‘ಆದಿವಾಸಿ-ಅಲೆಮಾರಿ ಸಮುದಾಯಗಳ ಸಬಲೀಕರಣ’ ಕುರಿತ ವಿಚಾರ ಸಂಕಿರಣ
“ನಾವು ‘ಮೂಲನಿವಾಸಿಗಳು’ ಎಂದು ಕರೆಯುವ ಆದಿವಾಸಿಗಳಿಗೇ ಮೂಲಭೂತ ಸೌಕರ್ಯಗಳು ಇಲ್ಲದ ಪರಿಸ್ಥಿತಿ ಇರುವುದು ವಿಷಾದನೀಯ. ಆದಿವಾಸಿಗಳು ಸರಿಯಾದ ಶಿಕ್ಷಣ, ಸಾಮಾಜಿಕ ಗೌರವವೂ ಇಲ್ಲದೆ, ಊರಿನ ಅಂಚಿನಲ್ಲಿ ವಾಸಿಸುತ್ತಿದ್ದಾರೆ. ಊರಿನಿಂದ ದೂರದಲ್ಲಿ ವಾಸಿಸುತ್ತಿರುವವರ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ” ಎಂದು ಹಿರಿಯ ಬಂಡಾಯ ಸಾಹಿತಿಗಳು, ಖ್ಯಾತ ಚಲನಚಿತ್ರ ನಿರ್ದೇಶಕರೂ ಆದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪನವರು ವಿಷಾದಿಸಿದರು. ಮೂಲನಿವಾಸಿ
-ವರದಿ: ಆರ್. ರಾಮಕೃಷ್ಣ.
“ನಾವು ‘ಮೂಲನಿವಾಸಿಗಳು’ ಎಂದು ಕರೆಯುವ ಆದಿವಾಸಿಗಳಿಗೇ ಮೂಲಭೂತ ಸೌಕರ್ಯಗಳು ಇಲ್ಲದ ಪರಿಸ್ಥಿತಿ ಇರುವುದು ವಿಷಾದನೀಯ. ಆದಿವಾಸಿಗಳು ಸರಿಯಾದ ಶಿಕ್ಷಣ, ಸಾಮಾಜಿಕ ಗೌರವವೂ ಇಲ್ಲದೆ, ಊರಿನ ಅಂಚಿನಲ್ಲಿ ವಾಸಿಸುತ್ತಿದ್ದಾರೆ. ಊರಿನಿಂದ ದೂರದಲ್ಲಿ ವಾಸಿಸುತ್ತಿರುವವರ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ” ಎಂದು ಹಿರಿಯ ಬಂಡಾಯ ಸಾಹಿತಿಗಳು, ಖ್ಯಾತ ಚಲನಚಿತ್ರ ನಿರ್ದೇಶಕರೂ ಆದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪನವರು ವಿಷಾದಿಸಿದರು. ಮೂಲನಿವಾಸಿ
ಆದಿವಾಸಿಗಳ ಬದುಕಿನ ಸಮಸ್ಯೆ-ಸವಾಲುಗಳ ಕುರಿತು ಚರ್ಚಿಸಿ ರಾಷ್ಟ್ರವ್ಯಾಪಿಯಾದ ಹೋರಾಟ-ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ, ಮಾರ್ಚ್ 15 ಮತ್ತು 16, 2025 ರಂದು ಬೆಂಗಳೂರಿನಲ್ಲಿ ನಡೆದ ‘ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್’(ಎ.ಎ.ಆರ್.ಎಂ.)ನ ರಾಷ್ಟ್ರೀಯ ಸಮನ್ವಯ ಸಮಿತಿಯ ಸಭೆಯ ಪ್ರಯುಕ್ತ ಹಾಗೂ ಆದಿವಾಸಿಗಳಲ್ಲಿ ಅವರ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಭಾಗವಾಗಿ ಮಾರ್ಚ್ 15, 2025 ರಂದು ಸಂಜೆ ‘ಆದಿವಾಸಿ-ಅಲೆಮಾರಿ ಸಮುದಾಯಗಳ ಸಬಲೀಕರಣ : ಸಾಧ್ಯತೆ ಮತ್ತು ಸವಾಲುಗಳು’ ಎಂಬ ವಿಷಯದ ಕುರಿತು ಬೆಂಗಳೂರಿನ ಎಸ್.ಸಿ.ಎಂ. ಹೌಸ್‌ನಲ್ಲಿ ಸಂಘಟಿಸಲಾಗಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಪ್ರೊ. ಬರಗೂರು ಅವರು ಮಾತನಾಡುತ್ತಿದ್ದರು. ಮೂಲನಿವಾಸಿ
ಮುಂದುವರೆದು ಮಾತನಾಡಿದ ಬರಗೂರು ಅವರು “2011 ರ ಜನಗಣತಿ ಪ್ರಕಾರ ದೇಶದಲ್ಲಿ ಶೇ. 8.6 ರಷ್ಟು ಪರಿಶಿಷ್ಟ ಬುಡಕಟ್ಟು ಜನರಿದ್ದಾರೆ. ದೇಶದಲ್ಲಿ ಒಟ್ಟಾರೆ 11 ಕೋಟಿ ಅಲೆಮಾರಿ, ಅರೆ ಅಲೆಮಾರಿ, ಆದಿವಾಸಿ ಜನರಿದ್ದಾರೆ. 2012 ರ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಮೀಕ್ಷೆಯೊಂದರ ಪ್ರಕಾರ 74 ಸಾವಿರ ಚದರ ಮೈಲಿ ಪ್ರದೇಶದಲ್ಲಿ 26 ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. ಈ ಆದಿವಾಸಿಗಳಲ್ಲಿ ಶೇ. 25 ರಷ್ಟು ಜನ ಮಾತ್ರ ಅಕ್ಷರಸ್ತರಾಗಿದ್ದಾರೆ. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರ ಪ್ರಮಾಣ ಶೇ. 0.2 ಮಾತ್ರ ಇದೆ. ಅಂದರೇ ಶೇ. 1 ರಷ್ಟೂ ಇಲ್ಲ. ಆದಿವಾಸಿಗಳಿಗೆ ಶಿಕ್ಷಣ, ಸಾಮಾಜಿಕ ಗೌರವಗಳು, ಆರ್ಥಿಕ ಸವಲತ್ತುಗಳು ಸಿಗಬೇಕು. ಆಗ ಮಾತ್ರ ಆದಿವಾಸಿ ಸಮುದಾಯದ ಸಬಲೀಕರಣ ಸಾಧ್ಯ”ಎಂದರು. ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಆಸ್ಮಿತೆಯನ್ನು ಉಳಿಸಿಕೊಂಡು ಆದಿವಾಸಿಗಳಲ್ಲಿ ಆಧುನಿಕತೆಯನ್ನು ತರುವುದು ಸವಾಲಿನ ಕೆಲಸ ಎಂದು ವಿಶ್ಲೇಷಿಸಿದ ಬರಗೂರು ಅವರು ಆಧುನಿಕತೆ ಎಂದರೆ ಪ್ರಸ್ತುತತೆಯ ಅಳವಡಿಸಿಕೊಂಡು ಮುಂದುವರಿಯುವುದು, ಆದರೆ ಮೌಢ್ಯಗಳನ್ನು ಉಳಿಸಿಕೊಳ್ಳುವುದು ಎಂಬುದಲ್ಲ ಎಂದು ಸ್ಪಷ್ಟೀಕರಿಸಿದರು. ಮೂಲನಿವಾಸಿ
ಆದಿವಾಸಿಗಳ ಬದುಕಿನ ಕಠೋರ ಪರಿಸ್ಥಿತಿಯನ್ನು ವಿವರಿಸುತ್ತಾ, ‘ಗಂಟಿ ಚೋರ್’ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಲಕ್ಷ್ಮಣ ಗಾಯಕ್ವಾಡ್ ಎಂಬ ಖ್ಯಾತ ಮರಾಠಿ ಲೇಖಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ, ಕಳ್ಳರು ಕಾಕರಿಗೆಲ್ಲ ಪ್ರಶಸ್ತಿಗಳು ಸಿಗುವ ಕಾಲ ಬಂತು ಎಂದು ಹಲವರು ಅಪಹಾಸ್ಯ ಮಾಡಿದ್ದರು. ಒಪ್ಪೊತ್ತಿನ ಊಟಕ್ಕಾಗಿ ಯಾರಾದರೂ ಏನಾದರೂ ಕದ್ದರೆ ಅವರನ್ನು ಮಹಾ ಅಪರಾಧಿಗಳು ಎಂಬಂತೆ ನೋಡಲಾಗುತ್ತದೆ. ಆದರೆ ಬೇರೆಯವರ ಸಂಪತ್ತನ್ನು ಲೂಟಿ ಮಾಡುವವರ ಬಗೆಗೆ ಅಂತಹವರು ಏನೂ ಮಾತನಾಡುವುದಿಲ್ಲ ಎಂದು ಬರಗೂರು ಅವರು ಹೇಳಿದರು. ಮೂಲನಿವಾಸಿ
ಬದುಕಲ್ಲಿ ಮೂಲಭೂತ ಬದಲಾವಣೆ ಬರಲಿಲ್ಲ – ಆದರ್ಶ ಯಲ್ಲಪ್ಪ
‘ಎಸ್.ಸಿ.-ಎಸ್.ಟಿ. ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ(ರಿ)’ದ ರಾಜ್ಯಾಧ್ಯಕ್ಷರಾದ ಆದರ್ಶ ಯಲ್ಲಪ್ಪ ಅವರು ಮಾತನಾಡಿ “ಇತಿಹಾಸದುದ್ದಕ್ಕೂ ಅಲೆಮಾರಿ ಸಮುದಾಯಗಳು ಆಳುವವರಿಂದ ಅನುಭವಿಸುತ್ತಾ ಬಂದ ದಬ್ಬಾಳಿಕೆ, ಅತಂತ್ರ ಬದುಕಿನ ಪರಿಸ್ಥಿತಿಗಳನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದರು. ಸ್ವಾತಂತ್ರ್ಯಾ ನಂತರ ಸರಕಾರಗಳು ಹಲವು ಕ್ರಮಗಳನ್ನು ವಹಿಸಿದ್ದರೂ ಸಹ ಪರಿಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳು ಅಷ್ಟಾಗಿ ಕಂಡು ಬರಲಿಲ್ಲ. ಅಲೆ ಮಾರಿ, ಅರೆ ಅಲೆಮಾರಿ ಸಮುದಾಯಗಳ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಬದುಕಿನಲ್ಲಿ ಬದಲಾವಣೆ ತರಲು ಸರಕಾರಗಳು ಇನ್ನಷ್ಟು ಕ್ರಮ ವಹಿಸುವುದು, ಸಮಗ್ರ ಕ್ರಮ ವಹಿಸುವುದು ಅಗತ್ಯ”ಎಂದರು. ಮೂಲನಿವಾಸಿ
ಕಾಡು ನಮ್ಮ ಎರಡನೇ ತಾಯಿ – ಡೋಬಿ ಅಣ್ಣ
ಕೊಡಗು ಜಿಲ್ಲೆಯ ದುಬಾರೆ ಕಾಡಿನ ಆದಿವಾಸಿ ಸಮುದಾಯದ ಹಿರೀಕರಾದ ಡೋಬಿ ಅಣ್ಣ ಅವರು ಮಾತನಾಡಿ “ಆದಿವಾಸಿಗಳಾದ ನಮ್ಮ ಮೂಲ ನೆಲೆ ಅರಣ್ಯ. ಕಾಡು ನಮ್ಮ ಎರಡನೇ ತಾಯಿ. ಕಾಡು ನಮ್ಮನ್ನು ಸಲಹುತ್ತದೆ. ನಾವು ಕಾಡನ್ನು ಸಲಹುತ್ತೇವೆ. ಸಾವಿರಾರು ವರ್ಷಗಳಿಂದ ಇಲ್ಲಿ ನೆಲೆ ಇರುವ ನಮಗೆ ಈಗ ನೆಲೆ ತಪ್ಪಿದ ಪರಿಸ್ಥಿತಿ ಇದೆ. ಆದಿವಾಸಿಗಳ ಬದುಕು, ಸಂಸ್ಕೃತಿ, ಜ್ಞಾನಗಳನ್ನು ರಕ್ಷಿಸಲು ಸರಕಾರಗಳು ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಬೇಕು” ಎಂದರು.
