ಬೆಂಗಳೂರು: ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಪತ್ರಕರ್ತ ಶಶಿಧರ ಭಟ್ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿ ಟಿವಿ ಸಂಪಾದಕರಾಗಿದ್ದ ಶಶಿಧರ್ ಭಟ್ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ”ನಾನು ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿದ್ದೇನೆ. ಈ ಘಳಿಗೆಯಲ್ಲಿ ಯಾರು ನನ್ನವರಲ್ಲ ಎಂಬುದು ಅರ್ಥವಾಗುತ್ತಿದೆ. ಧನ್ಯವಾದಗಳು” ಎಂದು ತಮ್ಮ ಆಸ್ಪತ್ರೆಯ ಫೋಟೋ ಹಂಚಿಕೊಂಡಿದ್ದರು. ವ್ಯವಸ್ಥೆ ಕುರಿತು ನೊಂದಿರುವ ಅವರು ಬೇಸರ ಹೊರ ಹಾಕಿದ್ದರು.
ಈ ವೇಳೆ ಅವರ ಆಪ್ತರು, ಹಿತೈಷಿಗಳು ಒಂದಷ್ಟು ಧೈರ್ಯ ತುಂಬಿದ್ದು, ಶೀಘ್ರವೇ ಗುಣಮುಖರಾಗಿ ಬರುವಂತೆ ಹಾರೈಸಿದ್ದರು. ಕಾರ್ಮಿಕ ಮುಖಂಡ ಕೆ. ಮಹಾಂತೇಶ್ ಸೇರಿದಂತೆ ಅನೇಕರು ಸರ್ಕಾರ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು. ಇದರ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತರಾದ ಶಶಿಧರ್ ಭಟ್ ಅವರಿಗೆ ಕರೆಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಮುತುವರ್ಜಿಯಿಂದ ಆರೈಕೆ ಮಾಡಲು ಸಿಎಂ ಸೂಚನೆ
ಈ ಕುರಿತು ಸಿದ್ದರಾಮಯ್ಯ ಅವರು ಸೋಮವಾರ ಸಾಮಾಜಿಕ ಜಾಲತಾಣ (ಎಕ್ಸ್)ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶಶಿಧರ ಭಟ್ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆಸ್ಪತ್ರೆಯ ವೈದ್ಯರ ಜೊತೆಗೂ ಮಾತನಾಡಿ ಶಶಿಧರ್ ಭಟ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಮುತುವರ್ಜಿಯಿಂದ ಅವರ ಆರೈಕೆ ಮಾಡುವಂತೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.
ಸಮಾಜದ ಒಳಿತಿಗಾಗಿ ನಿರ್ಭೀತ ಧ್ವನಿಯಾಗಿದ್ದ ಶಶಿಧರ್ ಭಟ್ಟರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತೇನೆ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಹಿರಿಯ ಪತ್ರಕರ್ತ ಶಶಿಧರ್ ಭಟ್ ಅನಾರೋಗ್ಯ ವಿಷಯ ತಿಳಿದ ಕೆಲ ಪತ್ರಕರ್ತ ಮಿತ್ರರು ಸಹಾಯಕ್ಕೆ ಅವರ ಸಹಾಯಕ್ಕೆ ಧಾವಿಸಿದ್ದರು. ಸರ್ಕಾರವು ಧಾವಿಸಿದೆ. ಇದೀಗ ಇದೀಗ ಬಹುಭಾಷಾ ನಟ ಪ್ರಕಾಶ್ ರೈ ಅವರು ಶಶಿಧರ್ ಭಟ್ ಅವರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್ ಮೂಲಕ ಮೈಸೂರಿನ ಗೋಪಾಲಗೌಡ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಸ್ವತಃ ನಟ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ.