ಇದು ಸಾರ್ವಜನಿಕ ಆಸ್ತಿಗಳ ಮಾರಾಟ ಪರ್ವ!

ಪ್ರೊ.ಪ್ರಭಾತ್ ಪಟ್ನಾಯಕ್

ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಬಂದರುಗಳು, ಕ್ರೀಡಾಂಗಣಗಳು ಮತ್ತು ರಸ್ತೆಗಳಷ್ಟೇ ಅಲ್ಲ, ಜೀವ ಉಳಿಸುವ ಲಸಿಕೆಯೂ ಇನ್ನೊಂದು ಸರಕು; ಐತಿಹಾಸಿಕ ಜಲಿಯನ್‌ವಾಲಾಬಾಗ್ ಮತ್ತು ವಾರಣಾಸಿಯ ವಿಶ್ವನಾಥ ದೇವಾಲಯ ಕೂಡ ಪ್ರವಾಸಿಗರನ್ನು ಆಕರ್ಷಿಸುವ ಸರಕು. ಬಹಿಷ್ಕಾರವನ್ನು ಒಳಗೊಂಡಿರುವ ಇಂತಹ ಸರಕೀಕರಣದ ಪ್ರತಿಯೊಂದು ಕ್ರಿಯೆಯೂ ಪೌರತ್ವದ ವ್ಯಾಪ್ತಿಯನ್ನು ಕುಗ್ಗಿಸುತ್ತದೆ. ಹೀಗೆ ಪ್ರಸ್ತುತ ಸರ್ಕಾರವು ನಾಗರಿಕರ ಸಮಾನ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಬದಲಾಗಿ ಆರ್ಥಿಕ ವರ್ಗಭೇದವನ್ನು ಹೇರುವ ಸರಕೀಕರಣದ ಭರಾಟೆಯನ್ನು ಪ್ರಾರಂಭಿಸಿದೆ.

ವಿಶ್ವದ ಎಲ್ಲೆಡೆ ಒಂದು ಪೈಸೆಯನ್ನೂ ಕೊಡದೆ ಜನರು ಕೊರೊನಾ ವಿರುದ್ಧ ಲಸಿಕೆ ಪಡೆದರು; ಆದರೆ ಭಾರತದಲ್ಲಲ್ಲ. ವಿಶ್ವದ ಎಲ್ಲೆಡೆ, ರಾಷ್ಟ್ರ ಎಂಬುದನ್ನು ನಿರೂಪಿಸುವ, ಒಂದು ರಾಷ್ಟ್ರದ ಪ್ರಜ್ಞೆಯಲ್ಲಿ ಹಾಸು-ಹೊಕ್ಕಾಗಿರುವ ಚಾರಿತ್ರಿಕ ಹೆಗ್ಗುರುತುಗಳನ್ನು, ಪವಿತ್ರವೆಂದು ಭಾವಿಸಿ ಅವುಗಳನ್ನು ಅವುಗಳ ಮೂಲ ರೂಪದಲ್ಲಿಯೇ ಹಾಗೆಯೇ ಉಳಿಸಿಕೊಳ್ಳಲಾಗಿದೆ; ಆದರೆ ಭಾರತದಲ್ಲಿ ಹಾಗಿಲ್ಲ. ವಿಶ್ವದ ಎಲ್ಲೆಡೆ, ಮೂಲಭೂತ ಸೇವೆಗಳನ್ನು ಒದಗಿಸುವ ಸಾರ್ವಜನಿಕ ಸ್ವತ್ತುಗಳು ಜನರ ಬಳಕೆಗೆ ಸಿಗುತ್ತವೆ ಮತ್ತು ಸಾಂಸ್ಕೃತಿಕ-ಶೈಕ್ಷಣಿಕ ಸೇವೆಗಳು ಮುಕ್ತವಾಗಿ ದೊರೆಯುತ್ತವೆ; ಆದರೆ ಭಾರತದಲ್ಲಿ ಇನ್ನು ಮುಂದೆ ದೊರೆಯವು. ಭಾರತದ ಈ ವಿಲಕ್ಷಣ ಅಪವಾದಾತ್ಮಕತೆಯಲ್ಲಿ ಎಲ್ಲವನ್ನೂ ವ್ಯಾಪಾರದ ಸರಕನ್ನಾಗಿ ಕಾಣುವ ಮೋದಿ ಸರ್ಕಾರದ ವಿಚಿತ್ರ ಕಾರ್ಯಸೂಚಿಯಿದೆ. ಇಲ್ಲಿ ಯಾವುದೂ ಪವಿತ್ರವಲ್ಲ, ಯಾರೂ ಮಹಾತ್ಮರಲ್ಲ, ಯಾರೂ ಸಂತರಲ್ಲ ಮತ್ತು ಮಾರುಕಟ್ಟೆಗಿಂತಲೂ ಶ್ರೇಷ್ಠವಾದದ್ದು ಏನೂ ಇಲ್ಲ. ಎಲ್ಲವೂ ಮಾರಾಟದ ವಸ್ತುಗಳೇ. ಎಲ್ಲ ಸಾರ್ವಜನಿಕ ಆಸ್ತಿಗಳನ್ನೂ ಮಾರಾಟಕ್ಕಿಡಲಾಗಿದೆ. ಇದು ಮಾರಾಟ ಪರ್ವ.

ಮೇಲೆ ಹೇಳಿದ ಮೂರೂ ಉದಾಹರಣೆಗಳನ್ನು ಒಂದೊಂದಾಗಿ ಕಿರು-ವಿವರಗಳೊಂದಿಗೆ ನೋಡೋಣ. ಈ ಹಿಂದೆ ಖಾಸಗಿ ಆಸ್ಪತ್ರೆಗಳು ಜನರಿಗೆ ಲಸಿಕೆ ಹಾಕಿದಾಗ, ಸೇವಾ ಶುಲ್ಕವಾಗಿ 250 ರೂ.ಗಳನ್ನು ಪಡೆಯುತ್ತಿದ್ದರು. ಲಸಿಕೆ ಪಡೆಯಲು ಜನರು ಹಣ ಕೊಡುವ ಪರಿಸ್ಥಿತಿಯೇ ಉಂಟಾಗದಂತೆ ಸರ್ಕಾರ ನೋಡಿಕೊಳ್ಳಬಹುದಿತ್ತಾದರೂ, ಜನರು ಕೊಡಲಾರದಷ್ಟು ದೊಡ್ಡ ಮೊತ್ತವೂ ಆಗಿರಲಿಲ್ಲ ಅದು. ಆದರೆ, ಈಗ ಲಸಿಕೆ ಹಾಕಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಿಗೆ ಭಾರಿ ಮೊತ್ತವನ್ನೇ ಕೊಡಬೇಕಾಗಿದೆ. ಕೋವಿಶೀಲ್ಡ್-780ರೂ, ಕೊವಾಕ್ಸಿನ್-1,410 ರೂ, ಮತ್ತು ಸ್ಪುಟ್ನಿಕ್ ವಿ-1,145 ರೂ. ಶುಲ್ಕ ವಿಧಿಸಲು ಅನುಮತಿ ನೀಡಲಾಗಿದೆ. ಏಕೆಂದರೆ, ಅವರಿಗೆ ಇನ್ನು ಮುಂದೆ ಈ ಲಸಿಕೆಗಳು ಸರಕಾರದಿಂದ ಉಚಿತವಾಗಿ ಲಭ್ಯವಾಗುವುದಿಲ್ಲ. ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಉಚಿತವಾಗಿ ಒದಗಿಸದ ಸರ್ಕಾರವು ತೊಂಭತ್ತರಲ್ಲಿ ತೊಗರಿಬೇಳೆಯೂ ಒಂದು ಎನ್ನುವ ಹಾಗೆ ಜೀವ ಉಳಿಸುವ ಲಸಿಕೆಗಳನ್ನೂ ಸಹ ಇನ್ನೊಂದು ಸರಕು ಎಂಬಂತೆ ವ್ಯವಹರಿಸುತ್ತಿದೆ.

ಅದೇ ರೀತಿಯ ಸರಕೀಕರಣದ ಮನೋಭಾವವನ್ನು ಜಲಿಯನ್‌ವಾಲಾಬಾಗ್‌ ಅನ್ನು ಸುಂದರಗೊಳಿಸುವ ಯೋಜನೆಯಲ್ಲೂ ಕಾಣಬಹುದು. ಒಂದು ಭೀಕರ ಹತ್ಯಾಕಾಂಡ ನಡೆದ ಜಲಿಯನ್‌ವಾಲಾಬಾಗ್ ಸ್ಥಳವನ್ನು ಸುಂದರವಾಗಿ ಕಾಣುವ ಒಂದು ತಾಣವಾಗಿ ಪರಿವರ್ತಿಸಲಾಗಿದೆ. ಭಾರತದ ವಸಾಹತುಶಾಹಿ ವಿರೋಧಿ ಹೋರಾಟವು ಒಂದು ನಿರ್ಣಾಯಕ ತಿರುವು ಪಡೆಯುಲು ಕಾರಣವಾದ ಆ ದುರಂತಮಯ ಘಟನೆಯು ನವಭಾರತವು ಅಸ್ತಿತ್ವಕ್ಕೆ ಬರುವಲ್ಲಿ ಮಹತ್ವದ ಪಾತ್ರ ವಹಿಸಿತು. ಜಲಿಯನ್‌ವಾಲಾಬಾಗ್‌ನಲ್ಲಿ ಸೇರಿದ್ದ ಸಾವಿರಾರು ಶಾಂತಿಯುತ ಪ್ರದರ್ಶನಕಾರರ ಮೇಲೆ ತಮ್ಮ ಬಂದೂಕಿನಲ್ಲಿದ್ದ ಗುಂಡುಗಳು ಖಾಲಿಯಾಗುವವರೆಗೂ ಗುಂಡು ಹಾರಿಸಿ ಪ್ರದರ್ಶನಕಾರರನ್ನು ಹೊಡೆದುರುಳಿಸುವಂತೆ ಜನರಲ್ ಡಯರ್ ತನ್ನ ಪಡೆಗಳಿಗೆ ಆದೇಶಿಸಿದ್ದ. ಸಾವಿರಾರು ಮಂದಿ ಹುತಾತ್ಮರಾದ ಆ ನೆಲವು ಪ್ರತಿ ಭಾರತೀಯರಿಗೂ ಈಗಲೂ ಧನ್ಯತೆಯ ನೆಲವೇ. ಅದನ್ನು ಮುಟ್ಟದೆ ಇದ್ದ ಹಾಗೆಯೇ ಇರಲು ಬಿಡಬೇಕಾಗಿತ್ತು. ಈ ಸಂದರ್ಭದಲ್ಲಿ, ಸೆನೆಗಲ್‌ನ ಡಕಾರ್ ಕರಾವಳಿಯ ಗೋರೆ ದ್ವೀಪದ ಒಂದು ಉದಾಹರಣೆಯನ್ನು ನೋಡಬಹುದು. ಹದಿನೈದು ಮತ್ತು ಹತ್ತೊಂಭತ್ತನೆಯ ಶತಮಾನಗಳ ನಡುವಿನ ಅವಧಿಯಲ್ಲಿ ಈ ದ್ವೀಪವು ಗುಲಾಮರ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿಂದಲೇ ಲಕ್ಷಾಂತರ ಗುಲಾಮರನ್ನು ಅಮೆರಿಕಕ್ಕೆ ಸಾಗಿಸಲಾಗಿತ್ತು. ಈ ದ್ವೀಪವನ್ನು ವಿಶ್ವ ಪಾರಂಪರಿಕ (ಹೆರಿಟೇಜ್) ಕೇಂದ್ರವೆಂದು ಘೋಷಿಸಲಾಗಿದೆ. ವರ್ಣಭೇದದ ವಿರುದ್ಧ ಹೋರಾಡಿದ ಧೀಮಂತ ನಾಯಕ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷರೂ ಆಗಿದ್ದ ನೆಲ್ಸನ್ ಮಂಡೇಲಾ ಅಲ್ಲಿಗೆ ಭೇಟಿ ನೀಡಿದಾಗ, ಅಲ್ಲಿನ ಕಟ್ಟಡಗಳನ್ನು, ಸೈನಿಕರ ವಾಸದ ಬ್ಯಾರಕ್‌ಗಳನ್ನು ಮತ್ತು ಕರಿಯರನ್ನು ಕೂಡಿ ಹಾಕುತ್ತಿದ್ದ ನೆಲ ಮಾಳಿಗೆಯ ಬಂದೀಖಾನೆಗಳನ್ನು(ಡಂಜನ್‌ಗಳನ್ನು) ಕಂಡಾಗ ಅವರ ಕಣ್ಣಲ್ಲಿ ನೀರು ತುಂಬಿತ್ತು. ಇವೆಲ್ಲವನ್ನೂ ಆ ಹೃದಯವಿದ್ರಾವಕ ಗುಲಾಮ ಸಾಗಣೆಗಳು ಸಂಭವಿಸಿದಾಗ ಹೇಗಿದ್ದವೊ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ, ಭಾರತದಲ್ಲಿ, ಇದ್ದಕ್ಕಿದ್ದಂತೆ ಅಧಿಕಾರಕ್ಕೇರಿದ ಸರ್ಕಾರವು ಐತಿಹಾಸಿಕ ಜಲಿಯನ್‌ವಾಲಾಬಾಗ್‌ ಅನ್ನು “ಸುಂದರಗೊಳಿಸಿದೆ”, ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಬಹುದು ಎಂಬ ಕಲ್ಪನೆಯೊಂದಿಗೆ. ಇದೊಂದು ಸಂಪೂರ್ಣವಾಗಿಯೂ ತಪ್ಪು ಕಲ್ಪನೆ ಎಂಬುದರಲ್ಲಿ ಸಂದೇಹವಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಲಿಯನ್‌ವಾಲಾಬಾಗ್‌ ಅನ್ನು ಒಂದು ಸರಕನ್ನಾಗಿ ಮಾಡಲಾಗಿದೆ ಮತ್ತು ಅದರ ಸರಕು ಆಯಾಮವು ಅದು ರಾಷ್ಟ್ರದಲ್ಲಿ ಪವಿತ್ರ ಸ್ಥಾನ ಹೊಂದಿದೆ ಎಂಬುದಕ್ಕಿಂತಲೂ ಹೆಚ್ಚಿನ ಆದ್ಯತೆ ಪಡೆದಿದೆ.

ನಾನು ಮಾರಿಲ್ಲ, ಪ್ರಿಯೇ, ನಗದೀಕರಿಸಿದೆ ಅಷ್ಟೇ!, ವ್ಯಂಗ್ಯಚಿತ್ರ: ಸತೀಶ್‍ ಆಚಾರ್ಯ, ಫೇಸ್‍ಬುಕ್

ಅದೇ ರೀತಿಯ ಸರಕೀಕರಣದ ಮನೋಭಾವವನ್ನು ವಾರಣಾಸಿಯ ವಿಶ್ವನಾಥ ದೇವಾಲಯಕ್ಕೆ ಹೋಗುವ ಇಕ್ಕಟ್ಟಿನ ಮೂಲ ರಸ್ತೆಯನ್ನು ಸುಂದರಗೊಳಿಸುವ ವಿಧಾನದಲ್ಲೂ ಕಾಣಬಹುದು. ಈ ಐತಿಹಾಸಿಕ ರಸ್ತೆಯನ್ನು ತುಸು ಅಗಲಗೊಳಿಸಲು ಭಾರತದ ಪ್ರಾಚೀನ ನಗರದಲ್ಲಿದ್ದ ಹಳೆಯ ಕಾಲದ ಮನೆಗಳು ಮತ್ತು ಅನೇಕ ಸಣ್ಣ ಸಣ್ಣ ದೇವಾಲಯಗಳನ್ನು ಕೆಡವಲಾಯಿತು. ಈ ಧ್ವಂಸದ ಹಿಂದಿದ್ದ ಆಲೋಚನೆ ಎಂದರೆ, ವಿಶ್ವನಾಥ ದೇವಾಲಯವನ್ನು ಮತ್ತು ಅದರ ಅಕ್ಕಪಕ್ಕದ ಪ್ರದೇಶವನ್ನು ಪ್ರವಾಸಿಗಳು, ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರವಾಸಿಗಳು ಸುಲಭವಾಗಿ ತಲುಪುವಂತೆ ಮಾಡುವುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ದೇವಾಲಯವನ್ನೂ ಒಂದು ಸರಕನ್ನಾಗಿ ಪರಿವರ್ತಿಸುವುದೇ ಈ ಧ್ವಂಸದ ಉದ್ದೇಶವಾಗಿತ್ತು.

ಈಗ, ವಿಮಾನ ನಿಲ್ದಾಣಗಳಿಂದ ಹಿಡಿದು ರೈಲ್ವೆ ನಿಲ್ದಾಣಗಳು, ಬಂದರುಗಳು, ಕ್ರೀಡಾಂಗಣಗಳು ಮತ್ತು ರಸ್ತೆಗಳವರೆಗೆ ಎಲ್ಲ ರೀತಿಯ ಸಾರ್ವಜನಿಕ ಸ್ವತ್ತುಗಳನ್ನೂ “ನಗದೀಕರಿಸು”ವ ಪ್ರಯತ್ನಗಳು ನಡೆಯುತ್ತಿವೆ. ಅಂದರೆ, ಈ ಸಾರ್ವಜನಿಕ ಸ್ವತ್ತುಗಳನ್ನು ಸರಕುಗಳೆಂದು ಬಗೆದು ಅವುಗಳನ್ನು ಕೈಗಾರಿಕಾ ಸಂಸ್ಥೆಗಳನ್ನು ನಿರ್ವಹಿಸುತ್ತಿರುವ ಖಾಸಗಿ ವ್ಯಕ್ತಿ/ಸಂಸ್ಥೆಗಳ ಕೈಯಲ್ಲಿ ಇಡಲಾಗುವುದು. “ನಗದೀಕರಣ”ವು ಖಾಸಗೀಕರಣದಿಂದ ಭಿನ್ನವಾಗಿದೆ ಎಂದು ಹಣಕಾಸು ಸಚಿವರು ಭಾವೋದ್ವೇಗದಿಂದ ಕೂಡಿದ ವಾದವನ್ನು ಮಂಡಿಸುತ್ತಾರೆ. ಈ ವಾದವು ಒಂದು ಶುದ್ಧ ಕುತರ್ಕವೇ ಸರಿ. “ನಗದೀಕರಣ” ಎಂದರೆ ಸಾರ್ವಜನಿಕ ಆಸ್ತಿಯನ್ನು ಒಂದು ನಿರ್ದಿಷ್ಟ ಅವಧಿಗೆ ಖಾಸಗಿ ವ್ಯಕ್ತಿ/ಸಂಸ್ಥೆಗಳ (ಆಪರೇಟರ್) ಕೈಯಲ್ಲಿ ಇಡುವುದು ಎಂದೇ ಅರ್ಥ. ನಿರ್ಧರಿತ ಅವಧಿಯ ಕೊನೆಯಲ್ಲಿ ಈ ಸಾರ್ವಜನಿಕ ಆಸ್ತಿಯು ಸರ್ಕಾರದ ವಶಕ್ಕೆ ಮರಳಿ ಬಂದರೂ ಸಹ (ಈ ಅವಧಿಯಲ್ಲಿ ಆಸ್ತಿಯ ಮೇಲೆ ಒಬ್ಬ ಭೋಗ್ಯದಾರನು ಮಾಡಿದ ಹೂಡಿಕೆಗಳ ಮೌಲ್ಯಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಹಲವಾರು ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ), ಅದನ್ನು ಬಹುಶಃ ಅದೇ ಭೋಗ್ಯದಾರನಿಗೆ ಅಥವಾ ಬೇರೊಬ್ಬನಿಗೆ ಒಂದು ನಿಗದಿತ ಬೆಲೆಯ ಮೇಲೆ ಹಿಂತಿರುಗಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ “ನಗದೀಕರಣ”ವು ಒಂದೇ ಬಾರಿಗೆ ಮಾಡುವ ಮಾರಾಟದ ಬದಲು, ಮಾಡುವ ಅಲ್ಪಾವಧಿಯ ಮಾರಾಟದ ಸಾಲು ಎನ್ನಬಹುದಾದಕ್ಕಿಂತ ಭಿನ್ನವಾಗಿರುವುದಿಲ್ಲ. ಹಾಗಿದ್ದರೂ ಸಹ, ಪರಿಣಾಮದ ದೃಷ್ಟಿಯಲ್ಲಿ ನೋಡಿದಾಗ ಅದು ಮಾರಾಟವೇ ಸರಿ.

