ಕೈವ್(ಉಕ್ರೇನ್): ರಷ್ಯಾ ಸೇನೆ ವಾಪಸಾತಿ ನಂತರ ಉಕ್ರೇನ್ ರಾಜಧಾನಿಯ ಹಲವು ಕಡೆಗಳಲ್ಲಿ 900 ಕ್ಕೂ ಹೆಚ್ಚು ನಾಗರಿಕರ ಶವಗಳು ಪತ್ತೆಯಾಗಿವೆ. ಅವರಲ್ಲಿ ಹೆಚ್ಚಿನವರು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದರಿಂದ ಮೃತಪಟ್ಟಿದ್ದಾರೆ
ರಾಜಧಾನಿಯ ಪ್ರಾದೇಶಿಕ ಪೊಲೀಸ್ ಪಡೆಯ ಮುಖ್ಯಸ್ಥ ಆಂಡ್ರಿ ನೆಬಿಟೋವ್, ಕೈವ್ ಸುತ್ತಲೂ ಶವಗಳನ್ನು ಬೀದಿಗಳಲ್ಲಿ ಬಿಡಲಾಗಿದೆ ಅಥವಾ ತಾತ್ಕಾಲಿಕ ಸಮಾಧಿ ಮಾಡಲಾಗಿದೆ. ಶೇ. 95 ಮಂದಿ ಗುಂಡೇಟಿನ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ರಷ್ಯನ್ ಪಡೆಗಳು ಉಕ್ರೇನ್ನ ಸೇನೆಯನ್ನಷ್ಟೇ ಅಲ್ಲ, ಜನರನ್ನು ಬೀದಿಗಳಲ್ಲಿ ಸರಳವಾಗಿ ಗಲ್ಲಿಗೇರಿಸಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ನೆಬಿಟೋವ್ ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದ ಪಡೆಗಳು ದಕ್ಷಿಣದಲ್ಲಿ ಖೆರ್ಸನ್ ಮತ್ತು ಝಪೊರಿಝಿಯಾ ಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಉಕ್ರೇನ್ ಮಿಲಿಟರಿ ಮತ್ತು ಸರ್ಕಾರಿ ನೌಕರರನ್ನು ಹತ್ಯೆ ಮಾಡುವ ಸಾಧ್ಯತೆ ಇದೆ. ಹೊಸದಾಗಿ ಆಕ್ರಮಿತ ಪ್ರದೇಶದಿಂದ ಯುದ್ಧ ನಿಯಂತ್ರಣ ಸುಲಭ ಎಂಬ ಭ್ರಮೆಯಲ್ಲಿ ರಷ್ಯಾ ಇದೆ, ಆದರೆ ಅದು ತಪ್ಪು ಕಲ್ಪನೆ ಎಂದಿದ್ದಾರೆ.
ತಡ ರಾತ್ರಿ ಝೆಲೆನ್ಸ್ಕಿ ಮಾರಿಯುಪೋಲ್ನಲ್ಲಿ ಉನ್ನತ ಮಿಲಿಟರಿ ಮತ್ತು ಗುಪ್ತಚರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸಭೆಯಲ್ಲಿ ಚರ್ಚಿಸಲಾದ ಮಾಹಿತಿಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ನಮ್ಮ ಜನರನ್ನು ಉಳಿಸಲು ನಾವು ಅಗತ್ಯ ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಅಧ್ಯಕ್ಷರು ಹೇಳಿದ್ದಾರೆ.
ಆಕ್ರಮಣವನ್ನು ಹೆದರಿಸುತ್ತಿದ್ದ ಉಕ್ರೇನ್, ಸಂಕಷ್ಟ ಪರಿಸ್ಥಿತಿಯಲ್ಲೂ ತಿರುಗಿ ಬಿದ್ದಿದ್ದು ತನ್ನ ಗಡಿಯಲ್ಲಿರುವ ಬ್ರಿಯಾನ್ಸ್ಕ್ನಲ್ಲಿ ವೈಮಾನಿಕ ದಾಳಿ ನಡೆಸಿದೆ. ಇದರಿಂದ ಏಳು ಜನ ಗಾಯಗೊಂಡಿದ್ದಾರೆ. ಸುಮಾರು 100 ವಸತಿ ಕಟ್ಟಡಗಳನ್ನು ಹಾನಿಗೊಳಗಾಗಿವೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ್ದಾರೆ. ಈ ದಾಳಿ ಬಳಿಕ ಕೈವ್ ಮೇಲೆ ಮತ್ತಷ್ಟು ಆಕ್ರಮಣ ನಡೆಸುವುದಾಗಿ ರಷ್ಯಾ ಎಚ್ಚರಿಸಿದೆ.
ಉಕ್ರೇನ್ ರಷ್ಯಾದ ಭೂಪ್ರದೇಶದ ಮೇಲೆ ಯಾವುದೇ ಭಯೋತ್ಪಾದಕ ದಾಳಿ ನಡೆಸಿದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಕೈವ್ ಮೇಲೆ ಕ್ಷಿಪಣಿ ದಾಳಿ ಹೆಚ್ಚಿಸಲಾಗುವುದು ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ.