್ಘಾಟನೆಗೆ ತಗುಲಿದ ವೆಚ್ಚದ ಬಗ್ಗೆಯೂ ಬೋಸ್ ಕೇಳಿದ್ದರಂತೆ. ಅದಕ್ಕೆ ಉತ್ತರ ಸಿಕ್ಕಿಲ್ಲ. ವಂದೇ ಭಾರತ್ ರೈಲುಗಳ ‘ಯಶಸ್ಸಿನ’ ಬಗ್ಗೆ ಹಾಡಿ ಹೊಗಳುತ್ತಿರುವ ಮುಖ್ಯಧಾರೆಯ ಪತ್ರಿಕೆಗಳು ಕೂಡ ಇದು ಭಾರೀ ದುಬಾರಿಯಾಯಿತು ಎಂದಿವೆ.
ಇದನ್ನೂ ಓದಿ:ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ
ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳಿಗೆ ಪಾವತಿಸಿದ ಮೊತ್ತವನ್ನು ರೈಲ್ವೆ ನಿಲ್ದಾಣಗಳನ್ನು ಅಲಂಕರಿಸಲು, ಸ್ಥಳವನ್ನು ಹೊಳಪು ಮಾಡಲು ಮತ್ತು ಸ್ವಚ್ಛಗೊಳಿಸಲು ಮತ್ತು ಸಾಮಗ್ರಿಗಳ ಮುದ್ರಣ, ಕಾರ್ಯಕ್ರಮದ ಪ್ರಚಾರ ಮತ್ತು ಇತರ ಕೆಲಸಗಳಿಗೆ ಬಳಸಲಾಗಿದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ. ಅಂದರೆ ಈ ಹಣ ಸಾರ್ವಜನಿಕ ಸೌಲಭ್ಯಗಳನ್ನು ಹೆಚ್ಚಿಸಲು ಮಾಡಿರುವ ವೆಚ್ಚ ಅಲ್ಲ ಎಂಬುದು ಸ್ಪಷ್ಟ.
ಈ ದುಬಾರಿ ವೆಚ್ಚ ಕೇಂದ್ರ ಸರ್ಕಾರವು ಪರಿಹರಿಸಲು ವಿಫಲವಾಗಿರುವ ರೈಲ್ವೇಯನ್ನು ಕಾಡುತ್ತಿರುವ ಇತರ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಕಸರತ್ತು ಎಂದು ಬೋಸ್ ಹೇಳಿದ್ದಾರೆ. ಹಾಗೆ ನೋಡಿದರೆ ಒಟ್ಟಾರೆಯಾಗಿ ಪ್ರತಿದಿನ ಭಾರತೀಯ ರೈಲುಗಳು ಹೊತ್ತೊಯ್ಯುವ ಸುಮಾರು 3 ಕೋಟಿ ಪ್ರಯಾಣಿಕರಲ್ಲಿ ಗರಿಷ್ಟ ಸುಮಾರು 2ಲಕ್ಷ ಮಂದಿಯಷ್ಟೇ ಬಳಸಬಲ್ಲ ವಂದೇ ಭಾರತ್ ಬಗ್ಗೆ ಇಷ್ಟೊಂದು ಪ್ರಚಾರವೇ ಏನನ್ನು ತೋರಿಸುತ್ತದೆ ಎಂಬ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ಈಗ ಅದರ ಬಣ್ಣವನ್ನೂ ಬದಲಾಯಿಸಲಾಗುತ್ತಿದೆಯೆಂಬ ವರದಿಗಳೂ ಇವೆ.
ಇದುವರೆಗೆ 25 ವಂದೇ ಭಾರತ್ ರೈಲುಗಳ ಉದ್ಘಾಟನೆಯಾಗಿದೆ.ಎಲ್ಲದಕ್ಕೂ ಹಸಿರು ಬಾವುಟ ತೋರಿಸಿದವರು ಪ್ರಧಾನಿಗಳೇ ಎಂದು ಬೇರೆ ಹೇಳಬೇಕಾಗಿಲ್ಲ. ಇತ್ತೀಚೆಗೆ ಸದ್ಯದಲ್ಲೇ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಭೋಪಾಲ್ ನಿಂದ 2 ವಂದೇಭಾರತ್‍ಗಳು ಸೇರಿದಂತೆ 5 ರೈಲುಗಳ ಉದ್ಘಾಟನೆ ಒಟ್ಟಿಗೇ ನಡೆಯಿತು. ಅದರಲ್ಲಿ ಕರ್ನಾಟಕದ ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್ ಕೂಡ ಸೇರಿತ್ತು.
ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಪ್ರಧಾನಿಗಳು ಮುಂದಿನ ಸ್ವಾತಂತ್ರ್ಯ ದಿನಾಚರಣೆಯ ಮೊದಲು 75 ವಂದೇ ಭಾರತ್ ರೈಲುಗಳು ಓಡಾಡುತ್ತವೆ ಎಂದಿದ್ದರು. ಅದು ಈಡೇರುವಂತೆ ಕಾಣದಿದ್ದರೂ ಮುಂದಿನ ಲೋಕಸಭಾ ಚುನಾವಣೆಯ ಮೊದಲು ಅದನ್ನು ಈಡೇರಿಸಲು ಪ್ರತಿತಿಂಗಳು 6-7 ವಂದೇ ಭಾರತ್ ರೈಲುಗಳ ಉದ್ಘಾಟನೆಗಳು ನಡೆಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಅಂದರೆ ಇಂತಹ ದುಬಾರಿ ಉದ್ಘಾಟನೆಗಳ ಒಟ್ಟು ಸಂಖ್ಯೆ ಸುಮಾರು 40-50 ಕ್ಕೆ ತಲುಪುತ್ತದೆ ಎಂದೂ ನಿರೀಕ್ಷಿಸಬಹುದು