ಸ್ಥೂಲ-ಅರ್ಥಶಾಸ್ತ್ರೀಯ ಪರಿಭಾಷೆಯಲ್ಲಿ ಹೇಳುವುದಾದರೆ, ಸಾರ್ವಜನಿಕ ಸ್ವತ್ತುಗಳ “ನಗದೀಕರಣ”ವು, ಒಂದು ವಿತ್ತೀಯ ಕೊರತೆಯ ಮೂಲಕ ಸರ್ಕಾರದ ಹೆಚ್ಚಿನ ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವುದಕ್ಕಿಂತ ಭಿನ್ನವೇನೂ ಅಲ್ಲ. ವಿತ್ತೀಯ ಕೊರತೆಗೆ ಒಳಗಾದ ಸಂದರ್ಭದಲ್ಲಿ ಸರ್ಕಾರವು ಆಸ್ತಿಗಳನ್ನು (ಅಂದರೆ, ಕಾಗದ-ಪ್ರತಗಳ ಮೂಲಕ ತನ್ನ ಮೇಲಿನ ಕೇಳಿಕೆಗಳ ಹಕ್ಕನ್ನು) ಖಾಸಗಿಯವರ ಕೈಯಲ್ಲಿ ಇಡುತ್ತದೆ. ಹಾಗೆ ಮಾಡಿದ್ದರ ಬದಲಾಗಿ ಪಡೆದ ಹಣವನ್ನು ಅದು ಖರ್ಚು ಮಾಡುತ್ತದೆ. “ನಗದೀಕರಣ”ದ ಸಂದರ್ಭದಲ್ಲಿ ಅದು ಸ್ವತ್ತುಗಳನ್ನು (ಅಂದರೆ, ರಸ್ತೆಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಇತ್ಯಾದಿ ಆಸ್ತಿಗಳನ್ನು) ಖಾಸಗಿಯವರ ಕೈಯಲ್ಲಿ ಇಡುತ್ತದೆ. ಹಾಗೆ ಮಾಡಿದ್ದರ ಬದಲಾಗಿ ಪಡೆದ ಹಣವನ್ನು ಖರ್ಚು ಮಾಡುತ್ತದೆ. ಒಟ್ಟು ಅರ್ಥವ್ಯವಸ್ಥೆಯಲ್ಲಿ, ಈ ಎರಡು ವಿಧಾನಗಳ ನಡುವಿನ ವ್ಯತ್ಯಾಸವು, ಖಾಸಗಿಯವರ ಕೈಗೆ ನೀಡುವ ಸ್ವತ್ತುಗಳ ಸ್ವರೂಪಕ್ಕೆ ಮಾತ್ರ ಸಂಬಂಧಿಸಿರುವಂತದ್ದು. ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ, ಸರ್ಕಾರಕ್ಕೆ ಹಣ ಒದಗಿಸುವ ಈ ಎರಡೂ ವಿಧಾನಗಳ (ವಿತ್ತೀಯ ಕೊರತೆಯ ಅಥವಾ ‘ನಗದೀಕರಣ’ದ ವಿಧಾನದ) ಪರಿಣಾಮಗಳೂ ಒಂದೇ ರೀತಿಯಲ್ಲಿರುತ್ತವೆ.

ತನ್ನ ವೆಚ್ಚಗಳಿಗೆ ಸರ್ಕಾರವು ಹಣ ಹೊಂದಿಸಿಕೊಳ್ಳುವ ಮಟ್ಟಿಗೆ ವಿತ್ತೀಯ ಕೊರತೆ ಅಥವಾ ಸಾರ್ವಜನಿಕ ಸ್ವತ್ತುಗಳ “ನಗದೀಕರಣ” ಈ ಎರಡೂ ವಿಧಾನಗಳ ಪರಿಣಾಮಗಳು ತಕ್ಷಣದಲ್ಲಿ ಒಂದೇ ರೀತಿಯಲ್ಲಿದ್ದರೂ ಸಹ, ನಂತರದ ದಿನಗಳಲ್ಲಿ ಜರುಗುವ ವಿದ್ಯಮಾನಗಳು ಒಂದೇ ರೀತಿಯಲ್ಲಿರುವುದಿಲ್ಲ. ಸಾರ್ವಜನಿಕ ಆಸ್ತಿಯನ್ನು ಭೋಗ್ಯಕ್ಕೆ ಪಡೆದ ಖಾಸಗಿಯವರು ಅನುಸರಿಸುವ ರೀತಿ-ನೀತಿಗಳು ಮತ್ತು ಕಾರ್ಯವೈಖರಿಯಿಂದಾಗಿ ಅರ್ಥವ್ಯವಸ್ಥೆಯ ಮೇಲೆ ಬೀಳುವ ಪರಿಣಾಮಗಳು, ವಿತ್ತೀಯ ಕೊರತೆಯ ಪರಿಣಾಮಗಳಿಗೆ ಹೋಲಿಸಿದರೆ, ತುಂಬಾ ಕೆಟ್ಟದಾಗಿರುತ್ತವೆ. ಏಕೆಂದರೆ, ಸಾರ್ವಜನಿಕ ಆಸ್ತಿಯನ್ನು ಭೋಗ್ಯಕ್ಕೆ ಪಡೆದ ಖಾಸಗಿಯವರು ಅದರಿಂದ ಲಾಭ ಗಳಿಸುವ ಏಕೈಕ ಉದ್ದೇಶದಿಂದ ಮಾತ್ರ ಆ ಅಸ್ತಿಯನ್ನು ಭೋಗ್ಯಕ್ಕೆ ಪಡೆದಿರುತ್ತಾರೆ. ಹೆಚ್ಚಿನ ಲಾಭ ಪಡೆಯಲು ಬಳಕೆ ಶುಲ್ಕಗಳನ್ನು ಹೆಚ್ಚಿಸುತ್ತಾರೆ ಮತ್ತು ಆಸ್ತಿಯನ್ನು ನಿರ್ವಹಿಸುವ ಕಾರ್ಮಿಕರ ಸಂಬಳಗಳನ್ನು ಇಳಿಸುತ್ತಾರೆ. ಈ ಕ್ರಮಗಳು ಅರ್ಥವ್ಯವಸ್ಥೆಯಲ್ಲಿ ಸರಾಸರಿ ಲಾಭದ ಪ್ರಮಾಣವನ್ನು ಏರಿಸುತ್ತವೆ. ಅಂದರೆ, ವೇತನಗಳ ಪಾಲು ಲಾಭದತ್ತ ಹೊರಳುತ್ತವೆ. ಸಂಬಳಗಳನ್ನೇ ಹೆಚ್ಚಾಗಿ ಅವಲಂಬಿಸಿರುವವರ ಬಳಕೆ-ಆದಾಯದ ಅನುಪಾತವು ಲಾಭ ಗಳಿಕೆಯೇ ಮುಖ್ಯವಾಗಿರುವವರಿಗಿಂತ ಹೆಚ್ಚಿಗೆ ಇರುತ್ತದೆ. ಅಂದರೆ ಸಂಬಳಗಳ ಪ್ರಮಾಣ ಕಡಿಮೆಯಾದರೆ ಒಟ್ಟು ಅರ್ಥವ್ಯವಸ್ಥೆಯಲ್ಲಿ ಬಳಕೆಯ ಮಟ್ಟವೂ ಇಳಿಯುತ್ತದೆ. ಇದರಿಂದಾಗಿ ಒಟ್ಟಾರೆ ಹೂಡಿಕೆಯ ಮಟ್ಟವು ಎಷ್ಟೇ ಉನ್ನತ ಮಟ್ಟದಲ್ಲಿರಲಿ, ಬಳಕೆಯ ಮಟ್ಟದಲ್ಲಿ ಇಳಿಕೆಯಾದರೆ, ಈ ಇಳಿಕೆಯ ಪರಿಣಾಮವಾಗಿ ಒಟ್ಟು ಅರ್ಥವ್ಯವಸ್ಥೆಯಲ್ಲಿನ ಬೇಡಿಕೆಯೂ ತಗ್ಗುತ್ತದೆ. ಹಾಗಾಗಿ, ತನ್ನ ವೆಚ್ಚಗಳಿಗಾಗಿ ಸರ್ಕಾರವು “ನಗದೀಕರಣ” ವಿಧಾನದ ಮೂಲಕ ಹಣ ಹೊಂದಿಸಿಕೊಳ್ಳುವ ಕ್ರಮವು, ಉಳಿದ ವಿಧಾನಗಳಿಗೆ, ಅಂದರೆ, ವಿತ್ತೀಯ ಕೊರತೆ ಅಥವಾ ಲಾಭದ ಮೇಲಿನ ತೆರಿಗೆ ಅಥವಾ ಸಂಪತ್ತು ತೆರಿಗೆಯ ಮೂಲಕ ಹೊಂದಿಸಿಕೊಳ್ಳುವ ವಿಧಾನಗಳಿಗೆ ಹೋಲಿಸಿದರೆ, ಅರ್ಥವ್ಯವಸ್ಥೆಯ ವಿಸ್ತರಣೆಯ ಪ್ರಮಾಣವನ್ನು ಕುಗ್ಗಿಸುತ್ತದೆ. ಉತ್ಪಾದನಾ ಸಾಮರ್ಥ್ಯ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗದೇ ಉಳಿದಿರುವ ಮತ್ತು ನಿರುದ್ಯೋಗದ ಭಾರಗಳಿಂದ ನಲುಗುತ್ತಿರುವ ಒಂದು ಅರ್ಥವ್ಯವಸ್ಥೆಯಲ್ಲಿ, ನಗದೀಕರಣದ ವಿಧಾನವು ಕಂಡಿತವಾಗಿಯೂ ತುಂಬಾ ಕೀಳು ಮಟ್ಟದ್ದಾಗಿ ಪರಿಣಮಿಸುತ್ತದೆ. ಅದೂ ಅಲ್ಲದೆ, ಈ ವಿಧಾನವು ಆದಾಯ ಹಂಚಿಕೆಯ ವಿಷಯದಲ್ಲಂತೂ ತಿರೋಗಾಮಿ ಯಾಗಿರುವುದು ಅದರಲ್ಲಿರುವ ಮುಖ್ಯ ದೋಷವೇ ಆಗಿದೆ.