ಮಂಚ್ ನ ರಾಷ್ಟ್ರೀಯ ಉಪಾಧ್ಯಕ್ಷರು, ಮಾಜಿ ಸಂಸದರೂ ಆದ ಬೃಂದಾ ಕಾರಟ್ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಮಂಚ್ ನ ರಾಷ್ಟ್ರೀಯ ಅಧ್ಯಕ್ಷರು, ತ್ರಿಪುರ ರಾಜ್ಯದ ವಿರೋಧ ಪಕ್ಷದ ಮುಖಂಡರೂ ಆಗಿರುವ ಜಿತೇಂದ್ರ ಚೌಧುರಿಯವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ. ಎಸ್.ವೈ. ಗುರುಶಾಂತ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಮೂಲನಿವಾಸಿ
‘ಸುಂದರ’ ಕುಟುಂಬದ ಹೋರಾಟಕ್ಕೆ ಮನ್ನಣೆ, ಅಭಿನಂದನೆ ಮೂಲಕ ವಿಚಾರ ಸಂಕಿರಣ ಉದ್ಘಾಟನೆ
ಆರಂಭದಲ್ಲಿ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಭೂಮಾಲಿಕರ ದೌರ್ಜನ್ಯಕ್ಕೆ ಈಡಾಗಿ, ಕಾನೂನು ಹೋರಾಟ ಸೇರಿದಂತೆ ಸುದೀರ್ಘ ಹೋರಾಟದಿಂದ ಇತ್ತೀಚೆಗೆ ನ್ಯಾಯಾಲಯದ ಮೂಲಕ ನ್ಯಾಯ ಪಡೆದ, ಸುಂದರ ಮಲೆಕುಡಿಯ ಅವರನ್ನು ಅಭಿನಂದಿಸುವ ಮೂಲಕ ವಿಚಾರ ಸಂಕಿರಣ ಉದ್ಘಾಟನೆಗೊಂಡಿತು. ವೇದಿಕೆಯ ಗಣ್ಯರು ಸುಂದರ ಮಲೆಕುಡಿಯ ಅವರಿಗೆ ಹೂವಿನ ಹಾರ ಹಾಕಿ, ಶಾಲು ಹೊದೆಸಿ, ಪೇಟ ತೊಡಿಸುವ ಮೂಲಕ ಅಭಿನಂದಿಸಿರು. ಮೂಲನಿವಾಸಿ
ಇದೇ ಸಂದರ್ಭದಲ್ಲಿ ಪರ್ತಕರ್ತರಾದ ವಿಠಲ ಮಲೆಕುಡಿಯ ಅವರು ಮಾತನಾಡಿ, ಸುಂದರ ಮಲೆಕುಡಿಯ ಅವರ ಕುಟುಂಬದ ಮೇಲೆ ನಡೆದ ದೌರ್ಜನ್ಯಗಳು ಹಾಗೂ ದೀರ್ಘ ಹೋರಾಟದ ವಿವರ ನೀಡಿದರು. ಕಾಟಾಜೆ ಗ್ರಾಮದ ಭೂಮಾಲಿಕ ಗೋಪಾಲಕೃಷ್ಣಗೌಡನಿಗೆ ಎಷ್ಟಿದ್ದರೂ ಮತ್ತಷ್ಟು ಭೂಮಿ ಬೇಕು ಎಂಬ ದಾಹ. ಅದಕ್ಕಾಗಿ ದುರ್ಬಲರು, ಆದಿವಾಸಿಗಳ ಮೇಲೆ ಆತ ಮತ್ತು ಆತನ ಗೂಂಡಾಗಳ ದೌರ್ಜನ್ಯ. 1999 ರಲ್ಲಿಯೇ ಸುಂದರ ಮಲೆಕುಡಿಯರ ಮನೆಗೆ ನುಗ್ಗಿ ಸುಂದರರ ಹೆಂಡತಿ ರೇವತಿ ಮೇಲೆ ಹಲ್ಲೆ ನಡೆಸಿ, ಬೆರಳು ಕತ್ತರಿಸಿದ್ದ ಗೋಪಾಲಗೌಡ. ಆ ನಂತರ ಜುಲೈ 26, 2015 ರಂದು ಬೇಲಿ ಪೊದೆ ಕತ್ತರಿಸುವ ನೆಪದಲ್ಲಿ ಪೊದೆ-ಕಳೆ ಕತ್ತರಿಸುವ ಯಂತ್ರದೊಂದಿಗೆ ತಾನು ತನ್ನ ಹೆಂಡತಿ ಸಮೇತವಾಗಿ ಬಂದ ಗೋಪಾಲಕೃಷ್ಣಗೌಡ, ಸುಂದರರ ಜಮೀನಿಗೆ ನುಗ್ಗಿ ಜಗಳ ತೆಗೆದು ಕತ್ತರಿಸುವ ಯಂತ್ರದಿಂದ ಸುಂದರರನ್ನು ಕೊಲ್ಲುಲು ಯತ್ನಿಸಿದ್ದ. ಮೂಲನಿವಾಸಿ

