ಬೆಂಗಳೂರು: ರಾಜ್ಯದ ವಿವಿದೆಡೆ ಇನ್ನೂ ಲಾಕ್ಡೌನ್ ಜಾರಿಯಲ್ಲಿದೆ, ಅಲ್ಲದೆ, ನಾಳೆಯಿಂದ ಶಾಲಾ ದಾಖಲಾತಿ ಆರಂಭವಾಗಲಿದೆ ಮತ್ತು ಜೂಲೈ 1ರಿಂದ ಶಾಲಾ ತರಗತಿ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆ. ಶಿಕ್ಷಕರ ಹಿತದೃಷ್ಠಿಯಿಂದ, ಸಂಚಾರಕ್ಕೆ ತೊಂದರೆಗಳು ಇರುವುದರಿಂದ ಲಾಕ್ಡೌನ್ ನಂತರ ಶಾಲೆಗಳಿಗೆ ಭೌತಿಕವಾಗಿ ಹಾಜರಾಗಲು ಅವಕಾಶ ನೀಡಲಾಗಿದೆ.
ಇಂದು ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಚರ್ಚಿತವಾದ ಪ್ರಮುಖ ವಿಚಾರಗಳನ್ನು ಸುದ್ದಿಗಾರರಗೊಂದಿಗೆ ತಿಳಿಸಿದರು.
ಇದನ್ನು ಓದಿ: ಹಾಲಿಗೆ ನೀರು ಬೆರೆಸಿ ವಂಚನೆ: ಸಿಐಡಿ ತನಿಖೆಗೆ ಮುಖ್ಯಮಂತ್ರಿ ಬಿಎಸ್ವೈ ಆದೇಶ
‘ಪ್ರಸಕ್ತ ಸಾಲಿನ (2021–22) ಶೈಕ್ಷಣಿಕ ಮಾರ್ಗದರ್ಶಿ ಸೂತ್ರಗಳನ್ನು ಈಗಾಗಲೇ ಹೊರಡಿಸಲಾಗಿದೆ. ಮಂಗಳವಾರದಿಂದ ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ಮಕ್ಕಳ ನೋಂದಣಿ ಆರಂಭಿಸಬೇಕಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿದಿದೆ. ಆ ಜಿಲ್ಲೆಗಳ ಶಿಕ್ಷಕರ ಚಲನವಲನಕ್ಕೆ ತೊಂದರೆ ಎದುರಾಗಿದ್ದು, ಅವರು ಲಾಕ್ಡೌನ್ ಪೂರ್ಣಗೊಂಡ ಬಳಿಕ ಶಾಲೆಗಳಿಗೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಲಾಗಿದೆʼ ಎಂದು ಸಚಿವರು ತಿಳಿಸಿದರು.
ಹಲವು ಉಪನ್ಯಾಸಕ ಸಂಘಟನೆಗಳ ಕೋರಿಕೆಯ ಮೇರೆಗೆ ಮೊದಲ ಪಿ.ಯು.ಸಿ. ಮೌಲ್ಯಮಾಪನಕ್ಕೆ ಲಾಕ್ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಸಮಯ ವಿಸ್ತರಿಸಿ ಆದೇಶವನ್ನು ಹೊರಡಿಸಲಾಗುತ್ತದೆ. ಪದವಿಪೂರ್ವ ಶಿಕ್ಷಕರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ಅವರು ಕ್ರಮ ಜರುಗಿಸಲಿದ್ದಾರೆ ಎಂದು ಅವರು ಹೇಳಿದರು.