ಈ ಜಾಗ ಖಾಲಿ ಮಾಡಿ, ಸರಕಾರ ಈ ಫುಟ್‌ಪಾತನ್ನು ಈ ಮಹಾನುಭಾವರಿಗೆ ಭೋಗ್ಯಕ್ಕೆ ಕೊಟ್ಟಿದೆ, ವ್ಯಂಗ್ಯಚಿತ್ರ: ಸುಭಾನಿ, ಡೆಕ್ಕನ್‍ ಕ್ರಾನಿಕಲ್

ಈ ಎಲ್ಲಾ ದುಷ್ಪರಿಣಾಮಗಳನ್ನೂ ಉಂಟುಮಾಡುವುದರ ಜೊತೆಗೆ, ಈ “ನಗದೀಕರಣ” ವಿಧಾನವು ಹಣಕಾಸಿನ ಆಚೆಗೂ ವ್ಯಾಪ್ತಿಯುಳ್ಳ, ಪ್ರಧಾನವಾಗಿ ಪ್ರಜಾಪ್ರಭುತ್ವ-ವಿರೋಧಿ ನಿಲುವಿನ ಬದಲಾವಣೆಯನ್ನು ಕೂಡ ಸೂಚಿಸುತ್ತದೆ. ಒಂದು ಆಧುನಿಕ ಸಮಾಜದಲ್ಲಿ ಸರ್ಕಾರವು ನಾಗರಿಕರಿಗೆ ತಕ್ಕುನಾದ ಸರಕು ಮತ್ತು ಸೇವೆಗಳನ್ನು ಪುಕ್ಕಟೆಯಾಗಿ, ಅದು ಜನರ ಹಕ್ಕು ಎಂಬ ನೆಲೆಯಲ್ಲಿ ಒದಗಿಸುತ್ತದೆ. ಹಲವು ಹತ್ತು ಸಾರ್ವಜನಿಕ ಸ್ವತ್ತುಗಳು ಅಂತಹ ಸರಕುಗಳನ್ನು ಉತ್ಪಾದಿಸುತ್ತವೆ ಮತ್ತು ಸೇವೆಗಳನ್ನು ಒದಗಿಸುತ್ತವೆ. ಸಾಮಾನ್ಯವಾಗಿ ಅಂತಹ ಸಾರ್ವಜನಿಕ ಸ್ವತ್ತುಗಳಿಂದ ಉತ್ಪಾದಿಸಲಾದ ಸರಕುಗಳು ಮತ್ತು ಒದಗಿಸುವ ಸೇವೆಗಳು ಇರುವುದೇ ನಾಗರಿಕರ ಅನುಭೋಗಕ್ಕಾಗಿ.

