ವಿಜಯಪುರ: ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ.
ಹೆಚ್ಚುವರಿ ಮತಯಂತ್ರಗಳನ್ನು ಕೊಂಡೊಯ್ಯುವಾಗ ಮತದಾನ ನಿಲ್ಲಿಸಿದ್ದಾರೆಂದು ಗ್ರಾಮಸ್ಥರು ತಪ್ಪು ಕಲ್ಪನೆಯಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಮತಯಂತ್ರಗಳನ್ನು ಒಡೆದು ಹಾಕಿದ್ದಾರೆ ಎಂದು ವರದಿಯಾಗಿದೆ.
ಮಸಬಿನಾಳ ಮತಗಟ್ಟೆಯಲ್ಲಿ ಕಾಯ್ದಿರಿಸಿದ್ದ ಇವಿಎಂ ಮಷಿನ್ ಹಾಗೂ ವಿವಿಪ್ಯಾಟ್ ಮಷಿನ್ ಗಳನ್ನು ಒಡೆದು ಹಾಕಲಾಗಿದೆ. ಗ್ರಾಮಸ್ಥರು ಕಾಯ್ದಿರಿಸಲಾಗಿದ್ದ ಮತಯಂತ್ರಗಳು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಸಬಿನಾಳ ಗ್ರಾಮದಲ್ಲಿ ಮತದಾನ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿದ ಗ್ರಾಮಸ್ಥರು ಮತ ಯಂತ್ರ ಒಡೆದು ಹಾಕಿದ್ದಾರೆ.
ಮತಯಂತ್ರ ಕೆಟ್ಟುಹೋದರೆ ಬಳಕೆ ಮಾಡಲೆಂದು ಕಾಯ್ದಿರಿಸಿದ ಮತಯಂತ್ರಗಳನ್ನು, ವಿವಿಪ್ಯಾಟ್ ಮಷಿನ್ ಮರಳಿ ತರುವಾಗ ಮಸಬಿನಾಳ ಗ್ರಾಮಸ್ಥರು ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ. ಸಿಬ್ಬಂದಿಗಳು ಸರಿಯಾಗಿ ಉತ್ತರಿಸದಿದ್ದಾಗ, ಮತಯಂತ್ರ ಸಾಗಿಸುವ ಅನುಮಾನದಿಂದ ಮತಯಂತ್ರ ಒಡೆದು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಜನರಿಗೆ ಮಾಹಿತಿ ನೀಡಿ ಚುನಾವಣಾ ಪ್ರಕ್ರಿಯೆ ನಡೆಯಲು ಅನುವು ಮಾಡಿಕೊಟ್ಟಿದ್ದಾರೆ.