ಸಾಕ್ಷ್ಯಾಧಾರಗಳು, ಅಂಕಿ-ಅಂಶಗಳೆಂದರೆ ಇವರಿಗೇಕೆ ಇಷ್ಟೊಂದು ಹಗೆತನ !

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಜಾಗತಿಕ ಹಸಿವು ಸೂಚ್ಯಂಕದ ಬಗ್ಗೆ ಒಬ್ಬ ಕೇಂದ್ರ ಸಚಿವರು ಅತ್ಯಂತ ಸುಳ್ಳು ಮಾಹಿತಿಗಳನ್ನು ನೀಡುತ್ತ, ಗೇಲಿ ಮಾಡಿದ್ದಾರೆ. ಇದಕ್ಕೆ ಮೊದಲು ಮಹಿಳೆಯರಲ್ಲಿ ರಕ್ತಹೀನತೆಯ ಪ್ರಕರಣಗಳು ಆತಂಕಕಾರಿ ಹೆಚ್ಚಳವಾಗಿದೆ ಎಂದು 5ನೇ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯಲ್ಲಿ ಕಂಡುಬಂದಾಗ ಅದನ್ನು ಸಿದ್ಧಪಡಿಸಿದ ಪ್ರತಿಷ್ಠಿತ ಸಂಸ್ಥೆಯ ನಿರ್ದೇಶಕರು ರಾಜೀನಾಮೆ ನೀಡುವಂತಾಗಿದೆ. ಅದಕ್ಕೂ ಮೊದಲು ಗ್ರಾಹಕ ವೆಚ್ಚಗಳ ಬಗ್ಗೆ 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆಯನ್ನು ಬಚ್ಚಿಟ್ಟು, ಆಮೇಲೆ ಆ ರಾಷ್ಟ್ರೀಯ ಸಮೀಕ್ಷೆಯನ್ನೇ ಕೈಬಿಡಲಾಗಿದೆ. ಇದು ಫ್ಯಾಸಿಸ್ಟ್ ತೆರದವರು ಪುರಾವೆಗಳು ತಮ್ಮ ದಾವೆಗಳಿಗೆ ತದ್ವಿರುದ್ಧವಾಗಿದ್ದಾಗ ಸಾಮಾನ್ಯವಾಗಿ ತೋರುವ ಪ್ರತಿಕ್ರಿಯೆ. ವಿಮರ್ಶಾತ್ಮಕ ಚರ್ಚೆಗಳು ನಮ್ಮ ತಿಳುವಳಿಕೆಯನ್ನು ಆಳಗೊಳಿಸುತ್ತವೆ. ಆದರೆ, ಹಿಂದುತ್ವ ಮಂದಿ ಈ ರೀತಿಯ ವಿಮರ್ಶಾತ್ಮಕ ಚರ್ಚೆಗಳಲ್ಲಿ ತೊಡಗುವುದಿಲ್ಲ. ತಾವು ಹೆಣೆದ ಮಿಥ್ಯೆಗಳಿಗೆ ವಿರುದ್ಧವಾದ ಪ್ರಮಾಣ, ಪುರಾವೆ, ಸಂಗತಿ, ಆಧಾರಗಳನ್ನು ಅವರು ಸಾರಾಸಗಟಾಗಿ ನಿರಾಕರಿಸುತ್ತಾರೆಯೇ ವಿನಃ, ನಿರ್ದಿಷ್ಟ ಪ್ರಮಾಣ, ಪುರಾವೆ, ಸಂಗತಿ, ಆಧಾರಗಳನ್ನು ಏಕೆ ಗಣನೆಗೆ ತೆಗೆದುಕೊಳ್ಳಬಾರದು ಎಂಬುದನ್ನು ಅವರು ವಿವರಿಸುವುದೇ ಇಲ್ಲ. ಏಕೆಂದರೆ ಅಂತಹ ಯಾವುದೇ ಬೌದ್ಧಿಕ ವಿಮರ್ಶೆ ಅವರ ಸಾಮರ್ಥ್ಯಕ್ಕೆ ಮೀರಿದ ವಿಷಯ. ಅಂಕಿ-ಅಂಶ

ಎಲ್ಲಾ ಫ್ಯಾಸಿಸ್ಟ್ ಸಂಘ-ಸಂಸ್ಥೆಗಳೂ ಹೊಂದಿರುವ ಒಂದು ಸಾಮಾನ್ಯ ಗುಣಲಕ್ಷಣವೆಂದರೆ: ತಾವು ಹೆಣೆದ ಕಥನಗಳಿಗೆ ವಿರುದ್ಧವಾಗಿ ತಿರುಗುವ ಎಲ್ಲ ಪ್ರಮಾಣ, ಪುರಾವೆ, ಸಂಗತಿ, ಆಧಾರಗಳನ್ನು ಅವರು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಭಾರತದಲ್ಲಿ ಅಧಿಕಾರದಲ್ಲಿರುವ ಹಿಂದುತ್ವವೂ ಈ ಮಾತಿಗೆ ಹೊರತಲ್ಲ. ಭಾರತದ ಅರ್ಥವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ; ಜನರ ಸ್ಥಿತಿ-ಗತಿಗಳು ಹಿಂದೆಂದೂ ಈಗಿನಷ್ಟು ಉತ್ತಮವಾಗಿರಲಿಲ್ಲ ಎಂಬುದು ಅವರ ಒಂದು ನಿರೂಪಣೆ. ಆದರೆ, ವಸ್ತು-ಸ್ಥಿತಿ ಇರುವುದೇ ಬೇರೆ ಎಂಬುದನ್ನು ಅಂತರರಾಷ್ಟ್ರೀಯ ಸಂಸ್ಥೆಗಳು ಅಥವಾ ಸ್ವತಃ ಸರ್ಕಾರದ ಏಜೆನ್ಸಿಗಳೇ ಸಂಗ್ರಹಿಸಿದ ಅಂಕಿ-ಅಂಶಗಳು ಒಂದು ವೇಳೆ ತೋರಿಸಿದರೆ, ಆ ಅಂಕಿ- ಅಂಶಗಳೇ ತಪ್ಪು ಎಂದು ವಾದಮಾಡಲಾಗುತ್ತದೆ. ಭಾರತದ ಫ್ಯಾಸಿಸ್ಟ್ ತೆರನ ಹಿಂದುತ್ವ ಸಂಘಟನೆಯ ದೃಢನಂಬಿಕೆ ಬಹಳ ಸರಳವಾಗಿದೆ: ಮೋದಿ ಏನು ಹೇಳುತ್ತಾರೊ ಅದೇ ವಾಸ್ತವ. ಒಂದು ವೇಳೆ ಅಂಕಿ-ಅಂಶಗಳು ಅಥವಾ ಸಂಗತಿಗಳು ಮೋದಿಯವರು ಹೇಳಿದ್ದಕ್ಕಿಂತ ಭಿನ್ನವಾಗಿ ಕಂಡರೆ, ಅವು ತಪ್ಪೇ ತಪ್ಪು ಮತ್ತು ಬಹುತೇಕ ಅವು ಒಂದು ದುಷ್ಟ ಮತ್ತು ಭಯೋತ್ಪಾದಕ ಪಿತೂರಿಯ ಭಾಗವಾಗಿರುತ್ತವೆ.

ಸಾರಾಸಗಟು ನಿರಾಕರಣೆ ಮತ್ತು ವಿಮರ್ಶೆ ಇವುಗಳ ನಡುವೆ ಒಂದು ಮೂಲಭೂತ ವ್ಯತ್ಯಾಸವಿದೆ. ಒಂದು ಪ್ರಮಾಣವನ್ನೊ ಅಥವಾ ಪುರಾವೆಯನ್ನೊ ಅಥವಾ ಸಂಗತಿಯನ್ನೊ ವಿಮರ್ಶಿಸಿದರೆ, ಅದು ನಿಜಕ್ಕೂ ಒಂದು ಸಾರ್ಥಕ ಚಟುವಟಿಕೆ. ಎಲ್ಲಾ ವಿಮರ್ಶಾತ್ಮಕ ಚರ್ಚೆಗಳೂ ಉಪಯುಕ್ತವೇ. ಏಕೆಂದರೆ, ಅವು ಪ್ರಾಮಾಣ್ಯವನ್ನು ಸಂಗ್ರಹಿಸುವ ವಿಧಾನವನ್ನು ಉತ್ತಮಗೊಳ್ಳಲು ಕಾರಣವಾಗುತ್ತದೆ. ಅಥವಾ ಲಭ್ಯವಿರುವ ಪುರಾವೆ-ಆಧಾರಗಳ ಬೇರೊಂದು ವ್ಯಾಖ್ಯಾನಕ್ಕೆ ಕಾರಣವಾಗುತ್ತವೆ ಅಥವಾ ಬೇರೆ ಬೇರೆ ಪುರಾವೆಗಳತ್ತ ಗಮನವನ್ನು ಪೂರ್ಣವಾಗಿ ತಿರುಗಿಸುತ್ತವೆ. ಸಂಕ್ಷಿಪ್ತವಾಗಿ, ಹೇಳುವುದಾದರೆ, ಇಂಥಹ ವಿಮರ್ಶಾತ್ಮಕ ಚರ್ಚೆಗಳು ನಮ್ಮ ತಿಳುವಳಿಕೆಯನ್ನು ಆಳಗೊಳಿಸಲು ಕಾರಣವಾಗುತ್ತವೆ. ಆದರೆ, ಹಿಂದುತ್ವವಾದಿಗಳು ಈ ರೀತಿಯ ವಿಮರ್ಶಾತ್ಮಕ ಚರ್ಚೆಗಳಲ್ಲಿ ತೊಡಗುವುದಿಲ್ಲ. ತಮ್ಮ ಮಿಥ್ಯೆಗಳಿಗೆ ವಿರುದ್ಧವಾದ ಪ್ರಮಾಣ, ಪುರಾವೆ, ಸಂಗತಿ, ಆಧಾರಗಳನ್ನು ಹಿಂದುತ್ವವಾದಿಗಳು ಸಾರಾಸಗಟಾಗಿ ನಿರಾಕರಿಸುತ್ತಾರೆಯೇ ವಿನಃ, ನಿರ್ದಿಷ್ಟ ಪ್ರಮಾಣ, ಪುರಾವೆ, ಸಂಗತಿ, ಆಧಾರಗಳನ್ನು ಏಕೆ ಗಣನೆಗೆ ತೆಗೆದುಕೊಳ್ಳಬಾರದು ಎಂಬುದನ್ನು ಅವರು ವಿವರಿಸುವುದೇ ಇಲ್ಲ. ಅಂತಹ ಯಾವುದೇ ಬೌದ್ಧಿಕ ವಿಮರ್ಶೆ ಅವರ ಸಾಮರ್ಥ್ಯಕ್ಕೆ ಮೀರಿದ ವಿಷಯ.