ಈ ಸರಕು-ಸೇವೆಗಳು ಜನರಿಗೆ ಸಾಧ್ಯವಾದಷ್ಟು ಮಟ್ಟಿಗೆ ಉಚಿತವಾಗಿ ಲಭ್ಯವಾಗಬೇಕು ಎಂಬ ಅಭಿಪ್ರಾಯವನ್ನು ಬಹಳ ಮಂದಿ ಅರ್ಥಶಾಸ್ತ್ರಜ್ಞರು ಬಹಳ ಹಿಂದಿನಿಂದಲೂ ಗಟ್ಟಿಯಾಗಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಪ್ರತಿಯೊಬ್ಬರೂ ಯಾವುದೇ ಶುಲ್ಕ ಪಾವತಿಸದೆ ಬಳಸಬಹುದು ಎಂಬ ಭಾವನೆಯ ಮೇಲೆ ಸರ್ಕಾರವು ಉದ್ಯಾನದಲ್ಲಿ ಒಂದು ಬೆಂಚ್‌ಅನ್ನು ಒದಗಿಸುತ್ತದೆ. ಪ್ರತಿಯೊಬ್ಬರೂ ರೈಲ್ವೆ ಪ್ಲಾಟ್ ಫಾರ್ಮ್ಅನ್ನು ಬಳಸಬಹುದು, ಹೆಚ್ಚೆಂದರೆ, ಒಂದು ನಾಮಮಾತ್ರ ಶುಲ್ಕ ಪಾವತಿಯ ಮೇಲೆ(ಪ್ಲಾಟ್ ಫಾರ್ಮ್ ಟಿಕೆಟ್ ಖರೀದಿಯ ಮೂಲಕ); ಪ್ರತಿಯೊಬ್ಬರೂ ಉಚಿತವಾಗಿ ಅಥವಾ ನಾಮಮಾತ್ರ ಶುಲ್ಕ ಪಾವತಿಯೊಂದಿಗೆ ಒಂದು ಸಾರ್ವಜನಿಕ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬಹುದು. ನಿಜ, ಈ ಸರಕಾರ ಹೀಗೆ ಸಾರ್ವಜನಿಕ ಸೇವೆಗಳು ಜನರಿಗೆ ಉಚಿತವಾಗಿ ಲಭ್ಯವಾಗಬೇಕು ಎಂಬ ತತ್ವವನ್ನು ದುರ್ಬಲಗೊಳಿಸುತ್ತಿದೆ, ಹೆಚ್ಚಿನ ಸೇವೆಗಳಿಗೆ ಬಳಕೆ ಶುಲ್ಕಗಳನ್ನು ಏರಿಸುತ್ತಿದೆ. ಆದಾಗ್ಯೂ, ಅಂತಹ ಶುಲ್ಕಗಳು ನಾಮಮಾತ್ರ ಎಂಬ ತತ್ವವನ್ನು ಹೆಚ್ಚು ಕಡಿಮೆ ಒಪ್ಪಿಕೊಳ್ಳಲಾಗಿದೆ.

ಸಾರ್ವಜನಿಕ ಸ್ವತ್ತುಗಳು ಉತ್ಪಾದಿಸುವ ಸರಕು/ಸೇವೆಗಳು ಪುಕ್ಕಟೆಯಾಗಿ ದೊರಕುವ ಅಥವಾ ಹೆಚ್ಚೆಂದರೆ ನಾಮಮಾತ್ರ ಶುಲ್ಕ ಪಾವತಿಸುವ ಅಂಶವು, ಎಲ್ಲ ಬಳಕೆದಾರರೂ ಸಮಾನರು, ನಾಗರಿಕರಾಗಿ ಅವರೇ ಈ ಸಾರ್ವಜನಿಕ ಸ್ವತ್ತುಗಳ ಸಹ-ಮಾಲೀಕರು ಮತ್ತು ಅವರ ಪರವಾಗಿ ಸರ್ಕಾರವು ನಾಮಮಾತ್ರವಾಗಿ ಈ ಆಸ್ತಿಗಳ ಮಾಲಿಕತ್ವವನ್ನು ಹೊಂದಿದೆ ಎಂಬ ತತ್ವವನ್ನು ಒಪ್ಪಿಕೊಳ್ಳಲಾಗಿದೆ. ಹಾಗಾಗಿ, ಸಾರ್ವಜನಿಕ ಸ್ವತ್ತುಗಳು ಸಾರ್ವಜನಿಕರ ಅಭಿಪ್ರಾಯ ವ್ಯಾಪ್ತಿಗೆ ಒಳಪಡುತ್ತವೆ ಮತ್ತು ಸಾರ್ವಜನಿಕರ ಹಕ್ಕುಗಳ ವ್ಯಾಪ್ತಿಗೆ ಒಳಪಡುತ್ತವೆ. ಎಲ್ಲಾ ನಾಗರಿಕರೂ ಸಮಾನ ನೆಲೆಯಲ್ಲಿ ಅವುಗಳನ್ನು ಅನುಭೋಗಿಸಬಹುದಾಗಿದೆ.