ಎಡ ತೋಳನ್ನು ಬಹುತೇಕ ಕತ್ತರಿಸಿದ. ಬಲಗೈನ ನಾಲ್ಕು ಬೆರಳುಗಳೂ ತುಂಡರಿಸಿ ನೆಲಕ್ಕೆ ಬಿದ್ದವು. ಬಂಧನದ ಭೀತಿಯಿಂದ ತಂಡ ತಲೆ ತಪ್ಪಿಸಿಕೊಂಡಿತು. ಆಸ್ಪತ್ರೆಯ ಚಿಕಿತ್ಸೆಯಲ್ಲಿ ವೈದ್ಯರ ಪರಿಶ್ರಮದಿಂದ ಹೇಗೋ ಎಡ ತೋಳು ಉಳಿದುಕೊಂಡಿತು. ಅದರೆ ಬಲಗೈ ಬೆರಳುಗಳು ಶಾಶ್ವತವಾಗಿ ನಷ್ಟವಾದವು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಆದಿವಾಸಿಗಳು-ಜನರು ತೀವ್ರ ಪ್ರತಿಭಟನೆ ನಡೆಸಿದರು. ಸಿಪಿಐ(ಎಂ) ಹೋರಾಟದ ಬೆಂಬಲಕ್ಕೆ ನಿಂತಿತು.
ಪಕ್ಷದ ನಾಯಕರಾದ ಸೀತರಾಮ್ ಯೆಚೂರಿ ಯವರು ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆಗೆ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಮತ್ತೊಂದು ಕಡೆ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದ ಗೋಪಾಲಕೃಷ್ಣಗೌಡ ಮತ್ತು ಸಹಚರರನ್ನು ಎ.ಎಸ್.ಪಿ. ರಾಹುಲ್ ಕುಮಾರ್ ಶಾಪುರವಾಡ್ ತಮ್ಮ ದಕ್ಷ ಕಾರ್ಯಾಚರಣೆಯಿಂದ ಬಂಧಿಸಿದರು. ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿ ಇತ್ತೀಚೆಗೆ ಗೊಪಾಲಕೃಷ್ಣಗೌಡನಿಗೆ 3 ವರ್ಷ, ಉಳಿದ 3 ಅಪರಾಧಿಗಳಿಗೆ 2 ವರ್ಷಗಳ ಸಜೆ ಶಿಕ್ಷೆ-ದಂಡ ವಿಧಿಸಿ ತೀರ್ಪು ನೀಡಿದೆ. ಸುಂದರರ ಕುಟುಂಬಕ್ಕೆ ಕೊಂಚ ಆರ್ಥಿಕ ಪರಿಹಾರವನ್ನೂ ಆದೇಶಿಸಿದೆ ಎಂಬೆಲ್ಲಾ ಮಾಹಿತಿಗಳನ್ನು ವಿಠಲ ಮಲೆಕುಡಿಯ ಸಭೆಗೆ ನೀಡಿದರು. ಮೂಲನಿವಾಸಿ
ಪಶ್ಚಿಮ ಬಂಗಾಳದ ಮಾಜಿ ಸಚಿವರಾದ ರವೀಂದ್ರನಾಥ್ ಹೇಮ್‌ಬ್ರಮ್, ಮಾಜಿ ಸಚಿವೆ ಡೆಬೊಲಿನಾ ಹೇಮ್‌ಬ್ರಮ್, ತಮಿಳುನಾಡಿನ ಮಾಜಿ ಶಾಸಕರು ಹಾಗೂ ಅದಿವಾಸಿ ಮಂಚ್ ನ ಅಖಿಲ ಭಾರತ ಖಜಾಂಚಿ ದಿಲ್ಲಿಬಾಬು, ಮಂಚ್ ನ ಹಿಂದಿನ ಅಧ್ಯಕ್ಷರಾದ ಮಾಜಿ ಸಂಸದ ಡಾ. ಬಾಬುರಾವ್, ಮಾಜಿ ಸಂಸದರು ಹಾಗೂ ಮಂಚ್ ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಪುಲಿನ್ ಬಿಹಾರಿ ಭಾಸ್ಕಿ ಅವರುಗಳಲ್ಲದೇ, ದೇಶದ ನಾನಾ ರಾಜ್ಯಗಳಿಂದ ಬಂದ ‘ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್’ನ ರಾಷ್ಟ್ರೀಯ ಸಮನ್ವಯ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೂಲನಿವಾಸಿ
ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮಂಡ್ಯ, ಬಳ್ಳಾರಿ ಮುಂತಾದ ವಿವಿಧ ಜಿಲ್ಲೆಗಳಿಂದ ಬಂದ ಆದಿವಾಸಿಗಳು, ನಾಡಿನ ಹಲವು ಪ್ರಗತಿಪರ ಸಾಹಿತಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಸೇರಿದಂತೆ ಸುಮಾರು 150 ಕ್ಕೂ ಹೆಚ್ಚು ಜನರು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ವಿಚಾರ ಸಂಕಿರಣವು ‘ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮ’ದ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಿತು. ಮೂಲನಿವಾಸಿ
ಕಾರ್ಯಕ್ರಮದ ಆರಂಭದಲ್ಲಿ ಆದಿವಾಸಿ ಹಕ್ಕುಗಳ ಸಮಿತಿಯ ಸಹ ಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿಯವರು ಎಲ್ಲರಿಗೂ ಹೂಗುಚ್ಛ ನೀಡಿ ಸ್ವಾಗತಿಸಿದರು. ಮತ್ತೊಬ್ಬ ಸಹ ಸಂಚಾಲಕರಾದ ಶ್ರೀಧರ ನಾಡಾ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಜೆ.ಆರ್. ಪ್ರೇಮ ವಂದಿಸಿದರು.
ಆದಿವಾಸಿಗಳ ಉನ್ನತ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ-ಚರ್ಚೆ-ಮನವಿ ಸಲ್ಲಿಕೆ
ಮಾರ್ಚ್ 15 ರ ಸಂಜೆ ಬೃಂದಾ ಕಾರಟ್, ಜಿತೇಂದ್ರ ಚೌಧುರಿ, ಡಾ. ಎಸ್. ವೈ. ಗುರುಶಾಂತ್, ಶ್ರೀಧರ್ ನಾಡ, ಡಾ.ಕೃಷ್ಣಪ್ಪ ಕೊಂಚಾಡಿ, ಜೆ.ಆರ್. ಪ್ರೇಮ ಅವರಿದ್ದ ನಿಯೋಗವು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಚರ್ಚಿಸಿತು. ಆದಿವಾಸಿ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದಲ್ಲಿ ‘ಆದಿವಾಸಿ ಅದಾಲತ್’ಗಳನ್ನು ನಡೆಸಬೇಕು ಹಾಗೂ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ವಿಶಾಲವಾದ ಸಭೆಯನ್ನು ಕರೆದು ಆದಿವಾಸಿ ಸಮುದಾಯದೊಂದಿಗೆ ಚರ್ಚಿಸಬೇಕು ಎಂದು ಮನವಿ ಮಾಡಿದರು. ಲಿಖಿತ ಮನವಿಯನ್ನೂ ಸಲ್ಲಿಸಿದರು. ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದರಲ್ಲದೇ ಆದಷ್ಟೂ ಬೇಗ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಮೂಲನಿವಾಸಿ
ಇದನ್ನೂ ನೋಡಿ: ಸುಗ್ಗಿ ಸಂಭ್ರಮ : ತುಳಸಾಣಿ ಸುಗ್ಗಿ ತಂಡದ ಕೋಲಾಟ Janashakthi Media