ವರದಿಯನ್ನೇ ಬಚ್ಚಿಟ್ಟಿಟ್ಟರು-ಸಮೀಕ್ಷೆಗಳನ್ನೇ ಕೈಬಿಟ್ಟರು!

ನನ್ನ ಈ ಅಭಿಪ್ರಾಯವನ್ನು ಮೋದಿ ಸರ್ಕಾರವು ಸಾಕ್ಷ್ಯಗಳನ್ನು ನಿರಾಕರಿಸಿದ ಮೂರು ಪ್ರಸಂಗಗಳನ್ನು ಉಲ್ಲೇಖಿಸುವ ಮೂಲಕ ವಿವರಿಸುತ್ತೇನೆ. ಮೊದಲನೆಯದು, ಗ್ರಾಹಕ ವೆಚ್ಚಗಳ ಬಗ್ಗೆ 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆಗೆ ಸಂಬಂಧಿಸಿದೆ. ಈ ಮಾದರಿ ಸಮೀಕ್ಷೆಗಳನ್ನು 1950ರ ದಶಕದಲ್ಲಿ ದೇಶದ ಪ್ರಖ್ಯಾತ ವಿಜ್ಞಾನಿ ಹಾಗೂ ಸಂಖ್ಯಾಶಾಸ್ತ್ರಜ್ಞ ಪ್ರೊಫೆಸರ್ ಪಿ ಸಿ ಮಹಾಲನೋಬಿಸ್ ರೂಪಿಸಿದ್ದರು. ಈ ದೊಡ್ಡ ಮಾದರಿ ಸಮೀಕ್ಷೆಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಕೈಗೊಳ್ಳಲಾಗುತ್ತಿತ್ತು. ವಾಸ್ತವವಾಗಿ ಇದು ವಿಶ್ವದ ಅತಿದೊಡ್ಡ ನಿಯತ ಕಾಲಿಕ ಮಾದರಿ ಸಮೀಕ್ಷೆ ಎನಿಸಿದೆ. ಈ ಸಮೀಕ್ಷೆಯು, ಅದರಲ್ಲಿರ ಬಹುದಾದ ಎಲ್ಲ ನ್ಯೂನತೆಗಳ ಹೊರತಾಗಿಯೂ, ಭಾರತ ಮತ್ತು ವಿದೇಶಗಳ ಹಲವು ಪೀಳಿಗೆಗಳ ಸಂಶೋಧಕರಿಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸಿದೆ.

ಪತ್ರಿಕೆಗಳಲ್ಲಿ ಸೋರಿಕೆಯಾದ ವರದಿಯ ಪ್ರಕಾರ, 2017-18ರ ಪಂಚವಾರ್ಷಿಕ ಸಮೀಕ್ಷೆಯು ದೇಶದಲ್ಲಿ ಬಡತನ ಹೆಚ್ಚುತ್ತಿರುವ ಅಂಶವನ್ನು ತಿಳಿಸಿತ್ತು. ಈ ನಿರಾಶಾದಾಯಕ ವರದಿ ಸಾರ್ವಜನಿಕ ಅವಗಾಹನೆಗೆ ಬರದಂತೆ ಮೋದಿ ಸರ್ಕಾರವು ಬಚ್ಚಿಟ್ಟಿತ್ತು. ಮಾತ್ರವಲ್ಲ, ಈ ದೊಡ್ಡ ನಿಯತಕಾಲಿಕ ಮಾದರಿ ಸಮೀಕ್ಷಾ ಕಾರ್ಯವನ್ನೇ ಕೊನೆಗೊಳಿಸಿತು. ಈ ವರದಿಯನ್ನು ಬಚ್ಚಿಡುವ ಮೊದಲು ಸೋರಿಕೆಯಾದ ಅಂಶಗಳಿಂದ ತಿಳಿದುಬಂದದ್ದು ಏನೆಂದರೆ, ಗ್ರಾಮೀಣ ಗ್ರಾಹಕರ ತಲಾ ವೆಚ್ಚವು 2011-12 ಮತ್ತು 2017-18ರ ನಡುವಿನ ಅವಧಿಯಲ್ಲಿ ಶೇ. 9ರಷ್ಟು ಕುಸಿದಿತ್ತು ಎಂಬುದು. ಈ ತಲಾ ವೆಚ್ಚದ ಕುಸಿತವನ್ನು ಆಧರಿಸಿ, ತಲಾ ದೈನಿಕ 2200 ಕ್ಯಾಲೊರಿ (ಗ್ರಾಮೀಣ ಬಡತನವನ್ನು ವ್ಯಾಖ್ಯಾನಿಸುವ ಮೂಲ ಅಧಿಕೃತ ಮಾನದಂಡ) ಆಹಾರವನ್ನು ಪಡೆಯಲು ಸಾಧ್ಯವಾಗದ ಗ್ರಾಮೀಣ ಜನಸಂಖ್ಯೆಯ ಪ್ರಮಾಣವು, 2011-12ರಲ್ಲಿದ್ದ ಶೇ. 68ರಿಂದ 2017-18ರ ವೇಳೆಗೆ ಶೇ. 78.5ಕ್ಕೆ ಏರಿದೆ ಎಂದು ಅಂದಾಜಿಸಲಾಗಿತ್ತು.

ಮುಜುಗರಕ್ಕೊಳಪಡಿಸುವ ಈ ಅಂಕಿ ಅಂಶಗಳಿಂದ ಗಾಬರಿಗೊಳ್ಳುವ ಬದಲು, ಒಂದು ಹೊಸ ಸಮೀಕ್ಷೆಯ ಮೂಲಕ ಈ ಅಂಕಿ ಅಂಶಗಳ ಸತ್ಯಾಸತ್ಯತೆಯನ್ನು ಪರೀಕ್ಷೆಮಾಡಬಹುದಿತ್ತು (2009-10ರ ಪಂಚವಾರ್ಷಿಕ ಸಮೀಕ್ಷೆಯು ತೋರಿಸಿದ ಹೆಚ್ಚಿನ ಮಟ್ಟದ ಬಡತನವನ್ನು ಅನುಮಾನಿಸಿದ ಯುಪಿಎ ಸರ್ಕಾರವು 2011-12ರಲ್ಲಿ ಒಂದು ಮರು ಸಮೀಕ್ಷೆಯನ್ನು ಕೈಗೊಂಡಿತ್ತು). ಅಥವಾ, ಸಮೀಕ್ಷೆಯ ಪರಿಣಾಮಗಳನ್ನು ಮತ್ತು ಅಳವಡಿಸಿಕೊಳ್ಳಬಹುದಾದ ಸಂಭಾವ್ಯ ಪರಿಹಾರ ಕ್ರಮಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ನೇಮಕ ಮಾಡುವ ಮೂಲಕ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಿಕೊಳ್ಳಬಹುದಿತ್ತು. ಬದಲಿಗೆ, ಮೋದಿ ಸರ್ಕಾರವು ವರದಿಯನ್ನೇ ಬಚ್ಚಿಟ್ಟಿತು ಮತ್ತು ಭವಿಷ್ಯದಲ್ಲಿ ಕೈಗೊಳ್ಳಬೇಕಿದ್ದ ಸಮೀಕ್ಷೆಗಳನ್ನು ಕೈಬಿಟ್ಟಿತು! ಇದು, ಫ್ಯಾಸಿಸ್ಟ್ ತೆರದವರು ಪುರಾವೆಗಳು ತಮ್ಮ ದಾವೆಗಳಿಗೆ ತದ್ವಿರುದ್ಧವಾಗಿದ್ದಾಗ ಸಾಮಾನ್ಯವಾಗಿ ತೋರುವ ಪ್ರತಿಕ್ರಿಯೆ.

ಇದನ್ನೂ ಓದಿ: ಏನಿದು ‘ಬಹು-ಆಯಾಮೀಯ ಬಡತನ’ ಸೂಚ್ಯಂಕ?

