ರಾಯಚೂರು : ಮಾಜಿ ಶಾಸಕರೊಬ್ಬರು ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ರಾಯಚೂರಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ. ಈ ಘಟನೆ ಪೊಲೀಸ್ ವಲಯದ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಶಾಸಕರ ನಡೆಗೆ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗುತ್ತಿದೆ.
ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು.ಇದಕ್ಕೆ ಅವಕಾಶ ನೀಡದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಕೃತಿ ತೆರವು ಮಾಡಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಮಾಜಿ ಶಾಸಕ ಎ ಪಾಪಾರೆಡ್ಡಿ ಪಶ್ಚಿಮ ಠಾಣೆ ಪೇದೆ ರಾಘವೇಂದ್ರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು.
ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಶಾಸಕ ಪಾಪಾರೆಡ್ಡಿ ವರ್ತನೆ ಅನಾಗಾರಿಕತೆಯಿಂದ ಕೂಡಿದೆ. ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡುವ ಇವರು ಸಾಮಾನ್ಯ ಜನರನ್ನು ಸುಮ್ಮನೆ ಬಿಡುತ್ತಾರಾ? ಇವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.