ಹಾವೇರಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪರೀಕ್ಷೆ ವೇಳಾ ಪಟ್ಟಿ ಸಮಯ ಬದಲಾವಣೆ ಎಡವಟ್ಟಿನಿಂದ ಗಾಂಧಿಪುರ ಸರ್ಕಾರಿ ಪದವಿ ಕಾಲೇಜ್ ನ 23ಕ್ಕೂ ಅಧಿಕ ವಿದ್ಯಾರ್ಥಿಗಳು ಬುಧವಾರ ನಡೆಯಬೇಕಾದ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಭ್ಯಸಿಸುತ್ತಿದ್ದ 15 ಹಾಗೂ ಇತಿಹಾಸ ವಿಷಯದ 8 ವಿದ್ಯಾರ್ಥಿಗಳು ತಮಗೆ ನೀಡಿದ್ದ ಪರೀಕ್ಷಾ ಪ್ರವೇಶ ಪತ್ರದಲ್ಲಿ ನಮೂದಿಸಿದಂತೆ, ಮಧ್ಯಾಹ್ನ 2 ರಿಂದ 5ರ ಪರೀಕ್ಷೆಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ ಆಗಲೇ ಬೆಳಿಗ್ಗೆ 9 ರಿಂದ 12 ರವೆಗೆ ಸಮಯ ನೀಡಿದ್ದ ಅರ್ಥಶಾಸ್ತ್ರ ಹಾಗೂ ಇತಿಹಾಸ ಪರೀಕ್ಷೆ ಮುಗಿಯುವ ಹಂತದಲ್ಲಿತ್ತು. ಇದರಿಂದ ಪರೀಕ್ಷಾರ್ಥಿಗಳು ಕಂಗಾಲಾಗಿ ಬೇಸರದಿಂದ ಪ್ರಾಂಶುಪಾಲರಿಗೆ ಮನವಿ ಮಾಡಿಕೊಂಡರು ಅವಕಾಶ ಕಲ್ಪಿಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
‘ಪರೀಕ್ಷಾ ಪ್ರವೇಶ ಪತ್ರ (ಹಾಲ್ ಟಿಕೆಟ್) ದಲ್ಲಿ ಇರುವ ಸಮಯದಂತೆ ಪರೀಕ್ಷೆ ಬರೆಯಲು ಕಾಲೇಜ್ ಗೆ ಬಂದಿದ್ದೆವು. ಆದರೆ ಅದಾಗಲೇ ಪರೀಕ್ಷೆ ಬಹುತೇಕ ಮುಕ್ತಾಯದ ಹಂತದಲ್ಲಿತ್ತು. ಇದನ್ನು ಪ್ರಾಚಾರ್ಯರ ಬಳಿ ಪ್ರಶ್ನಿಸಿದರೆ, ವಿಶ್ವವಿದ್ಯಾಲಯದಿಂದ ಬಂದ ಬದಲಾದ ವೇಳಾ ಪಟ್ಟಿ ಸೂಚನಾ ಫಲಕಕ್ಕೆ ಅಂಟಿಸಲಾಗಿದೆ. ಅದನ್ನು ನೋಡಿ’ ಎಂಬ ಉತ್ತರ ನೀಡಿದ್ದಾರೆ. ‘ಪರೀಕ್ಷಾ ಪ್ರವೇಶ ಪತ್ರ ತೆಗೆದುಕೊಂಡು ಹೋದ ನಂತರದಲ್ಲಿ ಇಂದು ನೇರವಾಗಿ ಪರೀಕ್ಷೆಗೆ ಬಂದಿದ್ದೇವೆ. ನಂತರದಲ್ಲಿ ಸಮಯ ಬದಲಾದ ಮಾಹಿತಿಯನ್ನೂ ನೀಡಿಲ್ಲ. ಪರೀಕ್ಷಾ ಪ್ರವೇಶ ಪತ್ರದಲ್ಲಿ ನಮೂದಿಸಿರುವ ಸಮಯಕ್ಕಿಂತ ಮೊದಲು ಬಂದರೂ ಪರೀಕ್ಷೆ ಬರೆಯಲು ಆಗದ ಸ್ಥಿತಿ ಬಂದಿದೆ. ಇದು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಿದೆ’ ಎಂದು ಪರೀಕ್ಷೆ ವಂಚಿತ ವಿದ್ಯಾರ್ಥಿಗಳು ತಮ್ಮ ನೋವು ಹೊರ ಹಾಕಿ ಬುಧವಾರ ಪರೀಕ್ಷೆ ಪ್ರವೇಶ ಪತ್ರ ಹಿಡಿದು ಪ್ರತಿಭಟಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡದಿರುವ ನಂತರ ಎಸ್‌ಎಫ್‌ಐ ಕಾರ್ಯಕರ್ತರ ಸಂಪರ್ಕ ಮಾಡಿ ನ್ಯಾಯ ಒದಗಿಸಲು ಕೇಳಿಕೊಂಡರು.
ವಿಷಯ ತಿಳಿದ ತಕ್ಷಣ ವಿದ್ಯಾರ್ಥಿಗಳೊಂದಿಗೆ ಸಭೆ ಮಾಡಿ ಎಸ್‌ಎಫ್‌ಐ ನಿಯೋಗ ಕಾಲೇಜು ಭೇಟಿ ನೀಡಿ ಪ್ರಾಂಶುಪಾಲರಾದ ಡಾ. ಡಿ.ಟಿ.ಪಾಟೀಲ್ ಅವರೊಂದಿಗೆ ಚರ್ಚಿಸಿ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಇನ್ನೊಂದು ಅವಕಾಶ ಕೊಡುವಂತೆ ಮನವಿ ಸಲ್ಲಿಸಿದರು.
ಸಮಯ ಬದಲಾವಣೆ ಆದ ತಕ್ಷಣ ವಿದ್ಯಾರ್ಥಿಗಳಿಗೆ ವಾಟ್ಸ್ ಆಪ್ ಮೂಲಕ ಸಂದೇಶ ಕಳಿಸಿದರೆ ವಿದ್ಯಾರ್ಥಿಗಳ ಸರಿಯಾದ ಸಮಯಕ್ಕೆ ಪರೀಕ್ಷೆಗೆ ಹಾಜರಾಗುತ್ತಿದ್ದರು ಆದರೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಕಾಳಜಿ ವಹಿಸದಿರುವುದು ಬೇಸರದ ಸಂಗತಿ. ಪ್ರಾಂಶುಪಾಲರು ಮುತುವರ್ಜಿ ವಹಿಸಿ ಕುಲಪತಿಗಳ ಗಮನಕ್ಕೆ ತಂದು ‘ಪ್ರತ್ಯೇಕ ದಿನಾಂಕ ನಿಗದಿ ಮಾಡಿ ಪರೀಕ್ಷೆ ನಡೆಸಿದರೆ ಅನುಕೂಲ ಆಗುತ್ತದೆ. ಅದಕ್ಕೆ ಅವಕಾಶ ನೀಡಬೇಕು’ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಆಗ್ರಹಿಸುತ್ತದೆ ಎಂದು ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಗಣೇಶ್ ರಾಠೋಡ್ ಹೇಳಿದರು.
ಮನವಿ ಪತ್ರ ಸ್ವೀಕರಿಸಿ ‘ಬದಲಾದ ಸಮಯವನ್ನು ಕಾಲೇಜ್ ಸೂಚನಾ ಫಲಕಕ್ಕೆ ಹಾಕಲಾಗಿತ್ತು. ಆದರೆ ವಿದ್ಯಾರ್ಥಿಗಳು ಅದನ್ನು ಗಮನಿಸದ ಕಾರಣ ಗೊಂದಲ ಉಂಟಾಗಿದೆ. ವಿಶ್ವವಿದ್ಯಾಲಯದ ನಿಯಮಾವಳಿಯಂತೆ ನಾವು ನಡೆದುಕೊಂಡಿದ್ದೇವೆ’ ಎಂದು ಕಾಲೇಜಿನ ಪ್ರಾಚಾರ್ಯರ ಡಾ. ಡಿ.ಟಿ.ಪಾಟೀಲ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ವಿವೇಕ್ ಫನಸೆ, ಕಾವ್ಯ ಸೂರದ, ಬಸವರಾಜ ಹೊಂಬಳ, ಕಲ್ಲಪ್ಪ ಹೊಟ್ಟೆಪ್ಪನವರ, ಮಹಮ್ಮದ್ ಕೆ ಎಣ್ಣಿ, ದರ್ಶನ ಅಂಬಿಗೇರ್, ಚಂದ್ರಶೇಖರಗೌಡ ಕೆ ಪಿ, ಲೋಕೇಶ್ ಹುಚ್ಚಮ್ಮನವರ, ಮಹೇಶ್ ಹುಲ್ಲಾಳ ಉಪಸ್ಥಿತರಿದ್ದರು.