ನಿರ್ದೇಶಕರ ಮೇಲೆಯೇ ಸುಳ್ಳು ಆರೋಪ

ನನ್ನ ಎರಡನೇ ಉದಾಹರಣೆ 2019-21ರ ಅವಧಿಯಲ್ಲಿ ನಡೆಸಿದ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗೆ ಸಂಬಂಧಿಸಿದೆ. 2015-16ರಲ್ಲಿ ನಡೆಸಲಾದ 4ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗೆ ಹೋಲಿಸಿದರೆ, ಮಕ್ಕಳು ಮತ್ತು ಮಹಿಳೆಯರಲ್ಲಿ ಅದಾಗಲೇ ತುಂಬಾ ಹೆಚ್ಚಿನ ಮಟ್ಟದಲ್ಲಿದ್ದ ರಕ್ತಹೀನತೆಯ ಪ್ರಕರಣಗಳು ಆತಂಕಕಾರಿ ಹೆಚ್ಚಳವನ್ನು ದಾಖಲಿಸಿವೆ ಎಂಬುದನ್ನು 5ನೇ ಆರೋಗ್ಯ ಸಮೀಕ್ಷೆ ತೋರಿಸುತ್ತದೆ. 2015-16ರಲ್ಲಿ, 6 ತಿಂಗಳಿನಿಂದ 59 ತಿಂಗಳ ನಡುವಿನ ವಯೋಮಾನದ ಶೇ. 59ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, 2019-21ರಲ್ಲಿ ಈ ಸಂಖ್ಯೆಯು ಶೇ. 67ಕ್ಕೆ ಏರಿದೆ. ಅದಲ್ಲದೆ, ಈ ನಾಲ್ಕು ವರ್ಷಗಳ ಅವಧಿಯಲ್ಲಿ ಮಧ್ಯಮ ಮಟ್ಟದಿಂದ ತೀವ್ರ ರಕ್ತಹೀನತೆಯ ಪ್ರಕರಣಗಳು ಶೇ. 30.6ರಿಂದ ಶೇ. 38.1ಕ್ಕೆ ಏರಿಕೆಯಾಗಿವೆ. ಆದರೆ, ಇದೇ ಅವಧಿಯ ಸೌಮ್ಯ ರಕ್ತಹೀನತೆಯ ಪ್ರಕರಣಗಳು ಅನುಕ್ರಮವಾಗಿ ಶೇ. 28.4 ಮತ್ತು 28.9ರಷ್ಟಿವೆ. ಅಂತೆಯೇ, ಇದೇ ಅವಧಿಯಲ್ಲಿ, 49 ವರ್ಷದವರೆಗಿನ ವಯೋಮಾನದ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಕರಣಗಳು ಶೇ. 53ರಿಂದ ಶೇ. 57ಕ್ಕೆ ಏರಿವೆ; ಮಧ್ಯಮ ಮಟ್ಟದಿಂದ ತೀವ್ರ ರಕ್ತಹೀನತೆಯ ಪ್ರಕರಣಗಳು ಶೇ. 28.4ರಿಂದ ಶೇ. 31.4ಕ್ಕೆ ಏರಿವೆ. 49 ವರ್ಷದವರೆಗಿನ ವಯೋಮಾನದ ಪುರುಷರಲ್ಲಿಯೂ, ರಕ್ತಹೀನತೆಯ ಪ್ರಕರಣಗಳು ಇದಕ್ಕಿಂತ ಕಡಿಮೆ ಇದ್ದರೂ, ಅವು ಕೂಡ ಶೇ. 23ರಿಂದ ಶೇ. 25ಕ್ಕೆ ತುಸು ಕಡಿಮೆ ಪ್ರಮಾಣದ ಏರಿಕೆ ಕಂಡಿವೆ. ಮಧ್ಯಮ ಮಟ್ಟದಿಂದ ತೀವ್ರ ರಕ್ತಹೀನತೆಯ ಪ್ರಕರಣಗಳು ಶೇ.5ರಿಂದ ಶೇ. 8ಕ್ಕೆ ಏರಿವೆ. ಗ್ರಾಮೀಣ ಮಕ್ಕಳು ಮತ್ತು ವಯಸ್ಕರು ಸರಾಸರಿಗಿಂತ ಹೆಚ್ಚಿನ ರಕ್ತಹೀನತೆಯನ್ನು ಹೊಂದಿದ್ದಾರೆ, ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದ ತಾಯಂದಿರ ಮಕ್ಕಳು ರಕ್ತಹೀನತೆಗೆ ಒಳಗಾಗುವ ಅಪಾಯ ಹೆಚ್ಚಿನದ್ದಾಗಿತ್ತು.

ಸಮೀಕ್ಷೆಗಳು ಹೊರಹಾಕಿದ ಈ ಅಂಶಗಳ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನು? ಜನರ ಬಗ್ಗೆ ಸ್ವಲ್ಪವಾದರೂ ಕಾಳಜಿ ಹೊಂದಿರುವ ಯಾವುದೇ ಸರ್ಕಾರವು ಮಾಡಬಹುದಾದ ಒಂದು ಕನಿಷ್ಠ ಕರ್ತವ್ಯ ನಿರ್ವಹಣೆಯನ್ನು ಮೋದಿ ಸರ್ಕಾರ ಮಾಡಲಿಲ್ಲ, ಈ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸಲಿಲ್ಲ. ಅದರ ಬದಲು, ಅಂದರೆ ಅವುಗಳ ಸತ್ಯಾಸತ್ಯತೆ ಮತ್ತು ಪರಿಣಾಮಗಳನ್ನು ತಜ್ಞರೊಡನೆ ಚರ್ಚಿಸುವುದರ ಬದಲು ಮತ್ತು ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಚರ್ಚಿಸುವ ಬದಲು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು ನಡೆಸಿರುವ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಷನ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರನ್ನು ಸುಳ್ಳು ಆರೋಪಗಳ ಮೇಲೆ ಅಮಾನತಿನಲ್ಲಿಟ್ಟಿತು. (ಅಮಾನತಿನಲ್ಲಿದ್ದ ಸಮಯದಲ್ಲಿ ಆ ನಿರ್ದೇಶಕರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದಾಗ ಅವರ ಅಮಾನತನ್ನು ತೆರವುಗೊಳಿಸಿದ ಅಂಶವು, ಅವರ ಮೇಲೆ ಮಾಡಿದ ಆರೋಪಗಳ ಸುಳ್ಳು ಸ್ವರೂಪವನ್ನು ಬಯಲುಮಾಡಿದೆ). ಇದೂ ಕೂಡ ಫ್ಯಾಸಿಸ್ಟ್ ತೆರನ ಪ್ರತಿಕ್ರಿಯೆಯೇ.