ಸಾರ್ವಜನಿಕ ಸ್ವತ್ತುಗಳ ಒಡೆತನ ಮತ್ತು ಅವುಗಳ ಅನುಭೋಗದ ಸಂಬಂಧವಾಗಿ ಎಲ್ಲಾ ನಾಗರಿಕರೂ ಸಮಾನರು ಎಂಬ ಈ ಸನ್ನಿವೇಶಕ್ಕೆ ತದ್ವಿರುದ್ಧವಾಗಿ, ಮಾರುಕಟ್ಟೆಯು ಮೂಲತಃ ಅಸಮಾನತೆಯಿಂದ ಕೂಡಿದೆ. ಅಲ್ಲಿ ಒಬ್ಬ ವ್ಯಕ್ತಿಯ ಮಹತ್ವವು ಅವನ ಖರೀದಿ ಶಕ್ತಿಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಹಾಗಾಗಿ, ಸರ್ಕಾರವು ಒಂದು ಸಾರ್ವಜನಿಕ ಆಸ್ತಿಯನ್ನು ಖಾಸಗಿಯವರಿಗೆ ಹಸ್ತಾಂತರಿಸಿದಾಗ, ಆ ಆಸ್ತಿಯಿಂದ ಉತ್ಪಾದಿಸಲಾದ ಸರಕು, ಅದನ್ನು ಸಮಾನವಾಗಿ ಅನುಭೋಗಿಸಬಹುದಾದ ಸಾರ್ವಜನಿಕ ವ್ಯಾಪ್ತಿಯಲ್ಲಿ ಪ್ರತೀ ನಾಗರಿಕರಿಗೂ ಲಭ್ಯವಾಗುವುದರ ಬದಲು, ಹೆಚ್ಚಿನ ಖರೀದಿ ಶಕ್ತಿಯುಳ್ಳ ಕೆಲವರಿಗೆ ಮಾತ್ರ ಲಭಿಸುವ ಸರಕಾಗಿ ಬಿಡುತ್ತದೆ. ಇದು, ಸಾಮಾನು-ಸರಂಜಾಮುಗಳ ಸಾರ್ವಜನಿಕ ವ್ಯಾಪ್ತಿಯಿಂದ ಬರಿಯ ಸರಕುಗಳ ವ್ಯಾಪ್ತಿಗೆ ಒಳಪಡುವ ಬದಲಾವಣೆಯಾಗುತ್ತದೆ. ಅಥವಾ, ಹಕ್ಕುಗಳ ವ್ಯಾಪ್ತಿಯಿಂದ ಖರೀದಿ ಶಕ್ತಿಯ ವ್ಯಾಪ್ತಿಗೆ ಬದಲಾಗುತ್ತದೆ.

ಇದು ಪ್ರಜಾಪ್ರಭುತ್ವವನ್ನು ಮೊಟುಕುಗೊಳಿಸುವ ಕ್ರಮ, ಸಾರ್ವಜನಿಕ ಸ್ವತ್ತುಗಳ ನಗದೀಕರಣದಿಂದಾಗಿ ಸಾರ್ವಜನಿಕ ಸರಕು/ಸೇವೆಗಳನ್ನು ಒಂದು ಹಕ್ಕಾಗಿ ಅನುಭೋಗಿಸುತ್ತಿದ್ದ ಬಹುಪಾಲು ವ್ಯಕ್ತಿಗಳನ್ನು ಅವುಗಳ ಬಳಕೆಯಿಂದ ಹೊರಗಿಡುವ ಕ್ರಮವಾಗಿ ಬಿಡುತ್ತದೆ. ಈ ರೀತಿಯ “ನಗದೀಕರಣ”ವು ಆದಾಯ ಹಂಚಿಕೆಯಲ್ಲಿ ತಿರೋಗಾಮಿಯಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಮತ್ತು ಅದನ್ನು ಇಲ್ಲಿ ಉಲ್ಲೇಖಿಸಲಾಗಿದೆ ಕೂಡ. ಇಂತಹ ತಿರೋಗಾಮಿ ಆದಾಯ ಹಂಚಿಕೆಯ ಜೊತೆಗೆ, ಇಲ್ಲಿಯವರೆಗೆ ಅನಿರ್ಬಂಧಿತ ರೀತಿಯಲ್ಲಿ ಅನುಭೋಗಿಸುತ್ತಿದ್ದ ರಸ್ತೆಯನ್ನು ಬಳಕೆ ಶುಲ್ಕದ ಕಾರಣದಿಂದಾಗಿ ಬಳಸಲಾಗದ ಅಶಕ್ತತೆ, ರೈಲ್ವೆ ಪ್ಲಾಟ್ ಫಾರ್ಮ್ ಅನ್ನು ಪ್ರವೇಶಿಸುವ ಅಶಕ್ತತೆ, ಇವುಗಳು ಒಬ್ಬ ನಾಗರಿಕನ ಹಕ್ಕುಗಳನ್ನು ಮೊಟುಕುಗೊಳಿಸುತ್ತವೆ. ಬಹಿಷ್ಕಾರವನ್ನು ಒಳಗೊಂಡಿರುವ ಸರಕೀಕರಣದ ಪ್ರತಿಯೊಂದು ಕ್ರಿಯೆಯೂ ಪೌರತ್ವದ ವ್ಯಾಪ್ತಿಯನ್ನು ಕುಗ್ಗಿಸುತ್ತದೆ. ಹೀಗೆ ಪ್ರಸ್ತುತ ಸರ್ಕಾರವು ನಾಗರಿಕರ ಸಮಾನ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಬದಲಾಗಿ ಆರ್ಥಿಕ ವರ್ಗಭೇದವನ್ನು ಹೇರುವ ಸರಕೀಕರಣದ ಭರಾಟೆಯನ್ನು ಪ್ರಾರಂಭಿಸಿದೆ.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *