ಬೆಂಗಳೂರು: ಕೆಪಿಎಸ್ ಸಿ ನಡೆಸಿರುವ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪ್ರಾಥಮಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಲಾಗಿದ್ದರೂ ಭ್ರಷ್ಟ ಕೆಪಿಎಸ್ ಸಿ ಈಗ ಕ್ಯಾಟ್ ನಲ್ಲಿದ್ದ ತಡೆಯಾಜ್ಞೆ ತೆರವುಗೊಳಿಸಿಕೊಂಡು ಮುಖ್ಯಪರೀಕ್ಷೆಯ ಸಿದ್ಧತೆ ನಡೆಸುತ್ತಿದೆ. ಕೆಪಿಎಸ್ ಸಿ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ ಎಂದು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ. ದ್ರೋಹ
ಆ ಭ್ರಷ್ಟಾಚಾರದ ಭಾಗವಾಗಿಯೇ ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವುದನ್ನು ತಡೆಯಲು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತಪ್ಪಾದ ಪ್ರಶ್ನೆಪತ್ರಿಕೆ ಕೊಟ್ಟು ವಂಚಿಸಲಾಗಿದೆ ಎಂದರು. ದ್ರೋಹ
ಇದು ಕೆಪಿಎಸ್ ಸಿ ಮಾಡಿರುವ ಮಹಾವಂಚನೆ, ದ್ರೋಹ. ಸರ್ಕಾರ ಇದೆಲ್ಲವೂ ಗೊತ್ತಿದ್ದೂ ಸುಮ್ಮನಿರುವುದು ನನಗೆ ಆಶ್ಚರ್ಯದ ವಿಷಯವಾಗಿದೆ. ಸರ್ಕಾರವನ್ನು, ಮುಖ್ಯಮಂತ್ರಿಗಳನ್ನು ದಾರಿ ತಪ್ಪಿಸುತ್ತಿರುವ ಶಕ್ತಿಗಳಾದರೂ ಯಾವುವು? ಕೆಪಿಎಸ್ ಸಿಯ ಭ್ರಷ್ಟ ಲಾಬಿ ಅಷ್ಟೊಂದು ಬಲಶಾಲಿಯಾಗಿದೆಯೇ?
ಇದನ್ನೂ ಓದಿ: ಬದರೀನಾಥದಲ್ಲಿ ಹಿಮಪಾತ: 57ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ
ಸರ್ಕಾರದ ಕಣ್ಣು ತೆರೆಸುವುದು ಹೇಗೆ? ಇದಕ್ಕಾಗಿ ಈ ಭಾನುವಾರ (2-3-2025)ದಿಂದ ಪರೀಕ್ಷೆ ಬರೆದ ಕನ್ನಡ ಮಾಧ್ಯಮದ ಸಾವಿರಾರು ವಿದ್ಯಾರ್ಥಿಗಳು ತಮ್ಮ ರಕ್ತದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ನಿರ್ಧಾರ ಕೈಗೊಂಡಿದ್ದಾರೆ. ಆಗಲಾದರೂ ನಮ್ಮ ಮುಖ್ಯಮಂತ್ರಿಗಳ ಮನಸು ಕರಗಿ ಕನ್ನಡದ ಮಕ್ಕಳ ಕೂಗಿಗೆ ಸ್ಪಂದಿಸುತ್ತಾರಾ ಎಂದು ಕಾದು ನೋಡಬೇಕಿದೆ ಎಂದರು.
ಮಾರ್ಚ್ 2 ರಂದು ಬೆಳಿಗ್ಗೆ 10-30ಕ್ಕೆ ನೂರಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಗಾಂಧಿನಗರದ ನಮ್ಮ ಕಚೇರಿಯಲ್ಲಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಈ ಅಭಿಯಾನವನ್ನು ಆರಂಭಿಸಲಿದ್ದಾರೆ. ಅವರೊಂದಿಗೆ ನಾನೂ ಸಹ ಈ ಅಭಿಯಾನದಲ್ಲಿ ಪಾಲ್ಗೊಳ್ಳುವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇರುವ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಅನ್ಯಾಯಕ್ಕೆ ಒಳಗಾದವರು ತಾವಿರುವ ಜಾಗದಲ್ಲಿಯೇ ತಮ್ಮ ರಕ್ತದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪೋಸ್ಟ್ ಮಾಡಲಿದ್ದಾರೆ.
ವೈಯಕ್ತಿಕವಾಗಿ ನನಗೆ ನನ್ನ ನೆಲದ ಮಕ್ಕಳು ಹೀಗೆ ಹತಾಶೆಯಿಂದ ರಕ್ತದಲ್ಲಿ ಪತ್ರ ಬರೆಯುವ ಸ್ಥಿತಿ ತಲುಪಿರುವುದು ನನಗೆ ಸಮಾಧಾನವೇನೂ ಇಲ್ಲ. ಆದರೆ ಈ ಸಣ್ಣ ಗಾಯಕ್ಕಿಂತ ಈ ಮಕ್ಕಳಿಗೆ ಪರೀಕ್ಷೆ ಹೆಸರಲ್ಲಿ ಕೆಪಿಎಸ್ ಸಿ ಮಾಡಿರುವ ಗಾಯವೇ ದೊಡ್ಡದಾಗಿದೆ. ಆ ಗಾಯದ ನೋವಲ್ಲಿ ಬೇಯುತ್ತಿರುವ ನಮಗೆ ರಕ್ತದಲ್ಲಿ ಪತ್ರ ಬರೆಯುವುದು ಕಷ್ಟವೇನೂ ಅಲ್ಲ ಎನ್ನುತ್ತಿದ್ದಾರೆ.
ಮಾನಗೆಟ್ಟ ಕೆಪಿಎಸ್ ಸಿ ಭ್ರಷ್ಟರು ಕರವೇ ಕಾರ್ಯಕರ್ತರಿಗೆ ಪೊಲೀಸರ ರಕ್ಷಣೆಯಲ್ಲಿ ಓಡಾಡುತ್ತಿದ್ದಾರೆ. ಕಚೇರಿ ಮುಂದೆ ಪೊಲೀಸರನ್ನು ನಿಲ್ಲಿಸಿಕೊಂಡಿದ್ದಾರೆ. ಎಷ್ಟು ದಿನ ಹೀಗೆ ಮುಸುಕು ಹಾಕಿಕೊಂಡು ಓಡಾಡುತ್ತೀರಿ? ನಿಮ್ಮ ಮನೆಗಳ ಕನ್ನಡಿ ಮುಂದೆ ನಿಂತು ನಿಮ್ಮನ್ನು ನೀವೇ ನೋಡಿಕೊಂಡರೆ ನಾಚಿಕೆ ಅನ್ನಿಸೋದಿಲ್ಲವೇ? ಎಂದು ಪ್ರಶ್ನಿಸಿದರು.
ಇದನ್ನೂ ನೋಡಿ: ಕೋಲಾರ :- ರಾಜ್ಯಮಟ್ಟದ ಜಾನಪದ ಉತ್ಸವಕ್ಕೆSCSP/TSP ಹಣ ದುರ್ಬಳಕೆ – ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದ ಹೋರಾಟಗಾರರು