ಉಡಾಫೆ ಸಚಿವರ ಗೇಲಿ

ನನ್ನ ಮೂರನೇ ಉದಾಹರಣೆ ಜಾಗತಿಕ ಹಸಿವು ಸೂಚ್ಯಂಕಕ್ಕೆ ಸಂಬಂಧಿಸಿದೆ. 2023ರ ಜಾಗತಿಕ ಹಸಿವು ಸೂಚ್ಯಂಕದಲ್ಲಿರುವ ಒಟ್ಟು 125 ದೇಶಗಳ ಪೈಕಿ ಭಾರತವು 111ನೇ ಸ್ಥಾನದಲ್ಲಿದೆ (ಹಸಿವಿನಿಂದ ನರಳುವವರು ಅತಿ ಕಡಿಮೆ ಸಂಖ್ಯೆಯಲ್ಲಿರುವ ದೇಶಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ). ಅದಕ್ಕಿಂತಲೂ ಮುಖ್ಯವಾದ ಸಂಗತಿ ಎಂದರೆ, ಈ ಪಟ್ಟಿಯಲ್ಲಿ ಭಾರತದ ಶ್ರೇಯಾಂಕವು ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ (102), ಬಾಂಗ್ಲಾದೇಶ (81), ಶ್ರೀಲಂಕಾ (60) ಮತ್ತು ನೇಪಾಳ (69) ಇವುಗಳಿಗಿಂತ ತೀರಾ ಕೆಳಗಿದೆ ಮತ್ತು ವರ್ಷ ವರ್ಷವೂ ಕೆಳಗಿಳಿಯುತ್ತಲೇ ಇದೆ.

ಇಲ್ಲಿಯೂ, ಸಮೀಕ್ಷೆಗಳು ಹೊರಹಾಕಿದ ಈ ಅತ್ಯಂತ ಕಳವಳಕಾರಿ ಅಂಶಗಳ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನು? ಸ್ವಲ್ಪವಾದರೂ ತಲ್ಲಣವಿಲ್ಲ, ಸ್ವಲ್ಪವಾದರೂ ಕಾಳಜಿಯಿಲ್ಲ. ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ಒಬ್ಬ ಸಂಪುಟ ಸಚಿವರಂತೂ, ಈ ಬಗ್ಗೆ ಅತ್ಯಂತ ಸುಳ್ಳು ಮಾಹಿತಿಗಳನ್ನು ನೀಡುತ್ತ, ಜಾಗತಿಕ ಹಸಿವು ಸೂಚ್ಯಂಕದ ಬಗ್ಗೆಯೇ ಗೇಲಿ ಮಾಡಿದ್ದಾರೆ. ಜಾಗತಿಕ ಹಸಿವು ಸೂಚ್ಯಂಕವನ್ನು ನಾಲ್ಕು ನಿಯತಾಂಶಗಳಿಂದ ಲೆಕ್ಕಹಾಕಲಾಗುತ್ತದೆ: ಅಪೌಷ್ಟಿಕತೆ, ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ, ಮಕ್ಕಳ ಕುಂಠಿತ ಬೆಳವಣಿಗೆ (ವಯಸ್ಸಿಗೆ ಹೋಲಿಸಿದರೆ ಎತ್ತರ) ಮತ್ತು ಮಕ್ಕಳ ಕಳಪೆ ಬೆಳವಣಿಗೆ (ಎತ್ತರಕ್ಕೆ ಹೋಲಿಸಿದರೆ ತೂಕ). ಈ ನಿಯತಾಂಶಗಳು ವಯಸ್ಕರಿಗಿಂತ ಮಕ್ಕಳ ಬೆಳವಣಿಗೆಯ ಸ್ಥಿತಿಯಿಂದ ಹೆಚ್ಚು ಪ್ರಭಾವಿತವಾಗಿವೆ ಎಂಬ ಸರ್ಕಾರದ ಹೇಳಿಕೆಯನ್ನು ಒಂದು ಕ್ಷಣ ಒಪ್ಪಿಕೊಂಡರೂ, ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ ಭಾರತದಲ್ಲಿ ಮಕ್ಕಳ ಸ್ಥಿತಿ-ಗತಿಗಳು ಶೋಚನೀಯವಾಗಿದೆ ಎಂದು ಸೂಚ್ಯಂಕ ಹೇಳುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಜಾಗತಿಕ ಹಸಿವು ಸೂಚ್ಯಂಕದ ಶೋಧನೆಯನ್ನು ನಿರ್ಲಕ್ಷಿಸಲು ಯಾವ ಆಧಾರವೂ ಇಲ್ಲ. ಇಡೀ ದಿನ ಪ್ರಯಾಣ ಮಾಡಿರುವುದರಿಂದ ತಾನೂ ಹಸಿದಿದ್ದೇನೆ ಮತ್ತು ತನ್ನ ಆಹಾರದ ಪರಿಸ್ಥಿತಿಯ ಬಗ್ಗೆ ವಿಚಾರಿಸಲು ಯಾರಾದರೂ ದೂರವಾಣಿ ಕರೆ ಮಾಡಿ ಕೇಳಿದ್ದರೆ ನಾನೂ ಹಸಿವಿನಲ್ಲಿದ್ದೇನೆ ಎಂದೇ ಹೇಳುತ್ತಿದ್ದೆ. ಭಾರತದಲ್ಲಿ 3000 ಜನರನ್ನು ಸಮೀಕ್ಷೆಗೆ ಒಳಪಡಿಸಿದ ಈ ಸೂಚ್ಯಂಕವನ್ನು ಸಿದ್ಧಗೊಳಿಸುವ ಮಾಹಿತಿಯು ಅನುಮಾನಾಸ್ಪದವಾಗಿದ್ದು, ಒಟ್ಟಾರೆಯಾಗಿ ಈ ಸೂಚ್ಯಂಕವನ್ನು ತಿರಸ್ಕರಿಸುವ ಅಗತ್ಯವಿದೆ ಎಂಬುದು ಈ ಉಡಾಫೆ ಸಚಿವರ ಅಂಬೋಣ.