ಇದನ್ನು ಓದಿ: ಶುಲ್ಕ ಕಟ್ಟಿಸಿಕೊಳ್ಳಲು ಬಡ್ಡಿ ವ್ಯವಹಾರ ಮಾಡುವ ಖಾಸಗಿ ಶಾಲೆಗಳ ಮಾನ್ಯತೆ ರದ್ದತಿಗೆ ಎಸ್.ಎಫ್. ಐ ಆಗ್ರಹ
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಅತ್ಯವಶ್ಯಕವಾಗಿದ್ದು, ಇಂಥಹ ಸಂದರ್ಭದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಚೈಲ್ಡ್ ಪ್ರೊಫೈಲ್ ನಿಯಮಿತ ದಾಖಲೆ: ‘ಈ ಬಾರಿ ನಿಗದಿತ ಅವಧಿಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥವಾಗಿ ಜಾರಿಯಲ್ಲಿಡುವ ಅವಶ್ಯಕತೆ ಇದೆ. ಪ್ರತಿ ಸೂಚಿತ ಅವಧಿಗೆ ವಿದ್ಯಾರ್ಥಿಗಳ ಚೈಲ್ಡ್ ಪ್ರೊಫೈಲ್ಗಳನ್ನು ನಿಯಮಿತವಾಗಿ ದಾಖಲಿಸುವ, ಕಲಿಕಾ ಸಾಮರ್ಥ್ಯಗಳನ್ನು ಅಳೆಯುವ ಮಾನದಂಡಗಳಾಗಿ ರೂಪಿಸುವ ಸದೃಢ ವ್ಯವಸ್ಥೆಯನ್ನು ಜಾರಿಯಲ್ಲಿಡುವ ಕ್ರಮ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಅತ್ಯವಶ್ಯಕವಾಗಿದ್ದು, ಇಂಥ ಸಂದರ್ಭದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ವಿಡಿಯೊ ಸಂವಾದ: ‘ಈ ಬಾರಿಯ ಎರಡು ದಿನಗಳ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ವಹಣೆ ಕುರಿತಂತೆ ಇದೇ 28ರಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೊ ಸಂವಾದ ಸಭೆ ನಡೆಸಲಾಗುವುದು. ಸಭೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಇಲಾಖೆಯ ಆಯುಕ್ತರನ್ನು ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಕ್ರಮಗಳ ಕುರಿತು ವಿಸ್ತ್ರತ ಚರ್ಚೆ ನಡೆಸಿ ಮಾರ್ಗದರ್ಶನ ನೀಡಲಾಗುವುದು’ ಎಂದರು.
ಇದನ್ನು ಓದಿ: ಶುಲ್ಕ ಪಾವತಿಸಿಲ್ಲವೆಂದು ತರಗತಿ ನಡೆಸದಿದ್ದರೆ ಕಾನೂನು ಕ್ರಮ: ಸುರೇಶ್ ಕುಮಾರ್
ಶಿಕ್ಷಕರಿಗೆ ಲಸಿಕೆ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೊಠಡಿಯ ಮೇಲ್ವಿಚಾರಕರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಯನ್ನು ಪರೀಕ್ಷೆಗೆ ಮೊದಲೇ ಪೂರ್ಣಗೊಳಿಸಲು ಜಿಲ್ಲಾಡಳಿತದೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದೂ ಹೇಳಿದರು.
ವೇಳಾಪಟ್ಟಿ ಶೀಘ್ರ: ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯ ಕುರಿತಂತೆ ನಿಯಮಗಳ ಆಕ್ಷೇಪಣಾ ಸಲ್ಲಿಕೆ ಅವಧಿ ಪೂರ್ಣಗೊಳ್ಳುತಿರುವ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರದ ಅಧಿಸೂಚನೆಯನ್ನು ಹೊರಡಿಸಿ ಸಾಧ್ಯವಾದಷ್ಟು ಶೀಘ್ರವೇ ವರ್ಗಾವಣಾ ಪ್ರಕ್ರಿಯೆ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ತಂತ್ರಜ್ಞಾನಾಧಾರಿತ ವರ್ಗಾವಣಾ ಪ್ರಕ್ರಿಯೆ ನಡೆಯಲಿದೆ.
ಪ್ಯಾಕೇಜ್ ಪರಿಹಾರ ನೇರ ಶಿಕ್ಷಕರ ಖಾತೆಗೆ: ಖಾಸಗಿ ಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿ ಘೋಷಿಸಿರುವ ಪ್ಯಾಕೇಜ್ ಪರಿಹಾರವನ್ನು ಫಲಾನುಭವಿಗಳಿಗೆ ನೇರವಾಗಿ ವಿತರಿಸುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರ, ಶಿಕ್ಷಕೇತರರ ಹಾಗೂ ಅತಿಥಿ ಶಿಕ್ಷಕರ ಬ್ಯಾಂಕ್ ಖಾತೆಗಳ ವಿವರಗಳನ್ನು ಶೀಘ್ರ ಸಂಗ್ರಹಿಸಿ, ಅನುದಾನವನ್ನು ನೇರ ಶಿಕ್ಷಕರ ಖಾತೆಗಳಿಗೆ ವರ್ಗಾಯಿಸಬೇಕು ಈ ಬಗ್ಗೆ ಅತ್ಯಂತ ಸಮರ್ಪಕವಾಗಿ ಈ ಪ್ರಕ್ರಿಯೆ ನಿರ್ವಹಣೆಯಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನು ಓದಿ: ನೂತನ ಶೈಕ್ಷಣಿಕ ಮಾರ್ಗಸೂಚಿ ಪ್ರಕಟ: 2021-2022ರ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್, ಪದವಿಪೂರ್ವ ಶಿಕ್ಷಣ ನಿರ್ದೇಶಕಿ ಸ್ನೇಹಲ್ ಸಭೆಯಲ್ಲಿ ಇದ್ದರು.