ಈ ಸಂದರ್ಭದಲ್ಲಿ ಮೂರು ಅಂಶಗಳನ್ನು ಪ್ರಸ್ತಾಪಿಸಬೇಕಾಗಿದೆ: ಮೊದಲನೆಯದಾಗಿ, ಸೂಚ್ಯಂಕದಲ್ಲಿರುವ ನಾಲ್ಕು ನಿಯತಾಂಶಗಳಲ್ಲಿ ಅಪೌಷ್ಟಿಕತೆಯೂ ಒಂದು. ಎರಡನೆಯದಾಗಿ, ಈ ಅಪೌಷ್ಟಿಕತೆಯ ಮಟ್ಟವನ್ನು ನಿರ್ಣಯಿಸಲು ಕೇವಲ ವ್ಯಕ್ತಿಗಳನ್ನು ಸಂದರ್ಶಿಸುವುದು ಮಾತ್ರವಲ್ಲ, ಅಧಿಕೃತ ದತ್ತಾಂಶಗಳಿಂದ ಪಡೆದ ಪ್ರತಿ ದೇಶದ ಆಹಾರ ಬ್ಯಾಲೆನ್ಸ್ ಶೀಟ್‌ಅನ್ನೂ ಸಹ ಅವಲಂಬಿಸಲಾಗಿದೆ. ಮೂರನೆಯದಾಗಿ, ಬಿಜೆಪಿ ಸರ್ಕಾರವೇ ಆದೇಶಿಸಿರುವ ಗ್ರಾಹಕ ವೆಚ್ಚ ಸಮೀಕ್ಷೆಗಳನ್ನು ಸ್ಥಗಿತಗೊಳಿಸಿರುವುದೇ ವ್ಯಕ್ತಿಗಳನ್ನು ಸಂದರ್ಶಿಸುವ ಕ್ರಮವನ್ನು ಅನುಸರಿಸಲು ಕಾರಣ.

ಬಿಜೆಪಿ ಸರ್ಕಾರವು ಗ್ರಾಹಕ ವೆಚ್ಚ ಸಮೀಕ್ಷೆಗಳನ್ನು ಸ್ಥಗಿತಗೊಳಿಸುವ ಮೊದಲು ಮತ್ತು ಅದರಿಂದಾಗಿ ವ್ಯಕ್ತಿಗಳ ಸಂದರ್ಶವನ್ನು ಅವಲಂಬಿಸುವ ಮೊದಲೇ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನವು ಕಾಲಕ್ರಮೇಣ ಕುಸಿಯುತ್ತಲೇ ಇತ್ತು ಮತ್ತು ಬಹಳ ವರ್ಷಗಳಿಂದಲೂ ಕೆಳ ಮಟ್ಟದಲ್ಲೇ ಇತ್ತು ಎಂಬುದನ್ನು ನೆನಪಿನಲ್ಲಿಡಬೇಕು. ತೀವ್ರ ಮತ್ತು ಹೆಚ್ಚುತ್ತಿರುವ ಹಸಿವಿನ ಜೊತೆಯಲ್ಲೇ ಜಿಡಿಪಿಯೂ ಉನ್ನತವಾಗಿ ಬೆಳೆಯುತ್ತಿತ್ತು. ಇದು, ಫ್ಯಾಸಿಸ್ಟ್ ತೆರನ ಶಕ್ತಿಗಳು ಅಧಿಕಾರಕ್ಕೆ ಬರುವ ಮೊದಲೇ ಇದ್ದ ನವ-ಉದಾರವಾದಿ ಆಳ್ವಿಕೆಯ ಶಾಶ್ವತ ಲಕ್ಷಣವೂ ಹೌದು. ಇವರು ಈ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ ಮತ್ತು ಅದನ್ನು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಜಿ20 ಶೃಂಗಸಭೆ | ಬಡತನವನ್ನು ಪ್ಲಾಸ್ಟಿಕ್ ಹಾಕಿ ಮುಚ್ಚುತ್ತಿರುವ ಕೇಂದ್ರ ಸರ್ಕಾರ!

ಆದ್ದರಿಂದ ಹಸಿವಿನ ಮಟ್ಟವನ್ನು ನಿರ್ಣಯಿಸಲು ಅನುಸರಿಸಿರುವ ವ್ಯಕ್ತಿಗಳನ್ನು ಸಂದರ್ಶಿಸುವ ಕ್ರಮವು ಭಾರತವನ್ನು ಕಳಪೆಯಾಗಿ ತೋರಿಸಲು ಕಾರಣವಾಗಿದೆ ಎಂಬ ಹೇಳಿಕೆಯು ಮೇಲೆ ತಿಳಿಸಿದ ಕಾರಣಗಳ ಜೊತೆಗೆ, ಇನ್ನೂ ಎರಡು ಕಾರಣಗಳಿಗಾಗಿ ದೋಷಪೂರಿತವಾಗಿದೆ: ಮೊದಲನೆಯದಾಗಿ, ಈ ವಿಧಾನವನ್ನು ಭಾರತದಲ್ಲಿ ಮಾತ್ರವಲ್ಲ, ಎಲ್ಲಾ ದೇಶಗಳಲ್ಲೂ ಬಳಸಲಾಗುತ್ತದೆ, ಏಕೆಂದರೆ, ಉಳಿದ ದೇಶಗಳು ಭಾರತವು ಹೊಂದಿದ್ದ ವಿಸ್ತಾರವಾದ ಮಾದರಿ ಸಮೀಕ್ಷೆಗಳನ್ನು ನಡೆಸುತ್ತಿರಲಿಲ್ಲ, ಮತ್ತು, ಎರಡನೆಯದಾಗಿ, ಭಾರತದ ಕಡಿಮೆ ಶ್ರೇಯಾಂಕವು ವ್ಯಕ್ತಿಗಳನ್ನು ಸಂದರ್ಶಿಸುವ ವಿಧಾನದಿಂದ ಉಂಟಾಗಿಲ್ಲ, ಏಕೆಂದರೆ ಈ ವಿಧಾನವನ್ನು ಬಳಸುವುದಕ್ಕಿಂತಲೂ ಬಹಳ ಹಿಂದೆಯೇ ಭಾರತದ ಸ್ಥಾನ ಕೆಳ ಮಟ್ಟದಲ್ಲೇ ಇತ್ತು.

ವಿವಿಧ ಏಜೆನ್ಸಿಗಳು ಸಿದ್ಧಪಡಿಸಿದ ಅನೇಕ ವಿಭಿನ್ನ ಸೂಚ್ಯಂಕಗಳು, ಅದೂ ವಿಭಿನ್ನ ಮೂಲಗಳನ್ನು ಬಳಸಿಕೊಂಡು ಸಿದ್ಧಪಡಿಸಿದವುಗಳು, ಭಾರತದಲ್ಲಿ ಜಿಡಿಪಿ ಬೆಳವಣಿಗೆಯು ಉನ್ನತವಾಗಿದ್ದರೂ ಸಹ, ಪೌಷ್ಠಿಕಾಂಶದ ಕೊರತೆಯ ಸ್ಥಿತಿ ತೀವ್ರವಾಗಿದೆ ಮತ್ತು ಬೆಳೆಯುತ್ತಿದೆ ಎಂದು ಸೂಚಿಸುತ್ತಿದ್ದರೆ, ಇದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯೇ. ದೇಶದ ಫ್ಯಾಸಿಸ್ಟ್ ತೆರನ ಸರ್ಕಾರವು ಈ ಬಗ್ಗೆ ಯಾವುದೇ ಕಾಳಜಿಯನ್ನು ವ್ಯಕ್ತಪಡಿಸುವುದರ ಬದಲು, ಈ ಪುರಾವೆಗಳನ್ನು ಸಾರಾಸಗಟಾಗಿ ನಿರಾಕರಿಸುತ್ತದೆ ಎಂಬುದು ಅದರ ನೈಜ ಬಣ್ಣವನ್ನು ಬಯಲು ಮಾಡುತ್ತದೆ. ಹೀಗೇ ಮುಂದುವರೆದರೆ, ಅಷ್ಟೊಂದು ಕಾಳಜಿಯಿಂದ ನಿರ್ಮಿಸಲಾದ ದೇಶದ ಅಂಕಿ-ಸಂಖ್ಯೆಗಳ ಮೂಲಸೌಕರ್ಯವನ್ನು ಅದು ಸಂಪೂರ್ಣವಾಗಿ ನಾಶ ಮಾಡುತ್ತದೆ.

“ನೀವು ಹಸಿದಿದ್ದೀರಿ ಎಂದು ಹೇಳಲು ನಿಮಗೆ ಹಣ
ಕೊಟ್ಟವರು ಯಾರು?
ಚೀನಾ? ಯಾವುದೇ ವ್ಯಾಪಾರಿ?

ಕೃಪೆ: ಸತೀಶ ಆಚಾರ್ಯ, ಫೇಸ್‌ಬುಕ್

ವಿಡಿಯೋ ನೋಡಿ: ಕುಸಿಯುತ್ತಿದೆ ಲಿಂಗಾನುಪಾತ- ಸಮಾಜ ಮತ್ತು ಸರಕಾರದ‌ ಜವಾಬ್ದಾರಿ ಏನು?Janashakthi Media

Donate Janashakthi Media

Leave a Reply

Your email address will not be published. Required fields are marked *